Advertisement

ಬಿಜೆಪಿ ಜತೆ ಮೈತ್ರಿಗೆ ಎಚ್‌ಡಿಕೆ ಇಂಗಿತ

11:19 PM Dec 01, 2021 | Team Udayavani |

ಬೆಂಗಳೂರು: ವಿಧಾನ ಪರಿಷತ್‌ ಚುನಾವಣೆಯಲ್ಲಿ ಬಿಜೆಪಿ ಯನ್ನು ಬೆಂಬಲಿಸುವ ಮುನ್ಸೂಚನೆ ನೀಡಿರುವ ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ, ಈ ಬಗ್ಗೆ ದೇವೇಗೌಡರು ದಿಲ್ಲಿಯಿಂದ ಬಂದ ಮೇಲೆ ತೀರ್ಮಾನಿಸಲಾಗುವುದು ಎಂದು ಹೇಳಿದ್ದಾರೆ.

Advertisement

“ಜೆಡಿಎಸ್‌ ಸ್ಪರ್ಧಿಸದ ಕ್ಷೇತ್ರಗಳಲ್ಲಿ ಬಿಜೆಪಿಗೆ ಬೆಂಬಲ ನೀಡುವಂತೆ ಯಡಿಯೂರಪ್ಪ ಬಹಿರಂಗವಾಗಿಯೇ ಮನವಿ ಮಾಡಿದ್ದಾರೆ. ಆದರೆ, ಕಾಂಗ್ರೆಸ್‌ನವರು ನಮಗೆ ಜೆಡಿಎಸ್‌ ಮತ ಬೇಕಾಗಿಲ್ಲ. ಅವರ ಜತೆ ಹೊಂದಾಣಿಕೆ ಪ್ರಶ್ನೆಯೇ ಇಲ್ಲ ಎಂದು ನೇರವಾಗಿಯೇ ಹೇಳಿದ್ದಾರೆ. ಬೇಡ ಎಂದವರ ಮನೆ ಬಾಗಿಲಿಗೆ ಹೋಗಲಿಕ್ಕೆ ಆಗುತ್ತದೆಯೇ? ಹೀಗಾಗಿ ಯಡಿಯೂರಪ್ಪ ಅವರ ಮನವಿ ಬಗ್ಗೆ ಏನು ತೀರ್ಮಾನ ಕೈಗೊಳ್ಳಬೇಕೋ ಎಂಬುದನ್ನು ಶೀಘ್ರವೇ ನಿರ್ಧರಿಸುತ್ತೇವೆ’ ಎಂದರು.

ವಿಧಾನ ಪರಿಷತ್‌ ಚುನಾವಣೆ ಹಿನ್ನೆಲೆಯಲ್ಲಿ ಬಿಡಿದಿಯ ತಮ್ಮ ತೋಟದ ಮನೆಯಲ್ಲಿ ರಾಮನಗರ ಜಿಲ್ಲೆಯ ಎಲ್ಲ ವಿಧಾನಸಭೆ ಕ್ಷೇತ್ರಗಳ ಸ್ಥಳೀಯ ಸಂಸ್ಥೆಗಳ ಮತದಾರರ ಜತೆ ಬುಧವಾರ ಸಮಾಲೋಚನೆ ನಡೆಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ನಮ್ಮ ಪಕ್ಷಕ್ಕೆ ಅನೇಕ ಕ್ಷೇತ್ರಗಳಲ್ಲಿ ನೆಲೆ ಇದೆ. ಆದರೆ ಅದು ಚುನಾವಣೆಯನ್ನು ಗೆಲ್ಲುವ ಮಟ್ಟದಲ್ಲಿಲ್ಲ. ಆದರೆ ಯಾರನ್ನು ಗೆಲ್ಲಿಸಬಹುದೆಂದು ತೀರ್ಮಾನಿಸುವ ಶಕ್ತಿಯಂತೂ ಇದೆ’ ಎಂದು ಹೇಳಿರುವುದು ಸಾಕಷ್ಟು ಕುತೂಹಲ ಮೂಡಿಸಿದೆ.

ಅಲ್ಲದೆ, ಪರಿಷತ್‌ ಚುನಾವಣೆ ಬಗ್ಗೆ ಕುಮಾರ ಸ್ವಾಮಿ ಹಾಗೂ ಬಿ.ಎಸ್‌. ಯಡಿಯೂರಪ್ಪನವರು ತೀರ್ಮಾನಿಸುತ್ತಾರೆ ಎಂದು ಜೆಡಿಎಸ್‌ ವರಿಷ್ಠ, ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡರು ಮಂಗಳವಾರವಷ್ಟೇ ದಿಲ್ಲಿಯಲ್ಲಿ ಹೇಳಿಕೆ ನೀಡಿದ್ದರು.

ಬೆಂಗಳೂರು ಗ್ರಾಮಾಂತರ ಕ್ಷೇತ್ರಕ್ಕೆ ಸಂಬಂಧಿಸಿ ಬುಧವಾರ ರಾಮನಗರ ಜಿಲ್ಲೆಯ ಎಲ್ಲ ಕ್ಷೇತ್ರಗಳ ಮತದಾರರ ಸಭೆಯನ್ನು ಕರೆದಿದ್ದೆ . ರಾಜ್ಯದ ಆರು ಕ್ಷೇತ್ರಗಳಲ್ಲಿ ಮಾತ್ರ ನಮ್ಮ ಅಭ್ಯರ್ಥಿಗಳಿದ್ದು, ಅಷ್ಟೂ ಕಡೆ ನಾವು ಗೆಲ್ಲಲಿದ್ದೇವೆ ಎಂದ ಅವರು, ಈ ಚುನಾವಣೆ ಮುಂದಿನ 2023ರ ವಿಧಾನಸಭೆ ಚುನಾವಣೆಯ ದಿಕ್ಸೂಚಿ ಎಂದು ಹೇಳಲು ಸಾಧ್ಯವಿಲ್ಲ. ಆದರೆ, ಪರಿಷತ್‌ ಫ‌ಲಿತಾಂಶವು ಮುಂದಿನ ಚುನಾವಣೆಗೆ ಕಾರ್ಯಕರ್ತರಲ್ಲಿ ಆತ್ಮವಿಶ್ವಾಸ ತುಂಬಲಿದೆ. ವಿಧಾನಸಭೆ ಚುನಾವಣೆಯಲ್ಲಿ ನಮ್ಮ ಗುರಿ 123 ಸ್ಥಾನ. ಆ ನಿಟ್ಟಿನಲ್ಲಿ ನಮ್ಮ ಪಕ್ಷದ ಕಾರ್ಯಕ್ರಮಗಳಿರುತ್ತವೆ ಎಂದು ಅವರು ತಿಳಿಸಿದರು.

Advertisement

ಇದನ್ನೂ ಓದಿ:ನವೆಂಬರ್‌ ಜಿಎಸ್‌ಟಿ ಸಂಗ್ರಹ 1.31 ಲಕ್ಷ ಕೋ.ರೂ.

ಮೈತ್ರಿ ನಿರ್ಧಾರ ಎಚ್‌ಡಿಕೆ-ಬಿಎಸ್‌ವೈಗೆ: ಸಿಎಂ
ಹುಬ್ಬಳ್ಳಿ: ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರು ಭೇಟಿ ಮಾಡಿ ಹಲವು ವಿಚಾರ ಚರ್ಚೆ ಮಾಡಿದ್ದಾರೆ. ಜೆಡಿಎಸ್‌ ಜತೆ ಮೈತ್ರಿ ವಿಚಾರವಾಗಿ ರಾಜ್ಯದಲ್ಲಿ ಎಚ್‌.ಡಿ. ಕುಮಾರಸ್ವಾಮಿ ಹಾಗೂ ಬಿಎಸ್‌ವೈ ಚರ್ಚೆ ಮಾಡಿ ಅಂತಿಮ ತೀರ್ಮಾನ ಕೈಗೊಳ್ಳುತ್ತಾರೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.

ನಗರದಲ್ಲಿ ಮಾತನಾಡಿದ ಅವರು, ಕೋವಿಡ್‌ ಹಿನ್ನೆಲೆಯಲ್ಲಿ ಹೊಸ ತಾಲೂಕುಗಳಿಗೆ ಮೂಲಸೌಕರ್ಯ ಒದಗಿಸಲು ತಡವಾಗಿದೆ. ಮುಂದಿನ ದಿನಗಳಲ್ಲಿ ಅಗತ್ಯ ಸವಲತ್ತು, ಸೌಲಭ್ಯ, ಕಚೇರಿ ನೀಡುತ್ತೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ಯಲಹಂಕ ಶಾಸಕ ಎಸ್‌.ಆರ್‌. ವಿಶ್ವನಾಥ್‌ ಹತ್ಯೆಗೆ ಸಂಚು ರೂಪಿಸಿದ ವಿಷಯ ಮಾಧ್ಯಮಗಳಲ್ಲಿ ಗಮನಿಸಿದ್ದೇನೆ. ಇದನ್ನು ಸರಕಾರ ಗಂಭೀರವಾಗಿ ಪರಿಗಣಿಸಬೇಕು. ತನಿಖೆ ಮೂಲಕ ಸತ್ಯ ಹೊರಬರಲಿ. ಹತ್ಯೆ ಸಂಚು ನಿಜವಾಗಿದ್ದರೆ ಕಠಿನ ಕ್ರಮ ಕೈಗೊಳ್ಳಲಿ.
– ಎಚ್‌.ಡಿ. ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ

ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಆಡಳಿತ ಕಂಡು ಭ್ರಮನಿರಸನಗೊಂಡ ಜನ ಬದಲಾವಣೆ ಬಯಸುತ್ತಿದ್ದಾರೆ. ವಿಧಾನ ಪರಿಷತ್‌ ಚುನಾವಣೆಯಲ್ಲಿ ನಿಚ್ಚಳವಾಗಿ ಕಾಂಗ್ರೆಸ್‌ ಹೆಚ್ಚು ಸ್ಥಾನಗಳಲ್ಲಿ ಗೆಲುವು ಸಾ ಧಿಸಲಿದೆ. ಆರು ವರ್ಷಗಳ ಹಿಂದೆ ನಡೆದ ಪರಿಷತ್‌ ಚುನಾವಣೆಯಲ್ಲಿ ಕಾಂಗ್ರೆಸ್‌ 14 ಸ್ಥಾನಗಳಲ್ಲಿ ಗೆದ್ದಿತ್ತು. ಈಗ ಅ ಧಿಕಾರ ಇಲ್ಲದಿದ್ದರೂ ಅಷ್ಟೇ ಸ್ಥಾನಗಳಲ್ಲಿ ಗೆಲ್ಲುವ ಶಕ್ತಿ ಕಾಂಗ್ರೆಸ್‌ ಪಕ್ಷಕ್ಕಿದೆ.
– ರಾಮಲಿಂಗಾ ರೆಡ್ಡಿ, ಕೆಪಿಸಿಸಿ ಕಾರ್ಯಾಧ್ಯಕ್ಷ

ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಾಗ ಇದೇ ಈಶ್ವರಪ್ಪ ಸಿಎಂ ವಿರುದ್ಧ ರಾಜ್ಯಪಾಲರಿಗೆ ದೂರು ನೀಡಿದ್ದರು. ಬೆಲ್ಲದ್‌, ವಿಶ್ವನಾಥ ಸಹಿತ ಅವರ ಪಕ್ಷದ ಮುಖಂಡರೇ ಮುಖ್ಯಮಂತ್ರಿಗಳ ಬಗ್ಗೆ ಮಾತನಾಡಿದ್ದರು. ಶೇ.40ರಷ್ಟು ಕಮಿಷನ್‌ ನೀಡಬೇಕೆಂದು ಗುತ್ತಿಗೆದಾರರ ಸಂಘ ಸರಕಾರದ ಮೇಲೆ ಆರೋಪ ಮಾಡಿದೆ. ಈಗ ಮುಖ್ಯಮಂತ್ರಿಗಳ ಬದಲಾವಣೆ ಬಗ್ಗೆ ಅವರ ಪಕ್ಷದವರೇ ಚರ್ಚಿಸುತ್ತಿದ್ದಾರೆ. ಇಂಥವರಿಗೆ ಕಾಂಗ್ರೆಸ್‌ ಬಗ್ಗೆ ಮಾತನಾಡಲು ಯಾವ ನೈತಿಕತೆ ಇದೆ?
-ಧ್ರುವ ನಾರಾಯಣ್‌, ಕೆಪಿಸಿಸಿ ಕಾರ್ಯಾಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next