Advertisement

ಕೈಲಾಗದ ಕಾಂಗ್ರೆಸ್ ನಾಯಕ ಮೈ ಪರಚಿಕೊಂಡನಂತೆ : ಎಚ್ ಡಿಕೆ ವ್ಯಂಗ್ಯ

11:37 AM Jan 07, 2022 | Team Udayavani |

ಬೆಂಗಳೂರು :ಹಿಂದೆ ಒಂದು ಮಾತಿತ್ತು. ” ಕೈಲಾಗದವನು ಮೈ ಪರಚಿಕೊಂಡ.” ಈಗ ಬಂದಿರುವ ಹೊಸ ನುಡಿಗಟ್ಟು ಏನೆಂದರೆ, “ಕೈಲಾಗದ ಕಾಂಗ್ರೆಸ್ ನಾಯಕ ಮೈ ಪರಚಿಕೊಂಡ” ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ವ್ಯಂಗ್ಯವಾಡಿದ್ದಾರೆ.

Advertisement

ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಅವರು, ಸುಳ್ಳು ಸಿದ್ದಯ್ಯನ ವರಸೆ ಹಾಗಿದೆ. ಐದು ವರ್ಷ ಅಧಿಕಾರ ಇದ್ದಾಗ ಗಡದ್ದಾಗಿ ನಿದ್ದೆ ಹೊಡೆದು ಈಗ ಇನ್ನೇನು ಮಾಡಬೇಕಿತ್ತು ಎಂದು ಹೊಸ ರಾಗ ಹಾಡುತ್ತಿದ್ದಾರೆ ಎಂದು ಟೀಕಿಸಿದ್ದಾರೆ.

ಕೊಟ್ಟ ಕುದುರೆ ಏರಿ, ಸವಾರಿಯನ್ನೂ ಮಾಡಿ, ಆಮೇಲೆ ನಮ್ಮ ‘ ಕೈ ‘ ಯಲ್ಲಿ ಏನೂ ಮಾಡಲಾಗಲಿಲ್ಲ ಎಂದರೆ ಹೇಗೆ? ಅಂದರೆ, ಕೊಟ್ಟ ಕುದುರೆಯನ್ನು ಏರಿ ಕೆಲಸ ಮಾಡದವನು ಕಾಂಗ್ರೆಸ್ ನಾಯಕ ಉರುಫ್ ಸುಳ್ಳು ಸಿದ್ದಯ್ಯ ಮೇಕೆದಾಟು ಕನಸು ಕಂಡವರು 1995ರಲ್ಲಿ ಸಿಎಂ ಆಗಿದ್ದ ಹೆಚ್.ಡಿ.ದೇವೇಗೌಡರು. ಆ ಯೋಜನೆಯ ಸಮಗ್ರ ಯೋಜನಾ ವರದಿ -DPR ಮಾಡಿ ಕೇಂದ್ರಕ್ಕೆ ಕಳಿಸಿದ್ದು 2018ರಲ್ಲಿ ಸಿಎಂ ಆಗಿದ್ದ ಕುಮಾರಸ್ವಾಮಿ ಅವರು.

2017ರಲ್ಲಿ ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಕಳಿಸಿದ್ದು ಕೇವಲ PFR ಮಾತ್ರ. ಬೆಂಗಳೂರಿನಲ್ಲೇ ಇದ್ದ ಕೇಂದ್ರ ಜಲ ಆಯೋಗದ ಪ್ರಾದೇಶಿಕ ಕಚೇರಿಗೆ PFR ಕೊಟ್ಟು ಕೈ ತೊಳೆದುಕೊಂಡ ಅವರ ಸರಕಾರ, ಆ ಪ್ರಾದೇಶಿಕ ಕಚೇರಿ ಕೇಳಿದ ಯಾವ ಪ್ರಶ್ನೆಗೂ ಉತ್ತರ ಕೊಡಲಿಲ್ಲ. 2018ರಲ್ಲಿ ಹೆಚ್.ಡಿ.ಕುಮಾರಸ್ವಾಮಿ ಅವರು ಸಿಎಂ ಅದ ಮೇಲೆ ಪುನಾ PFR ಸಲ್ಲಿಸಿದ ಮೇಲೆ DPR ಸಲ್ಲಿಕೆಗೆ ಅವಕಾಶ ಸಿಕ್ಕಿತು. ಆಗ ಕುಮಾರಸ್ವಾಮಿ ಅವರ ಸರಕಾರ ತಡ ಮಾಡದೇ DPR ಸಿದ್ದಪಡಿಸಿ ಸಲ್ಲಿಸಿತು. ಮೇಕೆದಾಟು ಯೋಜನೆಗೆ DPR ಮಾಡಿದ್ದು ಹೆಚ್.ಡಿ.ಕುಮಾರಸ್ವಾಮಿ ಅವರ ಸರಕಾರ ಎಂದು ನಿನ್ನೆ ಜಲ ಸಂಪನ್ಮೂಲ ಸಚಿವರಾದ ಶ್ರೀ ಗೋವಿಂದ ಕಾರಜೋಳ ಅವರೇ ದಾಖಲೆಗಳ ಸಮೇತ ಹೇಳಿದ್ದಾರೆ. ಐದು ವರ್ಷ ಸುಳ್ಳು ಸಿದ್ದಯ್ಯ ಮಾಡಿದ್ದೇನು ಇಲ್ಲ ಎಂದು ಕಡ್ಡಿ ಮುರಿದಂತೆ ತಿಳಿಸಿದ್ದರು.

ಹೀಗಿದ್ದರೂ ಸುಳ್ಳು ಸಿದ್ದಯ್ಯ ನಾವೇ DPR ಮಾಡಿದ್ದು ಎಂದು ಬೂಸಿ ಬಿಡುತ್ತಿದ್ದಾರೆ. ಅವರಿಗೆ PFR ಎಂಬುದು DPR ಆಗಿದ್ದು ಹೇಗೆ? ಐದು ವರ್ಷ ಸಿಎಂ ಆಗಿದ್ದ ವ್ಯಕ್ತಿಗೆ ಇವೆರಡಕ್ಕೂ ಇರುವ ವ್ಯತ್ಯಾಸ ತಿಳಿಯದೇ?
ತಮ್ಮ ತಪ್ಪು ಮುಚ್ಚಿಕೊಳ್ಳಲು ಈಗ ದೇವೇಗೌಡರನ್ನು ಸುಳ್ಳು ಸಿದ್ದಯ್ಯ ಟೀಕೆ ಮಾಡುತ್ತಿದ್ದಾರೆ. ಮೋದಿಗೆ ಅವರಿಗೆ ಗೌಡರು ಅಪ್ತರು. ಮೇಕೆದಾಟು ಯೋಜನೆಗೆ ಕೇಂದ್ರದ ಒಪ್ಪಿಗೆಯನ್ನು ಗೌಡರೇ ಕೊಡಿಸಲಿ ಎಂದು ಹೇಳಿದ್ದಾರೆ. ಹಾಗಾದರೆ, ಈ ಕೆಲಸ ಗೌಡರಿಂದ ಮಾತ್ರ ಆಗುವುದು ಎಂದು ಅವರು ಒಪ್ಪಿಕೊಂಡ ಹಾಗಾಯಿತು. ಹಾಗಾದರೆ ಪಾದಯಾತ್ರೆ ಏತಕ್ಕೆ? ಆಡಳಿತಾತ್ಮಕ, ಕಾನೂನು ಹಾಗೂ ತಾಂತ್ರಿಕ ಅಂಶಗಳ ಆಧಾರದ ಮೇಲೆ ದೇವೇಗೌಡರಿಗೆ ಯಾವಾಗ ಏನು ಹೆಜ್ಜೆ ಇಡಬೇಕು ಎಂಬುದು ಚೆನ್ನಾಗಿ ಗೊತ್ತಿದೆ. ಅದು ಅನೇಕ ಯೋಜನೆಗಳಲ್ಲಿ ಸಾಬೀತಾಗಿದೆ. ಆ ಬಗ್ಗೆ ಸಿದ್ದರಾಮಯ್ಯ ಅವರು ಹೇಳಬೇಕಾದ ಅಗತ್ಯ ಇಲ್ಲ. ಹೀಗಿದ್ದರೂ ರಾಜ್ಯ ನೀರಾವರಿಗೆ ಹೆಚ್.ಡಿ.ದೇವೇಗೌಡರ ಕೊಡುಗೆಯನ್ನು ಉಪೇಕ್ಷಿಸಿ ಸುಳ್ಳುಗಳ ಮೂಲಕ ಜನರಿಗೆ ತಪ್ಪು ಮಾಹಿತಿ ನೀಡುವುದು ರಾಜ್ಯಕ್ಕೆ ಮಾಡುವ ದ್ರೋಹ. ಇನ್ನಾದರೂ ಸುಳ್ಳು ಹೇಳುವುದು ಬಿಟ್ಟರೆ ಒಳಿತು. ಇಲ್ಲವಾದರೆ ಜನರೇ ಸುಳ್ಳಯ್ಶನ ನಾಲಿಗೆಗೆ ಬುದ್ಧಿ ಕಲಿಸಲಿದ್ದಾರೆ. ಪಾದಯಾತ್ರೆಯಿಂದ ಮೇಕೆದಾಟು ಯೋಜನೆಗೆ ಚಿಕ್ಕಾಸು ಉಪಯೋಗವಿಲ್ಲ. ಆ ಪಾದಯಾತ್ರೆಯ ಪೆಟ್ಟು ಜನರ ಮೇಲೆ ಬೀಳಲಿದೆ. ಅದರ ತೀವ್ರತೆ ಗೊತ್ತಾದ ಮೇಲೆ ಮುಂದೆ ಜನರೇ ಕಾಂಗ್ರೆಸ್ ನಾಯಕರ ಮುಖಕ್ಕೆ ಮಂಗಳಾರತಿ ಮಾಡಲಿದ್ದಾರೆ ಎಂದು ಟೀಕಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next