Advertisement

ಅನ್ಯಪಕ್ಷ ಅಧಿಕಾರದಲ್ಲಿರುವುದು ಬಿಜೆಪಿಗೆ ಅಪಥ್ಯ: ವಾರ್ಡ್ ವಿಂಗಡಣೆ ವಿರುದ್ಧ ಎಚ್ ಡಿಕೆ ಗರಂ

09:41 AM Jun 25, 2022 | Team Udayavani |

ಬೆಂಗಳೂರು: ಪಾಲಿಕೆಯಾಗಿದ್ದನ್ನು ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯನ್ನಾಗಿ ನಾನು ಮಾಡಿದ್ದು ನಗರದ ಜನರಿಗೆ ಸ್ಥಳೀಯವಾಗಿ ಅತ್ಯುತ್ತಮ ಅಡಳಿತ, ಸೇವೆಗಳು ಲಭ್ಯವಾಗಲಿ ಎಂದು. ಆದರೆ, ಬಿಜೆಪಿ ಸರಕಾರವು ಬಿಬಿಎಂಪಿ ರಚನೆಯ ಮೂಲ ಆಶಯವನ್ನೇ ಬುಡಮೇಲು ಮಾಡಿ ರಾಜಕೀಯ ಸ್ವಾರ್ಥ ಸಾಧನೆಯ ಷಡ್ಯಂತ್ರ ನಡೆಸಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಟೀಕೆ ಮಾಡಿದ್ದಾರೆ.

Advertisement

ಸರಣಿ ಟ್ವೀಟ್ ಮಾಡಿರುವ ಅವರು ಬಿಬಿಎಂಪಿ ವಾರ್ಡ್ ವಿಂಗಡಣೆ ನಡೆಯ ಕುರಿತು ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ.

ಬಿಜೆಪಿ ಅಧಿಕಾರ ಪಿಪಾಸು. ಅನ್ಯಪಕ್ಷ ಅಧಿಕಾರದಲ್ಲಿರುವುದು ಆ ಪಕ್ಷಕ್ಕೆ ಅಪಥ್ಯ. ತನ್ನ ಕೆಟ್ಟ ಆಡಳಿತಕ್ಕೆ ಬೇಸತ್ತು ಬೆಂಗಳೂರಿಗರು ಬೇರೆ ಪಕ್ಷಕ್ಕೆ ಎಲ್ಲಿ ಮತ ಹಾಕಿಬಿಟ್ಟಾರೋ ಎನ್ನುವ ಭೀತಿಯಿಂದ ಚುನಾವಣೆಯನ್ನೇ ನಡೆಸಲಿಲ್ಲ. ಕೋರ್ಟ್‌ ಚಾಟಿ ಬೀಸಿದ ಮೇಲೆ ಚುನಾವಣೆ ಎನ್ನುತ್ತಿರುವ ಸರಕಾರ, ಈಗ ವಾರ್ಡ್‌ ವಿಂಗಡಣೆಯ ನಾಟಕ ಅಡಿದೆ. ʼಕೋರ್ಟ್‌ ಹೇಳಿದರಷ್ಟೇ ಕೆಲಸʼ ಎನ್ನುವ ಚಾಳಿ ಬಿಜೆಪಿ ಸರಕಾರದ್ದು. ನ್ಯಾಯಾಲಯದ ಅದೇಶವನ್ನೇ ಧಿಕ್ಕರಿಸಿ ನಡೆದ ಈ ನಿರ್ಲಜ್ಜ ಸರಕಾರಕ್ಕೆ ಜನಹಿತಕ್ಕಿಂತ ಪಕ್ಷಹಿತವೇ ಸರ್ವಸ್ವ. ವಾರ್ಡ್‌ ವಿಂಗಡಣೆ ಸ್ವರೂಪ ನೋಡಿದರೆ ಬಿಜೆಪಿಯ ‘ಅಧಿಕಾರದ ವಿಕೃತಿ’ ಯಾವ ಮಟ್ಟದಲ್ಲಿದೆ ಎನ್ನುವುದು ಅರ್ಥವಾಗುತ್ತದೆ. ವಾರ್ಡ್ ವಿಂಗಡಣೆಯಲ್ಲಿ ಬೆಂಗಳೂರು ನಗರದ ಸಮಗ್ರತೆ, ಅನನ್ಯತೆಯನ್ನು ಕಡೆಗಣಿಸಲಾಗಿದೆ. ಬೆಂಗಳೂರು ಎಂದರೆ ಬಿಜೆಪಿ ಶಾಸಕರು ಪ್ರತಿನಿಧಿಸುವ ಕ್ಷೇತ್ರಗಳು ಮಾತ್ರವಲ್ಲ. ಇದು ಕೇವಲ ಬಿಜೆಪಿಯಿಂದ, ಬಿಜೆಪಿ ಶಾಸಕರಿಗಾಗಿ, ಬಿಜೆಪಿಯೇ ಮಾಡಿಕೊಂಡ ಮರು ವಿಂಗಡಣೆ ಎಂದು ಆರೋಪಿಸಿದ್ದಾರೆ.

ಐತಿಹಾಸಿಕ ವಾರ್ಡುಗಳ ಹೆಸರುಗಳನ್ನು ಬದಲಿಸಿ ನಾಡಪ್ರಭು ಕೆಂಪೇಗೌಡರು ಕಟ್ಟಿದ ಬೆಂಗಳೂರಿನ ಚರಿತ್ರೆಯ ಕುರುಹುಗಳನ್ನು ಅಳಿಸಿ ಹಾಕಿ ಪಠ್ಯಕ್ಕೆ ಅಪಚಾರ ಎಸಗಿದಂತೆ ನಾಡಪ್ರಭುಗಳು ಮತ್ತು ಮೈಸೂರು ಒಡೆಯರರ ಘನ ಕೀರ್ತಿಗೆ ಚ್ಯುತಿ ತರುವ ಹುನ್ನಾರ ಇದಷ್ಟೇ. “ಬೆಂಗಳೂರು ಮಹಾನಗರದಲ್ಲಿ ಮೂಲಸೌಕರ್ಯ ಅಭಿವೃದ್ಧಿಯಾಗಬೇಕು ಎಂದರೆ ರಾಷ್ಟ್ರಪತಿಗಳು ಮತ್ತು ಪ್ರಧಾನಿ ಆಗಾಗ್ಗೆ ನಗರಕ್ಕೆ ಭೇಟಿ ನೀಡುತ್ತಿರಬೇಕು” ಎಂದು ಹೈಕೋರ್ಟ್‌ ಛೀಮಾರಿ ಹಾಕಿದೆ. ನಗರದ ಜನರ ಬವಣೆಗೆ ಹಿಡಿದ ಕನ್ನಡಿ ಇದು ಎಂದಿದ್ದಾರೆ.

ಇದನ್ನೂ ಓದಿ:ವಾರಕ್ಕೆ ನಾಲ್ಕು ದಿನ ಕೆಲಸ: ಜು. 1ರಿಂದ ಜಾರಿ! ದಿನದ ಸೇವಾವಧಿ 12 ಗಂಟೆಗೆ ವಿಸ್ತರಣೆ

Advertisement

“ಮೊನ್ನೆಯಷ್ಟೇ ಪ್ರಧಾನಿ ಬಂದು ಹೋಗಿದ್ದಾರೆ. ಅದಕ್ಕಾಗಿ 23 ಕೋಟಿ ಖರ್ಚು ಮಾಡಿ ನಗರದ ರಸ್ತೆ ಗುಂಡಿ ಮುಚ್ಚಲಾಗಿದೆ. ಇದನ್ನು ಗಮನಿಸಿದರೆ ಪ್ರಧಾನಿ ನಗರದ ಬೇರೆ ಬೇರೆ ಮಾರ್ಗಗಳಲ್ಲಿ ಆಗಾಗ್ಗೆ ಸಂಚರಿಸಬೇಕು. ಆಗ ಅವರನ್ನು ಮೆಚ್ಚಿಸುವ ಸಲುವಾಗಿಯಾದರೂ ಅಧಿಕಾರಿಗಳು ಹಾಳಾಗಿರುವ ರಸ್ತೆಗಳನ್ನು ಸರಿಪಡಿಸಬಹುದು” ಎಂದು ಕೋರ್ಟ್ ಚಾಟಿ ಬೀಸಿದೆ. ಇನ್ನು, ಪ್ರಧಾನಿಗಳಿಗಾಗಿ ಸಿದ್ಧಪಡಿಸಿದ ರಸ್ತೆಯೇ ಕುಸಿದುಬಿದ್ದಿದೆ. 40% ಕಮಿಷನ್‌ ಮತ್ತು ಕಳಪೆ ಕಾಮಗಾರಿಯ ಫಲಶ್ರುತಿ ಇದು. ದೇಶದ ಪ್ರಧಾನಿಯೇ ಸಂಚರಿಸಿದ ರಸ್ತೆಯೇ ಕಳಪೆ! ಬಿಜೆಪಿ ಅಭಿವೃದ್ಧಿ ಮಾದರಿ ಎಂದರೆ ಇದೇನಾ? ಐಟಿ ಸಿಟಿಯ ಸ್ಥಿತಿ ಅಯ್ಯೋ ಎನ್ನುವಂತಿದೆ ಎಂದು ಎಚ್ ಡಿಕೆ ಕಳವಳ ವ್ಯಕ್ತಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next