ಕುರುಗೋಡು: ಭೂಮಿ ಕಳೆದುಕೊಂಡ ರೈತರು ನ್ಯಾಯಕ್ಕಾಗಿ ಕಾರ್ಖಾನೆಗಳ ವಿರುದ್ಧ ನೆಡೆಸುತ್ತಿರುವ ಮುಷ್ಕರಕ್ಕೆ 31 ದಿನಕ್ಕೆ ಕಾಲಿಟ್ಟಿದೆ. ಆದರೂ ಇಲ್ಲಿ ವರೆಗೂ ಯಾವ ಅಧಿಕಾರಿಗಳು ಮತ್ತು ಜನಪ್ರತಿನಿದಿಗಳು ಬಂದು ಸಮಸ್ಯೆ ಇತ್ಯರ್ಥ ಮಾಡಲು ಮುಂದಾಗದೆ ಇರುವುದು ದುರಂತ ವಾಗಿದೆ ಎಂದು ನಮ್ಮ ಕರ್ನಾಟಕ ರಕ್ಷಣೆ ವೇದಿಕೆ ಅಧ್ಯಕ್ಷ ಸಂಪತ್ ಕುಮಾರ್ ಬೇಸರ ವ್ಯಕ್ತಪಡಿಸಿ, ರೈತರ ಬೇಡಿಕೆಗಳು ಈಡೇರುವವರೆಗೂ ನ್ಯಾಯ ಸಿಗುವವರೆಗೆ ಹೋರಾಟ ಕೈಬೀಡುವ ಪ್ರಶ್ನೆಯೇ ಇಲ್ಲ ಎಂದರು.
ಜೆಡಿಎಸ್ ಪಕ್ಷದ ಸಂಡೂರು ವಿಧಾನ ಸಭಾ ಕ್ಷೇತ್ರದ ಅಭ್ಯರ್ಥಿ ಸೋಮಪ್ಪ ಕುರೇಕುಪ್ಪ ಹೋರಾಟಕ್ಕೆ ಬೆಂಬಲ ನೀಡಿ ಮಾತನಾಡಿ, ಕುಡಿತಿನಿ ಮತ್ತು ಸುತ್ತಮುತ್ತಲಿನ ಗ್ರಾಮಸ್ಥರು ಕಾರ್ಖಾನೆ ಗಳಿಗೆ ಭೂಮಿ ನೀಡಿ 13ವರ್ಷ ಕಳೆದಿದೆ.ಯಾವುದೇ ಕಾರ್ಖಾನೆ ಸ್ಥಾಪನೆಯಾಗದ ಹಿನ್ನೆಲೆಯಲ್ಲಿ ಮಾಲಕರ ವಿರುದ್ಧ ನ್ಯಾಯಕ್ಕಾಗಿ ಪ್ರತಿಭಟನೆ ನಡೆಸಿದರು, ಇದರ ಬಗ್ಗೆ ಸರ್ಕಾರ ಮತ್ತು ಸಂಬಂಧಪಟ್ಟ ಅಧಿಕಾರಿಗಳು ಪ್ರತಿಭಟನೆ ಸ್ಥಳಕ್ಕೆ ಆಗಮಿಸಿ ಸಾಂತ್ವನ ಹೇಳುವ ಸೌಜನ್ಯ ಇಲ್ಲದಿರುವುದು ನಾಚಿಕೆ ಗೇಡಿನ ಸಂಗತಿಯಾಗಿದೆ ಎಂದರು.
ಅಲ್ಲದೇ ಇದೇ ಜನವರಿ ತಿಂಗಳ 31ರಂದು ನಮ್ಮ ಜೆಡಿಎಸ್ ಪಕ್ಷದ ರಾಜ್ಯಾಧ್ಯಕ್ಷರು, ಮಾಜಿ ಮುಖ್ಯಮಂತ್ರಿಗಳಾದ ಎಚ್.ಡಿ.ಕುಮಾರಸ್ವಾಮಿ ಒಂದು ದಿನದ ಸಂಪೂರ್ಣ ಬೆಂಬಲ ನೀಡಲಿದ್ದಾರೆ ಎಂದು ತಿಳಿಸಿದರು.
ಜೆಡಿಎಸ್ ಪಕ್ಷದ ಕಾರ್ಯಕರ್ತರು ಮತ್ತು ಮುಖಂಡರು ಸ್ಥಳದಲ್ಲಿ ನಮ್ಮ ನಾಯಕರೊಂದಿಗೆ ಕೈ ಜೋಡಿಸಿ ಈ ಭಾಗದ ರೈತರಿಗೆ ಆಗಿರುವ ಅನ್ಯಾಯದ ವಿರುದ್ಧ ಧ್ವನಿ ಎತ್ತುವ ಮೂಲಕ ಬೆಂಬಲ ಸೂಚಿಸಲಿದ್ದೇವೆ ಎಂದರು.ರೈತ ಮುಖಂಡರು, ಭೂಮಿಕಳೆದುಕೊಂಡ ರೈತರು, ಗ್ರಾಮಸ್ಥರು ಉಪಸ್ಥಿತರಿದ್ದರು.