Advertisement

ಮಧ್ಯಾಂತರ ಬಾಂಬ್‌

01:26 AM Jun 22, 2019 | Sriram |

ಬೆಂಗಳೂರು: ರಾಜ್ಯದಲ್ಲಿ ಮಧ್ಯಾಂತರ ಚುನಾವಣೆ ಮಾತೇ ಇಲ್ಲ ಎಂದಿದ್ದ ಮಾಜಿ ಪ್ರಧಾನಿ ದೇವೇಗೌಡ ಅವರು, ಮತ್ತೆ ಸಮ್ಮಿಶ್ರ ಸರಕಾರದ ಜೀವಿತಾವಧಿಯ ಬಗ್ಗೆ ಅನುಮಾನ ವ್ಯಕ್ತಪಡಿಸುವ ಮೂಲಕ ಹೊಸ ಬಾಂಬ್‌ ಸಿಡಿಸಿದ್ದಾರೆ.

Advertisement

ಶುಕ್ರವಾರ ಬೆಳಗ್ಗೆ ಯೋಗ ದಿನಾಚರಣೆ ಅಂಗವಾಗಿ ಯೋಗ ಪ್ರದರ್ಶನ ಮಾಡಿದ ಗೌಡರು, ಈ ಸರಕಾರ ಎಷ್ಟು ದಿನ ಇರುತ್ತೋ ಗೊತ್ತಿಲ್ಲ. ಸರಕಾರ ಉಳಿಸಿಕೊಳ್ಳುವುದು ಕಾಂಗ್ರೆಸ್‌ ಕೈಯಲ್ಲೇ ಇದೆ. ನಾನಂತೂ ಸರಕಾರ ರಚಿಸಿ ಎಂದು ಹೇಳಿರಲಿಲ್ಲ. ಕಾಂಗ್ರೆಸ್‌ನವರೇ ಬಂದಿದ್ದರು. ಈಗ ಮೈತ್ರಿ ಧರ್ಮ ಪಾಲಿಸುತ್ತಿಲ್ಲ. ನಾನು ಎಲ್ಲವನ್ನೂ ಸಹಿಸಿಕೊಂಡಿದ್ದೇನೆ ಎಂದು ಹೇಳಿ ರಾಜಕೀಯ ವಲಯದಲ್ಲಿ ನಾನಾ ವಿಶ್ಲೇಷಣೆಗೆ ಕಾರಣವಾದರು.

ದೇವೇಗೌಡರ ಈ ಹೇಳಿಕೆಯಿಂದ ಆತಂಕಿತರಾದ ಕಾಂಗ್ರೆಸ್‌ ನಾಯಕರು, ಡ್ಯಾಮೇಜ್‌ ಕಂಟ್ರೋಲ್ಗೆ ಮುಂದಾಗಿದ್ದಾರೆ. ಅಷ್ಟೇ ಅಲ್ಲ, ಮೈತ್ರಿ ಸರಕಾರಕ್ಕೆ ಯಾವುದೇ ಅಪಾಯವಿಲ್ಲ ಎಂದು ಸ್ವತಃ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ, ಡಿಸಿಎಂ ಡಾ| ಜಿ. ಪರಮೇಶ್ವರ, ಕೆಪಿಸಿಸಿ ಅಧ್ಯಕ್ಷ ದಿನೇಶ್‌ಗುಂಡೂರಾವ್‌, ಜಲ ಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್‌ ಸ್ಪಷ್ಟನೆ ನೀಡಿದರು. ಐದು ವರ್ಷ ಜೆಡಿಎಸ್‌ನವರೇ ಮುಖ್ಯಮಂತ್ರಿ ಎಂದು ಬರೆದುಕೊಟ್ಟಿರುವುದರಿಂದ ಕಾಂಗ್ರೆಸ್‌ನಿಂದ ಸರಕಾರಕ್ಕೆ ಯಾವುದೇ ತೊಂದರೆಯಾಗುವುದಿಲ್ಲ ಎಂದೂ ಭರವಸೆ ನೀಡಿದರು.

ಅಪರಾಹ್ನ ರಾಗ ಬದಲು
ಅಪರಾಹ್ನ ಅರಮನೆ ಮೈದಾನದಲ್ಲಿ ಆಯೋಜಿಸಿದ್ದ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಸೋತವರಿಗೆ ಅಭಿನಂದನೆ ಸಲ್ಲಿಸುವ ಸಮಾರಂಭದಲ್ಲಿ ಮಾತನಾಡಿದ ದೇವೇಗೌಡರು, ಮೈತ್ರಿ ಸರಕಾರ ಮುಂದುವರಿದುಕೊಂಡು ಹೋಗುತ್ತದೆ. ನಾಲ್ಕು ವರ್ಷ ಸರಕಾರ ಆನಂದವಾಗಿ ನಡೆಯಲಿ. ಈ ಸರಕಾರಕ್ಕೆ ನಮ್ಮ ಕಡೆಯಿಂದ ಚ್ಯುತಿ ಬರಲ್ಲ. ಸರಕಾರ ಉಳಿಸಿಕೊಳ್ಳುವ ಜವಾಬ್ದಾರಿ ಕಾಂಗ್ರೆಸ್‌ ಮೇಲೂ ಇದೆ ಎಂದು ಹೇಳಿದ್ದೆ ಅಷ್ಟೇ ಎಂದು ಹೇಳುವ ಮೂಲಕ ಮಗದೊಂದು ಅಚ್ಚರಿ ಮೂಡಿಸಿದರು.

ಯಾರಿಗಾಗಿ ಎಲೆಕ್ಷನ್‌: ಬಿಎಸ್‌ವೈ
ನಿಮ್ಮ ತೀಟೆ ತೀರಿಸುವುದಕ್ಕಾಗಿ 11 ತಿಂಗಳಿನಲ್ಲಿ ಮತ್ತೂಂದು ಚುನಾವಣೆ ನಡೆಸಬೇಕೆ? ಜನಾಭಿಪ್ರಾಯಕ್ಕೆ ಬೆಲೆ ಇಲ್ಲವೇ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಸಮ್ಮಿಶ್ರ ಸರಕಾರದ ವಿರುದ್ಧ ವಾಗ್ಧಾಳಿ ನಡೆಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌, ಜೆಡಿಎಸ್‌ನ ಹೇಳಿಕೆಗಳು ಗೊಂದಲಮಯವಾಗಿವೆ. ಮನಸ್ಸಿಗೆ ಬಂದಂತೆ ಮಾತನಾಡಿ ಗೊಂದಲ ಸೃಷ್ಟಿಸುತ್ತಿದ್ದೀರಿ. ನೀವು ಗೆದ್ದಿರುವುದು 37 ಸೀಟು. ನಿಮ್ಮ ರಾಜಕೀಯ ಚಟಕ್ಕಾಗಿ ಸರಕಾರ ಮಾಡಬೇಕಿತ್ತಾ ಎಂದಿದ್ದಾರೆ.

Advertisement

ಬಿಜೆಪಿಯತ್ತ ಹೋಗದಂತೆ ನೋಡಿ
ಬೆಂಗಳೂರು: ‘ಸ್ವಂತ ವರ್ಚಸ್ಸಿನಿಂದ ಗೆಲ್ಲುವ ಸಾಮರ್ಥ್ಯ ಇರುವ ಶಾಸಕರು ಎಂತಹ ಪರಿಸ್ಥಿತಿಯಲ್ಲೂ ಬಿಜೆಪಿಯತ್ತ ಹೋಗದಂತೆ ನೋಡಿಕೊಳ್ಳಿ’ ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ, ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅವರಿಗೆ ಸೂಚನೆ ನೀಡಿದ್ದಾರೆ.

ಕಾಂಗ್ರೆಸ್‌ ಪಾಲಿನ ನಿಗಮ-ಮಂಡಳಿ ಅಧ್ಯಕ್ಷರ ನೇಮಕಾತಿ ಸಂಬಂಧ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರೊಂದಿಗೂ ಮಾತನಾಡಿದ್ದು, ಇದರ ಫ‌ಲವೇ ಡಾ| ಕೆ.ಸುಧಾಕರ್‌ ಹಾಗೂ ವೆಂಕಟರಮಣಯ್ಯ ಅವರಿಗೆ ಅಧಿಕಾರ ‘ಭಾಗ್ಯ’ ದೊರೆತಿದೆ. ಸದ್ಯದಲ್ಲೇ ಕಾಂಗ್ರೆಸ್‌ ಪಾಲಿನ 30ಕ್ಕೂ ಹೆಚ್ಚು ನಿಗಮ ಮಂಡಳಿಗಳ ನೇಮಕಾತಿಯೂ ನಡೆಯಲಿದೆ.

ರಾಜ್ಯದ ಜನ ಸಮ್ಮಿಶ್ರ ಸರಕಾರದ ದುರಾಡಳಿತದಿಂದ ಬೇಸತ್ತಿದ್ದಾರೆ. ಸರಕಾರ ಎಲ್ಲ ಹಂತದಲ್ಲೂ ವಿಫ‌ಲವಾಗಿದೆ. 13 ತಿಂಗಳಿಂದ ಜನರಿಗೆ ಸಾಲ ಮನ್ನಾ ಸಹಿತ ಹಲವು ಭರವಸೆ ನೀಡುತ್ತಲೇ ಬಂದಿದ್ದರೂ ಯಾವುದೂ ಈಡೇರಿಲ್ಲ.
– ಬಿ.ಎಸ್‌. ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next