Advertisement

ಆಪರೇಷನ್ ಕಮಲಕ್ಕೆ ಸಹಕರಿಸಲು ಸಿದ್ದು ದುಡ್ಡು ಪಡೆದಿದ್ದರು : ಎಚ್ ಡಿಕೆ

07:20 PM Oct 26, 2021 | Team Udayavani |

ವಿಜಯಪುರ: 2008ರಲ್ಲಿ ಬಿಜೆಪಿ ಅಧಿಕಾರದಲ್ಲಿ ಇದ್ದಾಗ ಆಪರೇಷನ್ ಕಮಲದ ಭಾಗವಾಗಿ ನಡೆದ 20 ಉಪ ಚುನಾವಣೆಯಲ್ಲಿ ಬಿಜೆಪಿ ಗೆಲುವಿಗೆ ಸಹಕರಿಸಲು ಸಿದ್ದರಾಮಯ್ಯ ದುಡ್ಡು ಪಡೆದಿದ್ದರು. ಅವರಿಗೆ ದುಡ್ಡು ತೆಗೆದುಕೊಂಡು ಹೋಗಿ ಕೊಟ್ಟವರೇ ನನಗೆ ಹೇಳಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಗಂಭೀರ ಆರೋಪ ಮಾಡುವ ಮೂಲಕ ಹೊಸ ಬಾಂಬ್ ಸಿಡಿಸಿದ್ದಾರೆ.

Advertisement

ಮಂಗಳವಾರ ನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಬಿಜೆಪಿ ಅಧಿಕಾರಕ್ಕೆ ಬರುವಲ್ಲಿ ಅವರ ಪಾತ್ರವೇ ದೊಡ್ಡದು. ಬಿಜೆಪಿ 105 ಸ್ಥಾನಕ್ಕೇರಲು ನಾವು ಕಾರಣವೇ ಎಂದು ಪ್ರಶ್ನಿಸಿದ ಕುಮಾರಸ್ವಾಮಿ, 2008 ರಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಾಗ ಸಿದ್ದರಾಮಯ್ಯ ವಿಪಕ್ಷ ನಾಯಕರಾಗಿದ್ದರು. ಆದರೆ ಬಿಜೆಪಿ ಸರ್ಕಾರದ ವಿರುದ್ಧ ಒಂದೇ ಒಂದು ದಾಖಲೆ ಬಹಿರಂಗ ಮಾಡಲಿಲ್ಲ. ಆದರೆ ಜೆಡಿಎಸ್ ಪಕ್ಷದ ನಮ್ಮ ಹೋರಾಟದ ಫಲದಿಂದ ಆಗ ಬಿಜೆಪಿ 40ಕ್ಕೆ ಕುಸಿಯಿತು ಎಂದರು.

ನಾನು ಬಿಜೆಪಿ ಜೊತೆ ಹೋಗಿ ಸರ್ಕಾರ ಮಾಡುವಂತೆ ಮಾಡಿದ್ದೇ ಸಿದ್ದರಾಮಯ್ಯ. ಆಗ ಸಿದ್ದರಾಮಯ್ಯ ಜೆಡಿಎಸ್ ಮುಗಿಸಲು ಅಹಿಂದ ಮಾಡಿದರು. ನವೀನ್ ಪಟ್ನಾಯಕ್ ಜೊತೆ ಒರಿಸ್ಸಾದಲ್ಲಿ ಮಾಡಿದಂತೆ ನಿಮ್ಮನ್ನೇ ಸಿಎಂ ಮಾಡ್ತೀವಿ ಅಂತ ಹೇಳಿ ಬಿಜೆಪಿಯವರೇ ದುಂಬಾಲು ಬಿದ್ದರು. ಜೆಡಿಎಸ್ ಉಳಿಸಲು ಅನಿವಾರ್ಯವಾಗಿ ಬಿಜೆಪಿ ಜೊತೆ ಕೈ ಜೋಡಿಸಿದೆ. ವಾಮನಾಚಾರ್ಯ, ಅಗ್ನಿ ಶ್ರೀಧರ್, ಅಭಿಮಾನಿ ಪ್ರಕಾಶನದ ಮಾಲೀಕರು ಅಂದು ಸಭೆ ಮಾಡಿದ್ದರು, ಅವರನ್ನು ಕೇಳಿ ಎಂದರು.

ಇದನ್ನೂ ಓದಿ: ಜಮೀರ್ ಎಂಬ ಕೊಚ್ಚೆ ಮೇಲೆ ಕಲ್ಲು ಎಸೆಯಲ್ಲ : ಎಚ್ ಡಿಕೆ

ಕಾಂಗ್ರೆಸ್ ಪಕ್ಷದ ನಾಯಕರು ಜೆಡಿಎಸ್ ಪಕ್ಷಕ್ಕೆ ಮತ ಕೊಟ್ಟರೆ ಬಿಜೆಪಿ ಪಕ್ಷಕ್ಕೆ ಮತ ಕೊಟ್ಟಂತೆ ಎಂದು ಅಪ್ರಚಾರ ಮಾಡಿದವರು, ಜೆಡಿಎಸ್ ಪಕ್ಷವನ್ನು ಬಿಜೆಪಿ ಬಿ ಟೀಂ ಎಂದು ಜರಿದವರೇ ಮುಂದೆ ಸರ್ಕಾರ ರಚನೆ ಮಾಡಿ ಅಂತ ದೇವೇಗೌಡರ ಬಳಿ ಬಂದಿದ್ದರು ಎಂದು ಕುಟುಕಿದರು.

Advertisement

ಡಿಎಂಕೆ ಜೊತೆ ಸೇರಿ ಸರ್ಕಾರ ಮಾಡಿದ ನಿಮ್ಮದ್ಯಾವ ಜಾತ್ಯಾತೀತತೆ, ಶಿವಸೇನೆ ಜೊತೆ ಸೇರಿ ಸರ್ಕಾರ ರಚನೆ ಮಾಡಿರುವ ಕಾಂಗ್ರೆಸ್ ಪಕ್ಷಕ್ಕೆ ಜಾತ್ಯಾತೀತತೆ ಬಗ್ಗೆ ಮಾತನಾಡುವ ನೈತಿಕತೆ ಇದೆಯೇ. ನಿಮ್ಮದ್ಯಾವ ಜಾತ್ಯಾತೀತತೆ ಸಿದ್ದರಾಮಯ್ಯ ಅವರೇ ಎಂದು ವಾಗ್ದಾಳಿ ನಡೆಸಿದ ಕುಮಾರಸ್ವಾಮಿ, ದೇವೇಗೌಡರ ಜಾತ್ಯಾತೀತತೆ ಪ್ರಶ್ನಿಸುವ ಅರ್ಹತೆ ನಿಮಗೆ ಇಲ್ಲವೇ ಇಲ್ಲ ಎಂದು ಹರಿಹಾಯ್ದರು.

ದೇವೇಗೌಡರು ಎಂದೂ ಬಿಜೆಪಿ ಜೊತೆ ಕೈ ಜೋಡಿಸಿಲ್ಲ, ಅವರ ಜಾತ್ಯಾತೀತತೆ ಪ್ರಶ್ನಿಸುವ ನೈತಿಕತೆ ಸಿದ್ಧರಾಮಯ್ಯ ಎಂಬ ವ್ಯಕ್ತಿ ಎಲ್ಲಿ ಉಳಿಸಿಕೊಂಡಿದ್ದಾರೆಯೇ, ಸಿದ್ದರಾಮಯ್ಯಗೆ ಮುಖ್ಯಮಂತ್ರಿ ಆಗೋ ಹುಚ್ಚು ಹೆಚ್ಚಿತ್ತು. ನಾನು ಮುಖ್ಯಮಂತ್ರಿ ಆಗಲೇಬೇಕು ಅಂತ ಕರ್ನಾಟಕ ಭವನದಲ್ಲಿ ರಗ್ಗು ಹೊದ್ದು ಮಲಗಿದ್ದರು. ಆಗ ಅವರನ್ನು ಕರೆದುಕೊಂಡು ಬಂದವನು ನಾನು, ನಂತರ ಅವರು ಉಪ ಮುಖ್ಯಮಂತ್ರಿ ಅಧಿಕಾರ ಪಡೆದರು ಎಂದು ಹಳೆಯದನ್ನು ಕೆದಕಿದರು.

ಸಿದ್ದರಾಮಯ್ಯ ನಡವಳಿಕೆಯಿಂದ ಜನರು ಕಾಂಗ್ರೆಸ್ ನಿಂದ ದೂರ ಹೋಗ್ತಿದ್ದಾರೆ. 2018ರಲ್ಲಿ ಬಾದಾಮಿ ಕ್ಷೇತ್ರದಲ್ಲಿ ನಾನು ಮಾಡಿದ ತಪ್ಪಿನಿಂದಲೇ ಅವರು ಗೆದ್ದರು. 2023ಕ್ಕೆ ಸಿದ್ದರಾಮಯ್ಯ ಅವರ ದುರಹಂಕಾರ ಅಂತ್ಯವಾಗಲಿದ್ದು, ಆಗ ಗೊತ್ತಾಗುತ್ತೆ ಎಂದ ಕುಮಾರಸ್ವಾಮಿ ಕುಟುಕಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

More
Next