Advertisement

ಜನರ ನೋವು ಆಲಿಸಿದ ಸಿಎಂ

01:38 AM Jun 22, 2019 | Sriram |

ಯಾದಗಿರಿ: ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರ ಬಹು ನಿರೀಕ್ಷಿತ ಎರಡನೇ ಹಂತದ ಗ್ರಾಮ ವಾಸ್ತವ್ಯ ಗುರುವಾರ ಯಾದಗಿರಿ ಜಿಲ್ಲೆ ಗುರುಮಠಕಲ್ ತಾಲೂಕಿನ ಚಂಡರಕಿ ಗ್ರಾಮದಿಂದ ಶುರುವಾಗಿದೆ. ಗುರುವಾರ ರಾತ್ರಿ ಕರ್ನಾಟಕ ಎಕ್ಸ್‌ಪ್ರೆಸ್‌ ಮೂಲಕ ಹೊರಟಿದ್ದ ಎಚ್‌ಡಿಕೆ ಬೆಳಗಿನ ಜಾವ 4.45ಕ್ಕೆ ಯಾದಗಿರಿ ರೈಲು ನಿಲ್ದಾಣಕ್ಕೆ ಬಂದಿಳಿದರು.

Advertisement

ಸರ್ಕ್ನೂಟ್ ಹೌಸ್‌ನಲ್ಲಿ ಕೆಲ ಸಮಯ ವಿಶ್ರಾಂತಿ ಪಡೆದು, ಬಳಿಕ ಶಾಸಕರು ಹಾಗೂ ಅಧಿಕಾರಿಗಳೊಂದಿಗೆ ಯಾದಗಿರಿ ಜಿಲ್ಲೆಯ ಸಮಸ್ಯೆಗಳು ಹಾಗೂ ಕೈಗೊಳ್ಳ ಬೇಕಾದ ಕ್ರಮಗಳ ಕುರಿತು ಚರ್ಚಿಸಿದರು. ನಂತರ ಗುರುಮಠಕಲ್ ಶಾಸಕ ನಾಗನಗೌಡ ಕಂದಕೂರ ಮನೆಯಲ್ಲಿ ಉಪಾಹಾರ ಸೇವಿಸಿದರು.

ದೊರೆಯ ಆಗಮನಕ್ಕೆ ಮದುವಣಗಿತ್ತಿಯಂತೆ ಸಿಂಗಾರಗೊಂಡಿದ್ದ ಚಂಡರಕಿ ಗ್ರಾಮಕ್ಕೆ ಎನ್‌ಇಕೆಎಸ್‌ಆರ್‌ಟಿಸಿಯ ಕೆಂಪು ಬಸ್‌ನಲ್ಲೇ ತೆರಳಿದರು. ಮಧ್ಯಾಹ್ನ 12 ಗಂಟೆ ಸುಮಾರಿಗೆ ಗ್ರಾಮಕ್ಕೆ ಆಗಮಿಸು ತ್ತಿದ್ದಂತೆ ಗ್ರಾಮಸ್ಥರು ಅದ್ಧೂರಿ ಸ್ವಾಗತ ಕೋರಿದರು. ಜನತಾ ದರ್ಶನಕ್ಕಾಗಿ ಹಾಕಲಾಗಿದ್ದ ವಾರ್ತಾ ಇಲಾಖೆ ಮಳಿಗೆ ಉದ್ಘಾಟಿಸಿ, ನೇರವಾಗಿ ವೇದಿಕೆಯತ್ತ ತೆರಳಿ ಗ್ರಾಮ ವಾಸ್ತವ್ಯ ಹಾಗೂ ಜನತಾ ದರ್ಶನಕ್ಕೆ ಚಾಲನೆ ನೀಡಿದರು.


ಸಚಿವ ರಾಜಶೇಖರ ಪಾಟೀಲ ಹಾಗೂ ಶಾಸಕ ನಾಗನಗೌಡ ಕಂದಕೂರ ಮಾತಿನ ಜಟಾಪಟಿ ನಡೆಸುತ್ತಿದ್ದರೂ ಮುಖ್ಯಮಂತ್ರಿ ತಾಳ್ಮೆ ಕಳೆದುಕೊಳ್ಳದೆ ಸಂಜ್ಞೆಯ ಮೂಲಕವೇ ಶಮನಗೊಳಿಸಿದರು. ಇದೇ ಕಾರ್ಯಕ್ರಮದಲ್ಲಿ ಮಾತನಾಡಿ, ಪ್ರಚಾರಕ್ಕೆ ಗ್ರಾಮ ವಾಸ್ತವ್ಯ ಮಾಡುತ್ತಿಲ್ಲ. ಜನರ ಸಮಸ್ಯೆ ಅರಿಯಲು ಹಳ್ಳಿಗೆ ಬಂದಿದ್ದೇನೆ ಎಂದು ವಿರೋಧಿಗಳಿಗೆ ಛಾಟಿ ಬೀಸಿದರು. ಜನರ ನಿರೀಕ್ಷೆಯಂತೆ ಯಾದಗಿರಿ ಜಿಲ್ಲೆಗೆ ಬಂಪರ್‌ ಘೋಷಣೆ ಪ್ರಕಟಿಸಿದರು.

ಊಟ ಮಾಡದೇ ಜನಸ್ಪಂದನ: ಗ್ರಾಮ ವಾಸ್ತವ್ಯ ಹಾಗೂ ಜನತಾ ದರ್ಶನಕ್ಕೆ ಚಾಲನೆ ನೀಡುವ ಸಮಾರಂಭ ಮುಗಿಯುವ ಹೊತ್ತಿಗೆ ಮಧ್ಯಾಹ್ನ 2 ಗಂಟೆಯಾಗಿತ್ತು. ಸಿಎಂ ಊಟಕ್ಕೆ ತೆರಳುವರು ಎಂದು ಜನ ನಿರೀಕ್ಷಿಸಿದ್ದರು. ಆದರೆ ನೇರವಾಗಿ ಜನತಾ ದರ್ಶನಕ್ಕೆ ಮುಂದಾದರು. ರಾತ್ರಿ 8:30ರವರೆಗೂ ತಾಳ್ಮೆಯಿಂದ ಜನರ ಅಹವಾಲು ಆಲಿಸಿ ಸ್ಥಳದಲ್ಲೇ ಹಲವು ಸಮಸ್ಯೆಗಳಿಗೆ ಪರಿಹಾರ ಸೂಚಿಸಿದರು. ಪುಟ್ಟ ಮಗುವಿನ ಹೃದಯದಲ್ಲಿರುವ ರಂಧ್ರದ ಚಿಕಿತ್ಸೆಗೆ ಜಯದೇವ ಹೃದಯಾಲಯದಲ್ಲಿ ವ್ಯವಸ್ಥೆ ಮಾಡಿ ‘ಹೃದಯ’ ಶ್ರೀಮಂತಿಕೆ ಮೆರೆದರು.


ಮಕ್ಕಳೊಂದಿಗೆ ಊಟ
ಗ್ರಾಮ ವಾಸ್ತವ್ಯ ವೇಳೆ ರಾತ್ರಿ ಶಾಲಾ ಮಕ್ಕಳು ಹಾಗೂ ಶಿಕ್ಷಕರೊಂದಿಗೆ ಸಿಎಂ ಊಟ ಮಾಡಿ ಸರಳತೆ ಮೆರೆದರು. ಬಳಿಕ ಚಂಡರಕಿ ಗ್ರಾಮದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಕೋಣೆಯಲ್ಲಿ ವಾಸ್ತವ್ಯ ಹೂಡಿದರು. ಕೋಣೆಗೆ ಸುಣ್ಣ ಬಣ್ಣ ಬಳಿದಿದ್ದು ಹಾಗೂ ಫ್ಯಾನ್‌ ಅಳವಡಿಸಿದ್ದನ್ನು ಬಿಟ್ಟರೆ ಆಧುನಿಕ ಸೌಲಭ್ಯಗಳಿರಲಿಲ್ಲ. ಎಸಿ ಹಾಗೂ ಏರ್‌ಕೂಲರ್‌, ಮಂಚ ಸಹ ಇರಲಿಲ್ಲ. ಚಾಪೆ ಹಾಗೂ ದಿಂಬಿನೊಂದಿಗೆ ಮಲಗಿದರು. ವಿದ್ಯುತ್‌ ಕೈ ಕೊಟ್ಟರೆ ಜನರೇಟರ್‌ ವ್ಯವಸ್ಥೆ ಮಾಡಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next