Advertisement

ಚಾಲಕರ ಜತೆ ಎಚ್‌ಡಿಕೆ ಸಂವಾದ

06:15 AM Feb 15, 2018 | |

ಬೆಂಗಳೂರು: ರಾಜ್ಯದಲ್ಲಿ ಜೆಡಿಎಸ್‌ ಅಧಿಕಾರಕ್ಕೆ ಬಂದರೆ ಆಟೋ ಹಾಗೂ ಟ್ಯಾಕ್ಸಿ ಚಾಲಕರಿಗೆ ವಸತಿ, ಮಕ್ಕಳ ವಿದ್ಯಾಭ್ಯಾಸ, ಕುಟುಂಬದ ಆರೋಗ್ಯ ಸುರಕ್ಷತೆಗೆ ಯೋಜನೆ ರೂಪಿಸಲಾಗುವುದು ಎಂದು ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಭರವಸೆ ನೀಡಿದ್ದಾರೆ.

Advertisement

ಪುರಭವನದಲ್ಲಿ ಬುಧವಾರ ಆಯೋಜಿಸಿದ್ದ ಆಟೋ ಹಾಗೂ ಟ್ಯಾಕ್ಸಿ ಚಾಲಕರ ಜತೆ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಆಟೋ ಹಾಗೂ ಟ್ಯಾಕ್ಸಿ ಚಾಲಕರಿಗೆ ಸಾರಿಗೆ ಹಾಗೂ ಪೊಲೀಸ್‌ ಇಲಾಖೆಯಿಂದ ಆಗುತ್ತಿರುವ ಕಿರುಕುಳ ತಪ್ಪಿಸಲಾಗುವುದು.

ಎರಡೂ ಇಲಾಖೆಯ ಸಿಬ್ಬಂದಿಗೂ ಚಾಲಕರ ಜತೆ ವರ್ತಿಸುವುದು ಹೇಗೆ ಎಂಬುದರ ಬಗ್ಗೆ ತರಬೇತಿ ನೀಡಬೇಕಿದೆ. ಆಟೋ ಹಾಗೂ ಟ್ಯಾಕ್ಸಿ ವಲಯಕ್ಕೆ ಖಾಸಗಿಯವರ ಪ್ರವೇಶದಿಂದ ನಮ್ಮಲ್ಲಿನ ಆಟೋ ಮತ್ತು ಟ್ಯಾಕ್ಸಿ ಚಾಲಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಸರ್ಕಾರ ಅವರ ಕಷ್ಟಕ್ಕೆ ಸ್ಪಂದಿಸಬೇಕಿತ್ತು. ಟ್ಯಾಕ್ಸಿ ಚಾಲಕರ ಸಮಸ್ಯೆಗೆ ಸ್ಪಂದಿಸಲು ಓಲಾ, ಊಬರ್‌ಗೆ ಪ್ರತಿಯಾಗಿ ಖಾಸಗಿಯಾಗಿ ಸಂಸ್ಥೆ ಸ್ಥಾಪಿಸಿ ನೆರವಾಗಲು ಪ್ರಯತ್ನಿಸಿದೆ. ಚುನಾವಣೆ ಇರುವುದರಿಂದ ನಾನು ಏಕಾಂಗಿ, ನಿರಂತರ ಪ್ರವಾಸದಲ್ಲಿದ್ದು ಆ ಕಡೆ ಹೆಚ್ಚಿನ ಗಮನ ಕೊಡಲು ಆಗುತ್ತಿಲ್ಲ. ಚುನಾವಣೆ ನಂತರ ಅದಕ್ಕೆ ಸ್ಪಷ್ಟ ರೂಪ ಕೊಡಲಾಗುವುದು ಎಂದು ತಿಳಿಸಿದರು.

ಬಾಲಕಿಗೆ ನೆರವು ನೀಡಿದ ಕುಮಾರಸ್ವಾಮಿ: ಸಂವಾದ ಕಾರ್ಯಕ್ರಮದಲ್ಲಿ ಆಟೋ ಚಾಲಕರೊಬ್ಬರು ಪತ್ನಿ ಹಾಗೂ ಮೋನಿಕಾ ಎಂಬ ಬಾಲಕಿ ಜತೆ ಬಂದಿದ್ದರು. ಬಾಲಕಿ ಮಾಸ್ಕ್ ಹಾಕಿಕೊಂಡಿದ್ದಳು. ಆ ಬಾಲಕಿಯನ್ನು ನೋಡುತ್ತಿದ್ದಂತೆ ಕುಮಾರಸ್ವಾಮಿ ಭಾವುಕರಾದರು. ಸಂವಾದದಲ್ಲಿ ಮಾತನಾಡಿದ ಚಾಲಕ, “ಮಗು ರೋಗ ನಿರೋಧಕ ಕಾಯಿಲೆಯಿಂದ ಬಳಲುತ್ತಿದ್ದು ಚಿಕಿತ್ಸೆಗೆ 30 ಲಕ್ಷ ರೂ. ವೆಚ್ಚವಾಗಲಿದೆ. ಇಲ್ಲದಿದ್ದರೆ ಜೀವಂತವಾಗಿ ಉಳಿಯೋದು ಕಷ್ಟ ಎಂದು ವೈದ್ಯರು ಹೇಳಿದ್ದರು. ಮಗು ಉಳಿಸಿಕೊಳ್ಳಲು ಸಾಧ್ಯವಾಗದೆ ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರಕ್ಕೆ ಬಂದಿದ್ದೆವು. ಕೊನೆಗೆ, ಕುಮಾರಸ್ವಾಮಿಯವರ ಬಳಿ ಹೋದಾಗ ಮಗುವಿನ ಚಿಕಿತ್ಸೆಯ ಸಂಪೂರ್ಣ ವೆಚ್ಚ ಭರಿಸಿದರು. ಇವರೇ ನಮ್ಮ ಪಾಲಿನ ದೇವರು’ ಎಂದು ಕೃತಜ್ಞತೆಯಿಂದ ಸ್ಮರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next