Advertisement

Karnataka: ವರ್ಗಾವಣೆ ಭ್ರಷ್ಟಾಚಾರದ ಪಟ್ಟಿ ಕೊಟ್ಟ HDK

08:54 PM Jul 12, 2023 | Team Udayavani |

ವಿಧಾನಸಭೆ: ವರ್ಗಾವಣೆ ವ್ಯವಹಾರದಲ್ಲಿ ಕೋಟ್ಯಂತರ ರೂ. ಕೈ ಬದಲಾಗಿದೆ ಎಂದು ಆರೋಪ ಮಾಡುತ್ತಿದ್ದ ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಇದಕ್ಕೆ ಸಂಬಂಧಪಟ್ಟ ದಾಖಲೆಯನ್ನು ಬುಧವಾರ ವಿಧಾನಸಭೆಯಲ್ಲಿ ಬಿಚ್ಚಿಟ್ಟಿದ್ದಾರೆ.

Advertisement

ಯಾವುದೇ ಇಲಾಖೆ ಹಾಗೂ ಸಚಿವರ ಹೆಸರನ್ನು ಬಹಿರಂಗಪಡಿಸದೇ ಕೃಷಿ ಸಚಿವ ಚಲುವರಾಯಸ್ವಾಮಿ ಅವರನ್ನು ಪರೋಕ್ಷವಾಗಿ ಗುರಿಯಾಗಿಸಿಕೊಂಡು ಭ್ರಷ್ಟಾಚಾರದ ವಿಚಾರ ಪ್ರಸ್ತಾಪಿಸಿದ ಕುಮಾರಸ್ವಾಮಿ, ಒಂದು ಇಲಾಖೆಯಲ್ಲಿ ವರ್ಗಾವಣೆಗಾಗಿ ಲಕ್ಷಾಂತರ ರೂ.ಗಳನ್ನು ಪಡೆದುಕೊಳ್ಳಲಾಗಿದೆ. ಆ ಇಲಾಖೆಯ ಹೆಸರನ್ನು ನಾನು ಇಲ್ಲಿ ಹೇಳಲು ಹೋಗುವುದಿಲ್ಲ. ನಿಮಗೆ ವರ್ಗಾವಣೆ ಭ್ರಷ್ಟಾಚಾರದ ಪಟ್ಟಿಯನ್ನೇ ಕೊಡುತ್ತೇನೆ. ಅದನ್ನು ನೋಡಿ ಇಟ್ಟುಕೊಳ್ಳುತ್ತಿರೋ ಅಥವಾ ಸುಧಾರಣಾ ಕ್ರಮ ವಹಿಸುತ್ತಿರೋ ಎಂಬುದು ನಿಮಗೆ ಬಿಟ್ಟಿದ್ದು ಎಂದು ಸರ್ಕಾರಕ್ಕೆ ತಿವಿದರು.

ನನಗೆ ಅಧಿಕಾರ ಸಿಕ್ಕಿಲ್ಲ ಎಂದು ಮೈ ಪರಚಿಕೊಳ್ಳುತ್ತಿಲ್ಲ. ನಾನು ನನ್ನ ಕುಟುಂಬ ರಾಜ್ಯ, ದೇಶ ಮಟ್ಟದ ಅಧಿಕಾರವನ್ನು ನೋಡಿದೆ. ಅದನ್ನು ದೇವರು ನಮ್ಮ ಕುಟುಂಬಕ್ಕೆ ಕರುಣಿಸಿದ್ದಾನೆ ಎಂದರು. ಆಗ ಮಧ್ಯೆ ಪ್ರವೇಶಿಸಿದ ಸ್ಪೀಕರ್‌ ಖಾದರ್‌, ಅದೇನೆ ದಾಖಲೆ ಇದ್ದರೂ ಕೊಡಿ. ಸರ್ಕಾರ ಪರಿಶೀಲಿಸುತ್ತದೆ ಎಂದು ಭ್ರಷ್ಟಾಚಾರದ ಚರ್ಚೆಗೆ ಪೂರ್ಣವಿರಾಮವಿಟ್ಟರು.

ಆದರೆ ಕುಮಾರಸ್ವಾಮಿ ವಿಧಾನಸಭಾಧ್ಯಕ್ಷರಿಗೆ ಸಲ್ಲಿಸಿದ ದಾಖಲೆ ಪ್ರತಿಗಳು ಮಾಧ್ಯಮಗಳಿಗೆ ಸೋರಿಕೆಯಾಗಿದ್ದು, ಕೃಷಿ ಇಲಾಖೆಯ ಅಧಿಕಾರಿಗಳ ವರ್ಗಾವಣೆಗೆ ಜಿಲ್ಲಾವಾರು ಲಕ್ಷ ಲಕ್ಷ ರೂ.ಗಳನ್ನು ಪಡೆಯಲಾಗಿದೆ ಎಂದು ಇದರಲ್ಲಿ ದಾಖಲಿಸಲಾಗಿದೆ.

ತನಿಖೆಗೆ ಆದೇಶ ಕೊಡಿ: ಇದಕ್ಕೂ ಮೊದಲು ಮಾತನಾಡಿದ ಕುಮಾರಸ್ವಾಮಿ ಚುನಾವಣೆಗೂ ಮುಂಚೆ ರಾಜ್ಯದಲ್ಲಿದ್ದ ಬಿಜೆಪಿ ಸರ್ಕಾರ ಒಂದೂವರೆ ಲಕ್ಷ ಕೋಟಿ ರೂ.ಭ್ರಷ್ಟಚಾರ ಮಾಡಿದೆ ಎಂದು ಪುಟಗಟ್ಟಲೇ ಪತ್ರಿಕೆಗಳಲ್ಲಿ ಜಾಹೀರಾತು ನೀಡಿದ್ದೀರಿ. ಈ ಬಗ್ಗೆ ಈಗ ತನಿಖೆ ನಡೆಸಿ. ಚುನಾವಣೆಯಲ್ಲಿ ಜನರ ದಾರಿ ತಪ್ಪಿಸಲು ನೀವು ಪುಟಗಟ್ಟಲೆ ಜಾಹೀರಾತು ನೀಡಿದ್ದೀರಿ. ಅಂದು ನೀಡಿದ ಜಾಹೀರಾತಿಗೆ ಇಂದು ಸಾಕ್ಷ್ಯಕೊಡಬೇಕು. ಎಲ್ಲಿ ಭ್ರಷಾಚಾರ ನಡೆದಿದೆ ಎಂದು ಹೇಳಿದ್ದೀರೋ ಅದನ್ನು ತನಿಖೆ ನಡೆಸಿ, ರಾಜ್ಯದ ಜನರಿಗೆ ಸತ್ಯ ಗೊತ್ತಾಗಲಿ ಎಂದು ಆಗ್ರಹಿಸಿದರು.

Advertisement

ಶಕ್ತಿ ಯೋಜನೆಯಲ್ಲಿ ಬಸ್‌ಗಳಲ್ಲಿ ಸಂಚರಿಸುವುದಕ್ಕೆ ಹೆಣ್ಣುಮಕ್ಕಳಿಗೆ ಅನುಕೂಲವಾಗಿರುವುದು ನಿಜ. ಆದರೆ ಇದೇ ವೇಳೆ ಶಾಲಾ ಮಕ್ಕಳಿಗೆ ಬಸ್‌ನಲ್ಲಿ ಸಂಚರಿಸಲಾಗದಂತಹ ಸ್ಥಿತಿ ಇದೆ. ಹೀಗಾಗಿ ಹೊಸ ಬಸ್‌ಗಳನ್ನು ಬಿಡಬೇಕು. ಗೃಹಜ್ಯೋತಿ ಯೋಜನೆಯಲ್ಲಿ ಅನೇಕ ಪ್ರಮಾದಗಳು ತಲೆದೋರುವ ಮುನ್ನ ಎಲ್ಲರಿಗೂ 200 ಯುನಿಟ್‌ ವಿದ್ಯುತ್‌ ಲಭಿಸುವಂತೆ ನೋಡಿಕೊಳ್ಳಬೇಕು. ಖಾಸಗಿ ಕಂಪನಿಗಳಿಗೆ ವಿದ್ಯುತ್‌ ಉತ್ಪಾದಿಸಲು ಹೆಚ್ಚಿನ ಅವಕಾಶ ನೀಡದಂತೆ ಸುಧಾರಣಾ ಕ್ರಮ ಜಾರಿಗೊಳಿಸುವಂತೆ ಆಗ್ರಹಿಸಿದರು.

ಭ್ರಷ್ಟಾಚಾರ ಯಾರದ್ದು?: ಕೈ-ಕಮಲ ಜಟಾಪಟಿ
ರಾಜ್ಯಪಾಲರ ವಂದನಾ ನಿರ್ಣಯದ ವೇಳೆ ಮಾಜಿ ಸಿಎಂ ಕುಮಾರಸ್ವಾಮಿ ಹೊತ್ತಿಸಿದ ಕಿಡಿ ಸ್ವಲ್ಪ ಹೊತ್ತು ವಿಧಾನಸಭೆಯಲ್ಲಿ ಕಾಂಗ್ರೆಸ್‌ ಮತ್ತು ಬಿಜೆಪಿ ಮಧ್ಯದ ಜಟಾಪಟಿಗೆ ಕಾರಣವಾಯಿತು. ಪತ್ರಿಕೆಗಳಲ್ಲಿ ಒಂದೂವರೆ ಲಕ್ಷ ಕೋಟಿ ರೂ.ಭ್ರಷ್ಟಾಚಾರವಾಗಿದೆ ಎಂದು ಕಾಂಗ್ರೆಸ್‌ನವರು ಜಾಹೀರಾತು ನೀಡಿದ್ದಾರೆ ಎಂದು ಕುಮಾರಸ್ವಾಮಿ ಪ್ರಸ್ತಾಪಿಸುತ್ತಿದ್ದಂತೆಯೇ ಕಾಂಗ್ರೆಸ್‌ನ ಪ್ರಿಯಾಂಕ ಖರ್ಗೆ ಮಧ್ಯ ಪ್ರವೇಶಿಸಿ, ನಾವು ನೀಡಿದ ಜಾಹೀರಾತು ನಿಜ. ಆದರೆ ಅದನ್ನು ಬಿಜೆಪಿಯ ಶಾಸಕರು ಮತ್ತು ಸಂಸದರೇ ನೀಡಿದ ಹೇಳಿಕೆ ಆಧರಿಸಿ ನೀಡಿದ್ದೇವೆ ಎಂದರು.

ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತ ಪಡಿಸಿದ ಬಿಜೆಪಿಯ ಡಾ.ಅಶ್ವತ್ಥ ನಾರಾಯಣ, ದಾಖಲೆ ಇಲ್ಲದೇ ಆರೋಪ ಮಾಡುವುದು ಸರಿಯಲ್ಲ. ಇದು ಕಾಂಗ್ರೆಸ್‌ನ ತಳಬುಡವಿಲ್ಲದ ಆರೋಪ ಎಂದರು. ಕಾಂಗ್ರೆಸ್‌ ಪರವಾಗಿ ಬಸವರಾಜ ರಾಯರಡ್ಡಿ, ಸಚಿವ ಕೆ.ಜೆ.ಜಾರ್ಜ್‌ ಅಶ್ವತ್ಥ ನಾರಾಯಣ ಮೇಲೆ ಮುಗಿಬಿದ್ದರು. ಇದಕ್ಕೆ ಪ್ರತಿಯಾಗಿ ಬಿಜೆಪಿಯ ಆರ್‌.ಅಶೋಕ್‌ ಎದ್ದು ನಿಂತು, ಕಾಂಗ್ರೆಸ್‌ನ ರಮೇಶಕುಮಾರ್‌ ಕೂಡ ಭ್ರಷ್ಟಾಚಾರದ ಬಗ್ಗೆ ಒಪ್ಪಿಕೊಂಡು ಮಾತನಾಡಿದ್ದರು. ಅದನ್ನು ನೀವು ನಂಬುವುದಿಲ್ಲವೇ ಎಂದರು. ಬಿಜೆಪಿಯ ಯತ್ನಾಳ ಅವರು ಸಿಎಂ ಸ್ಥಾನಕ್ಕೆ 2500 ಕೋಟಿ ರೂ.ಬೇಕೆಂದಿದ್ದರು, ಎಂದು ಖರ್ಗೆ ಮತ್ತೆ ಕುಟುಕಿದರು. ಇದಕ್ಕೆ ಪ್ರತಿಯಾಗಿ ಯತ್ನಾಳ, ಇದೆಲ್ಲವನ್ನೂ ತನಿಖೆ ನಡೆಸಿದರೆ ಗೊತ್ತಾಗುತ್ತದೆ. ಕೂಡಲೇ ತನಿಖೆಗೆ ಆದೇಶಿಸಿ ಎಂದು ಸವಾಲು ಹಾಕಿದರು.

ಇಂದು ರಾಜಕಾರಣಿಗಳ ಪೈಕಿ ಕೆಲವರು ಮಾತ್ರ ಶ್ರೀಮಂತರಿದ್ದೇವೆ. ಆದರೆ ಅಧಿಕಾರಿಗಳು ಮಾತ್ರ ಚೆನ್ನಾಗಿದ್ದಾರೆ. ಸಂವಿಧಾನದಲ್ಲಿ ಹೆಸರಿಗಷ್ಟೇ ನಮ್ಮನ್ನು ಉತ್ತರದಾಯಿಗಳು ಎನ್ನುತ್ತಿದ್ದಾರೆ. ಅಧಿಕಾರಿಗಳೇ ಉತ್ತರದಾಯಿಗಳು. ಇಲಾಖೆಗಳಲ್ಲಿ ಇಂದು ಭ್ರಷ್ಟಾಚಾರ ವಿಕೋಪಕ್ಕೆ ಹೋಗಿದ್ದು, ಅದನ್ನು ಸರಿಪಡಿಸಿಕೊಳ್ಳಬೇಕಿದೆ.
ಎಚ್‌.ಡಿ.ಕುಮಾರಸ್ವಾಮಿ, ಮಾಜಿ ಸಿಎಂ

Advertisement

Udayavani is now on Telegram. Click here to join our channel and stay updated with the latest news.

Next