Advertisement

ಕೃಷ್ಣಭೈರೇಗೌಡರ ವಿರುದ್ಧ ಎಚ್‌ಡಿಕೆ ಆಕ್ರೋಶ

08:38 PM Jan 10, 2023 | Team Udayavani |

ಬೆಂಗಳೂರು: ಕೃಷ್ಣಭೈರೇಗೌಡ ಅವರು ಬಹಳ ತಿಳಿವಳಿಕೆ ಉಳ್ಳವರು ಎಂದು ಭಾವಿಸಿದ್ದೆ. ನನ್ನಂತೆ ಅವರು ಹಳ್ಳಿಯಲ್ಲಿ ಕಲಿಯದೆ ವಿದೇಶದಲ್ಲಿ ಕಲಿತವರು. ಅವರ ಜ್ಞಾನದ ಪರಿಧಿ ದೊಡ್ಡದು ಎಂದು ತಿಳಿದಿದ್ದೆ. ಕೋಲಾರದಲ್ಲಿ ಸೋಮವಾರ ಅವರು ಕೊಟ್ಟ ಹೇಳಿಕೆ ಗಮನಿಸಿದ ಮೇಲೆ ಅವರ ಕುರಿತ ನನ್ನ ಅಭಿಪ್ರಾಯ ತಪ್ಪೆಂದು ಎನಿಸಿತು ಎಂದು ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

Advertisement

ಈ ಕುರಿತು ಟ್ವೀಟ್‌ ಮಾಡಿರುವ ಅವರು, ಕೃಷ್ಣಭೈರೇಗೌಡರೇ, ಕಾವೇರಿ ನೀರು ಹಂಚಿಕೆ ಬಗ್ಗೆ ನಿಮ್ಮ ಅಜ್ಞಾನಕ್ಕೆ ಏನೆಂದು ಹೇಳಬೇಕೋ ಗೊತ್ತಾಗುತ್ತಿಲ್ಲ. ಕಾವೇರಿ ನ್ಯಾಯಾಧಿಕರಣ ರಚನೆ ಆಗಿದ್ದು ಯಾವಾಗ, ರಾಜ್ಯಕ್ಕೆ ಕಾವೇರಿ ನೀರಿನ ಹಕ್ಕು ಸಾಧಿಸಲು ಮಾಜಿ ಪ್ರಧಾನಿ ಎಚ್‌.ಡಿ.ದೇವೆಗೌಡರ ಪಾತ್ರ ಏನು ಎಂಬುದರ ಬಗ್ಗೆ ದಯಮಾಡಿ ಮಾಹಿತಿ ಪಡೆದುಕೊಳ್ಳಿ ಎಂದು ತಿಳಿಸಿದ್ದಾರೆ.

ನೀರೇ ಬರದಿರುವ ಎತ್ತಿನಹೊಳೆ ಹೆಸರಿನಲ್ಲಿ ಎತ್ತಿದ ಎತ್ತುವಳಿ ಸಾಲದೆಂದು ಕೆಸಿ ವ್ಯಾಲಿಯಲ್ಲಿ ಪರ್ಸಂಟೇಜ್ ಜೇಬಿಗಿಳಿಸಿದ್ದು ಯಾರು? ಹಣದ ದುರಾಸೆಗೆ ವಿಷನೀರು ಹರಿಸಿ ಕೋಲಾರ ಜಿಲ್ಲೆ ಜನರನ್ನು ಸಾವಿನಕೂಪಕ್ಕೆ ತಳ್ಳಿದವರು ಯಾರು. ಆ ಗುತ್ತಿಗೆದಾರನ ಹಿಂದೆ ಅನುದಿನ ಗಿರಕಿ ಹೊಡೆದ ಗಿರಾಕಿ ಯಾರು ಎಂದು ನಿಮಗೆ ಗೊತ್ತಿಲ್ಲವೇ ಎಂದು ಪ್ರಶ್ನಿಸಿದ್ದಾರೆ.

5 ವರ್ಷ ಸರ್ಕಾರ ಮಾಡಿ ಎತ್ತಿನಹೊಳೆ ಹೆಸರಿನಲ್ಲಿ ಕೊಳ್ಳೆ ಹೊಡೆದ ಗಿರಾಕಿಗಳು, ಆ ನಂತರ ಕೆಸಿ ವ್ಯಾಲಿಯ ವಿಷನೀರು ಹರಿಸಿ, ಈಗ ಚುನಾವಣೆ ಹೊತ್ತಿನಲ್ಲಿ ಕಾವೇರಿ ಎಂದು ಸುಳ್ಳು ಹೇಳುವುದು ಎಷ್ಟು ಸರಿ. ಒಮ್ಮೆ ಯೋಚನೆ ಮಾಡಿ ಕೃಷ್ಣಭೈರೇಗೌಡರೇ, ಮತ ಬೇಕಾದಾಗ ಮನಃಸಾಕ್ಷಿಯನ್ನು ಮಾರಿಕೊಳ್ಳುವುದು ನಿಮಗೆ ಶೋಭೆಯಲ್ಲ ಎಂದು ತಿರುಗೇಟು ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next