Advertisement

ಎಚ್‌.ಡಿ. ಕುಮಾರಸ್ವಾಮಿ ಈಗ ಸಿ.ಡಿ ಕುಮಾರಸ್ವಾಮಿ

10:05 AM Jan 12, 2020 | sudhir |

ಬೆಂಗಳೂರು: ಮಂಗಳೂರು ಗಲಭೆಗೆ ಸಂಬಂಧಪಟ್ಟಂತೆ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿಯವರು ಸಿ.ಡಿ ಬಿಡುಗಡೆ ಮಾಡುವ ಮೂಲಕ ಸಿ.ಡಿ ಕುಮಾರಸ್ವಾಮಿಯಾಗಿದ್ದಾರೆ. ಈವರೆಗೆ ಹಲವು ಬಾರಿ ಸಿ.ಡಿ ಬಿಡುಗಡೆ ಮಾಡಿರುವ ಅವರು ಯಾವುದನ್ನೂ ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ದಿಲ್ಲ. ಈ ನಕಲಿ ಸಿ.ಡಿಯನ್ನು ಯಾರೂ ನಂಬುವುದಿಲ್ಲ ಎಂದು ಸಚಿವ ಕೆ.ಎಸ್‌.ಈಶ್ವರಪ್ಪ ಹೇಳಿದರು.

Advertisement

ರಾಜ್ಯ ಬಿಜೆಪಿ ಕಾರ್ಯಾಲಯದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕುಮಾರಸ್ವಾಮಿ ತುಂಬಾ ಕಸರತ್ತು ಮಾಡಿ ವಿಡಿಯೋ ತಯಾರಿಸಿದ್ದಾರೆ. ಅವರಿಗೆ ಯಾವುದೇ ಕೆಲಸ ಇಲ್ಲದ ಕಾರಣ ಬೆಂಕಿ ಹಚ್ಚುವ ಕೆಲಸಕ್ಕೆ ಕೈಹಾಕಿದ್ದಾರೆ. ಗಲಭೆ ಬಳಿಕ ಮಂಗಳೂರು ಶಾಂತವಾಗಿದೆ. ಇಂತಹ ಸಂದರ್ಭದಲ್ಲಿ ಕುಮಾರಸ್ವಾಮಿಯವರು ದಿಕ್ಕು ತಪ್ಪಿಸುವುದಕ್ಕೆ ಸಿ.ಡಿ ಬಿಡುಗಡೆ ಮಾಡಿದ್ದಾರೆ. ಅವರ ಸಿ.ಡಿಗೆ ಕೆಎಫ್ಡಿ, ಎಸ್‌ಡಿಪಿಐ ಗೂಂಡಾಗಳಿರುವ ಸಿಸಿಟಿವಿ ದೃಶ್ಯಾವಳಿ ಸಿಕ್ಕಿಲ್ಲ ಎಂದು ವ್ಯಂಗ್ಯವಾಡಿದರು.

ಪೊಲೀಸರು ತಪ್ಪು ಮಾಡಿದ್ದಾರೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ. ಪೊಲೀಸರು ಜೀವರಕ್ಷಣೆಗಾಗಿ ಗೋಲಿಬಾರ್‌ ಮಾಡಿದ್ದಾರೆ. ಮದ್ದೂರು ತಾಲ್ಲೂಕಿನಲ್ಲಿ ಅವರ ಪಕ್ಷದ ಕಾರ್ಯಕರ್ತನ ಹತ್ಯೆಯಾದಾಗ ಮುಖ್ಯಮಂತ್ರಿಯಾಗಿದ್ದ ಕುಮಾರಸ್ವಾಮಿಯವರು ಆರೋಪಿಗಳನ್ನು ಎನ್‌ಕೌಂಟರ್‌ ಮಾಡಿ ಬಿಸಾಕಿ ಎಂದಿದ್ದರು. ಇದೀಗ ಗಲಭೆಗಳನ್ನು ನಿಯಂತ್ರಿಸಲು ಪೊಲೀಸರು ಕ್ರಮ ತೆಗೆದುಕೊಂಡರೆ ಅದನ್ನು ಪ್ರಶ್ನಿಸುತ್ತಿರುವುದು ದುರಂತ ಎಂದು ಹೇಳಿದರು.

ತಾವು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಯಾವುದೇ ಗೋಲಿಬಾರ್‌, ಗಲಭೆ ನಡೆದಿಲ್ಲ ಎಂದು ಕುಮಾರಸ್ವಾಮಿ ಹೇಳಿದ್ದಾರೆ. 2006ರಲ್ಲಿ ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗಿದ್ದಾಗ ವರನಟ ಡಾ.ರಾಜ್‌ಕುಮಾರ್‌ ಅವರ ಪಾರ್ಥಿವ ಶರೀರದ ಮೆರವಣಿಗೆ ವೇಳೆ ಹಿಂಸಾಚಾರ ನಡೆದಾಗ ಪೊಲೀಸರ ಗೋಲಿಬಾರ್‌ಗೆ ಐದು ಮಂದಿ ಮೃತಪಟ್ಟಿದ್ದರು. ಆಗ ಗೃಹಖಾತೆ ಕುಮಾರಸ್ವಾಮಿಯವರ ಬಳಿಯೇ ಇತ್ತು ಎಂದು ತಿಳಿಸಿದರು.

10 ಜನ್ಮ ಎತ್ತಿ ಬಂದರೂ ಮುಖ್ಯಮಂತ್ರಿಯಾಗುವುದಿಲ್ಲ
ಕುಮಾರಸ್ವಾಮಿಯವರು ಸಿ.ಡಿ ಬಿಡುಗಡೆ ಮಾಡಿ ಮುಖ್ಯಮಂತ್ರಿಯಾಗುವ ಕನಸು ಕಾಣುತ್ತಿದ್ದಾರೆ. ಅವರು ಹತ್ತು ಜನ್ಮ ಎತ್ತಿದರೂ ಅವರು ಮತ್ತೆ ಮುಖ್ಯಮಂತ್ರಿಯಾಗುವುದಿಲ್ಲ. ರಾಜ್ಯ ಶಾಂತವಾಗಿರುವುದು ಮಾಜಿ ಮುಖ್ಯಮಂತ್ರಿಗಳಾದ ಕುಮಾರಸ್ವಾಮಿ, ಸಿದ್ದರಾಮಯ್ಯ ಅವರಿಗೆ ಇಷ್ಟವಿಲ್ಲ. ಇಬ್ಬರೂ ಮುಖ್ಯಮಂತ್ರಿ ಕುರ್ಚಿ ಮೇಲೆ ಕಣ್ಣಿಟ್ಟಿದ್ದು, ಅದಕ್ಕಾಗಿ ಏನು ಬೇಕಾದರೂ ಮಾಡುತ್ತಾರೆ ಎಂದು ಹೇಳಿದರು.

Advertisement

ವಿಧಾನಸಭೆ, ಲೋಕಸಭೆ, ವಿಧಾನಸಭೆ ಉಪಚುನಾವಣೆಯಲ್ಲಿ ಸೋತರು ಸಿದ್ದರಾಮಯ್ಯ ಅವರಿಗೆ ಬುದ್ದಿ ಬಂದಿಲ್ಲ, ಪ್ರಧಾನಿ ನರೇಂದ್ರ ಮೋದಿಯವರನ್ನು ಹಿಟ್ಲರ್‌ ಎಂದಿರುವ ಸಿದ್ದರಾಮಯ್ಯ ಕ್ಷಮೆ ಕೇಳಬೇಕು. ಮುಸ್ಲಿಮರನ್ನು ಸಂತೃಪ್ತಿಪಡಿಸಲು ಕುಮಾರಸ್ವಾಮಿ, ಸಿದ್ದರಾಮಯ್ಯ ನಡುವೆ ಸ್ಪರ್ಧೆ ಏರ್ಪಟ್ಟಿದ್ದು, ಮುಸ್ಲಿಮರೇ ಅವರನ್ನು ಸೋಲಿಸುತ್ತಾರೆ ಎಂದು ತಿಳಿಸಿದರು.

ಕುಮಾರಸಸ್ವಾಮಿಯವರು ಪೊಲೀಸರ ನೈತಿಕ ಸ್ಥೈರ್ಯ ಕುಗ್ಗಿಸುವ ಪ್ರಯತ್ನ ಮಾಡಿದ್ದಾರೆ. ತಪ್ಪಿತಸ್ತರನ್ನು ಪತ್ತೆ ಹಚ್ಚಲು ಸಹಕರಿಸುವುದನ್ನು ಬಿಟ್ಟು ದಿಕ್ಕು ತಪ್ಪಿಸಲು ಹೊರಟಿರುವುದು ಖಂಡನೀಯ. ಕುಮಾರಸ್ವಾಮಿ ಗಲಭೆಕೋರರಿಗೆ ರಕ್ಷಾ ಕವಚವಾಗಿ ನಿಂತಿದ್ದಾರೆ. ಎಸ್‌ಡಿಪಿಐ, ಕೆಎಫ್ಡಿ ಷಡ್ಯಂತ್ರಗಳಿಗೆ ಸಹಾಯ ಹಸ್ತರಾಗಿರುವುದು ನೋವಿನ ಸಂಗತಿ. ದೇಶದ್ರೋಹಿಗಳ ಪರ ನಿಲ್ಲದಂತೆ ದೇವೇಗೌಡರು ತಮ್ಮ ಪುತ್ರನಿಗೆ ತಿಳಿಹೇಳಬೇಕು ಎಂದು ಹೇಳಿದರು. ರಾಜ್ಯ ಬಿಜೆಪಿ ಸಹವಕ್ತಾರರಾದ ಎಸ್‌.ಪ್ರಕಾಶ್‌, ಮಂಜುಳಾ, ಕಾರ್ಯದರ್ಶಿ ಭಾರತಿ ಮಗದುಮ್‌ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next