ಬೆಂಗಳೂರು: ಕನಕಪುರ ಪಟ್ಟಣದಲ್ಲಿರುವ ಪೇಟೆಕೆರೆ ಪ್ರದೇಶವನ್ನು ಒತ್ತುವರಿ ಮಾಡಿಕೊಂಡು ನಿರ್ಮಿಸಲಾಗಿರುವ ಅಯ್ಯಪ್ಪ ದೇವಾಲಯವನ್ನು ತೆರವುಗೊಳಿಸುವಂತೆ ಹೈಕೊರ್ಟ್ ಸೋಮವಾರ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ.
ಈ ಕುರಿತಂತೆ ಸಾತನೂರು ಹೋಬಳಿಯ ರವಿಕುಮಾರ್ ಕೆಂಚನಹಳ್ಳಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕಾ ಹಾಗೂ ನ್ಯಾ.ಎಚ್.ಟಿ.ನರೇಂದ್ರಪ್ರಸಾದ್ ಅವರಿದ್ದ ವಿಭಾಗೀಯ ನ್ಯಾಯಪೀಠ, ದೇವಾಲಯ ನಿರ್ಮಿಸಿರುವ 8 ಗುಂಟೆ ಸೇರಿ ಕೆರೆ ಪ್ರದೇಶದಲ್ಲಿರುವ ಇತರೆ ಒತ್ತುವರಿಗಳ ಬಗ್ಗೆ ಸ್ಥಳೀಯ ತಹಶೀಲ್ದಾರ್ ಸ್ಥಳ ಪರಿಶೀಲನೆ ನಡೆಸಿ ಎರಡು ವಾರಗಳಲ್ಲಿ ವರದಿ ಸಲ್ಲಿಸುವಂತೆ ನಿರ್ದೇಶನ ನೀಡಿತು.
ವಿಚಾರಣೆ ವೇಳೆ ಸ್ಥಳೀಯ ತಹಶೀಲ್ದಾರ್ ಅವರ ಪರ ಪ್ರಮಾಣಪತ್ರವನ್ನು ನ್ಯಾಯಪೀಠಕ್ಕೆ ಸಲ್ಲಿಸಿದ ಸರ್ಕಾರದ ಪರ ವಕೀಲರು, ಕೆರೆಯ ಒಟ್ಟು ವಿಸ್ತ್ರೀರ್ಣ 36 ಎಕರೆ 27 ಗುಂಟೆ, ಅದರಲ್ಲಿ 16 ಎಕರೆ 16 ಗುಂಟೆಯನ್ನು ಬಸ್ ನಿಲ್ದಾಣ, ಕೋರ್ಟ್ ಕಟ್ಟಡ, ಪೊಲೀಸ್ ಠಾಣೆ ಮತ್ತಿತರ ಸಾರ್ವಜನಿಕ ಬಳಕೆಗೆ ನೀಡಲಾಗಿದೆ. ಉಳಿದಂತೆ 20 ಎಕರೆಯನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಲಾಗುವುದು ಎಂದರು.
ಅಲ್ಲದೆ, ಕರ್ನಾಟಕ ರಾಜ್ಯ ರಸಗೊಬ್ಬರ ಅಭಿವೃದ್ಧಿ ಏಜೆನ್ಸಿ ಮತ್ತು ಎಪಿಎಂಸಿ ಮಾಡಿಕೊಂಡಿದ್ದ ಒತ್ತುವರಿಗಳನ್ನು ತೆರವು ಮಾಡಲಾಗಿದೆ. 8 ಗುಂಟೆ ಒತ್ತುವರಿ ಪ್ರದೇಶದಲ್ಲಿ ಅಯ್ಯಪ್ಪ ದೇಗುಲವಿದೆ. ಸುಪ್ರೀಂಕೋರ್ಟ್ 2009ರಲ್ಲಿ ನೀಡಿರುವ ತೀರ್ಪಿನ ಪ್ರಕಾರ 2009ಕ್ಕೂ ಹಿಂದೆ ನಿರ್ಮಾಣವಾಗಿರುವ ದೇವಾಲಯಗಳನ್ನು ಉಳಿಸಲು ನೀತಿ ರೂಪಿಸಲಾಗುವುದು ಎಂದು ನ್ಯಾಯಪೀಠಕ್ಕೆ ಹೇಳಿದರು.
ವಾದ ಆಲಿಸಿದ ನ್ಯಾಯಪೀಠ, ಎರಡು ವಾರಗಳಲ್ಲಿ ಸ್ಥಳೀಯ ತಹಸೀಲ್ದಾರ್‌ಗೆ ಪ್ರಮಾಣಪತ್ರ ಸಲ್ಲಿಸಲು ಸೂಚನೆ ನೀಡಿ ವಿಚಾರಣೆಯನ್ನು ಜು.23ಕ್ಕೆ ಮುಂದೂಡಿತು.