Advertisement

ಎಚ್‌.ಡಿ.ಕೋಟೆ : ಕೋಟೆಯಲ್ಲಿ ಇದ್ದೂ ಇಲ್ಲವಾದ ಆರೋಗ್ಯ ಸೇವೆ

05:36 PM May 19, 2023 | Team Udayavani |

ಎಚ್‌.ಡಿ.ಕೋಟೆ : ತಾಲೂಕು ಕೇಂದ್ರ ಸ್ಥಾನದ ಸಾರ್ವಜನಿಕ ಆಸ್ಪತ್ರೆಯಲ್ಲಿ ಸ್ಕ್ಯಾನಿಂಗ್‌ ಯಂತ್ರ ವಿದೆ ಆದರೆ ತಜ್ಞರಿಲ್ಲದೆ ರೋಗಿಗಳು ದುಬಾರಿ ಬೆಲೆ ತೆತ್ತು ಖಾಸಗಿ ಕೇಂದ್ರದ ಸ್ಕ್ಯಾನಿಂಗ್‌ ಮೊರೆ ಹೋಗಬೇಕು. ಆಸ್ಪತ್ರೆ ಆವರಣದಲ್ಲೇ ಜನೌಷಧ ಕೇಂದ್ರವಿದೆ ಆದರೆ ಬಾಗಿಲು ತೆರೆದು ಒಂದುವರೆ ತಿಂಗಳಾದರೂ ಕ್ಯಾರೆ ಅನ್ನುವವರಿಲ್ಲ. ಇದರಿಂದ ರೋಗಿಗಳ ಪಾಡು ಹೇಳ ತೀರದಾಗಿದೆ.

Advertisement

ಎಚ್‌.ಡಿ.ಕೋಟೆ ತಾಲೂಕು ಪ್ರೊ.ನಂಜುಂಡಪ್ಪ ವರದಿಯಂತೆ ತೀರ ಹಿಂದುಳಿದ ತಾಲೂಕು ಎನಿಸಿಕೊಂಡಿದೆ. ಮೈಸೂರು ಜಿಲ್ಲೆಯಲ್ಲೇ ಎಚ್‌.ಡಿ. ಕೋಟೆ ತಾಲೂಕು ಇತರೆ ತಾಲೂಕುಗಳಿಗಿಂತ 3ಪಟ್ಟು ಹೆಚ್ಚು ವಿಸ್ತೀರ್ಣ ಹೊಂದಿದೆ. ಅಂದರೆ ಎಚ್‌.ಡಿ.ಕೋಟೆ ಹೊರತು ಪಡಿಸಿ ಇನ್ನುಳಿದ ತಾಲೂಕುಗಳ ವಿಸ್ತೀರ್ಣ 500ರಿಂದ 600 ಚ.ಕಿ. ಇದ್ದರೆ ಎಚ್‌.ಡಿ.ಕೋಟೆ ತಾಲೂಕು 1600 ಚ.ಕಿ. ವಿಸ್ತೀರ್ಣ ಹೊಂದಿದೆ.

ಈ ತಾಲೂಕಿನಲ್ಲಿ ಎಸ್ಸಿ ಎಸ್ಟಿ ಸಮುದಾಯದವರೇ ಬಹುಸಂಖ್ಯೆಯಲ್ಲಿದ್ದರೂ ಕಿತ್ತು ತಿನ್ನುವ ಬಡತನದ ನಡುವೆ ಜೀವನೋಪಾಯಕ್ಕಾಗಿ ಕೂಲಿ ಅವಲಂಬಿಸಿ ಜೀವನ ನಡೆಸುವ ಮಂದಿ ಬಹು ಸಂಖ್ಯೆಯಲ್ಲಿದ್ದಾರೆ. ಪ್ರತಿದಿನ ಕೂಲಿ-ನಾಲಿ ಮಾಡಿ ಗಳಿಸಿದ ಹಣದಿಂದ ಅಗತ್ಯ ಬೆಲೆ ಏರಿಕೆಯ ಈ ಕಾಲದಲ್ಲಿ ಜೀವನ ನಡೆಸುವುದೇ ಕಷ್ಟಕರ ಹೀಗಿರುವಾಗ ಆರೋಗ್ಯ ಕೆಟ್ಟರೆ ದುಬಾರಿ ಬೆಲೆ ನೀಡಿ ಔಷಧ ಖರೀದಿಸುವ ಕಷ್ಟ ಹಣ ಇಲ್ಲದ ಬಡಮಂದಿಗೆ ಗೊತ್ತು.

ಬಾಗಿಲು ತೆರೆಯದ ಜನೌಷಧ ಕೇಂದ್ರ: ಔಷಧಗಳ ಬೆಲೆ ಗಗನಕ್ಕೇರಿದೆ ಬಡಮಂದಿ ದುಬಾರಿ ಬೆಲೆ ತೆತ್ತು ಔಷಧ ಖರೀದಿಸುವುದು ಕಷ್ಟಕರ ಅನ್ನುವ ಸತ್ಯ ಮನಗಂಡ ಕೇಂದ್ರ ಸರ್ಕಾರ ಜನೌಷಧ ಕೇಂದ್ರಗಳನ್ನು ಜಿಲ್ಲೆ ಮತ್ತು ತಾಲೂಕು ಮಟ್ಟದಲ್ಲಿ ಆರಂಭಿಸಿದೆ.

ಜನೌಷಧ ಕೇಂದ್ರಗಳಲ್ಲಿ ಸುಮಾರು 1800ಕ್ಕೂ ಅಧಿಕ ಮಾದರಿಯ ಔಷಧಗಳನ್ನು ಮಾರಾಟ ಮಾಡಬೇಕೆಂಬ ನಿಯಮದೊಂದಿಗೆ ಎಂಎಸ್‌ಎಲ್‌ ಕಂಪನಿಗೆ ಔಷಧ ಮಾರಾಟದ ಹಕ್ಕು ಹಸ್ತಾಂತರಿಸಿದೆ. ಮಾರುಕಟ್ಟೆ ಬೆಲೆಗಿಂತ ಅತಿ ಕಡಿಮೆ ಬೆಲೆಯಲ್ಲಿ ಔಷಧ ಮಾರಾಟ ಮಾಡಬೇಕು ಅನ್ನುವುದು ಜನೌಷಧ ಕೇಂದ್ರದ ಉದ್ದೇಶ.

Advertisement

ಆದರೆ ಎಚ್‌.ಡಿ.ಕೋಟೆಯಲ್ಲಿರುವ ಜನೌಷಧ ಕೇಂದ್ರ ಕಳೆದ ಒಂದುವರೆ ತಿಂಗಳಿಂದ ಬಾಗಿಲು ತೆರೆಯದೇ ಇದ್ದರೂ ಹೇಳುವರು
ಕೇಳುವವರಿಲ್ಲದಂತಾಗಿದೆ. ಇನ್ನು ಜನೌಷಧ ಕೇಂದ್ರದಲ್ಲಿ ಕೇವಲ 200ರಿಂದ 250 ಬಗೆಯ ಔಷಧಗಳನ್ನು ಮಾತ್ರ ಮಾರಾಟ ಮಾಡುತ್ತಿದ್ದಾರೆ ಅನ್ನುವ ಆರೋಪ ಕೇಳಿ ಬರುತ್ತಿದೆ. ಜನೌಷಧ ಕೇಂದ್ರ ಬಾಗಿಲು ತೆರೆಯದೇ ಇರುವುದರಿಂದ ರೋಗಿಗಳು ಖಾಸಗಿ ಅಂಗಡಿಗಳಲ್ಲಿ ದುಬಾರಿ ಬೆಲೆ ನೀಡಿ ಔಷಧ ಖರೀದಿಸಬೇಕಾದ ಅನಿವಾರ್ಯತೆ ಇದೆ.

ಈ ಕುರಿತು ಮಾಧ್ಯಮಗಳಲ್ಲಿ ಸುದ್ದಿ ಪ್ರಕಟಗೊಂಡರೂ ಕ್ಯಾರೆ ಅನ್ನುವವರಿಲ್ಲ. ಕೂಡಲೆ ಸಂಬಂಧ ಪಟ್ಟವರು ತಾಲೂಕು ಕೇಂದ್ರದ ಜನೌಷಧ ಕೇಂದ್ರ ನಿಯಮಾನುಸಾರದಂತೆ ಅಗತ್ಯ ಔಷಧಗಳೊಂದಿಗೆ ನಿಗದಿತ ಸಮಯದಲ್ಲಿ ಬಾಗಿಲು ತೆಯಲು ಕ್ರಮವಹಿಸಬೇಕಿದೆ.

ಸ್ಕ್ಯಾನಿಂಗ್‌ ಯಂತ್ರ ಇದೆ ತಜ್ಞರಿಲ್ಲ: ಎಚ್‌.ಡಿ.ಕೋಟೆ ತಾಲೂಕು ಕೇಂದ್ರ ಸ್ಥಾನದ ಸರ್ಕಾರಿ ಆಸ್ಪತ್ರೆಯಲ್ಲಿ ಸ್ಕ್ಯಾನಿಂಗ್‌ ವ್ಯವಸ್ಥೆ ಇರಲಿಲ್ಲ. ಮಾಧ್ಯಮದ ಪ್ರತಿನಿಧಿಗಳು ತಾಲೂಕಿನ ಶಾಸಕ ಅನಿಲ್‌ ಚಿಕ್ಕಮಾದು ಗಮನ ಸೆಳೆದು ತಾಲೂಕಿನ ಸರ್ಕಾರಿ ಆಸ್ಪತ್ರೆಯಲ್ಲಿ ಸ್ಕ್ಯಾನಿಂಗ್‌ ಸೇವೆಗೆ ಕ್ರಮ ಕೈಗೊಂಡು ಬಡಜನರಿಗೆ ಅನುಕೂಲ ಮಾಡಿ ಕೊಡುವಂತೆ ಗಮನ ಸೆಳೆದ ಹಿನ್ನೆಲೆಯಲ್ಲಿ ಕಳೆದ ಸುಮಾರು ಒಂದುವರೆ ವರ್ಷದ ಹಿಂದೆ ಸಾರ್ವಜನಿಕ ಆಸ್ಪತ್ರೆಗೆ ನೂತನ ಸ್ಕ್ಯಾನಿಂಗ್‌ ಯಂತ್ರ ಮಂಜೂರಾಗಿದೆಯಾದರೂ ತಜ್ಞರೊಬ್ಬರನ್ನು ನಿಯೋಜನೆಗೊಳಿಸದೇ ಇರುವುದರಿಂದ ಸ್ಕ್ಯಾನಿಂಗ್‌ ಯಂತ್ರ ಇದ್ದೂ ಉಪಯೋಗಕ್ಕೆ ಬಾರದೆ ತುಕ್ಕು
ಹಿಡಿಯಲಾರಂಭಿಸಿದೆ.

ಸ್ಕ್ಯಾನ್‌ ಖಾಸಗಿ ಸೆಂಟರ್‌ನತ್ತ ಮುಗಿಬಿದ್ದ ರೋಗಿಗಳು: ತಾಲೂಕು ಕೇಂದ್ರ ಸ್ಥಾನದಲ್ಲಿ ಒಂದೇ ಕಡೆ ಖಾಸಗಿ ಸ್ಕ್ಯಾನಿಂಗ್‌ ವ್ಯವಸ್ಥೆ ಇದೆಯಾದರೂ ಅಲ್ಲಿಯೂ ಕೂಡ ಪ್ರತಿದಿನ 3 ಗಂಟೆ ನಂತರವಷ್ಟೇ ತಜ್ಞರು ಆಗಮಿಸಿ ಸ್ಕ್ಯಾನಿಂಗಾಗಿ ಮುಗಿಬೀಳುತ್ತಿದ್ದಾರೆ. 3 ಗಂಟೆ ತನಕ ರೋಗಿಗಳು ಕಾದು ಕುಳಿತಿರಬೇಕಾದ ಅನಿವಾರ್ಯತೆ ಇದ್ದು, 4 ಗಂಟೆಗೆಲ್ಲಾ ಸರ್ಕಾರಿ ಆಸ್ಪತ್ರೆ ವೈದ್ಯರು ಕರ್ತವ್ಯ ಮುಗಿಸಿ ನಿರ್ಗಮಿಸುವುದರಿಂದ ಸ್ಕ್ಯಾನಿಂಗ್‌ ರಿಪೋರ್ಟ್‌ ವೈದ್ಯರಿಗೆ ತೋರಿಸಲು ರೋಗಿಗಳು ತಾಲೂಕಿನ ಮೂಲೆಮೂಲೆಗಳಿಂದ ಮರುದಿನ ತಾಲೂಕು ಕೇಂದ್ರ ಸ್ಥಾನಕ್ಕೆ ಆಗಮಿಸಬೇಕಾದ ಅನಿವಾರ್ಯತೆ ಇದೆ.

ದುಬಾರಿ ಬೆಲೆ ನೀಡಿ ಸ್ಕ್ಯಾನ್‌ ಮಾಡಿಬೇಕು
ತಾಲೂಕಿನಲ್ಲಿ ಬಹಸಂಖ್ಯೆ ಮಂದಿ ಕೂಲಿ ಕಾರ್ಮಿಕರೇ ಇದ್ದು ದಿನಪೂರ್ತಿ 200-300 ರೂ.ಗೆ ಕೂಲಿ ಕೆಲಸ ಮಾಡಬೇಕು. ಆದರೆ ಖಾಸಗಿಯಲ್ಲಿ ಸ್ಕ್ಯಾನ್‌ ಮಾಡಿಸಲು ತೀರ ಕಡಿಮೆ ಅಂದರೆ 800 ರೂ. ಬೇಕೆ ಬೇಕು. ಒಮ್ಮೆ ಸ್ಕ್ಯಾನ್‌ ಮಾಡಿಸಲು ಕನಿಷ್ಠ ಕೂಲಿಕಾರ್ಮಿಕರು 1 ವಾರದ ಪರಿಶ್ರಮ ಪಡಬೇಕು. ಈ ಎಲ್ಲಾ ಅಂಶಗಳನ್ನು ತಾಲೂಕಿನ ಶಾಸಕರು ಹಾಗೂ ಸಂಬಂಧ ಪಟ್ಟ ಜಿಲ್ಲೆ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಕೂಡಲೆ ಇತ್ತ ಗಮನ ಹರಿಸಿ ಬಡರೋಗಿಗಳ ಆರೋಗ್ಯದ ದೃಷ್ಟಿಯಿಂದ ಹಿಂದುಳಿದ ಎಚ್‌.ಡಿ.ಕೋಟೆ ತಾಲೂಕಿನ ಆಸ್ಪತ್ರೆಗಳ ಆರೋಗ್ಯ ಸೇವೆಗಳಿಗೆ ಹೆಚ್ಚಿನ ಆದ್ಯತೆ ನೀಡುವಂತೆ ತಾಲೂಕಿನ ಜನ ಮನವಿ ಮಾಡಿಕೊಂಡಿದ್ದಾರೆ.

ಕೋಟೆ ತಾಲೂಕು ಕೇಂದ್ರದ ಸರ್ಕಾರಿ ಆಸ್ಪತ್ರೆಯಲ್ಲಿ ಬಡರೋಗಿಗಳಿಗೆ ಸರ್ಕಾರದ ಸವಲತ್ತುಗಳು ಸಮರ್ಪಕವಾಗಿ ದೊರೆಯುತ್ತಿಲ್ಲ. ಕೆಲವೊಮ್ಮೆ ಆಸ್ಪತ್ರೆಯಲ್ಲಿ ಔಷಧ ಮಾತ್ರೆಗಳೂ ಲಭ್ಯವಾಗದೆ ಖಾಸಗಿಯಲ್ಲಿ ಖರೀದಿಸಬೇಕು. ಇನ್ನು ಸ್ಕ್ಯಾನಿಂಗ್‌ ಮಿಷನ್‌ ಇದೆ ತಜ್ಞರಿಲ್ಲದೆ ಖಾಸಗಿಯಾಗಿ ಸ್ಕ್ಯಾನ್‌ ಮಾಡಿಬೇಕು. ಜನೌಷಧ ಕೇಂದ್ರದಲ್ಲಿ ಕಡಿಮೆ ಬೆಲೆ ಔಷಧಗಳು
ದೊರೆಯುತ್ತಿದ್ದು, ಈಗ ಒಂದುವರೆ ತಿಂಗಳಿಂದ ಕೇಂದ್ರ ಬಂದ್‌ ಆಗಿರುವುದು ಬಡರೋಗಿಗಳು ಆರೋಗ್ಯಕ್ಕಾಗಿ ದುಡಿದ ಹಣವನ್ನೆಲ್ಲಾ ದುಬಾರಿ ಹಣ ತೆತ್ತು ಖಾಸಗಿ ಔಷಧ ಕೇಂದ್ರಗಳಲ್ಲಿ ಔಷಧ ಖರೀದಿಸಬೇಕಾದ ಸ್ಥಿತಿಯಿದೆ.
●ಎಚ್‌.ಬಿ.ಶಿವಮೂರ್ತಿ ಯರಹಳ್ಳಿ
ಎಚ್‌.ಡಿ.ಕೋಟೆ

ಸ್ಕ್ಯಾನಿಂಗ್‌ ಆರಂಭಿಸಲು ಜಿಲ್ಲಾ ಆರೋಗ್ಯಾಧಿಕಾರಿಗಳೊಡನೆ ಸಮಾಲೋಚಿಸಿ ಆರೋಗ್ಯ ಇಲಾಖೆ ಡಿಡಿ ಹಾಗೂ ಕಮಿಷನರ್‌ ಜೊತೆ ಮಾತನಾಡಲಾಗಿದೆ. ಸರ್ಕಾರ ರಚನೆಯಾಗುತ್ತಿದ್ದಂ ತೆಯೇ 15 ದಿನಗಳ ಒಳಗೆ ಸ್ಕ್ಯಾನಿಂಗ್‌ ಆರಂಭಿಸುವ ಭರವಸೆ ನೀಡಿದ್ದಾರೆ. ಇನ್ನು ಜನೌಷಧ ಕೇಂದ್ರ ಸೋಮವಾರದಿಂದ ಆರಂಭಿಸಲು ಕ್ರಮ ಕೈಗೊಳ್ಳಲಾಗಿದೆ, ಜನೌಷಧ ಕೇಂದ್ರ ಸೋಮವಾರ ಕಾರ್ಯಾರಂಭಗೊಳ್ಳುವುದು ಖಚಿತ.
● ಡಾ.ಸೋಮಣ್ಣ, ಆಡಳಿತಾಧಿಕಾರಿ
ಸಾರ್ವಜನಿಕ ಆಸ್ಪತ್ರೆ

ಎಚ್‌.ಬಿ.ಬಸವರಾಜು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next