Advertisement

“ಮಿತ್ರ’ರೊಂದಿಗೆ ಚರ್ಚಿಸಿ ರೈತರ ಸಾಲಮನ್ನಾ ನಿರ್ಧಾರ

06:00 AM May 23, 2018 | Team Udayavani |

ಚಿಕ್ಕಮಗಳೂರು: ಅಧಿಕಾರಕ್ಕೆ ಬಂದ 24 ಗಂಟೆಗಳಲ್ಲಿ ರೈತರ ಸಂಪೂರ್ಣ ಸಾಲಮನ್ನಾ ಮಾಡುವುದಾಗಿ ಭರವಸೆ ನೀಡಿದ್ದ ನಿಯೋಜಿತ ಸಿಎಂ ಎಚ್‌.ಡಿ. ಕುಮಾರಸ್ವಾಮಿ ಈಗ ವರಸೆ ಬದಲಿಸಿದ್ದಾರೆ. ರಾಜ್ಯದ ಜನತೆ ನನಗೆ ಅಧಿಕಾರ ಕೊಟ್ಟಿಲ್ಲ. ಸಮ್ಮಿಶ್ರ ಸರ್ಕಾರ ರಚನೆಯಾಗಿದೆ. ಹೀಗಾಗಿ, ಮಿತ್ರ ಪಕ್ಷಗಳೊಂದಿಗೆ ಚರ್ಚಿಸಿ ನಿರ್ಧಾರ ಕೈಗೊಳ್ಳುವುದಾಗಿ ತಿಳಿಸಿದ್ದಾರೆ. ಇದಕ್ಕೆ ಖಾರವಾಗಿ ಪ್ರತಿಕ್ರಿಯಿಸಿರುವ ಬಿಜೆಪಿ ನಾಯಕರು, ಎಚ್‌ಡಿಕೆ ಪಲಾಯನವಾದ ಅನುಸರಿಸುತ್ತಿದ್ದು, ರೈತರಿಗೆ ಅನ್ಯಾಯ ಮಾಡುತ್ತಿದ್ದಾರೆ ಎಂದು ಹರಿಹಾಯ್ದಿದ್ದಾರೆ.

Advertisement

ಮಂಗಳವಾರ ಶೃಂಗೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಪಕ್ಷಕ್ಕೆ ಸಂಪೂರ್ಣ ಬಹುಮತ ನೀಡಿದ್ದರೆ 24 ಗಂಟೆಯೊಳಗಾಗಿ ರೈತರ ಸಾಲವನ್ನು ಸಂಪೂರ್ಣವಾಗಿ ಮನ್ನಾ ಮಾಡುತ್ತಿದ್ದೆ. ಆದರೆ, ಈಗ ಸಮ್ಮಿಶ್ರ ಸರ್ಕಾರ ರಚನೆ ಯಾಗುತ್ತಿರುವುದರಿಂದ ತಾವೊಬ್ಬರೇ ತೀರ್ಮಾನ ಕೈಗೊಳ್ಳಲು ಸಾಧ್ಯವಿಲ್ಲ. ಸಂಪೂರ್ಣ ಬಹುಮತ ನೀಡುವಂತೆ ರಾಜ್ಯದ ಜನತೆಯಲ್ಲಿ ಪರಿಪರಿಯಾಗಿ ಬೇಡಿಕೊಂಡಿದ್ದೆ. ಆದರೆ, ನಮ್ಮ ಮಾತಿಗೆ ಮನ್ನಣೆ ನೀಡಿಲ್ಲ. ಮತದಾರರು ನೀಡಿರುವ ತೀರ್ಪನ್ನು ನೋಡಿದರೆ ಅವರಿಗೆ ರೈತರ ಸಾಲಮನ್ನಾ ಮಾಡುವುದು ಬೇಕಿರಲಿಲ್ಲ ಎನಿಸುತ್ತದೆ. ಈ ಬಗ್ಗೆ ಹಲವರು ಟೀಕೆ ಮಾಡುತ್ತಿದ್ದಾರೆ. ಆದರೂ ರೈತರು ನೆಮ್ಮದಿಯಿಂದ ಇರಬೇಕೆಂಬುದು ನಮ್ಮ ಬಯಕೆ. ನಾವು ನೀಡಿರುವ ಭರವಸೆ ಹಾಗೂ ಕಾಂಗ್ರೆಸ್‌ನವರು ನೀಡಿರುವ ಭರವಸೆಯ ಬಗ್ಗೆ ಕುಳಿತು ಚರ್ಚಿಸಿ ಅವುಗಳ ಅನುಷ್ಠಾ ನಕ್ಕೆ ಪ್ರಯತ್ನಿಸುವುದಾಗಿ ಹೇಳಿದರು.

ಚುನಾವಣೆಯಲ್ಲಿ ಕೇವಲ 38 ಕ್ಷೇತ್ರಗಳಲ್ಲಿ ಮಾತ್ರ ಮತದಾರರು ಜೆಡಿಎಸ್‌ ಪಕ್ಷವನ್ನು ಕೈ ಹಿಡಿದಿದ್ದಾರೆ. ಮೈತ್ರಿ ಸರ್ಕಾರವಿ ದ್ದಾಗ ಜೆಡಿಎಸ್‌ ಪ್ರಣಾಳಿಕೆಯನ್ನು ಯಥಾವತ್‌ ಜಾರಿಗೊಳಿಸಲು ಸಾಧ್ಯವಿಲ್ಲ. ಯಾವುದೇ ಘೋಷಣೆ, ಯೋಜನೆಗಳ ಜಾರಿ ಬಗ್ಗೆ ಎರಡೂ ಪಕ್ಷಗಳೂ ಹೊಂದಾಣಿಕೆಯಿಂದ ಪರಸ್ಪರ ಚರ್ಚೆ ನಡೆಸಿ ಮುಂದುವರಿಯಬೇಕಿದೆ ಎಂದರು.

ಎಚ್ಡಿಕೆಯದು ಪಲಾಯನವಾದ: ಶೆಟ್ಟರ್‌ 
ಈ ಕುರಿತು ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್‌, ಅಧಿಕಾರಕ್ಕೆ ಬಂದರೆ ರೈತರ ಸಾಲ ಮನ್ನಾ
ಮಾಡುವುದಾಗಿ ಚುನಾವಣೆಗೆ ಪೂರ್ವದಲ್ಲಿ ಕುಮಾರಸ್ವಾಮಿ ಭರವಸೆ ನೀಡಿದ್ದರು. ಆದರೆ, ಈಗ ನಮ್ಮ ಪಕ್ಷಕ್ಕೆ ಬಹುಮತ ಬಂದಿಲ್ಲ ಎನ್ನುವ ಮೂಲಕ ರಾಜ್ಯದ ರೈತರಿಗೆ ವಂಚಿಸಿದ್ದಾರೆ. ಕುಮಾರಸ್ವಾಮಿ ಪಲಾಯನವಾದ ಅನುಸರಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಇದೇ ವೇಳೆ, ಶಿವಮೊಗ್ಗದಲ್ಲಿ ಮಾತನಾಡಿದ ಶಾಸಕ ಕೆ.ಎಸ್‌.ಈಶ್ವರಪ್ಪ, ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವುದಕ್ಕೂ ಮೊದಲೇ ಕುಮಾರಸ್ವಾಮಿಯವರು ರಾಜ್ಯದ ರೈತರ ಸಾಲಮನ್ನಾ ಮಾಡಲು ಸಾಧ್ಯವಿಲ್ಲ ಎಂದು ಹೇಳಿಕೆ ನೀಡಿರುವುದು ರೈತರಿಗೆ ಮಾಡಿದ ದೊಡ್ಡ ದ್ರೋಹ ಎಂದು ಟೀಕಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next