Advertisement

ಜಾತಿಗಣತಿ ಮಾಡಿ ಏನು ಪುರುಷಾರ್ಥ ಸಾಧನೆ ಮಾಡುತ್ತಾರೆ?: ಎಚ್ ಡಿಕೆ

04:30 PM Oct 08, 2023 | Team Udayavani |

ರಾಮನಗರ: ಜಾತ್ಯಾತೀತ ಪದ ತೆಗೆದುಹಾಕಿ ಎಂದು ಹೇಳುತ್ತಾರೆ. ಜಾತ್ಯಾತೀತ ಅಂದರೆ ಜಾತಿಯ ವ್ಯವಸ್ಥೆ ತೆಗೆದುಹಾಕಬೇಕೆಂದು ಅಲ್ವಾ? ಜಾತಿಯ ಆಧಾರದಲ್ಲಿ ಮಾಡಬಾರದೆಂದು ಅಲ್ವ. ಇವರು ಜಾತಿಗಣತಿ ಮಾಡಿ ಏನು ಪುರುಷಾರ್ಥ ಸಾಧನೆ ಮಾಡುತ್ತಾರೆ? ಇದರ ಉಪಯೋಗ ಏನು? ಸಮಾಜ ಒಡೆಯಲು ಮಾಡುತ್ತಿದ್ದಾರೆ. ಸಮಾಜದಲ್ಲಿ ವಿಶ್ವಾಸಕ್ಕೆ ಧಕ್ಕೆ ತರಲು ಮಾಡುತ್ತಿದ್ದಾರೆ ಎಂದು ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ.

Advertisement

ಬಿಡದಿಯ ತೋಟದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂತರಾಜು ವರದಿ ಕೊಡಿಸಿದ್ವಿ ಕುಮಾರಸ್ವಾಮಿ ಒಪ್ಪಿಲ್ಲ ಎಂದು ಹೇಳುತ್ತಾರೆ. ಕಾಂತರಾಜು ವರದಿಯನ್ನು ಸದಸ್ಯ ಕಾರ್ಯದರ್ಶಿ ಸಹಿಯಾಗದೆ ನಾನು ಹೇಗೆ ವರದಿ ಒಪ್ಪಲಿ. ಸಮನ್ವಯ ಸಮಿತಿಯ ಅಧ್ಯಕ್ಷರು ಟವಲ್ ಕೊಡವಿ ಹೋಗುತ್ತಿದ್ದರು, ಯಾವತ್ತಾದರೂ ಈ ಬಗ್ಗೆ ಮಾತಾಡಿದ್ದರಾ? ಜಾತಿಗಣತಿ ಮುಖ್ಯವಲ್ಲ, ಎಲ್ಲ ಜಾತಿಯಲ್ಲಿರುವ ಬಡವರಿಗೆ ಅನುಕೂಲ ಮಾಡಿಕೊಡಬೇಕು ಎಂದು ಹೇಳಿದರು.

ಶಾಮನೂರು ಶಿವಶಂಕರಪ್ಪನವರು ತಮ್ಮ ಅಭಿಪ್ರಾಯ ಧೈರ್ಯವಾಗಿ ಹೇಳಿದ್ದಾರೆ. ಇಲ್ಲಿ ಸಂಖ್ಯೆಗಿಂತ ಇಲಾಖೆಯಲ್ಲಿ ಯಾವ್ಯಾವ ಅಧಿಕಾರಿಗೆ ಗೌರವ ಕೊಟ್ಟಿದ್ದಾರೆ ಎಂಬುದು ಮುಖ್ಯ. ಕೆಲಸಕ್ಕೆ ಬಾರದ ಜಾಗ ಕೊಟ್ಟು, ಇಂತಹ ಸಮುದಾಯಕ್ಕೆ ಇಷ್ಟು ಸಂಖ್ಯೆ ಕೊಟ್ಟಿದ್ದೇನೆಂದರೆ ಅದರಿಂದ ಏನು ಉಪಯೋಗ. ಅವರು ಧೈರ್ಯವಾಗಿ ಹೇಳಿದ್ದಾರೆ. ಹಲವಾರು ಸಮುದಾಯಗಳಿಗೂ ಪರಿಸ್ಥಿತಿ ಏನಾಗಿದೆ ಎಂದು ಗೊತ್ತಿದೆ. ಮಾನದಂಡ ಏನಿದೆ ಎಂದು ಗೊತ್ತಿದೆ. ನೌಕರರ ವರ್ಗದವರಲ್ಲಿ ಅಸಮಧಾನವಿದೆ. ಇದು ಚುನಾವಣೆಯ ಸಂಧರ್ಭದಲ್ಲಿ ಸ್ಫೋಟಗೊಳ್ಳಲಿದೆ ಎಂದು ಎಚ್ ಡಿಕೆ ಅವರು ಶಾಮನೂರು ಹೇಳಿಕೆಯನ್ನು ಸಮರ್ಥಿಸಿದರು.

ಇವತ್ತಿನ ಸಭೆ ರಾಮನಗರ ಜಿಲ್ಲೆಯ ಕಾರ್ಯಕರ್ತರ ಸಭೆ ಮಾಡಿದ್ದೇವೆ. ಕಾರ್ಯಕರ್ತರಲ್ಲಿ ಉತ್ಸಾಹ ತುಂಬಿದ್ದೇವೆ. ಲೋಕಸಭೆ ಚುನಾವಣೆಯಲ್ಲಿ ಮೈತ್ರಿ ಹಿನ್ನೆಲೆ 28 ಕ್ಕೆ 28 ಸ್ಥಾನ ಗೆಲ್ಲಬೇಕಿದೆ. ಆ ನಿಟ್ಟಿನಲ್ಲಿ ನಮ್ಮ ಹೋರಾಟ ನಡೆಯಬೇಕಿದೆ. ಎರಡು ಪಕ್ಷಗಳು ಉತ್ತಮ ಬಾಂಧವ್ಯದಿಂದ ಈ ಚುನಾವಣೆಗೆ ಸಂಘಟನೆ ಮಾಡಲು ನಿರ್ಧಾರ ಮಾಡಿದ್ದೇವೆ ಎಂದರು.

ಪಟಾಕಿ ಮಳಿಗೆಯ ದುರಂತ ನಡೆದಿರುವುದು ದುರದೃಷ್ಟಕರ. ಈ ರೀತಿಯ ಪ್ರಕರಣ ಮರುಕಳಿಸದಂತೆ ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ದೀಪಾವಳಿಯ ಬರ್ತಿರುವುದರಿಂದ ಸರ್ಕಾರ ಮುಂಜಾಗೃತಾ ಕ್ರಮ ಕೈಗೊಳ್ಳಬೇಕು. ಅಂಗಡಿಯವರಿಗೆ ಸೂಚನೆ ಕೊಡಬೇಕು. ಸರ್ಕಾರದ ವತಿಯಿಂದ ನೆರವನ್ನು ಕೊಡಬೇಕು. ಯಾರೇ ತಪ್ಪಿತಸ್ಥರಿದ್ದರು. ಕಠಿಣ ತೀರ್ಮಾನ ಕೈಗೊಳ್ಳಬೇಕು. ಅಮಾಯಕರ ಸಾವು ನೋವು ಆಗಬಾರದು. ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು. ಪಟಾಕಿಗಳ ದಾಸ್ತಾನು, ತಯಾರು ಮಾಡುವ ಪ್ರದೇಶ ಜನನಿಬಿಡ ಪ್ರದೇಶದಿಂದ ದೂರ ಇರುವಂತೆ ನೋಡಿಕೊಳ್ಳಬೇಕು ಎಂದು ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next