ಚನ್ನಪಟ್ಟಣ: ಜೆಡಿಎಸ್ ಕೋರ್ ಕಮಿಟಿಯಲ್ಲಿ ಶಾಸಕ ಜಿ.ಟಿ ದೇವೇಗೌಡ ಅವರ ಹೆಸರು ಕೈಬಿಟ್ಟ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ, ಅವರಿಗೆ ಪಕ್ಷದ ಸಂಘಟನೆ ಬಗ್ಗೆ ಆಸಕ್ತಿಯಿಲ್ಲ. ಅವರೇ ಹೇಳಿದ್ದಾರೆ, ನನಗೆ ವಯಸ್ಸಾಗಿದೆ, ನನಗೆ ನನ್ನ ಕ್ಷೇತ್ರ ಮುಖ್ಯ, ಸಂಘಟನೆಗೆ ಸಮಯ ಕೊಡಲು ಆಗಲ್ಲ ಎಂದಿದ್ದಾರೆ. ಹಾಗಾಗಿ ಪಕ್ಷ
ಕಟ್ಟುವವರಿಗೆ ಅವಕಾಶ ನೀಡಲಾಗಿದೆ ಕೇವಲ ವಿಸಿಟಿಂಗ್ ಕಾರ್ಡ್‌ಗಾಗಿ ಅವಕಾಶ ಕೊಡಬೇಕಿತ್ತಾ ಎಂದು ಪ್ರಶ್ನಿಸಿದರು.
ಇಲ್ಲಿ ವಯಸ್ಸಿನ ವಿಚಾರ ಬರಲ್ಲ, ಹೊರಟ್ಟಿಯವರಿಗೂ ವಯಸ್ಸಾಗಿದೆ, ಆದರೂ ಅವರು ಪಕ್ಷ ಸಂಘಟನೆಗೆ ತಮ್ಮದೇ ಕೊಡುಗೆ ನೀಡುತ್ತಿದ್ದಾರೆ. ಜೆಪಿ ಭವನದಲ್ಲಿ ಬಂದು ಎಚ್.ಡಿ.ದೇವೇಗೌಡರ ಜತೆ ಚರ್ಚೆ ಮಾಡಲಿ. ಎಲ್ಲೋ ಹೇಳಿಕೆ ನೀಡಿ ಹೋಗುವುದು ಬೇಡ, ಎಚ್.ಡಿ.ದೇವೇಗೌಡರ ಮನೆ ದಿನದ 24 ಗಂಟೆಯೂ ತೆರೆದಿರುತ್ತದೆ ಮಾತನಾಡಲಿ. ಅದರ ಬದಲು ಮಾಧ್ಯಮಗಳ ಮೂಲಕ ನನಗೆ ಸಂದೇಶ ಕೊಡುವುದನ್ನು ಅವರು ಬಿಡಲಿ ಎಂದು ತಿರುಗೇಟು ನೀಡಿದರು.
ಇದನ್ನೂ ಓದಿ:ಜಲಾಶಯದಲ್ಲಿ ಮೀನಿನ ಬಲೆಗೆ ಸಿಲುಕಿ ನರಳಾಡುತ್ತಿದ್ದ ಕಾಡಾನೆ ರಕ್ಷಣೆ
ಕಮಿಟಿಯಲ್ಲಿ ಕೆಲಸ ಮಾಡುವವರಿಗೆ ಅವಕಾಶ ಕೊಡಲಾಗಿದೆ. ಮುಂದಿನ ಚುನಾವಣೆ ಬಂದಾಗ ಯಾರ್ಯಾರು ಎಲ್ಲಿರುತ್ತಾರೋ ಗೊತ್ತಿಲ್ಲ. ಇವತ್ತು ಪಕ್ಷ ನಿಷ್ಠೆಗಿಂತಲೂ ಅವರ ಸ್ಥಾನಮಾನಗಳೇ ಮುಖ್ಯವಾಗಿದೆ. ಕಾರ್ಯಕರ್ತರ ಶ್ರಮ, ಕಷ್ಟ-ಸುಖದ ಬಗ್ಗೆ ಯಾರಿಗೂ ಅರಿವಿಲ್ಲ. ನಾವು ಕಾರ್ಯಕರ್ತರನ್ನು ನಂಬಿ ರಾಜಕಾರಣ ಮಾಡುತ್ತೇವೆ ಎಂದು ಹೇಳಿದರು.