ಬೆಂಗಳೂರು: ಬಿಜೆಪಿ ಶಾಸಕರ ಎಡಗೈ ಬಂಟ, ಬಲಗೂ ಬಂಟರನ್ನು ಹಿಡಿದಿದ್ದೇವೆ ಎಂದು ಹೇಳಿರುವ ಕಾಂಗ್ರೆಸ್ ಶಾಸಕರೊಬ್ಬರು ದೊಡ್ಡ ತಿಮಿಂಗಲ ಎಂದಿದ್ದಾರೆ. ನಮ್ಮ ರಾಜ್ಯದ ದೊಡ್ಡ ತಿಮಿಂಗಲ ಯಾರು ಎಂಬುದು ಜನರಿಗೆ ಗೊತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಆಕ್ರೋಶ ಹೊರಹಾಕಿದರು.
ನನ್ನ ಜೀವನ ತೆರೆದ ಪುಸ್ತಕ. ನನ್ನ ವೈಯಕ್ತಿಕ ಜೀವನದ ಬಗ್ಗೆ ವಿಧಾನಸಭೆ ಕಲಾಪಗಳಲ್ಲೇ ಪ್ರಸ್ತಾಪಿಸಿದ್ದೇನೆ. ನಾನು ನೋವು ನುಂಗಿದ್ದೇನೆಯೇ ಹೊರತು, ಜನರಿಗೆ ಯಾವುದೇ ರೀತಿಯ ಅನ್ಯಾಯ ಮಾಡಿಲ್ಲ. ನೋವು ಕೊಟ್ಟಿಲ್ಲ. ಕಾನೂನುಬಾಹಿರ ನಡವಳಿಕೆ ನನ್ನದಲ್ಲ. ವರ್ಗಾವಣೆ ವಿಚಾರದಲ್ಲಿ ಅನೇಕ ಅಧಿಕಾರಿಗಳು ನೋವಿನಲ್ಲಿದ್ದಾರೆ. ಅದಕ್ಕೆ ಸಂಬಂಧಿಸಿದ ಪೆನ್‌ಡ್ರೈವ್ ಅಂದೇ ತೋರಿಸಿದ್ದೇನೆ. ಅದನ್ನು ಬಿಡುಗಡೆ ಮಾಡುವ ಕಾಲವೂ ದೂರವಿಲ್ಲ. ದೊಡ್ಡ ತಿಮಿಂಗಲದ ಆಡಿಯೋ ಹೊರಬರುತ್ತಿದ್ದಂತೆ ದೇವರಾಜೇಗೌಡ ಬಂಧನ ಆಯಿತು. ಭ್ರಷ್ಟಾಚಾರದ ಪಾಲುದಾರರ ವಿರುದ್ಧ ಕ್ರಮ ತೆಗೆದುಕೊಳ್ಳುವ ಶಕ್ತಿ ಸರ್ಕಾರಕ್ಕಿದ್ದರೆ ನಾನೂ ಪೆನ್‌ಡ್ರೈವ್ ಬಿಡುಗಡೆ ಮಾಡುತ್ತೇನೆ. ಸರ್ಕಾರದಲ್ಲೇ ಇರುವ ದೊಡ್ಡ ತಿಮಿಂಗಲವನ್ನು ಇವರು ಎಲ್ಲಿ ಹಿಡಿಯುತ್ತಾರೆ? ಎಂದರು.
ರೇವಣ್ಣ ಪ್ರಕರಣದಲ್ಲಿ ನ್ಯಾಯಾಲಯದಲ್ಲಿ ನಡೆದ ವಕೀಲರ ವಾದ-ಪ್ರತಿವಾದ ಗಮನಿಸಿದರೆ ಸರ್ಕಾರ ದ್ವೇಷದ ರಾಜಕಾರಣ ಮಾಡುತ್ತಿರುವುದು ಸ್ಪಷ್ಟವಾಗಿದೆ. ರೇವಣ್ಣ ಬಂಧನ ಪ್ರಕರಣದಲ್ಲಿ ಸರ್ಕಾರ ತಪ್ಪು ಮಾಡಿದೆ. ಸದ್ಯದಲ್ಲೇ ನ್ಯಾಯಾಲಯದಿಂದ ಛೀಮಾರಿ ಹಾಕಿಸಿಕೊಳ್ಳಲಿದೆ ಎಂದರು.
ರಾಜ್ಯದಲ್ಲಿರುವ ನಡೆದಿರುವ ಹೀನಾಯ ಘಟನೆಗೆ ಸಂಬಂಧಿಸಿದಂತೆ ರೇವಣ್ಣ ಆರೋಪ ಎದುರಿಸುವಂತಾಯಿತು. ಅವರಿಗೆ ಜಾಮೀನು ದೊರೆತಿದೆ ಎಂದು ಸಂತೋಷಪಡುತ್ತೇನೆಂದು ಯಾರೂ ಭಾವಿಸಬೇಕಿಲ್ಲ. ಪಟಾಕಿ ಹೊಡೆದು ಸಿಹಿ ಹಂಚಿ ಸಂಭ್ರಮ ಆಚರಿಸುವ ಸಮಯ ಇದಲ್ಲ. ಸತ್ಯಾಸತ್ಯತೆಗಳು ಹೊರಬಂದು ಎರಡೂ ಕಡೆಯ ತಪ್ಪಿತಸ್ಥರಿಗೆ ಶಿಕ್ಷೆ ಆದಾಗ ಸಂಭ್ರಮಪಡೋಣ. ನನಗೆ ರೇವಣ್ಣ ಕುಟುಂಬದ ಮೇಲೆ ಅಸೂಯೆ ಇದೆ, ಅವರ ಕುಟುಂಬವನ್ನು ರಾಜಕೀಯವಾಗಿ ಮುಗಿಸುತ್ತಿದ್ದೇನೆ ಎಂದೆಲ್ಲಾ ಕಾಂಗ್ರೆಸ್ ಅಪಪ್ರಚಾರ ಮಾಡಿದೆ. ಯಾರು ಏನೇ ಹೇಳಲಿ ನಾನು ಇಂದು ನ್ಯಾಯದ ಪರ ಇದ್ದೇನೆ ಅಷ್ಟೇ ಎಂದರು.