Advertisement

ಅಧಿವೇಶನದ ವೇಳೆ ಕಡೆ ಆಪರೇಷನ್‌?

12:30 AM Jan 27, 2019 | |

ಬೆಂಗಳೂರು: ಫೆಬ್ರವರಿಯಲ್ಲಿ ನಿಗದಿಯಾಗಿರುವ ವಿಧಾನಮಂಡಲ ಜಂಟಿ ಅಧಿವೇಶನ ಸಂದರ್ಭದಲ್ಲಿ ಆಪರೇಷನ್‌ ಕಮಲ ಕಾರ್ಯಾಚರಣೆಯ ಫೈನಲ್‌ ಪ್ರಯತ್ನ ನಡೆಯಲಿದೆಯೇ?

Advertisement

ಬಿಜೆಪಿ ಆಪರೇಷನ್‌ ಕಮಲ ಕಾರ್ಯಾಚರಣೆ ಮುಂದುವರಿಸಿದೆ ಎಂಬ ಸಿಎಂ ಎಚ್.ಡಿ.ಕುಮಾರಸ್ವಾಮಿ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಹೇಳಿಕೆ ಗಮನಿಸಿದರೆ ಇಂಥ ದ್ದೊಂದು ಅನುಮಾನ ಕಾಡುತ್ತಿದೆ.

ಬಿಜೆಪಿ ವಲಯದಲ್ಲೂ ಲೋಕಸಭೆ ಚುನಾವಣೆಗೆ ಮುನ್ನ ವಿಧಾನಮಂಡಲದ ಜಂಟಿ ಅಧಿವೇಶನ ಹಾಗೂ ಬಜೆಟ್ ಅಧಿವೇಶನ ಸಂದರ್ಭದಲ್ಲಿ ಚಾನ್ಸ್‌ ಸಿಗಬಹುದು ಎಂಬ ಆಶಾ ಭಾವನೆ ಇದೆ. ಮೇಲ್ನೋಟಕ್ಕೆ ನಾವು ಬರಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಸರ್ಕಾರದ ವೈಫ‌ಲ್ಯ ಎತ್ತಿ ತೋರುತ್ತೇವೆ. ಸಮರ್ಥ ಪ್ರತಿಪಕ್ಷವಾಗಿ ಕೆಲಸ ಮಾಡುತ್ತೇವೆ ಎಂದು ಹೇಳುತ್ತಿದ್ದರೂ ಒಳಗಿನ ಆಸೆ ಇನ್ನೂ ಕೈಬಿಟ್ಟಿಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ.

ಆಪರೇಷನ್‌ ಕಮಲದ ಮೂಲಕ ಸರ್ಕಾರ ಅಸ್ಥಿರಗೊಳಿಸಲು ಬಿಜೆಪಿ ಯತ್ನಿಸುತ್ತಿದೆ ಎಂದು ಕಾಂಗ್ರೆಸ್‌-ಜೆಡಿಎಸ್‌ ಸಾರ್ವ ಜನಿಕ ವಲಯದಲ್ಲಿ ಆಕ್ರೋಶವುಂಟಾಗುವಂತೆ ಕಾರ್ಯತಂತ್ರ ಹೆಣೆದಿರುವ ಸಾಧ್ಯತೆ ಇರುವುದರಿಂದ ಕಮಲ ಪಕ್ಷದ ನಾಯಕರು ಸುಮ್ಮನಿದ್ದು, ಬರಪೀಡಿತ ಪ್ರದೇಶಗಳಿಗೆ ಭೇಟಿ ನೀಡುತ್ತಿದ್ದಾರೆ.

ಲೋಕಸಭೆ ಚುನಾವಣೆಗೆ ಕಾಂಗ್ರೆಸ್‌-ಜೆಡಿಎಸ್‌ ಜತೆಗೂಡಿ ಸ್ಪರ್ಧೆ ಮಾಡಿದರೆ ಒಕ್ಕೂಟಕ್ಕೆ ಹೆಚ್ಚು ಸ್ಥಾನ ಸಿಗುವ ಆತಂಕ ಕೇಂದ್ರ ನಾಯಕರಿಗಿದ್ದು, ಸರ್ಕಾರ ಪತನವಾದರೆ ಲಾಭ ಹೆಚ್ಚು ಎಂಬ ಲೆಕ್ಕಾಚಾರ ಬಿಜೆಪಿಗಿದೆ.

Advertisement

ಈಗಾಗಲೇ ಬಿಜೆಪಿಗೆ ಕಮಿಟ್ ಆಗಿರುವ ಶಾಸಕರಲ್ಲಿ 6 ಮಂದಿ ಅಧಿವೇಶನ ಸಂದರ್ಭದಲ್ಲಿ ರಾಜೀನಾಮೆ ನೀಡುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ಹಾಗೇನಾದರೂ ಆದರೆ ಸಮ್ಮಿಶ್ರ ಸರ್ಕಾರದ ಸಂಖ್ಯಾಬಲ 112 ಕ್ಕೆ ಇಳಿಯಲಿದ್ದು, ಸರ್ಕಾರಕ್ಕೆ ಬಹುಮತ ಇಲ್ಲ ಎಂದು ಹೇಳಿ ವಿಶ್ವಾಸಮತ ಯಾಚನೆಗೆ ಬಿಜೆಪಿ ಒತ್ತಡ ಹೇರಬಹುದು. ಆಗ ಕೆಲವರು ಕ್ರಾಸ್‌ಓಟಿಂಗ್‌ ಸಹ ಮಾಡಬಹುದು. ಶಾಸಕರ ರಾಜೀನಾಮೆ ಸ್ಪೀಕರ್‌ ಅಂಗೀ ಕರಿಸದಿದ್ದರೆ ರಾಜ್ಯಪಾಲರ ಮಧ್ಯಪ್ರವೇಶಕ್ಕೆ ಒತ್ತಡ ಹೇರ ಬಹುದು. ಇದೇ ಕಾರಣಕ್ಕೆ ಕಾಂಗ್ರೆಸ್‌ ಶಾಸಕರನ್ನು ಬಿಜೆಪಿ ಈಗಲೂ ಸಂಪರ್ಕಿಸುತ್ತಿದೆ ಎಂದು ಹೇಳಲಾಗುತ್ತಿದೆ.

ಈ ಮಧ್ಯೆ, ಆನಂದ್‌ಸಿಂಗ್‌ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿರುವ ಕಂಪ್ಲಿ ಶಾಸಕ ಗಣೇಶ್‌ ಸಹ ರಮೇಶ್‌ ಜಾರಕಿಹೊಳಿ ಹಾಗೂ ನಾಗೇಂದ್ರ ಸಂಪರ್ಕದಲ್ಲಿದ್ದಾರೆ. ಕಾಂಗ್ರೆಸ್‌ನಿಂದ ಅಮಾನುತುಗೊಂಡಿರುವ ಗಣೇಶ್‌, ತಮ್ಮ ಅಮಾನತು ವಾಪಸ್‌ ಪಡೆಯದಿದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಬಹುದು ಎನ್ನಲಾಗಿದೆ.

ಕೈ-ದಳ ಮಾಸ್ಟರ್‌ಪ್ಲ್ರಾನ್‌
ಬಿಜೆಪಿಯ ಕಾರ್ಯತಂತ್ರದ ಸುಳಿವು ಅರಿತಿರುವ ಕಾಂಗ್ರೆಸ್‌, ಜೆಡಿಎಸ್‌ ಪ್ರತ್ಯಸ್ತ್ರ ಸಿದ್ಧಮಾಡಿಟ್ಟುಕೊಂಡಿವೆ. ಬಿಜೆಪಿ ಮತ್ತೆ ಆಪರೇಷನ್‌ಗೆ ಕೈ ಹಾಕಿದರೆ ನಾಲ್ವರು ಬಿಜೆಪಿ ಶಾಸಕರಿಂದ ರಾಜೀನಾಮೆ ಕೊಡಿಸಿ ತಮ್ಮತ್ತ ಸೆಳೆದು ಇಬ್ಬರಿಗೆ ಸಚಿವ ಸ್ಥಾನ ಸಹ ನೀಡಲು ಮಾಸ್ಟರ್‌ಪ್ಲ್ರಾನ್‌ ರೂಪಿಸಲಾಗಿದೆ. ಇತ್ತೀಚೆಗೆ ನಡೆದ ಸಮನ್ವಯ ಸಮಿತಿ ಸಭೆಯಲ್ಲೂ ಒಂದೊಮ್ಮೆ ಬಿಜೆಪಿ ಮತ್ತೆ ಆಪರೇಷನ್‌ ಕಮಲಕ್ಕೆ ಕೈ ಹಾಕಿದರೆ ನಾವು ಸುಮ್ಮನೆ ಕೂರುವುದು ಬೇಡ. ಬಿಜೆಪಿ ಕಡೆಯಿಂದ ಕನಿಷ್ಠ ನಾಲ್ಕೈದು ಶಾಸಕರನ್ನು ಸೆಳೆದರೆ ಹೆದರಿ ಸುಮ್ಮನಾಗುತ್ತಾರೆ. ಕಾಂಗ್ರೆಸ್‌ ಹಾಗೂ ಜೆಡಿಎಸ್‌ ನಾಯಕರ ಜತೆ ವಿಶ್ವಾಸದಿಂದ ಇರುವ ಹಾಗೂ ಈ ಹಿಂದೆ ಕಾಂಗ್ರೆಸ್‌-ಜೆಡಿಎಸ್‌ನಲ್ಲಿದ್ದು ಇದೀಗ ಬಿಜೆಪಿಯಲ್ಲಿರುವವರನ್ನು ಸೆಳೆಯಲು ಪ್ರಯತ್ನಿಸಿ ಎಂದು ಎಐಸಿಸಿ ರಾಜ್ಯ ಉಸ್ತುವಾರಿ ಕೆ.ಸಿ.ವೇಣುಗೋಪಾಲ್‌ ಸಹ ಗ್ರೀನ್‌ ಸಿಗ್ನಲ್‌ ನೀಡಿದ್ದಾರೆ ಎಂದು ಹೇಳಲಾಗಿದೆ.

ಆಪರೇಷನ್‌ ಸತ್ಯ: ಸಿದ್ದು
ಬಿಜೆಪಿಯವರು ಆಪರೇಷನ್‌ ಕಮಲ ಕಾರ್ಯಾಚರಣೆ ಈಗಲೂ ಮಾಡುತ್ತಿರುವುದು ನಿಜ. ಮುಖ್ಯಮಂತ್ರಿ ಎಚ್. ಡಿ.ಕುಮಾರಸ್ವಾಮಿ ಹೇಳಿರುವುದು ಸತ್ಯ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿ ಆಯೋಜಿಸಿದ್ದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡ ನಂತರ ಸುದ್ದಿಗಾರರ ಜತೆ ಮಾತನಾಡಿದ ಅವರು, ಬಿಜೆಪಿಯವರು ಪ್ರಯತ್ನಿಸುತ್ತಿದ್ದಾರೆ. ಆದರೆ, ಅದು ಫ‌ಲ ಕೊಡುವುದಿಲ್ಲ ಎಂದು ಹೇಳಿದರು. ಆಪರೇಷನ್‌ ಕಮಲವೂ ಆಗಲ್ಲ, ಏನೂ ಆಗಲ್ಲ. ಅವರ ಎಲ್ಲ ಪ್ರಯತ್ನ ವಿಫ‌ಲವಾಗಿದೆ. ಬಿಜೆಪಿಯವರು ಸಾಕಷ್ಟು ದುಡ್ಡು ಮಾಡಿಕೊಂಡಿದ್ದಾರೆ. ಅದನ್ನು ಇಟ್ಟುಕೊಂಡು ನಮ್ಮ ಶಾಸಕರನ್ನು ಬನ್ನಿ ಬನ್ನಿ ಎಂದು ಕರೆಯುತ್ತಿದ್ದಾರೆ. ಈಗಲೂ ನಮ್ಮ ಶಾಸಕರಿಗೆ ಕರೆ ಮಾಡಿ ಕರೆಯುತ್ತಿದ್ದಾರೆ ಎಂದರು.

– ಎಸ್‌. ಲಕ್ಷ್ಮಿನಾರಾಯಣ

Advertisement

Udayavani is now on Telegram. Click here to join our channel and stay updated with the latest news.

Next