Advertisement

ಮಾಜಿ ಸ್ಪೀಕರ್‌ ರಮೇಶ್‌ ಕುಮಾರ್‌ ವಿರುದ್ಧ ಹೆಚ್‌ಡಿಕೆ ಆಕ್ರೋಶ

09:18 PM Aug 06, 2022 | Team Udayavani |

ಬೆಂಗಳೂರು: ಕೋಲಾರ ಜಿಲ್ಲೆಯ ಯರಗೊಳ್‌ ಯೋಜನೆಯ ಬಗ್ಗೆ ಪ್ರತಿಕ್ರಿಯೆ ನೀಡುವ ಭರದಲ್ಲಿ ಅವಾಚ್ಯ ಪದ ಬಳಸಿ ಹೇಳಿಕೆ ನೀಡಿರುವ ಮಾಜಿ ಸ್ಪೀಕರ್‌ ರಮೇಶ್‌ ಕುಮಾರ್‌ ವಿರುದ್ಧ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Advertisement

ಈ ಬಗ್ಗೆ ಟ್ವೀಟ್‌ ಮಾಡಿ ಮಾಜಿ ಸ್ಪೀಕರ್‌ ಅವರ ವಿರುದ್ಧ ಕಿಡಿ ಕಾರಿದ್ದಾರೆ. ವಿಕೃತ, ಕೊಳಕು ಮನಃಸ್ಥಿತಿಯ ಮಾಜಿ ಸ್ಪೀಕರ್ ರಮೇಶ್ ಕುಮಾರ್, ನಾಲಿಗೆ ಮತ್ತು ಮಿದುಳಿನ ನಡುವಿನ ಸಂಪರ್ಕ ಕಳೆದುಕೊಂಡು ಅಸಹಜವಾಗಿ ವರ್ತಿಸುತ್ತಿದ್ದಾರೆ. ಅವರ ವಿಕಾರಗಳಿಗೆ ಕೊನೆಯೇ ಇಲ್ಲದಾಗಿದೆ. ಯರಗೊಳ್ ಯೋಜನೆಗೆ ಅನುಮತಿ ನೀಡಿದ್ದೇ ನಾನು. ಮಾಡಿದ್ದನ್ನೇ ನಾನು ಹೇಳಿದ್ದೇನೆ. ಬೇಕಾದರೆ ರಮೇಶ್ ಕುಮಾರ್ ಅವರು ದಾಖಲೆಗಳನ್ನು ನೋಡಿಕೊಳ್ಳಲಿ. ಕೆಆರ್ ಎಸ್, ಎತ್ತಿನಹೊಳೆ, ಕೆಸಿ.ವ್ಯಾಲಿ, ಹೆಚ್ ಎಎಲ್, ಹೆಚ್ ಎಂಟಿಗಳನ್ನು ನಾನೇ ಮಾಡಿದ್ದು ಎಂದು ಎಲ್ಲಾದರೂ ಹೇಳಿದ್ದೇನೆಯೇ? ಹೇಳಿದ್ದರೆ ಅವರು ಹೇಳಲಿ ಎಂದು ಸವಾಲು ಹಾಕಿದ್ದಾರೆ.

ಸ್ವಂತ ಶಕ್ತಿಯಿಂದ ರಾಜಕೀಯ ಮಾಡುವ ಯೋಗ್ಯತೆ ಇಲ್ಲ. ಬಾಲಂಗೋಚಿ ಆಗದಿದ್ದರೆ ರಾಜಕೀಯ ಉಳಿಗಾಲವಿಲ್ಲ. ಪರಾವಾಲಂಬಿ ರಾಜಕಾರಣದ ಕೇರ್ ಆಫ್ ಅಡ್ರೆಸ್ ಆಗಿರುವ ನೀವು ಯಾರ ಕೃಪೆಯಲ್ಲಿದ್ದಿರಿ ಎನ್ನುವುದನ್ನು ಬಿಡಿಸಿ ಹೇಳಬೇಕೆ? ಕೋಲಾರ ಜಿಲ್ಲೆಗೆ ನೀವು ಮಾಡಿದ ಘೋರ ಅನ್ಯಾಯ, ಎಸಗಿದ ಪಾಪ ಕಣ್ಮುಂದೆಯೇ ಇದೆ. ಎತ್ತಿನಹೊಳೆ ಹರಿಸುತ್ತೇನೆ ಎಂದು ನಂಬಿಸಿ ಕೆರೆಗಳ ತುಂಬಾ ವಿಷವನ್ನು ತುಂಬಿಸಿದ ಧೂರ್ತ ಕೃತ್ಯಕ್ಕೆ ಕಾರಣರು ಯಾರು? ಕೆಸಿ ವ್ಯಾಲಿ ಎತ್ತುವಳಿ ಲೆಕ್ಕ ತೆಗೆದರೆ ಮುಖ ಎಲ್ಲಿ ಇಟ್ಟುಕೊಳ್ಳುತ್ತೀರಿ ಸ್ವಯಂ ಘೋಷಿತ ಸಂವಿಧಾನ ತಜ್ಞರೇ? ಎಂದು ಚಾಟಿ ಬೀಸಿದ್ದಾರೆ.

3 ವರ್ಷಗಳಲ್ಲಿ ನೀರು ಹರಿಸುತ್ತೇವೆ ಎಂದು ಬೂಸಿಬಿಟ್ಟು, ಜನಕ್ಕೆ ಮಂಕುಬೂದಿ ಎರಚಿ ಎತ್ತಿನಹೊಳೆ ಹೆಸರಿನಲ್ಲಿ ನಡೆಸಿದ ಎತ್ತುವಳಿಕಾಂಡವನ್ನು ಬಿಚ್ಚಿಡಬೇಕೆ? ಗುತ್ತಿಗೆದಾರರ ಹಿಂದೆ ಸುತ್ತಿದ ಬೇತಾಳ ಕಥೆಯನ್ನು ಹೇಳಬೇಕೆ? ಇದೆಲ್ಲವನ್ನು ಅಧ್ಯಾಯಗಳಂತೆ ಆರಂಭಿಸಬೇಕೆ? ಎಂದು ಪ್ರಶ್ನಿಸಿದ್ದಾರೆ.

ಬೆಳಗಾವಿ ಅಧಿವೇಶನದಲ್ಲಿ ಲಜ್ಜೆಗೆಟ್ಟು ಆಡಿದ ಮಾತಿಗೆ ಸ್ವಪಕ್ಷದ ಶಾಸಕಿಯರಿಂದಲೇ ಛೀಮಾರಿ ಹಾಕಿಸಿಕೊಂಡ ಸ್ವಯಂ ಘೋಷಿತ ಸಂವಿಧಾನ ಪಂಡಿತರೇ, ಅಧಿವೇಶನದಲ್ಲಿ ಅದ ಗರ್ವಭಂಗವನ್ನು ಮರೆತಿರಾ? ಗಾಂಧಿಗಳ ಹೆಸರೇಳಿಕೊಂಡು ತಲೆಮಾರುಗಳಿಗೆ ಆಗುವಷ್ಟು ಮಾಡಿಕೊಂಡಿದ್ದನ್ನು ನೀವೇ ಒಪ್ಪಿಕೊಂಡಿದ್ದೀರಿ. ಇದಕ್ಕೆ ನಿಮ್ಮ ಕೃಪಾಪೋಷಿತ ಸಿದ್ಧಸೂತ್ರಧಾರರೇ ಸಾಕ್ಷಿ. ಹೀಗೆ ಮಾಡಿಕೊಂಡಿದ್ದರಲ್ಲಿ ಎತ್ತಿನಹೊಳೆ, ಕೆಸಿ ವ್ಯಾಲಿ ಎತ್ತುವಳಿಯೂ ಸೇರಿದೆಯಾ? ಎಂದು ಪ್ರಶ್ನಿಸಿದ್ದಾರೆ.

Advertisement

“ಆಚಾರವಿಲ್ಲದ ನಾಲಿಗೆ ನಿನ್ನ ನೀಚ ಬುದ್ಧಿಯ ಬಿಡು ನಾಲಿಗೆ” ದಾಸಶ್ರೇಷ್ಠ ಶ್ರೀ ಪುರಂದರದಾಸರು ನಿಮ್ಮಂತಹ ವಿಕಾರಿಗಳನ್ನು ನೋಡಿಯೇ ಈ ಪದವನ್ನು ಬರೆದಿರಬಹುದು ಎಂದು ಕಿಡಿಕಾರಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next