Advertisement

ಪಿಎಸ್‌ಐ ಪರೀಕ್ಷೆ ಅಕ್ರಮ: ಸ್ಫೋಟಕ ಅಂಶ ಬಯಲು ಮಾಡಿದ  ಹೆಚ್.ಡಿ.ಕುಮಾರಸ್ವಾಮಿ

12:12 PM May 04, 2022 | Team Udayavani |

ಚನ್ನಪಟ್ಟಣ: ಇಡೀ ದೇಶದ ಗಮನ ಸೆಳೆದಿರುವ ಪಿಎಸ್‌ಐ ಪರೀಕ್ಷೆ ಅಕ್ರಮವನ್ನು ಪೊಲೀಸ್‌ ಇಲಾಖೆಯಿಂದಲೇ ಬಯಲಿಗೆ ಬಂದಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಹೇಳಿದ್ದಾರೆ.

Advertisement

ಬುಧವಾರ ಮಾಧ್ಯಮಗಳ ಜತೆ ಮಾತನಾಡಿದ ಅವರು; “ಈ ವಿಚಾರವಾಗಿ ನನಗಿರುವ ಮಾಹಿತಿಯೇ ಬೇರೆ. ಪೊಲೀಸ್ ಇಲಾಖೆಯಿಂದಲೇ ಮಾಹಿತಿ ಸೋರಿಕೆಯಾಗಿದೆ. ಬೆಂಗಳೂರಿನ ಚಾಮರಾಜಪೇಟೆಯಲ್ಲಿ ನಡೆದ ಕೊಲೆ ನಂತರ ನಡೆದ ಬೆಳವಣಿಗೆಗಳಿಗೂ ಈ ಪರೀಕ್ಷೆ ಅಕ್ರಮ ಬಯಲಾಗುವುದಕ್ಕೂ ಲಿಂಕ್‌ ಇದೆ” ಎಂದರು.

ಚಂದ್ರು ಎಂಬ ಯುವಕನ ಕೊಲೆ ಪ್ರಕರಣದ ವಿಚಾರವಾಗಿ ನಡೆದ ಬೆಳವಣಿಗೆಗಳೇ ಪರೀಕ್ಷೆ ಅಕ್ರಮವನ್ನು ಬಯಲಿಗೆಳೆದಿವೆ. ಬಿಜೆಪಿಯ ವಕ್ತಾರರೊಬ್ಬರು ಪೊಲೀಸ್‌ ಆಯುಕ್ತ ಕಮಲ್ ಪಂಥ್ ವಿರುದ್ಧವೇ ಆರೋಪ ಮಾಡಿದ್ದರು. ಆ ಕೊಲೆಯ ವಿಚಾರವಾಗಿ ಆಯುಕ್ತರು ಸುಳ್ಳು ಹೇಳುತ್ತಿದ್ದಾರೆಂದು ಅವರು ದೂರಿದ್ದರು. ಪರಸ್ಪರ ದ್ವಿಚಕ್ರ ವಾಹನ ಢಿಕ್ಕಿ ಕಾರಣಕ್ಕೆ ಗಲಾಟೆ ನಡೆದು ಯುವಕನ ಕೊಲೆಯಾಗಿತ್ತು ಎಂದು ಪೊಲೀಸರು ಹೇಳಿದ್ದರು. ಆದರೆ, ಬಿಜೆಪಿ ನಾಯಕರು ಹಠಕ್ಕೆ ಬಿದ್ದವರಂತೆ ಉರ್ದು ಭಾಷೆ ಮಾತನಾಡಲು ಬರಲಿಲ್ಲ ಎನ್ನುವ ಕಾರಣಕ್ಕೆ ಗಲಾಟೆಯಾಗಿ ಯುವಕನ ಕೊಲೆಯಾಯಿತು ಎಂದು ಕಥೆ ಕಟ್ಟಿದ್ದರು. ಅದು ಅಲ್ಲಿಂದ ಪಿಎಸ್‌ಐ ಪರೀಕ್ಷೆ ಅಕ್ರಮದವರೆಗೂ ಬಂದು ನಿಂತಿದೆ ಎಂದು ಮಾಜಿ ಮುಖ್ಯಮಂತ್ರಿಗಳು ಹೇಳಿದರು.

ಪೊಲೀಸ್ ಇಲಾಖೆಯ ಪ್ರಾಮಾಣಿಕ ಅಧಿಕಾರಿ ಕಮಲ್ ಪಂಥ್ ಅವರಿಗೆ ಅವಮಾನ‌ ಮಾಡಿದ್ದರು ಬಿಜೆಪಿ ನಾಯಕರು. ಅದಕ್ಕಾಗಿ ಇಲಾಖೆಯಲ್ಲಿರುವ ಅವರ ಅಭಿಮಾನಿಗಳು ಕೆಲವರು ಸರಕಾರಕ್ಕೆ ಬುದ್ಧಿ ಕಲಿಸಲೆಂದೇ  ಅವರೇ ಹಗರಣವನ್ನು ಹೊರತೆಗೆದಿದ್ದಾರೆ. ಇದು ಸರಕಾರದಿಂದ ಹೊರಬಂದಿಲ್ಲ, ಪೊಲೀಸ್ ಇಲಾಖೆಯಿಂದಲೇ ಇದು ಹೊರಬಂದಿದೆ. ಈ ಸರಕಾರದ ನಡವಳಿಕೆಯನ್ನು ಪೊಲೀಸ್‌ ಇಲಾಖೆಯವರೇ ಹೊರಗೆಳೆದಿದ್ದಾರೆ ಎಂದು ಅವರು ಹೇಳಿದರು.

ನಿಷ್ಠಾವಂತ, ಪ್ರಾಮಾಣಿಕ ಪೊಲೀಸ್ ಅಧಿಕಾರಿಯ ಮೇಲೆ ಆರೋಪ ಮಾಡಿದ್ದ ಬಿಜೆಪಿಯ ನಾಯಕನಿಗೆ ಪರೀಕ್ಷೆ ಅಕ್ರಮದಲ್ಲಿ ಈಗ ಬಂಧನಕ್ಕೊಳಗಾಗಿರುವ ಕಿಂಗ್‌ಪಿನ್ ಲಿಂಕ್ ಇತ್ತು.‌ ಪೊಲೀಸರು ಅದರ ಜಾಡು ಹಿಡಿದು ಎಲ್ಲವನ್ನೂ ಹೊರಗೆಳೆದು ಜನರ ಮುಂದೆ ಇಟ್ಟಿದ್ದಾರೆ. ಹೇಳುತ್ತಾ ಹೋದರೆ ಇದೇ ದೊಡ್ಡ ಕಥೆ ಆಗುತ್ತದೆ ಎಂದು ಕುಮಾರಸ್ವಾಮಿ ಅವರು ಪ್ರಶ್ನೆಯೊಂದಕ್ಕೆ ಉತ್ತರ ನೀಡಿದರು.

Advertisement

ಎಲ್ಲಾ ಅಭ್ಯರ್ಥಿಗಳು ದುಡ್ಡು ಕೊಟ್ಟು ಆಯ್ಕೆ ಅಗಿದ್ದಾರೆ ಎನ್ನಲು ಆಗುವುದಿಲ್ಲ. 30% ಆಭ್ಯರ್ಥಿಗಳು ಹಣದಿಂದ ಹುದ್ದೆ ಗಿಟ್ಟಿಸಿರಬಹುದು. ಹಾಗೆಯೇ 30-40% ಆಭ್ಯರ್ಥಿಗಳು ಪ್ರಾಮಾಣಿಕವಾಗಿ ಪರೀಕ್ಷೆ ಬರೆದಿರಬಹುದು, ನ್ಯಾಯಯುತವಾಗಿ ಆಯ್ಕೆಯಾದವರಿಗೆ ಅನ್ಯಾಯ ಆಗಬಾರದು ಎಂದಷ್ಟೇ ನಾನು ಹೇಳಿದ್ದೆ ಮಾಜಿ ಮುಖ್ಯಮಂತ್ರಿಗಳು ತಿಳಿಸಿದರು.

ಕಾಂಗ್ರೆಸ್‌ ನಾಯಕರ ಬಳಿ ದಾಖಲೆ ಇದೆಯಾ?:

ಸಚಿವ ಡಾ.ಸಿ.ಎನ್.‌ಅಶ್ವತ್ಥನಾರಾಯಣ ಅವರ ಬಗ್ಗೆ ಕಾಂಗ್ರೆಸ್‌ ನಾಯಕರು ಆರೋಪ ಮಾಡುತ್ತಿದ್ದಾರೆ. ಆದರೆ, ಅವರ ಬಳಿ ಸಚಿವರ ವಿರುದ್ಧ ದಾಖಲೆ ಇದೆಯಾ? ಅವರ ವಿರುದ್ಧ ಎಲ್ಲಿದೆ ದಾಖಲೆ? ಎಂದು ಪ್ರಶ್ನಿಸಿದ ಮಾಜಿ ಮುಖ್ಯಮಂತ್ರಿಗಳು; ಸಚಿವರ ವಿರುದ್ಧ ಅವರ ಸಹೋದ್ಯೋಗಿಗಳೇ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ಕೇಂದ್ರ  ಗೃಹ ಸಚಿವ ಅಮಿತ್‌ ಶಾ ಅವರು ಬೆಂಗಳೂರಿಗೆ ಬರುತ್ತಿದ್ದಂತೆಯೇ ಅದೆಲ್ಲ ಮಾಧ್ಯಮಗಳಲ್ಲಿ ಬರುವಂತೆ ನೋಡಿಕೊಂಡಿದ್ದಾರೆ. ಇದೆಲ್ಲ ಅಮಿತ್ ಶಾ ತಲೆಗೆ ಹೋಗಲಿ ಎಂದೇ ಸಚಿವರ ವಿರುದ್ಧ ಮಾಹಿತಿ ನೀಡಿದ್ದಾರೆ ಎಂದರು.

ಅಶ್ವತ್ಥನಾರಾಯಣ ವಿಕೆಟ್ ಉರುಳಿಸಲು ಬಿಜೆಪಿಯಲ್ಲಿಯೇ ಸಂಚು ನಡೆದಿದೆ. ರಾಜ್ಯದಲ್ಲಿ ಬಿಜೆಪಿಯವರು ತಮ್ಮ ಮನೆಗೆ ತಾವೇ ಬೆಂಕಿ ಹಚ್ಚಿಕೊಳ್ಳುತ್ತಿದ್ದಾರೆ, ನಾವು ಹಚ್ಚಬೇಕಿಲ್ಲ. ನಾನು ಮತ್ತೆ ಪೆಟ್ರೋಲ್ ತೆಗೆದುಕೊಂಡು ಹೋಗ್ಲಾ ಸುರಿಯೋಕೆ? ಕಾಂಗ್ರೆಸ್ ನಾಯಕರಿಗೆ ನೈಜ ವಿಷಯಗಳ ಮೇಲೆ ಹೋರಾಟ ನಡೆಸುವ ಶಕ್ತಿ ಇಲ್ಲ. ಯಾರೋ ಹೇಳಿದ್ದನ್ನು ಹೇಳ್ಕೋತಾರೆ ಅಷ್ಟೇ. ಎಂದು ಮಾಜಿ ಸಿಎಂ ತಿಳಿಸಿದರು.

ಧರ್ಮಗುರುಗಳ ಸಾವು ನೋವು ತಂದಿದೆ:

ರಂಜಾನ್ ಹಬ್ಬದ ದಿನವೇ ಮುಸ್ಲಿಂ ಧರ್ಮಗುರುಗಳಾದ ಸೈಯದ್ ನಜ್ಮಿ ಮೃತಪಟ್ಟ ವಿಚಾರ ನನಗೆ ಬಹಳ ನೋವುಂಟು ಮಾಡಿದೆ ಎಂದು ಕುಮಾರಸ್ವಾಮಿ ದುಃಖ ವ್ಯಕ್ತಪಡಿಸಿದರು.

ನಮಾಜ್ ಬಳಿಕ ಕುಟುಂಬ ಸಮೇತರಾಗಿ ಊರಿಗೆ ಹೊರಟಿದ್ದವರು ಅಪಘಾತದಲ್ಲಿ ಧರ್ಮ ಗುರುಗಳು ಸೇರಿದಂತೆ ಮೂವರು ಸಾವನ್ನಪ್ಪಿದ್ದಾರೆ. ಧರ್ಮಗುರುಗಳು, ಅವರ ಧರ್ಮಪತ್ನಿ, ಪುತ್ರಿ ಮೃತಪಟ್ಟಿದ್ದಾರೆ. ಮತ್ತೊಬ್ಬ ಪುತ್ರಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಆಕೆಗೆ ಆದಿಚುಂಚನಗಿರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದು, ಉಚಿತ ಚಿಕಿತ್ಸೆ ನೀಡುವಂತೆ ಮನವಿ ಮಾಡಿದ್ದೇನೆ. ಈ ಬಗ್ಗೆ ಆದಿಚುಂಚನಗಿರಿ ಶ್ರೀಗಳ ಜತೆ ಮಾತನಾಡಿ ಮನವಿ ಮಾಡಿದ್ದೇನೆ. ಶ್ರೀಗಳು ವೈಯಕ್ತಿಕವಾಗಿ ಆಕೆಗೆ ಚಿಕಿತ್ಸೆ ನೀಡುವಂತೆ ವೈದ್ಯರಿಗೆ ಸೂಚಿಸಿದ್ದಾರೆ. ಯಾವುದೇ ರೀತಿಯ ಚಿಕಿತ್ಸಾ ವೆಚ್ಚವನ್ನು ತೆಗೆದುಕೊಳ್ಳದಂತೆ ಅವರು ಸೂಚಿಸಿದ್ದಾರೆ. ಮುಸ್ಲಿಂ ಧರ್ಮಗುರುಗಳು ಒಳ್ಳೆಯ ಹೆಸರು ಗಳಿಸಿದ್ದರು. ಧಾರ್ಮಿಕ ಕೆಲಸದ ಮೂಲಕ ಅವರ ಸಮುದಾಯದಲ್ಲಿ ಬಹಳಷ್ಟು ಸೇವೆ ಮಾಡಿದ್ದರು. ಆವರ ಆತ್ಮಕ್ಕೆ ಶಾಂತಿ ಕೋರುತ್ತೇನೆ ಎಂದು ಹೆಚ್ಡಿಕೆ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next