Advertisement

HD ದೇವೇಗೌಡರ ಬದಲು ಎಚ್‌ಡಿಕೆ ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷ?

12:48 AM Sep 18, 2024 | Team Udayavani |

ಬೆಂಗಳೂರು: ಜಾತ್ಯತೀತ ಜನತಾದಳ (ಜೆಡಿಎಸ್‌)ದ ರಾಜ್ಯ ಹಾಗೂ ರಾಷ್ಟ್ರೀಯ ಅಧ್ಯಕ್ಷ ಸ್ಥಾನದ ಅವಧಿಯು ಸೆಪ್ಟಂಬರ್‌ ಅಂತ್ಯಕ್ಕೆ ಪೂರ್ಣ ಗೊಳ್ಳಲಿದ್ದು, ಎರಡೂ ಹುದ್ದೆಗಳ ಅವಧಿಯನ್ನು 2 ತಿಂಗಳ ಕಾಲ ವಿಸ್ತರಣೆ ಮಾಡಿಕೊಳ್ಳಲು ಪಕ್ಷ ದೊಳಗೆ ಚಿಂತನ-ಮಂಥನ ನಡೆದಿದೆ.

Advertisement

ಈ ಮಧ್ಯೆ ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಅವರನ್ನು ರಾಷ್ಟ್ರೀಯ ಅಧ್ಯಕ್ಷರನ್ನಾಗಿ ಮಾಡುವ ಸಾಧ್ಯತೆ ದಟ್ಟವಾಗಿದ್ದು, ರಾಜ್ಯ ಘಟಕಕ್ಕೆ ಪುತ್ರ ನಿಖಿಲ್ ಕುಮಾರಸ್ವಾಮಿ ಆಯ್ಕೆ ಬಹುತೇಕ ನಿಚ್ಚಳ ಎನ್ನಲಾಗಿದೆ.

ಪ್ರತೀ 2 ವರ್ಷಗಳಿಗೊಮ್ಮೆ ರಾಜ್ಯಾಧ್ಯಕ್ಷ, ರಾಷ್ಟ್ರೀಯ ಅಧ್ಯಕ್ಷ ಮತ್ತಿತರ ಪದಾಧಿಕಾರಿಗಳ ನೇಮಕ ಮಾಡಲಾಗುತ್ತದೆ. 2023 ರಲ್ಲಿ ನೇಮಕಗೊಂಡಿದ್ದ ಪದಾಧಿಕಾರಿಗಳ ಅವಧಿ ಮುಕ್ತಾಯ ಹಿನ್ನೆಲೆಯಲ್ಲಿ ಪಕ್ಷದ ಪುನರ್‌ಸಂಘಟ ನೆಗೆ ತಯಾರಿ ನಡೆದಿದೆ.

ಸದಸ್ಯತ್ವ ನೋಂದಣಿ ಆರಂಭ
ಜೆಡಿಎಸ್‌ ಪಕ್ಷವನ್ನು ತಳ ಮಟ್ಟದಿಂದ ಬಲವರ್ಧನೆ ಗೊಳಿಸುವ ಸಲುವಾಗಿ ಸದಸ್ಯತ್ವ ನೋಂದಣಿ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ.

ಪ್ರತೀ ತಾಲೂಕಿನಿಂದ ಕನಿಷ್ಠ 5 ಸಾವಿರ ಜನರನ್ನು ಸದಸ್ಯರನ್ನಾಗಿ ಮಾಡುವ ಗುರಿ ಕೊಡಲಾಗಿದ್ದು, ಪ್ರತೀ ಜಿಲ್ಲೆಯಲ್ಲೂ ಹಾಲಿ ಹಾಗೂ ಮಾಜಿ ಶಾಸಕರನ್ನು ಒಳಗೊಂಡ ತಂಡ ರಚಿಸಲಾಗಿದೆ. ಹಾಲಿ ಶಾಸಕರಿರುವೆಡೆ ಹೆಚ್ಚಿನ ಸದಸ್ಯರನ್ನು ನೋಂದಾಯಿಸಬೇಕು ಎಂದು ಕಟ್ಟಪ್ಪಣೆ ಮಾಡಲಾಗಿದೆ.

Advertisement

ಸಾಂಸ್ಥಿಕ ಚುನಾವಣೆ
ಸದಸ್ಯತ್ವ ನೋಂದಣಿ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಸಾಂಸ್ಥಿಕ ಚುನಾವಣೆಗಳನ್ನು ನಡೆಸಲು ಚಿಂತಿಸಿದ್ದು, ಈ ಬಗ್ಗೆ ಸೆಪ್ಟಂಬರ್‌ ತಿಂಗಳ ಅಂತ್ಯದಲ್ಲಿ ಸಭೆ ನಡೆಸಿ ನಿರ್ಣಯ ಕೈಗೊಳ್ಳುವ ಸಾಧ್ಯತೆಗಳಿವೆ.

ಸಾಂಸ್ಥಿಕ ಚುನಾವಣೆ ಮೂಲಕ ತಾಲೂಕು ಮತ್ತು ಜಿಲ್ಲಾ ಮಟ್ಟದ ಪದಾಧಿಕಾರಿಗಳ ಆಯ್ಕೆ ನಡೆಯಲಿದ್ದು, ಈ ಪ್ರಕ್ರಿಯೆ ಮುಗಿಯಲು ಕನಿಷ್ಠ ಒಂದು ತಿಂಗಳಾದರೂ ಬೇಕು. ಡಿಸೆಂಬರ್‌ ಒಳಗಾಗಿ ಎಲ್ಲ ಪ್ರಕ್ರಿಯೆಗಳನ್ನು ಮುಗಿಸಿದ ಅನಂತರ ರಾಜ್ಯಾಧ್ಯಕ್ಷ, ರಾಷ್ಟ್ರೀಯ ಅಧ್ಯಕ್ಷ ಸ್ಥಾನಗಳ ಚುನಾವಣೆ ನಡೆಸುವ ಕುರಿತು ಕೂಡ ಸೆಪ್ಟಂಬರ್‌ ಮಾಸಾಂತ್ಯಕ್ಕೆ ನಡೆಯುವ ಸಭೆಯಲ್ಲಿ ನಿರ್ಧರಿಸಲಾಗುತ್ತದೆ.

ಎಚ್‌ಡಿಕೆ, ನಿಖಿಲ್‌ಗೆ ಹೊಸ ಹೊಣೆ?
ಸದಸ್ಯತ್ವ ನೋಂದಣಿ, ಸಾಂಸ್ಥಿಕ ಚುನಾವಣ ಪ್ರಕ್ರಿಯೆಗಳು ನವೆಂಬರ್‌ ಅಥವಾ ಡಿಸೆಂಬರ್‌ ವೇಳೆಗೆ ಪೂರ್ಣಗೊಳ್ಳಲಿದ್ದು, ಅಲ್ಲಿಯ ವರೆಗೆ ಪ್ರಸ್ತುತ ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷರಾಗಿರುವ ಎಚ್‌.ಡಿ. ದೇವೇಗೌಡ ಹಾಗೂ ರಾಜ್ಯಾಧ್ಯಕ್ಷರಾಗಿರುವ ಕುಮಾರಸ್ವಾಮಿ ಅವರ ಅವಧಿಯನ್ನು ವಿಸ್ತರಣೆ ಮಾಡಿಕೊಳ್ಳುವ ಸಂಬಂಧ ಸೆಪ್ಟಂಬರ್‌ ಅಂತ್ಯಕ್ಕೆ ನಡೆಯುವ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗುತ್ತದೆ. ಇದೇ ನಿರ್ಣಯವನ್ನು ಚುನಾವಣಾಧಿಕಾರಿಗೂ ರವಾನಿಸಲಾಗುತ್ತದೆ. ಕುಮಾರಸ್ವಾಮಿ ರಾಷ್ಟ್ರ ರಾಜಕಾರಣದಲ್ಲಿ ಇರುವುದರಿಂದ ಹಾಗೂ ರಾಷ್ಟ್ರೀಯ ಅಧ್ಯಕ್ಷ ಸ್ಥಾನಕ್ಕೆ ಪೈಪೋಟಿಯಾಗಲೀ, ವಿರೋಧವಾಗಲೀ ಬರುವ ಸಾಧ್ಯತೆ ಕಡಿಮೆ ಇರುವುದರಿಂದ ಬಹುತೇಕ ಕುಮಾರಸ್ವಾಮಿ ಅವರೇ ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷ ಹುದ್ದೆಯನ್ನು ಅಲಂಕರಿಸಲಿದ್ದಾರೆ. ಅದೇ ರೀತಿ ಜೆಡಿಎಸ್‌ ಯುವ ಘಟಕದ ಅಧ್ಯಕ್ಷರಾಗಿರುವ ನಿಖಿಲ್‌ ಕುಮಾರಸ್ವಾಮಿ ಅವರಿಗೆ ಈಗಾಗಲೇ ಪಕ್ಷ ಸಂಘಟನೆಯ ಹೊಣೆ ಹೊರಿಸಿರುವುದರಿಂದ ಭವಿಷ್ಯದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಅವರನ್ನೇ ಆಯ್ಕೆ ಮಾಡುವ ಸಾಧ್ಯತೆಗಳು ನಿಚ್ಚಳವಾಗಿವೆ ಎಂದು ಪಕ್ಷದ ಮೂಲಗಳು ಹೇಳಿವೆ.

- ಸಾಮಗ ಶೇಷಾದ್ರಿ

Advertisement

Udayavani is now on Telegram. Click here to join our channel and stay updated with the latest news.

Next