ಹಾಸನ: ಜೆಡಿಎಸ್ ಅಧಿಕಾರಕ್ಕೆ ಬಂದರೆ ರೈತರ ಮಕ್ಕಳನ್ನು ವಿವಾಹವಾಗುವ ಯುವತಿಯರಿಗೆ 2 ಲಕ್ಷ ರೂ. ಪ್ರೋತ್ಸಾಹ ಧನ ನೀಡುವುದಾಗಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಘೋಷಿಸಿದರು.
ಹಾಸನ ಜಿಲ್ಲೆಗೆ ಪಂಚರತ್ನ ಯಾತ್ರೆ ಪ್ರವೇಶ ಮಾಡಿದ ಅರಸೀಕೆರೆ ತಾಲೂಕು ಕರಗುಂದ ಗ್ರಾಮದ ದೇವಾಲಯದಲ್ಲಿ ಪೂಜೆ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೈತರ ಮಕ್ಕಳಿಗೆ ಹೆಣ್ಣು ಕೊಡುತ್ತಿಲ್ಲ. ಕಂಕಣಭಾಗ್ಯ ಕೂಡಿ ಬರಲಿ ಎಂದು ಅವಿವಾಹಿತ ರೈತ ಸಮುದಾಯದ ಯುವಕರು ಮಲೆ ಮಹದೇಶ್ವರ ಬೆಟ್ಟಕ್ಕೆ ಪಾದಯಾತ್ರೆ ಮಾಡಿದ್ದನ್ನು ಗಮನಿಸಿದ್ದೇನೆ. ರೈತರು ಸ್ವಾವಲಂಬಿಯಾಗುವ ಅಂಶ ಯೋಜನೆ ಪಂಚರತ್ನದಲ್ಲಿ ಸೇರಿದೆ. ಜೊತೆಗೆ ರೈತರ ಮಕ್ಕಳನ್ನು ವಿವಾಹವಾಗುವ ಯುವತಿಯವರಿಗೆ 2 ಲಕ್ಷ ರೂ. ಪ್ರೋತ್ಸಾಹ ಧನ ನೀಡುವ ಕಾರ್ಯಕ್ರಮವನ್ನೂ ಜಾರಿಗೊಳಿಸಲಾಗುವುದು ಎಂದು ಹೇಳಿದರು.
ಸುಮಲತಾ ಬಿಜೆಪಿ ಸೇರ್ಪಡೆಗೆ ಮಹತ್ವವಿಲ್ಲ
ಮಂಡ್ಯ ಸಂಸದೆ ಸುಮಲತಾ ಬಿಜೆಪಿ ಸೇರ್ಪಡೆಯ ವಿಚಾರಕ್ಕೆ ನಾನು ಮಹತ್ವ ಕೊಡಲ್ಲ. ನರೇಂದ್ರಮೋದಿ ಅವರು ಬರುವ ಸಂದರ್ಭದಲ್ಲಿ ಅವರು ಬಿಜೆಪಿ ಸೇರಬಹುದು. ನನಗೆ ಬಹಳ ದಿವಸದ ಹಿಂದೆಯೇ ಈ ಬೆಳವಣಿಗೆ ಗೊತ್ತಿತ್ತು ಎಂದರು.
ಕಿವಿಗೆ ಹೂ ಮುಡಿಸುವ ಯತ್ನ ಮಾಡಿದ್ದರು:
ಶಾಸಕ ಕೆ.ಎಂ.ಶಿವಲಿಂಗೇಗೌಡ ಅವರು ನಮ್ಮ ಕಿವಿಗೆ ಹೂ ಮುಡಿಸುವ ತಂತ್ರ ರೂಪಿಸಿದ್ದರು. ಜಿ.ಟಿ.ದೇವೇಗೌಡರ ಮನೆಗೆ ಹೋಗಿ ಸಮಾಧಾನ ಮಾಡಿದಂತೆ ನನ್ನನ್ನು ಸಮಾಧಾನ ಮಾಡಲಿಲ್ಲ ಎಂಬ ಶಿವಲಿಂಗೇಗೌಡರ ಹೇಳಿಕೆಗೆ ಪ್ರತಿಕ್ರಿಯಿಸಿ, ಅವರಿಗೆ ಹೇಗೆ ಸಮಾಧಾನ ಮಾಡಬೇಕಿತ್ತು?, ನಾನೇ ಖುದ್ದು ಎರಡು ಬಾರಿ ಕರೆಸಿ ಮಾತನಾಡಿದ್ದೇನೆ. ಅರಸೀಕೆರೆಯಲ್ಲಿ ಜಾತಿ ರಾಜಕೀಯವಿದೆ. ಎಲ್ಲರನ್ನೂ ಒಗ್ಗೂಡಿಸಿಕೊಂಡು ಹೋಗಬೇಕು. ಸಮಯ ಕೊಡಿ ಎಂದಿದ್ದರು. ಸಂಸದ ಪ್ರಜ್ವಲ್ ರೇವಣ್ಣ ಎಷ್ಟು ಬಾರಿ ಅವರ ಮನೆಗೆ ಹೋಗಿದ್ದಾರೆ ಎಂಬುದನ್ನು ಶಿವಲಿಂಗೇಗೌಡರೇ ಹೇಳಲಿ ಎಂದರು.
Related Articles
ದೇವೇಗೌಡರು, ರೇವಣ್ಣ ದುಡಿಮೆಯಿಂದ ಶಾಸಕರಾಗಿ ಕನಿಷ್ಠ ಸೌಜನ್ಯಕ್ಕೂ ದೇವೇಗೌಡರು, ರೇವಣ್ಣ ಅವರಿಂದ ಈ ಮಟ್ಟಕ್ಕೆ ಬಂದೆ ಅಂತ ಶಿವಲಿಂಗೇಗೌಡರ ಬಾಯಲ್ಲಿ ಬರಲಿಲ್ಲ ಎಂದು ಕಿಡಿ ಕಾರಿದರು.
ಇದೇ ವ್ಯಕ್ತಿ ನಾಳೆ ಬೆಳಗ್ಗೆ ಸಿದ್ದರಾಮಯ್ಯ ಅವರು ಕೋಲಾರದಲ್ಲಿ ಸೋತು ಮನೆಗೆ ಹೋದ ಮೇಲೆ, ಯಾವ ಊರ ಸಿದ್ದರಾಮಯ್ಯ ಅಂತ ಹೇಳುವ ದಿನಗಳೂ ದೂರ ಇಲ್ಲ. ಅ ವ್ಯಕ್ತಿಯ ನಡವಳಿಕೆ ಗೊತ್ತಿದೆ ಬಿಡಿ ಎಂದರು.
ಮಾಜಿ ಸಚಿವ ಎ.ಮಂಜು ಜೆಡಿಎಸ್ ಸೇರ್ಪಡೆ ಈಗಾಗಲೇ ಅಧಿಕೃತವಾಗಿ ತೀರ್ಮಾನ ಆಗಿದೆ. ಪಕ್ಷ ಸೇರ್ಪಡೆ ದಿನಾಂಕವನ್ನು ರೇವಣ್ಣ ಅವರು ತೀರ್ಮಾನ ಮಾಡಬೇಕು. ಯಾಕೆಂದರೆ ಅವರು ಎಲ್ಲವನ್ನೂ ಪಂಚಾಂಗ ನೋಡಿಯೇ ತೀರ್ಮಾನ ಮಾಡೋದು. ಪಂಚಾಂಗ ಏನಿರುತ್ತೆ ಅದರ ಮೇಲೆ ತೀರ್ಮಾನ ಆಗುತ್ತೆ ಎಂದು ನಸು ನಕ್ಕರು.