ಬೆಂಗಳೂರು : ದೇವೇಗೌಡರು ಹಾಕಿರುವ ಪಂಚೆಗೂ, ಇವರು ಹಾಕಿರುವುದಕ್ಕೂ ವ್ಯತ್ಯಾಸವಿದೆ. ನಾವೆಲ್ಲರೂ ದೇವೇಗೌಡರು ಆಗುವುದಕ್ಕೆ ಆಗುತ್ತದಾ? ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಡಿ.ಕೆ.ಶಿವಕುಮಾರ್‌ಗೆ ತಿರುಗೇಟು ನೀಡಿದ್ದಾರೆ.
ದೇವೇಗೌಡರು ಪಂಚೆ ಹಾಕಿಲ್ವಾ ? ಎಂದು ಡಿ.ಕೆ.ಶಿವಕುಮಾರ್ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ದೇವೇಗೌಡರ ಪಂಚೆಗೂ ಅವರಿಗೂ ವ್ಯತ್ಯಾಸವಿದೆ. ದೇವೇಗೌಡರ ಹೋರಾಟಕ್ಕೂ ಇವರದ್ದಕ್ಕೂ ವ್ಯತ್ಯಾಸವಿದೆ . ನಮ್ಮ ಹೋರಾಟ, ಪಾದಯಾತ್ರೆ ಜನಪರವಾಗಿತ್ತು ಎಂದು ಹೇಳಿದ್ದಾರೆ.
ಮೇಕೆದಾಟು ಯೋಜನೆಗೆ ನಾನು ಮುಖ್ಯಮಂತ್ರಿಯಾಗಿದ್ದಾಗಲೇ ಡಿಪಿಎಆರ್ ಮಾಡಿದ್ದು. ಐದು ವರ್ಷಗಳ ಕಾಲ ಕಾಂಗ್ರೆಸ್ ಸರಕಾರ ಇದ್ದಾಗ ಏನು ಮಾಡಿದ್ದರು ? ಪಾದಯಾತ್ರೆ ಮಾಡುವುದರಿಂದ ಮೇಕೆದಾಟು ಯೋಜನೆ ಜಾರಿಯಾಗುತ್ತದೆಯೇ ? ಎಂದು ಪ್ರಶ್ನಿಸಿದರು.
ಯಾವುದೋ ಒಂದು ಸಣ್ಣ ತಾಂತ್ರಿಕ ಕಾರಣಕ್ಕೆ ಯೋಜನೆ ವಿಳಂಬವಾಗುತ್ತಿದೆ. ಇದಕ್ಕೆ ಪಾದಯಾತ್ರೆಯಂಥ ರಾಜಕೀಯ ಹೋರಾಟದ ಅಗತ್ಯವಿಲ್ಲ. ಕಾಂಗ್ರೆಸ್ ನವರು ಪಾದಯಾತ್ರೆ ಮಾಡಿ ರಾಜಕೀಯಗೊಳಿಸಿದರೆ ಕೇಂದ್ರ ಸರಕಾರ ಇನ್ನಷ್ಟು ವಿಳಂಬ ಮಾಡುತ್ತದೆ. ಆಗ ನಷ್ಟವಾಗುವುದು ರಾಜ್ಯಕ್ಕೆ ಎಂದು ಅಭಿಪ್ರಾಯಪಟ್ಟರು.
ರಾಜ್ಯ ಸರಕಾರಕ್ಕೆ ದುಡ್ಡಿನ ಕೊರತೆ ಇದೆ. ಹೀಗಾಗಿ ಮೇಕೆದಾಟು ಯೋಜನೆ ಜಾರಿಗೆ ಕೇಂದ್ರ ಸರಕಾರವನ್ನು ಒತ್ತಾಯಿಸುತ್ತಿಲ್ಲ. ಕೇಂದ್ರ ಸರಕಾರದ ಪರವಾನಗಿ ಇಲ್ಲದೆಯೂ ಕಾಮಗಾರಿ ಪ್ರಾರಂಭ ಮಾಡಬಹುದು. ಆದರೆ ಎರಡೂ ರಾಷ್ಟ್ರೀಯ ಪಕ್ಷಗಳು ವಿನಾಕಾರಣ ರಾಜಕಾರಣ ಮಾಡುತ್ತಿವೆ ಎಂದು ವಾಗ್ದಾಳಿ ನಡೆಸಿದರು.