Advertisement

ಕೃಷಿ ಖುಷಿ ಕಿಸೆ ಬಿಸಿ: 2 ಲಕ್ಷ ತನಕದ ರೈತರ ಸುಸ್ತಿ ಬೆಳೆ ಸಾಲ ಮನ್ನಾ

06:00 AM Jul 06, 2018 | |

ಬೆಂಗಳೂರು: ಬಹುನಿರೀಕ್ಷಿತ ರೈತರ ಸಾಲ ಮನ್ನಾ ಯೋಜನೆ ಜಾರಿ ಮಾಡಲೇಬೇಕಾದ ಒತ್ತಡದಲ್ಲಿದ್ದ ಮುಖ್ಯಮಂತ್ರಿ ಕುಮಾರ ಸ್ವಾಮಿ, ಕೊನೆಗೂ 2 ಲಕ್ಷ ರೂ.ವರೆಗಿನ ರೈತರ ಸುಸ್ತಿ ಬೆಳೆ ಸಾಲ ಮನ್ನಾ ಮಾಡುವುದಾಗಿ ಘೋಷಿಸಿದ್ದಾರೆ. ಆದರೆ ಇದು ಜೆಡಿಎಸ್‌ ಪ್ರಣಾಳಿಕೆಯಲ್ಲಿ ಘೋಷಿಸಿದಂತೆ ರೈತರ ಸಂಪೂರ್ಣ ಕೃಷಿ ಸಾಲ ಮನ್ನಾ ಯೋಜನೆಯಲ್ಲ. ಇದಕ್ಕೂ ಹಲವು ಷರತ್ತುಗಳನ್ನು ಹಾಕಲಾಗಿದೆ.

Advertisement

ಹತ್ತು ವರ್ಷಗಳಿಂದ ಬೆಳೆಸಾಲ ಕಟ್ಟದೆ ಸುಸ್ತಿದಾರರಾದವರು ಈಗ ಸಾಲಮನ್ನಾ ಸೌಭಾಗ್ಯ ಪಡೆಯಲಿದ್ದಾರೆ. ಪ್ರಾಮಾಣಿಕವಾಗಿ ಬೆಳೆಸಾಲ ಮರುಪಾವತಿ ಮಾಡಿದ ರೈತರ ಸಹಕಾರ ಬ್ಯಾಂಕ್‌ ಖಾತೆಗೆ 25 ಸಾವಿರ ರೂ.ಗಳ ನಗದು ವರ್ಗಾವಣೆ ಆಗಲಿದೆ. ಬೆಳೆ ಸಾಲ ಮನ್ನಾಕ್ಕೆ ತಗಲುವ 34 ಸಾವಿರ ಕೋಟಿ ರೂ. ಹಣದ ಹೊರೆಯನ್ನು ಜನ ಸಾಮಾನ್ಯರಿಗೆ ವರ್ಗಾಯಿಸಿದ್ದಾರೆ. ಪೆಟ್ರೋಲ್‌ ಮತ್ತು ಡೀಸೆಲ್‌ ತೆರಿಗೆ ಹಾಗೂ ವಿದ್ಯುತ್‌ ಬಳಕೆ ಮೇಲಿನ ತೆರಿಗೆ ಹೆಚ್ಚಳ ಮಾಡಿ ಮಧ್ಯಮ ವರ್ಗದ ಜನರಜೇಬಿಗೆ ಕತ್ತರಿ ಹಾಕಿದ್ದಾರೆ. ಜತೆಗೆ ಮದ್ಯದ ಮೇಲಿನ ಅಬಕಾರಿ ಸುಂಕವನ್ನೂ ಹೆಚ್ಚಿಸಿ ಸಂಪನ್ಮೂಲ ಕ್ರೋಢೀಕರಿಸಿದ್ದಾರೆ.

ಗುರುವಾರ 2018-19ನೇ ಸಾಲಿನ 2,18,488 ಕೋಟಿ ರೂ. ಮೊತ್ತದ ಪರಿಷ್ಕೃತ ಬಜೆಟ್‌ ಮಂಡಿಸಿದ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ, ಮೈತ್ರಿ ಧರ್ಮಕ್ಕೆ ಅನುಗುಣವಾಗಿ ಮುನ್ನಡೆಯಲಾಗುವುದು. ಹಿಂದಿನ ಸರ್ಕಾರದ ಅವಧಿಯಲ್ಲಿ ಜಾರಿಯಲ್ಲಿ ದ್ದ ಮತ್ತು ಘೋಷಣೆಯಾಗಿದ್ದ ಎಲ್ಲಾ ಕಾರ್ಯಕ್ರಮ ಮುಂದುವರಿಸುವುದಾಗಿ ಹೇಳಿದ್ದ ರಾ ದರೂ ಸಿದ್ದರಾಮಯ್ಯ ಘೋಷಿಸಿದ್ದ ಎಲ್ಲಾ ವಿದ್ಯಾರ್ಥಿಗಳಿಗೂ ಉಚಿತ ಬಸ್‌ ಪಾಸ್‌ ಯೋಜನೆ ಕೈಬಿಟ್ಟಿದ್ದಾರೆ.

ಸಮಾಜ ಕಲ್ಯಾಣ ಯೋಜನೆಗಳಿಗೆ ಒತ್ತು ನೀಡಿರುವ ಮುಖ್ಯ ಮಂತ್ರಿ, ಬಿಪಿಎಲ್‌ ಕುಟುಂಬದ ಗರ್ಭಿಣಿಯರಿಗೆ ಪ್ರಸವ ಪೂರ್ವ 3 ತಿಂಗಳು ಮತ್ತು ಪ್ರಸವಾನಂತರ 3 ತಿಂಗಳು ಮಾಸಿಕ 1,000 ರೂ. ನೀಡುವ ಮುಖ್ಯಮಂತ್ರಿ ಮಾತೃಶ್ರೀ ಯೋಜನೆ ಪ್ರಕಟಿಸಿದ್ದಾರೆ. ಹಿರಿಯ ನಾಗರಿಕರ ಮಾಸಾಶನವನ್ನು 600 ರೂ.ನಿಂದ 1000 ರೂ.ಗೆ ಹೆಚ್ಚಳ ಮಾಡಿದ್ದಾರೆ. 

ಜಾತ್ಯತೀತವಾಗಿ ದಾಸೋಹ, ಶಿಕ್ಷಣ, ಸಾಮಾಜಿಕ ಸೇವೆ ಮತ್ತು ಅಭಿವೃದ್ಧಿಗಾಗಿ ಶ್ರಮಿಸುತ್ತಿರುವ ವಿವಿಧ ಧಾರ್ಮಿಕ ಪೀಠಗಳು, ಸಂಘ ಸಂಸ್ಥೆಗಳಿಗೆ 25 ಕೋ. ರೂ. ಅನುದಾನ ಸಹಿತ ಸಮಾಜ ಕಲ್ಯಾಣ ಇಲಾಖೆಗೆ ಸಾಕಷ್ಟು ನೆರವು ನೀಡಿದ್ದಾರೆ. ಅಲ್ಲದೆ, ಚೀನ ದೇಶದೊಂದಿಗೆ ಸಕಾರಾತ್ಮಕ ಸ್ಪರ್ಧೆ ಎಂಬ ಹೊಸ ಯೋಜನೆ ಮೂಲಕ ಕೈಗಾರಿಕಾ ಕ್ಷೇತ್ರದಲ್ಲಿ ಉತ್ಪಾದನಾ ಸಾಮರ್ಥ್ಯ ಹೆಚ್ಚಳಕ್ಕೆ ಅವಕಾಶ ಕಲ್ಪಿಸಿದ್ದಾರೆ.

Advertisement

ಮೈತ್ರಿ ಧರ್ಮ ಪಾಲನೆ: ತಮ್ಮ ಬಜೆಟ್‌ ಭಾಷಣದಲ್ಲಿ ಹಿಂದಿನ ಕಾಂಗ್ರೆಸ್‌ ಸರಕಾರದ ಜನಪರ ಕಾರ್ಯಕ್ರಮಗಳು, ಅದರಿಂದ ಆಗಿರುವ ಅನುಕೂಲಗಳನ್ನು ವಿವರಿಸಿರುವ ಮುಖ್ಯಮಂತ್ರಿ ಕುಮಾರಸ್ವಾಮಿ, ಆ ಎಲ್ಲ ಕಾರ್ಯ ಕ್ರಮಗಳನ್ನು ಮುಂದುವರಿಸಲಾ ಗುವುದು. ಮೈತ್ರಿ ಧರ್ಮಕ್ಕೆ ಅನುಗುಣವಾಗಿಯೇ ಮುನ್ನಡೆದು ರಾಜ್ಯದ ಸರ್ವಾಂಗೀಣ ಅಭಿವೃದ್ಧಿ ಸಾಧಿಸುವುದಾಗಿ ಹೇಳಿದ್ದಾರೆ. ಆದರೆ ಪ್ರಾದೇಶಿಕವಾರು ಕಾರ್ಯ ಕ್ರಮಗಳನ್ನು ರೂಪಿಸುವಲ್ಲಿ ಬಜೆಟ್‌ ಸಂಪೂರ್ಣ ಎಡವಿದ್ದು, ಕಳೆದ ವಿಧಾನಸಭೆ ಚುನಾವಣೆಯಲ್ಲಿ ಪಕ್ಷವನ್ನು ಸೋಲಿಸಿದ ಪ್ರದೇಶಗಳ ಮೇಲೆ ಸೇಡು ತೀರಿಸಿಕೊಳ್ಳಲಾಗಿದೆ ಎಂಬ ಆರೋಪಕ್ಕೂ ಸರಕಾರ ಒಳಗಾಗುವಂತಾಗಿದೆ.

ಸರಕಾರದ ಸಾಲ ಹೆಚ್ಚಳ: ಸಾಲದ ಮೊತ್ತವನ್ನು ಭಾರೀ ಪ್ರಮಾಣದಲ್ಲಿ ಹೆಚ್ಚಿಸಿ, 2018-19ನೇ ಸಾಲಿನಲ್ಲಿ 47,134 ಕೋ.ರೂ. ಸಾಲ ಮಾಡುವ ಬಗ್ಗೆ ಪ್ರಸ್ತಾವಿಸಿದ್ದಾರೆ. ಇದರೊಂದಿಗೆ ಆರ್ಥಿಕ ವರ್ಷಾಂತ್ಯಕ್ಕೆ ರಾಜ್ಯದ ಒಟ್ಟು ಸಾಲ ಮೊತ್ತ 2,92,220 ಕೋಟಿ ರೂ.ಗೆ ಏರಲಿದೆ. ಇದು ಒಟ್ಟು ಆಂತರಿಕ ಉತ್ಪನ್ನದ ಶೇ. 20.75ರಷ್ಟಾಗಲಿದ್ದು, ವಿತ್ತೀಯ ಹೊಣೆಗಾರಿಕೆ ಅಧಿನಿಯಮದಡಿ ನಿಗದಿಪಡಿಸಿರುವ ಶೇ. 25ರ ಮಿತಿಯೊಳಗಿರುತ್ತದೆ ಎಂದಿದ್ದಾರೆ.

ಸಕ್ಕರೆ ಭಾಗ್ಯ ಸೇರ್ಪಡೆ
ಸಿದ್ದರಾಮಯ್ಯ ಸರ್ಕಾರದ ಮಹತ್ವಾಕಾಂಕ್ಷಿ ಅನ್ನಭಾಗ್ಯ ಯೋಜನೆಯಲ್ಲಿ ಕೊಂಚ ಬದಲಾವಣೆಯಾಗಿದೆ. ಅಕ್ಕಿಗೆ ಕತ್ತರಿ ಹಾಕಿದ ಕುಮಾರ ಸ್ವಾಮಿ ಸಕ್ಕರೆ ಭಾಗ್ಯ ಕಲ್ಪಿಸಿದ್ದಾರೆ. ಈ ಹಿಂದೆ ಬಿಪಿಎಲ್‌ ಪಡಿತರ ಫ‌ಲಾನುಭವಿಗಳಿಗೆ ವಿತರಿಸಲಾಗುತ್ತಿದ್ದ 7 ಕೆ.ಜಿ.ಅಕ್ಕಿ ಬದಲು 5 ಕೆ.ಜಿ. ನೀಡುವುದಾಗಿ ಘೋಷಿಸಲಾಗಿದೆ. ಜತೆಗೆ ರಿಯಾಯಿತಿ ದರದಲ್ಲಿ ನೀಡಲಾಗುತ್ತಿದ್ದ 1 ಕೆ.ಜೆ. ತೊಗರಿಬೇಳೆಯನ್ನು ಅರ್ಧ ಕೆ.ಜಿ.ಗೆ ಇಳಿಸಲಾಗಿದೆ. ಆದರೆ, ಹೊಸದಾಗಿ 1 ಕೆಜಿ ಸಕ್ಕರೆ ರಿಯಾಯಿತಿ ದರದಲ್ಲಿ ನೀಡುವ ಘೋಷಣೆ ಮಾಡಲಾಗಿದೆ. ಉಳಿದಂತೆ 1ಕೆ.ಜಿ. ಪಾಮ್‌ ಎಣ್ಣೆ, 1 ಕೆ.ಜಿ. ಉಪ್ಪು ಮುಂದುವರಿಯಲಿದೆ.

ಪರಿಣಾಮ ಏನು?
ಪೆಟ್ರೋಲ್‌ ದರ 79.05 ರೂ. ಆಗಲಿದೆ. ಅದೇ ರೀತಿ ಡೀಸೆಲ್‌ ದರ 70.67 ರೂ. ಆಗಲಿದೆ. ರಾಜ್ಯದಲ್ಲಿ ನಿತ್ಯ 1.76 ಲಕ್ಷ ಲೀ. ಡೀಸೆಲ್‌, ಪೆಟ್ರೋಲ್‌ 88 ಲಕ್ಷ ಲೀ. ಮಾರಾಟವಾಗುತ್ತಿದೆ. ಡೀಸೆಲ್‌ ಮೇಲಿನ ತೆರಿಗೆ ಹೆಚ್ಚಳದಿಂದ 1,97,000 ರೂ. ಹಾಗೂ ಪೆಟ್ರೋಲ್‌ನಿಂದ 1 ಕೋಟಿ ರೂ.ವರೆಗೆ ನಿತ್ಯ ಹೆಚ್ಚುವರಿ ತೆರಿಗೆ ಸಂಗ್ರಹ ಆಗಲಿದೆ. ವಾರ್ಷಿಕವಾಗಿ 1,000 ಕೋಟಿ ರೂ. ಸಂಪನ್ಮೂಲ ಸಂಗ್ರಹವಾಗಲಿದೆ. ತೈಲ ಬೆಲೆ ಏರಿಕೆಯಿಂದ ಹಾಲು, ಬಸ್‌ ದರ ಏರಿಕೆಯ ಆತಂಕವೂ ಇದೆ. ಸರಕು ಸಾಗಣೆ ದರವೂ ಹೆಚ್ಚಳವಾಗುವ ಸಾಧ್ಯತೆಯಿದೆ. ಸದ್ಯಕ್ಕೆ ಸಾರಿಗೆ ಸಚಿವರು ಬಸ್‌ ದರ ಏರಿಕೆಯಿಲ್ಲ ಎಂದಿದ್ದಾರೆ. ವಿದ್ಯುತ್‌ ನಿತ್ಯ 200 ಕೋಟಿ ಯೂನಿಟ್‌ ಗೃಹ ಬಳಕೆ, 250 ಕೋಟಿ ಯೂನಿಟ್‌ ವಾಣಿಜ್ಯ ಬಳಕೆಯಾಗುತ್ತಿದೆ. ತೆರಿಗೆ ಹೆಚ್ಚಳದಿಂದ 1500 ಕೋಟಿ ರೂ.ಗೂ ಹೆಚ್ಚು ಆದಾಯ ಸಂಗ್ರಹವಾಗಲಿದೆ. ಅಬಕಾರಿ ತೆರಿಗೆ ಹೆಚ್ಚಳ ಮಾಡಿರುವುರಿಂದ ವಾರ್ಷಿಕವಾಗಿ 1,000 ಕೋಟಿ
ರೂ. ಸಂಗ್ರಹವಾಗಲಿದೆ. 

ಹೊಸತೇನಿದೆ?
* ಕಡಿಮೆ ದಾಖಲಾತಿ ಹೊಂದಿರುವ 28,847 ಸರ್ಕಾರಿ, ಅನುದಾನಿತ ಶಾಲೆಗಳು ಬಂದ್‌
* ಆಯ್ದ ಸರ್ಕಾರಿ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ, ಎಲ್‌ಕೆಜಿ, ಯುಕೆಜಿ ಆರಂಭ
* ಕ್ರೀಡೆ, ಅಂಗ ಸಾಧನೆ ವಿವಿ, ತಾಯಿ ನಾಡು ಭದ್ರತಾ ವಿವಿ, ಪ್ರವಾಸೋದ್ಯಮ ವಿವಿ ಸ್ಥಾಪನೆ
* 108 ಮತ್ತು 104 ಸಹಾಯವಾಣಿ ತಾಯಿ-ಮಕ್ಕಳು ಹಾಗೂ ಮಾನಸಿಕ ಆರೋಗ್ಯಕ್ಕೂ ವಿಸ್ತರಣೆ
* 3 ಜಿಲ್ಲಾ ಕೇಂದ್ರಗಳಲ್ಲಿ ಕ್ಯಾನ್ಸರ್‌ ಸೇವೆಗಾಗಿ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ
* ಒಂದು ವೈದ್ಯಕೀಯ ಕಾಲೇಜು, ಒಂದು ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ ಸ್ಥಾಪನೆ
* ಸ್ವಸಹಾಯ ಗುಂಪುಗಳಿಗೆ ಸ್ವಂತ ಉದ್ಯೋಗಕ್ಕೆ ನೆರವು ನೀಡಲು “ಕಾಯಕ’ ಯೋಜನೆ
* ಬೀದಿ /ಸಣ್ಣ ವ್ಯಾಪಾರಿಗಳಿಗೆ ಕಿರು ಸಾಲಕ್ಕಾಗಿ “ಬಡವರ ಬಂಧು’ ಸಂಚಾರಿ ಹಣಕಾಸು ಸೇವೆ
* ಎಸ್‌ಸಿ-ಎಸ್‌ಟಿ ಕಾಲೋನಿಗಳ ಅಭಿವೃದ್ಧಿಗೆ “ಪ್ರಗತಿ ಕಾಲೋನಿ’ ಯೋಜನೆ
* ಡಿಸ್ನಿ ಲ್ಯಾಂಡ್‌ ಮಾದರಿಯಲ್ಲಿ ಅಭಿವೃದ್ಧಿಗೊಳ್ಳಲಿದೆ ಪ್ರವಾಸಿ ತಾಣವಾಗಿರುವ ಕೆಆರ್‌ಎಸ್‌ ಉದ್ಯಾನ
* ಗ್ರಾಮೀಣ ಜನರಿಗೆ ಶುದ್ಧ ನೀರು ಪೂರೈಸಲು “ಜಲಧಾರೆ’ ಯೋಜನೆ
* ಮುಖ್ಯಮಂತ್ರಿಗಳ ಒಂದು ಲಕ್ಷ ಮನೆ ನಿರ್ಮಾಣ ಯೋಜನೆ ಎಲ್ಲ ನಗರಗಳಿಗೂ ವಿಸ್ತರಣೆ
* ರಾಜಧಾನಿ ಬೆಂಗಳೂರಿನಲ್ಲಿ ಬಡವರಿಗೆ ಬಹು ಮಹಡಿ ಮನೆಗಳ ನಿರ್ಮಾಣ

Advertisement

Udayavani is now on Telegram. Click here to join our channel and stay updated with the latest news.

Next