ವಿಜಯಪುರ: ಜಯ ಪ್ರಕಾಶ ನಾರಾಯಣ ಸಿದ್ಧಾಂತ ವನ್ನು ಗಾಳಿಗೆ ತೂರಿ, ಅಧಿಕಾರಕ್ಕಾಗಿ ಅವಕಾಶವಾದಿ ರಾಜಕಾರಣಿಯಾದ ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಜೆಡಿಎಸ್‌ನ “ಪಂಚರತ್ನ’ ರಥಯಾತ್ರೆಯನ್ನು ಟೀಕಿಸುವ ನೈತಿಕತೆಯಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ವಾಗ್ಧಾಳಿ ನಡೆಸಿದ್ದಾರೆ.
ವಿಜಯಪುರ ಜಿಲ್ಲೆಯಲ್ಲಿ ನಡೆದ ಯಾತ್ರೆಯಲ್ಲಿ ಮಾತನಾಡಿದ ಅವರು, ಜಾತ್ಯತೀತ ತತ್ವವೇ ಆಸ್ತಿ ಎಂಬಂತೆ ವರ್ತಿಸುವ ನೀವು ಜಯಪ್ರಕಾಶ ನಾರಾಯಣರ ಸಿದ್ಧಾಂತಕ್ಕೆ ಬದ್ಧರಾಗಿದ್ದರೆ ಮುಖ್ಯಮಂತ್ರಿ ಕುರ್ಚಿಯ ಆಸೆಗಾಗಿ ಜೆಡಿಎಸ್ ತೊರೆದು ಹೋಗುತ್ತಿರಲಿಲ್ಲ. ಅವಕಾಶವಾದಿ ರಾಜಕಾರಣ ಮಾಡುವ ನಿಮ್ಮಿಂದ ಪಾಠ ಹೇಳಿಸಿಕೊಳ್ಳುವ ಅಗತ್ಯವಿಲ್ಲ ಎಂದು ಟೀಕಿಸಿದರು.
ಜನರು ಕಷ್ಟ ಹೇಳಿಕೊಂಡು ನಿರಂತರವಾಗಿ ತನ್ನ ಬಳಿ ಬರುತ್ತಾರೆ. ಅನಗತ್ಯವಾಗಿ ಜೆಡಿಎಸ್ ಪಕ್ಷದ ಬಗ್ಗೆ ಹಗುರವಾಗಿ ಮಾತನಾಡಬೇಡಿ. ಧರ್ಮ ಸ್ಥಳದಲ್ಲಿ ಕುಳಿತು ನನ್ನ ನೇತೃತ್ವದ ಮೈತ್ರಿ ಸರಕಾರವನ್ನು ಪತನ ಗೊಳಿಸಲು ಏನೇನು ಮಾಡಿದಿರಿ ಎನ್ನುವುದೆಲ್ಲ ಗೊತ್ತಿದೆ. ಎಲ್ಲಿ ಕುಳಿತು, ಯಾರ ಜತೆಗೂಡಿ ಏನೇನು ಕುತಂತ್ರ ಮಾಡಿದಿರಿ ಎನ್ನುವುದೂ ತಿಳಿದಿದೆ. ಬಿಜೆಪಿಗೆ ಅಧಿಕಾರ ಹೋಗಬಾರದೆಂದು ನಿಮ್ಮ ವರಿಷ್ಠರು ನಮ್ಮ ಬಾಗಿಲಿಗೆ ಬಂದಿದ್ದರು. ಇದೆಲ್ಲ ನಿಮಗೆ ಗೊತ್ತಿಲ್ಲವೇ? ಆಗ ನೀವು ಎಲ್ಲಿದ್ದಿರಿ ಎಂದು ಪ್ರಶ್ನಿಸಿದರು.