Advertisement

ಜನ ಬರದಲ್ಲಿ ಬೇಯುತ್ತಿದ್ದರೆ ಶೋಕಿದಾರ ಕ್ರಿಕೆಟ್ ನೋಡುತ್ತಿದ್ದ:ಸಿಎಂ ವಿರುದ್ಧ ಎಚ್ಡಿಕೆ ಟೀಕೆ

12:12 PM Oct 22, 2023 | Team Udayavani |

ಬೆಂಗಳೂರು: “ವೆಸ್ಟ್ ಎಂಡ್ ನಲ್ಲಿ ಆಡಳಿತ ನಡೆಸಿಲ್ಲ ಎನ್ನುವ ಗಿಲೀಟು ಗಿರಾಕಿ, ಆವತ್ತು ಮುಖ್ಯಮಂತ್ರಿ ನಿವಾಸವನ್ನೇಕೆ ತೆರವು ಮಾಡಲಿಲ್ಲ? ಐದು ವರ್ಷ ಸರಕಾರ ಕೊಟ್ಟ ಸಿದ್ದಪುರುಷ ಇನ್ನೊಬ್ಬರ ಹೆಸರಿನಲ್ಲಿ ಬಂಗಲೆ ಪಡೆದು ಸಾಸಿವೆ ಕಾಳಷ್ಟೂ ಸಂಕೋಚವಿಲ್ಲದೆ ಅದೇ ಜಾಗದಲ್ಲಿ ಹೆಗ್ಗಣವಾಗಿ ಮೈತ್ರಿ ಸರಕಾರಕ್ಕೆ ಕನ್ನ ಕೊರೆದಿದ್ದನ್ನು ಕನ್ನಡಿಗರು ಮರೆತಿಲ್ಲ. ಹೇಳಿದ್ದೇ ಹೇಳುವ ಕಿಸುಬಾಯಿ ದಾಸನಿಗೆ ಗೊತ್ತಿರುವುದು ಎರಡೇ; 1.ವೆಸ್ಟ್‌ ಎಂಡ್‌ 2.ಬಿಜೆಪಿ ಬಿ ಟೀಂ” ಇದು ಸಿಎಂ ಸಿದ್ದರಾಮಯ್ಯ ವಿರುದ್ಧ ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಮಾಡಿರುವ ಟೀಕೆಗಳು.

Advertisement

ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಂಡಿರುವ ಅವರು, ಡೋಂಗಿ ಸಮಾಜವಾದಿ, ಪುಲ್ ಟೈಂ ಮೀರುಸಾದಿಕವಾದಿಗೆ ವೆಸ್ಟ್ ಎಂಡ್ ಸೋಂಕು ಮತ್ತೆ ತಗುಲಿದೆ. I.N.D.I.A. ಕೂಟದ ಸಭೆಯನ್ನು ಇದೇ ವೆಸ್ಟ್ ಎಂಡ್ ಬದಲಿಗೆ, ತಮ್ಮ ಸುತ್ತ ಕೆನೆಪದರ, ಒಳಪದರ, ತೆಳುಪದರದಂತೆ ತಲೆ ಎತ್ತಿರುವ ʼಪರ್ಸಂಟೇಜ್ ಪಟಾಲಂʼ ಏಳುಸುತ್ತಿನ ಕೋಟೆಯ ವಠಾರದಲ್ಲಿಯೇ ನಡೆಸಬೇಕಿತ್ತು. ಏಕೆ ನಡೆಸಲಿಲ್ಲ ಎಂದು ತಿರುಗೇಟು ನೀಡಿದ್ದಾರೆ.

ಆಧುನಿಕ ಭಾರತದ ಈಸ್ಟ್‌ ಇಂಡಿಯಾ ಕಂಪನಿ ಕಾಂಗ್ರೆಸ್ ಗೆ ಕರ್ನಾಟಕ ಪೊಗದಸ್ತು ಹುಲ್ಲುಗಾವಲು. ಸಿದ್ದಪುರುಷ ಶೋಕಿಪುರುಷನೇ ಈ ಹುಲ್ಲುಗಾವಲಿನ ಮೇಟಿ. ವಿದ್ಯುತ್ ಕ್ಷಾಮ ಮತ್ತು ಬರದಲ್ಲಿ ಜನರು ಬೇಯುತ್ತಿದ್ದರೆ ದಿನಪೂರ್ತಿ ಕೂತು ಕ್ರಿಕೆಟ್ ನೋಡುವಷ್ಟು ಶೋಕಿದಾರ! ರೋಮ್ ನಗರ ಹೊತ್ತಿ ಉರಿಯುತ್ತಿದ್ದರೆ ನೀರೋ ಪಿಟೀಲು ಬಾರಿಸುತ್ತಿದ್ದ! ಜನ ಸಂಕಷ್ಟದಲ್ಲಿದ್ದರೆ ಕರ್ನಾಟಕದ ನೀರೋ ಕ್ರಿಕೆಟ್‌ ಮ್ಯಾಚ್‌ ನೋಡುತ್ತಿದ್ದ ಎಂದು ಟೀಕಿಸಿದ್ದಾರೆ.

ಐದು ತಿಂಗಳಿಂದ ವಿದ್ಯುತ್ ಉತ್ಪಾದನೆ ಅಲಕ್ಷಿಸಿದ್ದೇಕೆ? ಹಾಹಾಕಾರ ಎದ್ದ ಮೇಲೆ ಅದು ಮಾಡಿದ್ದೇವೆ, ಇದು ಮಾಡಿದ್ದೇವೆ ಎಂದರೆ ಲೋಡ್ ಶೆಡ್ಡಿಂಗ್ ಏಕೆ ಬಂತು? 2013-2018ರಲ್ಲಿ 12,000 ಮೆ.ವ್ಯಾ. ಉತ್ಪಾದಿಸಿದ್ದೇವೆ ಎಂದು ನೀವೇ ಹೇಳಿದ್ದೀರಿ, ಸರಿ. ಈಗ ಮಳೆ ಕಡಿಮೆಯಾಗಿ ಜಲವಿದ್ಯುತ್‌ ಉತ್ಪಾದನೆ ಕುಸಿದಿದೆ, ನನಗೂ ಗೊತ್ತಿದೆ. ಅದರಲ್ಲಿ 3,000 ಮೆ.ವ್ಯಾ. ಇಲ್ಲ ಎಂದರೂ ಸಾರ್ವಜನಿಕ ಮತ್ತು ಖಾಸಗಿ ವಲಯ ಸೇರಿ ಒಟ್ಟು 29,000 ಮೆ.ವ್ಯಾ. ವಿದ್ಯುತ್‌ ಉತ್ಪಾದನೆ ಆಗಲೇಬೇಕಿತ್ತು. ಆಗಿಲ್ಲವೇಕೆ? ಏಕಾಎಕಿ ಉತ್ಪಾದನೆ ನಿಲ್ಲಿಸಿದ್ದೇಕೆ? ಜಲವಿದ್ಯುತ್‌ ಕೈಕೊಡುತ್ತದೆ ಎಂದು ಗೊತ್ತಿದ್ದರೂ ಕಲ್ಲಿದ್ದಲ ಸಂಗ್ರಹ ಇಟ್ಟುಕೊಳ್ಳಲಿಲ್ಲವಲ್ಲವೇಕೆ? ಜಲ ವಿದ್ಯುತ್‌ ಹೊರತುಪಡಿಸಿ ಇತರೆ ಮೂಲಗಳ ವಿದ್ಯುತ್‌ ಉತ್ಪಾದನೆಗೂ ಖೋತಾ ಬೀಳಲಿಕ್ಕೆ ಪ್ರಕೃತಿ ಕಾರಣವೋ? ಅಥವಾ ನಿಮ್ಮ ʼಕೈ ಚಳಕʼವೇ ಕಾರಣವೋ? ಸತ್ಯ ಹೇಳಿದರೆ ನನ್ನ ಕಡೆಗೇ ಬೊಟ್ಟು ಮಾಡುತ್ತೀರಿ, ನಿಮ್ಮ ಸಚಿವರನ್ನು ನನ್ನ ಮೇಲೆ ಛೂ ಬಿಡುತ್ತೀರಿ. ಎಷ್ಟು ದಿನ ನೆಪಗಳ ನಾಜೂಕತನ ಎಂದು ಪ್ರಶ್ನಿಸಿದ್ದಾರೆ.

ಮತ್ತೆ ಮತ್ತೆ ನಾನು ಹೇಳುತ್ತೇನೆ, ವಿದ್ಯುತ್ ಕೃತಕ ಅಭಾವ ಸೃಷ್ಟಿ ನಿಮ್ಮದೇ ಷಡ್ಯಂತ್ರ. ಅದು ಉಲ್ಬಣಿಸಿದಷ್ಟೂ ನಿಮಗೆ ಕಲೆಕ್ಷನ್‌ ಹೆಚ್ಚು. ಖಾಸಗಿ ಕಂಪನಿಗಳಿಂದ ಖರೀದಿಸಿ ಕೈ ತುಂಬಾ ಕಮೀಷನ್ ಎತ್ತಲು ಹೊರಟಿದ್ದೀರಿ. ಇಲ್ಲ ಎಂದಾದರೆ ವಿದ್ಯುತ್‌ ಕ್ಷಾಮದ ವಾಸ್ತವತೆ ಬಗ್ಗೆ ‘ಶ್ವೇತಪತ್ರ’ ಹೊರಡಿಸಿ. ಈ ಬಗ್ಗೆ ನಿಮ್ಮ ಮೌನ ಏಕೆ? ಬೆಂಗಳೂರು ನಗದು ಅಭಿವೃದ್ಧಿ ಇಲಾಖೆ ನಂತರ ಇಂ’ಧನ’ ಇಲಾಖೆಯಲ್ಲೂ ನೀವು ನಗದೀಕರಣಕ್ಕೆ ನಾಂದಿ ಹಾಡಿದ್ದೀರಿ. ಖರೀದಿ ಖುಷಿಯಲ್ಲಿ ಪರ್ಸಂಟೇಜ್ ಪಟಾಲಂ ಸಂಭ್ರಮಿಸುತ್ತಿದೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next