ಎಚ್.ಡಿ.ಕೋಟೆ: ಚಿತ್ರನೋಡಿ ಇದ್ಯಾವುದೋ ನಾಟಿ ಮಾಡಲು ಸಿದ್ಧಪಡಿ ಸಿದ ಕೆಸರುಗದ್ದೆ ಎಂದು ಭಾವಿಸಬೇಡಿ, ಪಟ್ಟಣದ ಹಲವು ಬಡಾವಣೆಗಳ ರಸ್ತೆಗಳ ದುಸ್ಥಿತಿ ಇದು.
ಪ್ರತಿದಿನ ಜನಸಾಮಾನ್ಯರು ಇದರಲ್ಲೇ ಸಂಚರಿಸಬೇಕಿದೆ. ಎಚ್.ಡಿ.ಕೋಟೆ ಈಗಾಗಲೇ ಹಿಂದುಳಿದ ತಾಲೂಕು ಅನ್ನುವ ಹಣೆ ಪಟ್ಟಿಕೊಂಡಿದೆ.
ಈ ಚಿತ್ರದಲ್ಲಿನ ರಸ್ತೆಗಳ ಗಮನಿಸಿದ್ರೆ ಮಹಿಳೆಯರು, ಮಕ್ಕಳು, ವೃದ್ಧರು ಸಂಚರಿಸಲು ಸಾಧ್ಯವೇ ಇಲ್ಲ. ಗ್ರಾಮೀಣ ಭಾಗದ ರಸ್ತೆಗಳು ಕಾಂಕ್ರೀಟ್, ಡಾಂಬರಿನಿಂದ ಕೂಡಿವೆ. ಆದರೆ, ತಾಲೂಕು ಕೇಂದ್ರದಲ್ಲಿನ ಪ್ರತಿಷ್ಠಿತ ಬಡಾವಣೆಗಳಾದ ಹೌಸಿಂಗ್‌ಬೋರ್ಡ್, ಸ್ಟೇಡಿಯಂ, ರಂಗಯ್ಯಂಗಾರ್ ಸೇರಿ ಇನ್ನಿತರೆ ಬಡಾವಣೆ ರಸ್ತೆಗಳು ಮಳೆ ನೀರಿನಿಂದ ಆವೃತವಾಗಿ ಜನ, ವಾಹನ ಸಂಚಾರ ಕಷ್ಟವಾಗಿದೆ. ಮೂರು ದಿನದ ಹಿಂದಷ್ಟೇ ಪುರಸಭೆಯು ರಸ್ತೆಯಲ್ಲಿನ ಗುಂಡಿಗಳನ್ನು ಗ್ರಾವೆಲ್ ಮಣ್ಣು ಹಾಕಿಸಿ ಮುಚ್ಚುವ ಕಾರ್ಯ ಆರಂಭಿಸಿತು. ಗುರುವಾರ ಅಷ್ಟೇ ಜೆಸಿಬಿ ಯಂತ್ರದ ಸಹಾಯದಿಂದ ಗುಂಡಿಗಳನ್ನು ತಾತ್ಕಾಲಿಕವಾಗಿ ಮುಚ್ಚಿಸಲಾಗಿತ್ತು. ಆದರೆ, ಅದೇ ದಿನ ರಾತ್ರಿ ಮಳೆ ಸುರಿದು ರಸ್ತೆಗಳು ನಾಟಿ ಮಾಡಲು ಸಿದ್ಧಪಡಿಸಿದ ಕೆಸರು ಗದ್ದೆಯಂತಾಗಿವೆ.
ಈ ರಸ್ತೆ ಮಾರ್ಗವಾಗಿ ಶಾಲಾ ಕಾಲೇಜಿಗೆ ತೆರಳುವ ಮಕ್ಕಳಷ್ಟೇ ಅಲ್ಲದೆ, ವೃದ್ಧರು ಓಡಾಡಲು ಹೆದರುವಂತಾಗಿದೆ. ರಸ್ತೆಯಲ್ಲಿ ಸಂಚರಿಸುವಾಗ ಕೊಂಚ ಯಾಮಾರಿದರೂ ಬಿದ್ದು ಮೈಯೆಲ್ಲ ಕೆಸರು ಮಾಡಿಕೊಳ್ಳ ಬೇಕಾಗುತ್ತದೆ. ಸಂಬಂಧಪಟ್ಟ ಪುರಸಭೆ ಅಧಿಕಾರಿಗಳು, ಸದಸ್ಯರು ಇತ್ತ ಗಮನ ಹರಿಸಿ, ರಸ್ತೆ ದುರಸ್ತಿಗೆ ಮುಂದಾಗುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.