ಧಾರವಾಡ: ಜಾತಿ ಹೆಸರಿನಿಂದ ರಾಜಕಾರಣ ಮಾಡುವುದು ಗೌಡರ ಕುಟುಂಬಕ್ಕೆ ಗೌರವ ತರುವ ವಿಚಾರ ಅಲ್ಲ ಎಂದು ಶಾಸಕ ಅರವಿಂದ ಬೆಲ್ಲದ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇವೇಗೌಡ, ರೇವಣ್ಣ ಕುಟುಂಬದವರೆಲ್ಲರೂ ಕುಮಾರಸ್ವಾಮಿ ಹೇಳಿಕೆಯನ್ನು ಖಂಡಿಸುತ್ತಾರೆ ಎಂದುಕೊಂಡಿದ್ದೇನೆ. ಸಾಮರಸ್ಯ ಕೆಡಿಸುವ ಕೆಲಸ ಮಾಡುತ್ತಿರುವ ಕುಮಾರಸ್ವಾಮಿ ಬ್ಯಾಲೆನ್ಸ್ ಇಲ್ಲದ ಹೇಳಿಕೆ ನೀಡುವುದನ್ನು ನಿಲ್ಲಿಸಲಿ.
ಕುಮಾರಸ್ವಾಮಿ ಜಾತಿ ಹೆಸರಿನ ರಾಜಕೀಯ ಹೇಳಿಕೆ ಮೂಲಕ ತಮಗೆ ಮಾತ್ರವಲ್ಲ ಗೌಡರ ಕುಟುಂಬಕ್ಕೆ ಕಳಂಕ ತಂದಿದ್ದಾರೆ. ಇದಲ್ಲದೆ, ಮಾನಸಿಕ ಸ್ಥಿಮಿತ ಕಳೆದುಕೊಂಡು ತಳಬುಡ ಇಲ್ಲದಂತೆ ಮಾತನಾಡುತ್ತಿದ್ದಾರೆ. ಇದೇ ಕಾರಣದಿಂದ ಅವರ ಪಕ್ಷದಿಂದ ಜನ ಓಡಿ ಹೋಗುತ್ತಿದ್ದಾರೆ.
ಜೆಡಿಎಸ್ ನಾಯಕರೇ ಕುಮಾರಸ್ವಾಮಿ ವಿರುದ್ಧ ಬಂಡೆದ್ದ ಕಾರಣ ಏನು ಮಾಡಬೇಕು, ಏನು ಮಾತನಾಡಬೇಕು ಎಂದು ತಿಳಿಯದಂತಾಗಿದೆ. ನರೇಂದ್ರ ಮೋದಿ ಸರಕಾರದಲ್ಲಿ ಜಾತಿ, ಮತ, ಪಂಥ ನೋಡದೆ ಯೋಗ್ಯ ವ್ಯಕ್ತಿಗೆ ಮುಖ್ಯಮಂತ್ರಿ ಮಾಡುತ್ತಾರೆ. ಇದು ಇಡೀ ದೇಶಕ್ಕೆ ತಿಳಿದ ವಿಚಾರ. ಆದರೆ ಇವರು ಕ್ಷುಲ್ಲಕ ರಾಜಕಾರಣ ಮಾಡಿ ಜನರ ದಾರಿ ತಪ್ಪಿಸುವ ಹೇಳಿಕೆ ನೀಡುತ್ತಿದ್ದಾರೆ ಎಂದರು.