ಚನ್ನಪಟ್ಟಣ: ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ಈ ಬಾರಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ರಾಜಕೀಯವಾಗಿ ಪರ- ವಿರೋಧದ ನಡುವೆಯೂ ರಾಜಕೀಯ ಎದುರಾಳಿ ಎಂಎಲ್ಸಿ ಯೋಗೇಶ್ವರ್ ವಿರುದ್ಧ ಹದಿನಾರು ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಸತತ ಎರಡನೇ ಬಾರಿಗೆ ಆಯ್ಕೆಯಾಗಿದ್ದಾರೆ.
ವಿರೋಧಿಗಳ ಅಪ ಪ್ರಚಾರ ಹಾಗೂ ಸ್ವಪಕ್ಷೀಯರ ಪಕ್ಷಾಂತರದ ನಡುವೆಯೂ ಕುಮಾರಸ್ವಾಮಿ ಅವರನ್ನು ಬೊಂಬೆನಾಡು ಚನ್ನಪಟ್ಟಣದ ಜನತೆ ಹಲವಾರು ನಿರೀಕ್ಷೆ ಇಟ್ಟುಕೊಂಡು ಈ ಬಾರಿಯೂ ಬಿಟ್ಟುಕೊಟ್ಟಿಲ್ಲ. ಈ ನಿಟ್ಟಿನಲ್ಲಿ ಕ್ಷೇತ್ರದ ಮತದಾರರ ನಿರೀಕ್ಷೆಯಂತೆ ಕ್ಷೇತ್ರದಲ್ಲಿ ಬೇರೂರಿರುವ ಹಲವಾರು ಜ್ವಲಂತ ಸಮಸ್ಯೆಗಳು ಸೇರಿದಂತೆ ತಾವು ಈ ಹಿಂದೆ 2018ರಿಂದ ಇಲ್ಲಿಯವರೆಗೆ ಶಾಸಕರಾಗಿದ್ದ ಅವಧಿಯಲ್ಲಿ ಕೈಗೊಂಡ ಕಾಮಗಾರಿಗಳಲ್ಲಿ ಕೆಲವು ಅರ್ಧದಲ್ಲೇ ಉಳಿದಿದ್ದು, ಅವುಗಳನ್ನು ಪೂರ್ಣಗೊಳಿಸುವ ಗುರುತರ ಜವಾಬ್ದಾರಿ ನೂತನ ಶಾಸಕರಾದ ಎಚ್.ಡಿ.ಕುಮಾರಸ್ವಾಮಿ ಅವರ ಮುಂದಿದೆ.
2018ರಲ್ಲಿ ಕ್ಷೇತ್ರದ ಶಾಸಕರಾಗಿ ಅಯ್ಕೆಯಾದ ಐದು ವರ್ಷಗಳಲ್ಲಿ ಕ್ಷೇತ್ರದ ಕಡೆ ಗಮನ ಹರಿಸಿಲ್ಲ ಎಂಬ ಆರೋಪದ ಜೊತೆಗೆ, ಮುಖ್ಯಮಂತ್ರಿಯಾದ ಅಲ್ಪ ಅವಧಿಯಲ್ಲಿ ಕ್ಷೇತ್ರಕ್ಕೆ ಹೆಚ್ಚು ಅನುದಾನ ನೀಡಿಲ್ಲ. ಅನಂತರದ ಅವಧಿಯಲ್ಲಿಯೂ ಕ್ಷೇತ್ರದ ಅಭಿವೃದ್ಧಿಗೆ ತಲೆ ಕೆಡಿಸಿಕೊಂಡಿಲ್ಲ ಎಂಬುದು ತಲೆಯಲ್ಲಿದ್ದರೂ ಮಾಜಿ ಮುಖ್ಯಮಂತ್ರಿ ಎಂಬ ಅಭಿಮಾನ ಹಾಗೂ ಮುಂದಿನ ದಿನಗಳಲ್ಲಿ ಅಭಿವೃದ್ಧಿ ಮಾಡಬಹುದು ಎಂಬ ಆಲೋಚನೆಯಿಂದ ಚನ್ನಪಟ್ಟಣದ ಜನತೆ ಕುಮಾರ ಸ್ವಾಮಿ ಅವರನ್ನು ಎರಡನೇ ಬಾರಿಗೆ ಶಾಸಕರನ್ನಾಗಿ ಚುನಾಯಿಸಿದ್ದಾರೆ ಎಂಬ ಮಾತು ಈಗಾಗಲೇ ಕ್ಷೇತ್ರದಲ್ಲಿ ಅವ್ಯಾಹತವಾಗಿ ಹರಿದಾಡುತ್ತಿದೆ.
ಕ್ಷೇತ್ರದಲ್ಲಿ ಕೆಲವರನ್ನು ಮಾತ್ರ ಬೆಳೆಸಿದ್ದಾರೆ. ಸಾಮಾನ್ಯ ಜನರ ಕಷ್ಟ-ಸುಖಗಳಿಗೆ ಸ್ಪಂದಿಸಿಲ್ಲ ಎಂಬ ಆರೋಪ ಕೂಡ ಕೇಳಿಬಂದಿತ್ತು. ಈಗ ಮತ್ತೆ ಕುಮಾರಸ್ವಾಮಿ ಕ್ಷೇತ್ರದ ಶಾಸಕರಾಗಿ ಆಯ್ಕೆಯಾಗಿದ್ದು, ಜನರ ನಿರೀಕ್ಷೆಗಳಿಗೆ ತಕ್ಕಂತೆ ಕಾರ್ಯನಿರ್ವಹಿಸುವ ಸವಾಲು ಎದುರಾಗಿದೆ.
Related Articles
ಈ ಹಿಂದಿನ ಅವಧಿಯಲ್ಲಿ ಕ್ಷೇತ್ರದ ಅಭಿವೃದ್ಧಿಗೆ 1,500 ಕೋಟಿ ಅನುದಾನ ತಂದು ಹಲವು ಕಾಮಗಾರಿ ಮಾಡಿದ್ದಾರೆ. ಕ್ಷೇತ್ರದಲ್ಲಿ ರಸ್ತೆಗಳ ಅಭಿವೃದ್ಧಿಗೆ ಒತ್ತು ನೀಡಿದ್ದಾರೆ. ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಕಟ್ಟಡ, ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜು ಹಾಗೂ ಬಾಲಕಿಯರ ಕಾಲೇಜು ಕಟ್ಟಡಗಳ ನಿರ್ಮಾಣ, ಅಕ್ಕೂರು ಹೊಸಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರ ಕಟ್ಟಡ, ಅಂಬೇಡ್ಕರ್ ಭವನಕ್ಕೆ ಅನುದಾನ ಹಾಗೂ ಉದ್ಘಾಟನೆ, ನಗರದಲ್ಲಿ ಮೂಲ ಸೌಕರ್ಯಕ್ಕೆ ಒತ್ತು, ಹಲವು ಕರಗಳಿಗೆ ನೀರು ಹರಿಸುವ ಯೋಜನೆ ಕೈಗೊಂಡಿದ್ದಾರೆ.
ತಾಲೂಕಿನಲ್ಲಿ ಕಳೆದ ಇಪ್ಪತ್ತು ವರ್ಷಗಳಲ್ಲಿ ಆಗದ ಅಭಿವೃದ್ಧಿ ಕೆಲಸ ಕೇವಲ ಐದು ವರ್ಷ ಗಳಲ್ಲಿ ಮಾಡಿದ್ದಾರೆ. ಎಂದು ತಾಲೂಕು ಜೆಡಿಎಸ್ ಹೇಳಿಕೊಂಡರೂ ವಿರೋಧ ಪಕ್ಷಗಳು ಮಾತ್ರ ಕುಮಾರಸ್ವಾಮಿ ಅಭಿವೃದ್ಧಿ ಬಗ್ಗೆ ಪ್ರಶ್ನೆ ಮಾಡುತ್ತಲೇ ಬಂದಿವೆ.
ತಾಲೂಕಿನಲ್ಲಿ ಹಲವು ಸಮಸ್ಯೆಗಳು ತಾಂಡವಾಡು- ತಿದ್ದು ಅವುಗಳನ್ನು ಬಗೆಹರಿಸಲು ಮುಂದಾಗಬೇಕು. ಸರ್ಕಾರಿ ಕಚೇರಿಗಳಲ್ಲಿ ನಡೆಯುತ್ತಿರುವ ಅವ್ಯವಹಾರ ತಡೆಯಬೇಕು. ಅಧಿಕಾರಿಗಳ ದೌರ್ಜನ್ಯಕ್ಕೆ ಕಡಿವಾಣ ಹಾಕಬೇಕು ಎಂದು ಸಾಮಾನ್ಯರು ಒತ್ತಾಯಿಸುತ್ತಾರೆ. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ಅಲೆ ನಡುವೆಯೂ ಕ್ಷೇತ್ರದ ಮತದಾರರು ಕುಮಾರಸ್ವಾಮಿ ಅವರ ಮೇಲೆ ನಂಬಿಕೆ ಇಟ್ಟು ಗೆಲ್ಲಿಸಿದ್ದಾರೆ. ನೂತನ ಕಾಂಗ್ರೆಸ್ ಸರ್ಕಾರದ ಮೇಲೆ ಒತ್ತಡ ತಂದು ಮತದಾರರ ನಿರೀಕ್ಷೆ ಸುಳ್ಳಾಗದಂತೆ ಕ್ಷೇತ್ರದ ಅಭಿವೃದ್ಧಿಯಲ್ಲಿ ಭಾಗಿಯಾಗ ಬೇಕಿರುವುದು ಕುಮಾರ ಸ್ವಾಮಿ ಅವರ ಜವಾಬ್ದಾರಿ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿ ಮಾಡಲಿ ಎನ್ನುವುದು ಕ್ಷೇತ್ರದ ಜನರ ಆಶೋತ್ತರವಾಗಿದೆ.
ಎಚ್ಡಿಕೆ ಮೇಲಿರುವ ನಿರೀಕ್ಷೆಗಳೇನು?: ತಾಲೂಕಿನ ಜ್ವ ಲಂತ ಸಮಸ್ಯೆಗಳು ತಾಲೂಕಿನಲ್ಲಿ ಖಾಸಗಿ ಬಸ್ ನಿಲ್ದಾಣ ಕಾಮ ಗಾರಿ ಕಳೆದ ಹಲವು ವರ್ಷಗಳಿಂದ ನನೆಗುದಿಗೆ ಬಿದ್ದಿದೆ. ನಗರದ ಒಳಚರಂಡಿ ಕಾಮಗಾರಿ ನಿಂತು ಹಲವು ವರ್ಷಗಳಾಗಿವೆ. ಎಲೆಕೇರಿ ಬಳಿಯ ರೈಲ್ವೆ ಮೇಲೇತುವೆ ಕಾಮಗಾರಿ ಮುಂದುವರಿ ಯುತ್ತಲೇ ಇಲ್ಲ. ನಗರದಲ್ಲಿ ಕಸದ ಸಮಸ್ಯೆ ತಾಂಡ ವಾಡುತ್ತಿದ್ದು, ಇದಕ್ಕೆ ಮುಕ್ತಿ ನೀಡಿಲ್ಲ. ಅರೆಬರೆಯಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಭವನ ಉದ್ಘಾಟಿಸಿದರೂ ಅಧಿಕಾರಗಳ ಸಭೆ ನಡೆಸಲಿಲ್ಲ. ಸಾಮಾನ್ಯ ಜನರ ಕಷ್ಟ ಕೇಳಿಲ್ಲ ಎಂಬ ಆರೋಪ ವಿದೆ. ಕಳೆದ ಐದು ವರ್ಷಗಳ ಆಡಳಿತ ಅದೇನೇ ಇರಲಿ, ಈಗ ಕ್ಷೇತ್ರದ ಅಭಿವೃದ್ಧಿಯತ್ತ ಗಮನ ನೀಡಬೇಕು ಎಂಬುದು ಮತದಾರ ಪ್ರಭುಗಳ ಬಯಕೆಯಾಗಿದೆ.
-ಎಂ.ಶಿವಮಾದು