Advertisement

JDS ತಂಟೆಗೆ ಬಂದವರು ಬೀದಿ ಪಾಲಾಗಿದ್ದಾರೆ : ಪಕ್ಷ ತೊರೆಯಲು ಮುಂದಾದ ನಾಯಕರಿಗೆ HDK ತಿರುಗೇಟು

04:09 PM May 10, 2022 | Team Udayavani |

ಬೆಂಗಳೂರು : ಪಕ್ಷಕ್ಕೆ ಡ್ಯಾಮೇಜ್ ಮಾಡಿದರೆ ಅಥವಾ ನಮ್ಮ ತಂಟೆಗೆ ಬಂದರೆ ಅವರೇ ಬೀದಿಪಾಲಾಗುತ್ತಾರೆ ಎಂದು ಅಸಮಾಧಾನಿತರ ವಿರುದ್ಧ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಕಿಡಿಕಾರಿದ್ದಾರೆ.

Advertisement

ನೆಲಮಂಗಲ ಸಮೀಪದಲ್ಲಿ ನಡೆಯುವ ಜನತಾ ಜಲಧಾರೆ ಸಮಾವೇಶ ನಡೆಯುವ ಮೈದಾನದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜೆಡಿಎಸ್‍ ತೊರೆಯಲು ಮುಂದಾಗಿರುವ ಹಾಗೂ ಪಕ್ಷದ ವಿರುದ್ಧ ಮಾತನಾಡುತ್ತಿರುವವರಿಗೆ ಎಚ್ಚರಿಕೆ ನೀಡಿದರು.

ಕೆಲವರು ಪಕ್ಷಕ್ಕೆ ಡ್ಯಾಮೇಜ್ ಮಾಡುತ್ತಿದ್ದಾರೆ. ಪಕ್ಷಕ್ಕೆ ಹಾನಿ ಮಾಡಲು ಹೋದರೆ ಅವರೇ ಬೀದಿಪಾಲಾಗುತ್ತಾರೆ. ಅದಕ್ಕೆ ಸಾಕಷ್ಟು ಉದಾಹರಣೆಗಳಿವೆ. ಬಿ.ಎಲ್ ಶಂಕರ್ ಕಾಂಗ್ರೆಸ್ ಗೆ ಹೋಗಿ ಏನಾದರು? ಇಪ್ಪತ್ತು ವರ್ಷವಾಯ್ತು, ಅಲ್ಲಿ ಏನಾಗಿದ್ದಾರೆ? ಎಂದು ಪ್ರಶ್ನಿಸಿದರು.

ಪಕ್ಷಕ್ಕೆ ಯಾರೂ ಅನಿವಾರ್ಯವಲ್ಲ. ಪಕ್ಷವೇ ಹೊಸ ನಾಯಕತ್ವವನ್ನು ಹುಟ್ಟು ಹಾಕಲಿದೆ ಎಂದು ಅವರು ಮಾರ್ಮಿಕವಾಗಿ ನುಡಿದರು.

ಕಾಂಗ್ರೆಸ್, ಬಿಜೆಪಿ ಈ ಎರಡೂ ರಾಷ್ಟ್ರೀಯ ಪಕ್ಷಗಳಿಗೆ ಜೆಡಿಎಸ್ ಬಗ್ಗೆ ಭಯ ಇದೆ. ಅದೇ ಕಾರಣಕ್ಕೆ ನಮ್ಮ ಪಕ್ಷವನ್ನೇ ಟಾರ್ಗೆಟ್ ಮಾಡುತ್ತಿವೆ ಎಂದು ಅವರು ವಾಗ್ದಾಳಿ ನಡೆಸಿದರು.

Advertisement

ಎಲ್ಲಿ ಕುಟುಂಬ ರಾಜಕಾರಣ ಇಲ್ಲ ಹೇಳಿ? ಎಲ್ಲಾ ಪಕ್ಷಗಳಲ್ಲೂ ಇದೆಯಲ್ಲಾ ಎಂದ ಕುಮಾರಸ್ವಾಮಿ ಅವರು, ಡಿ.ಕೆ.ಶಿವಕುಮಾರ್ ಕುಟುಂಬದಲ್ಲಿ ಬೇರೆ ಯಾರೂ ರಾಜಕೀಯದಲ್ಲಿ ಇಲ್ಲವೇ? ಅವರು ಏನು ಕೆಲಸ ಮಾಡಿದ್ದಾರೆ. ಸತೀಶ್ ಜಾರಕಿಹೊಳಿ, ಯಡಿಯೂರಪ್ಪ, ಉದಾಸಿ, ಜೊಲ್ಲೆ ಕುಟುಂಬದಲ್ಲಿ ಇಲ್ಲವೇ? ಎಲ್ಲರಿಗೂ ನಮ್ಮ ಕುಟುಂಬದ ಮೇಲೆಯೇ ಕಣ್ಣು ಎಂದು ತಿರುಗೇಟು ನೀಡಿದರು.

ಇದನ್ನೂ ಓದಿ : 19 ವರ್ಷದ ಬಳಿಕ ವಿಜೃಂಭಣೆಯಿಂದ ನಡೆದ ನರಬಲಿ ಹಬ್ಬ: ಇಲ್ಲಿ ಸತ್ತವ ಬದುಕಿ ಬರುವುದೇ ಪವಾಡ!

ಮರಿತಿಬ್ಬೇಗೌಡಗೆ ಟಾಂಗ್:

ನಿಖಿಲ್ ಸೋಲಿಗೆ ಕುಟುಂಬದವರ ನಿರ್ಧಾರವೇ ಕಾರಣ ಎಂಬ ಮರಿತಿಬ್ಬೇಗೌಡ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಕುಮಾರಸ್ವಾಮಿ ಅವರು, ನಾನು ಕಾರ್ಯಕರ್ತರಿಂದಾಗಿ ನಿಖಿಲ್ ಸೋಲು ಅನುಭವಿಸಿದ ಅಂತಾ ಹೇಳಿದ್ದಿನಾ? ನಾನು ಎಲ್ಲೂ ಕಾರ್ಯಕರ್ತರ ವಿರುದ್ಧ ಆಪಾದನೆ ಮಾಡಿಲ್ಲ ಎಂದರು.

ಚುನಾವಣೆ ನಡೆದು ಮೂರು ವರ್ಷಗಳಾಗಿವೆ.‌ ಈಗ ಯಾಕೆ ಆ ವಿಚಾರದ ಬಗ್ಗೆ ಚರ್ಚಿಸಬೇಕು. ನಿಖಿಲ್ ಅವರಿಗೆ ನಾನೇ ಚುನಾವಣೆಗೆ ನಿಲ್ಲಬೇಡ, ಒತ್ತಡಗಳಿಗೆ ಮಣಿಯಬೇಡ ಅಂತಾ ಹೇಳಿದ್ದೆ. ಆದರೆ, ಮಂಡ್ಯ ಜಿಲ್ಲೆಯ ಎಂಟು ಕ್ಷೇತ್ರಗಳ ಶಾಸಕರ ಒತ್ತಾಯದ ಕಾರಣ ನಿಖಿಲ್ ಸ್ಪರ್ಧಿಸಿದರು. ಶಾಸಕರ ಒತ್ತಾಯಕ್ಕೆ ತಲೆಬಾಗಿ ನಿಲ್ಲಿಸಬೇಕಾಯಿತು ಎಂದರು.

ಮರಿತಿಬ್ಬೇಗೌಡ ಯಾರಿಗೆ ಹಣ ನೀಡಿದ್ದರು?:
ಹಣ ಇದ್ದವರಿಗೆ ಮಣೆ ಹಾಕಲಾಗುತ್ತಿದೆ ಎಂಬ ವಿಧಾನ ಪರಿಷತ್ ಜೆಡಿಎಸ್ ಸದಸ್ಯ ಮರಿತಿಬ್ಬೇಗೌಡ ಆರೊಪ ವಿಚಾರಕ್ಕೆ ವಾಗ್ದಾಳಿ ನಡೆಸಿದ ಹೆಚ್ ಡಿಕೆ, ಮರಿತಿಬ್ಬೇಗೌಡ ಮಾತನಾಡಿರುವುದನ್ನು ಗಮನಿಸಿದ್ದೇನೆ. ನಮ್ಮ‌ ಪಕ್ಷಕ್ಕೆ ಅವರು ಎಷ್ಟು ಹಣ ಸಂದಾಯ ಮಾಡಿದ್ದಾರೆ? ನಮ್ಮ ಪಕ್ಷದ ಅಭ್ಯರ್ಥಿಯಾಗಿದ್ದಾಗ ಎಷ್ಟು ಹಣ ನೀಡಿದ್ದಾರೆ? ಯಾವ ನಾಯಕರಿಗೆ ಹಣ ಸಂದಾಯ ಮಾಡಿದ್ದರು ಎಂದು ಪ್ರಶ್ನೆ ಮಾಡಿದರು.

ಅವರು ಹಣವನ್ನು ಕುಮಾರಸ್ವಾಮಿಗೆ ಕೊಟ್ಟರೋ? ದೇವೇಗೌಡರಿಗೆ ಕೊಟ್ಟರೋ? ಇಲ್ಲವೇ ಜನತಾದಳದ ಅಕೌಂಟ್ ಗೆ ಕೊಟ್ಟಿದ್ದಾರೋ? ಅವರ ಚುನಾವಣಾ ಖರ್ಚು ವೆಚ್ಚಕ್ಕೆ ಪಕ್ಷದಿಂದ ಎಷ್ಟು ಕೊಟ್ಟಿದ್ದೇವೆ. ಇದೆಲ್ಲದರ ಬಗ್ಗೆ ಅವರು ಸತ್ಯ ಹೇಳುತ್ತಾರಾ? ಈ ರೀತಿಯ ಕ್ಷುಲ್ಲಕವಾದ ಹೇಳಿಕೆಗಳ ಬಗ್ಗೆ ಜನರೇ ತೀರ್ಮಾನಿಸುತ್ತಾರೆ ಎಂದು ಕುಮಾರಸ್ವಾಮಿ ಅವರು ತಿರುಗೇಟು ನೀಡಿದರು.

ಇದನ್ನೂ ಓದಿ : ಶಿರಸಿ : ಜಾತ್ರೆಯಲ್ಲಿ ಕೆಂಡ ಹಾಯ್ದ ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್

ಜೆಡಿಎಸ್ ಮುಗಿಸುವ ಅಜೆಂಡಾ:

ಎರಡೂ ರಾಷ್ಟ್ರೀಯ ಪಕ್ಷಗಳ ಅಜೆಂಡಾ ನಮ್ಮ ಪಕ್ಷವನ್ನು ಮುಗಿಸುವುದು. ಪಕ್ಷವನ್ನು ಉಳಿಸಲು ನಾವು ಹಲವು ಸಲ ತಲೆ ಕೊಟ್ಟಿದ್ದೇವೆ.‌ ಹಳೇ ಮೈಸೂರು ಭಾಗದಲ್ಲಿ ರಾಷ್ಟ್ರೀಯ ಪಕ್ಷಗಳಿಗೆ ಭಯ ಇದೆ.‌ ನಮ್ಮ ಪಕ್ಷವನ್ನು ಮುಗಿಸೋದೆ ಎರಡೂ ಪಕ್ಷಗಳ ಅಜೆಂಡಾ. ಹಾಗಾಗಿಯೇ ನಮ್ಮ ಪಕ್ಷದವರನ್ನು ಸೆಳೆಯುತ್ತಿದ್ದಾರೆ. ಆದರೆ, ಕಾರ್ಯಕರ್ತರು ಹೋಗಬೇಕಲ್ಲವೇ? ಎಂದು‌ ತಿರುಗೇಟು ನೀಡಿದರು.

ಮೇಕೆದಾಟು ಪಾದಯಾತ್ರೆ ರಾಜಕೀಯ ಗಿಮಿಕ್:

ಕಾಂಗ್ರೆಸ್ ನವರ ಮೇಕೆದಾಟು ಪಾದಯಾತ್ರೆ ರಾಜಕೀಯ ಗಿಮಿಕ್ ಎಂದ ಕುಮಾರಸ್ವಾಮಿ, ನಾನು ಎರಡನೇ ಭಾರಿ ಸಿಎಂ ಆಗಿದ್ದಾಗ ಕಾಂಗ್ರೆಸ್ ನ‌ ಮಹಾನುಭಾವರು ನೀರಾವರಿ ಸಚಿವರಾಗಿದ್ದರು. ನೀರಾವರಿ ಯೋಜನೆಗಳ ಬಗ್ಗೆ ಕೇಳಿದಾಗ,‌ ನಾನು ನೀರಾವರಿ ಸಚಿವ ಇದಕ್ಕೆ ಮಧ್ಯಪ್ರವೇಶಿಸಬೇಡಿ ಎನ್ನುತ್ತಿದ್ದರು. ಮೇಕೆದಾಟು ಪಾದಯಾತ್ರೆ ಸಂಪೂರ್ಣ ರಾಜಕೀಯ ಕಾರಣಕ್ಕಾಗಿ ನಡೆದಿರೋದು. ಐದು ವರ್ಷ ಕಾಂಗ್ರೆಸ್ ಸರ್ಕಾರ ಇದ್ದಾಗ ಯಾಕೆ ಮಾಡಲಿಲ್ಲ ಎಂದು ಕುಮಾರಸ್ವಾಮಿ ಅವರು ಪ್ರಶ್ನಿಸಿದರು.

ಶಾಸಕರಾದ ಡಾ.ಶ್ರೀನಿವಾಸ ಮೂರ್ತಿ, ಮಂಜುನಾಥ್ ಹಾಗೂ ವಿಧಾನ ಪರಿಷತ್ ಸದಸ್ಯ ಭೋಜೇಗೌಡ ಮುಂತಾದವರು ಈ ಸಂದರ್ಭದಲ್ಲಿ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next