Advertisement

ಡಿಕೆಶಿ ಕಡೆ ನೋಡದ ಎಚ್‌ಡಿಕೆ; ಸಿದ್ದರಾಮಯ್ಯಗೆ ನಮಸ್ಕರಿಸಿ ತೆರಳಿದ ಎಚ್‌ಡಿಕೆ

11:26 PM Jun 03, 2024 | Team Udayavani |

ಬೆಂಗಳೂರು: ಪ್ರಜ್ವಲ್‌ ರೇವಣ್ಣ ಪ್ರಕರಣ ಸಹಿತ ನಿತ್ಯ ಒಂದಿಲ್ಲೊಂದು ಕಾರಣಕ್ಕೆ ಸರಕಾರದ ವಿರುದ್ಧ ಕೆಂಡಕಾರುತ್ತಿದ್ದ ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರಿಗೆ ಹಾಲಿ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್‌ ಮುಖಾಮುಖಿ ಆದ ಪ್ರಸಂಗ ನಡೆಯಿತು. ಎದುರಿಗೇ ನಿಂತಿದ್ದ ಸಿದ್ದರಾಮಯ್ಯ ಅವರಿಗೆ ಶುಭ ಕೋರಿದ ಎಚ್‌ಡಿಕೆ, ಡಿಸಿಎಂ ಶಿವಕುಮಾರ್‌ ಅವರತ್ತ ಕಣ್ಣೆತ್ತಿಯೂ ನೋಡಲಿಲ್ಲ.

Advertisement

ವಿಧಾನಸೌಧದ ಜೆಡಿಎಸ್‌ ಶಾಸಕಾಂಗ ಪಕ್ಷದ ಕೊಠಡಿಯಲ್ಲಿ ಸಭೆ ನಡೆಸಿದ ಜೆಡಿಎಸ್‌ ರಾಜ್ಯಾಧ್ಯಕ್ಷರೂ ಆಗಿರುವ ಕುಮಾರಸ್ವಾಮಿ, ವಿಧಾನಸಭೆಯಿಂದ ವಿಧಾನ ಪರಿಷತ್‌ಗೆ ಸ್ಪರ್ಧಿಸಲು ಜವರಾಯಿಗೌಡ ಅವರು ನಾಮಪತ್ರ ಸಲ್ಲಿಸುವ ಸಂದರ್ಭ ಅವರ ಜತೆಯಲ್ಲಿದ್ದರು. ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಪೂರ್ಣಗೊಳಿಸಿ, ಜೆಡಿಎಸ್‌ ನಾಯಕರೆಲ್ಲರೂ ಚುನಾವಣಾಧಿಕಾರಿಯಿಂದ ಕೊಠಡಿಯಿಂದ ಹೊರಡಬೇಕು ಎನ್ನುವಷ್ಟರಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆಗಾಗಿ ಸಿಎಂ, ಡಿಸಿಎಂ ಸಹಿತ ಎಲ್ಲರೂ ಆಗಮಿಸಿದರು.

ಚುನಾವಣಾಧಿಕಾರಿ ಕೊಠಡಿಯೊಳಗೆ ಜೆಡಿಎಸ್‌ ನಾಯಕರು ಇದ್ದುದನ್ನು ಗಮನಿಸಿದ ಸಿಎಂ ಸಿದ್ದರಾಮಯ್ಯ ಅವರು, ಬಾಗಿಲ ಎದುರೇ ನಿಂತು ಕಾಯುತ್ತಿದ್ದರು. ಇದೇ ವೇಳೆಗೆ ಜೆಡಿಎಸ್‌ ನಾಯಕರು ಒಬ್ಬೊಬ್ಬರಾಗಿಯೇ ಹೊರಬರಲಾರಂಭಿಸಿದರು.

ಹಾಯ್‌ ಎಂದ ಸಿಎಂ
ಹೊರಬರುತ್ತಿದ್ದಂತೆ ಕೊಠಡಿ ಎದುರು ಸಿಎಂ, ಸಚಿವ ಎಚ್‌.ಕೆ. ಪಾಟೀಲ್‌ ಸಹಿತ ಪ್ರಮುಖರನ್ನು ಕಂಡು ಜೆಡಿಎಸ್‌ನ ಜೆ.ಕೆ.ಕೃಷ್ಣ ರೆಡ್ಡಿ ಚಕಿತರಾದರು. ಅವರ ಹಿಂದೆಯೇ ಆಗಮಿಸಿದ ಕುಮಾರಸ್ವಾಮಿಗೆ ಎಚ್‌.ಕೆ.ಪಾಟೀಲ್‌ ಕೈಮುಗಿದು ನಮಸ್ಕರಿಸುತ್ತಿದ್ದಂತೆ, ಕುಮಾರಸ್ವಾಮಿ ಕೂಡ ಹೃದಯ ಮುಟ್ಟಿಕೊಳ್ಳುತ್ತ ನಮಸ್ಕಾರ ತಿಳಿಸಿದರು. ಅಲ್ಲೇ ಇದ್ದ ಸಿಎಂಗೂ ಅದೇ ರೀತಿ ನಯವಾಗಿ ನಮಸ್ಕರಿಸಿದರು. ಸಿಎಂ ಕೂಡ ಹಾಯ್‌ ಎನ್ನುವಂತೆ ವಿಶ್‌ ಮಾಡಿ ಅಲ್ಲೇ ನಿಂತರು. ಪರಸ್ಪರ ಏನೂ ಮಾತುಕತೆ ನಡೆಸದೆ ಕುಮಾರಸ್ವಾಮಿ ಹೊರಟರು.

ಡಿಸಿಎಂ ಕಡೆ ನೋಡದೆ ಹೊರಟ ಎಚ್‌ಡಿಕೆ
ಸಿಎಂ ಹಿಂದೆ ಸಚಿವರು, ಡಿಸಿಎಂ ಶಿವಕುಮಾರ್‌, ಕಾಂಗ್ರೆಸ್‌ ಅಭ್ಯರ್ಥಿಗಳೂ ಇದ್ದರು. ಎದುರಿಗೆ ಸಿಕ್ಕ ಕೋನರೆಡ್ಡಿ ಮತ್ತು ಕಾಂಗ್ರೆಸ್‌ ಅಭ್ಯರ್ಥಿ ಬಲ್ಕಿಸ್‌ ಬಾನುಗೆ ವಿಶ್‌ ಮಾಡಿದ ಕುಮಾರಸ್ವಾಮಿ, ಅಲ್ಲೇ ಇದ್ದ ಡಿ.ಕೆ. ಶಿವಕುಮಾರ್‌ ಅವರತ್ತ ನೋಡಲೂ ಇಲ್ಲ, ಮಾತನಾಡಿಸಲೂ ಇಲ್ಲ. ಆದರೆ ಕುಮಾರಸ್ವಾಮಿ ಅವರ ವರ್ತನೆಯನ್ನು ಡಿಸಿಎಂ ಮಾತ್ರ ಗಮನಿಸುತ್ತಲೇ ಇದ್ದರು. ಸುತ್ತಲೂ ಇದ್ದ ಕಾಂಗ್ರೆಸ್‌ ಕೋಟೆ ದಾಟಿ ಎಚ್‌ಡಿಕೆ ಹೊರನಡೆದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next