ಕಲಘಟಗಿ: ಪಟ್ಟಣದ ಪ್ಯಾಟಿ ಓಣಿಯಲ್ಲಿನ ಇತಿಹಾಸ ಪ್ರಸಿದ್ಧ ಹಜರತ್ ಪೀರ ರುಸ್ತುಂ ಶಹೀದ್ ದರ್ಗಾದ ಉರುಸ್, ಕಾಮಿಡಿ
ಕಿಲಾಡಿಗಳ ರಸಮಂಜರಿ, ಖವ್ವಾಲಿ ಮತ್ತು ಇನ್ನಿತರೆ ಧಾರ್ಮಿಕ ಕಾರ್ಯಕ್ರಮಗಳು ಏ. 10ರಿಂದ 12ರ ವರೆಗೆ ಜರುಗಲಿದೆ.
10ರಂದು ಮಧ್ಯಾಹ್ನ 4 ಗಂಟೆಗೆ ದರ್ಗಾದಿಂದ ಸಂದಲ್ ಫಕೀರರ ಜೊತೆಯಲ್ಲಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಯಲಿದೆ. ರಾತ್ರಿ 8 ಗಂಟೆಗೆ ಪೀರ-ಎ-ತರೀಖತ್ ಹಜರತ್ ಸೈಯದ್ ಅಬ್ದುಲ್ ರಜ್ಜಾಕ ಶಾ ಖಾದ್ರಿ ಕೇಸರಮುಡು ಸಾಹೇಬ ಅವರ ಸಮ್ಮುಖದಲ್ಲಿ ಸಂದಲ್ (ಗಂಧ)ವನ್ನು ಏರಿಸಲಾಗುವುದು. ರಾತ್ರಿ 10 ಗಂಟೆಗೆ ದರ್ಗಾದ ಆವರಣದಲ್ಲಿ ಗೋಕಾಕನ ಶ್ರೀ ಗುರು ರಾಘವೇಂದ್ರ ಮೆಲೋಡೀಸ್ ಆರ್ಕೆಸ್ಟ್ರಾ ತಂಡದಿಂದ ರಸಮಂಜರಿ ಹಾಗೂ ಪ್ರವೀಣಕುಮಾರ ಗಸ್ತಿ ಮತ್ತು ಹನುಮಂತ ಲಮಾಣಿ ಅವರಿಂದ ಹಾಸ್ಯ ಕಾರ್ಯಕ್ರಮ ಆಯೋಜಿಸಲಾಗಿದೆ.
ಉರುಸ್ ಕಮಿಟಿ ಅಧ್ಯಕ್ಷ ಮೆಹಬೂಬಅಲಿ ದಲಾಲ ಹಾಗೂ ಉಪಾಧ್ಯಕ್ಷ ದಾವಲಸಾಬ ಓದೇಕಾರ ಉದ್ಘಾಟಿಸಲಿದ್ದಾರೆ.
11ರಂದು ವಿವಿಧ ಧಾರ್ಮಿಕ ಚಟುವಟಿಕೆಗಳು ಜರುಗಲಿದ್ದು, ರಾತ್ರಿ 10:30ಕ್ಕೆ ದರ್ಗಾ ಮೈದಾನದಲ್ಲಿ ಜರುಗಲಿರುವ ಖವ್ವಾಲಿ ಕಾರ್ಯಕ್ರಮವನ್ನು ತಾಲೂಕಿನ ಅಂಜುಮನ್ ಇಸ್ಲಾಂ ಸಂಸ್ಥೆ ಅಧ್ಯಕ್ಷ ಅಜಮತುಲ್ಲಾಖಾನ ಜಹಗೀರದಾರ ಉದ್ಘಾಟಿಸುವರು. ಮುಂಬಯಿಯ ಛೋಟೆ ಅಜೀಮ ನಾಜಾ ಮತ್ತು ಕೊಲ್ಲಾಪುರದ ರಾಜ ಚಿಶಿ ಅವರಿಂದ ಖವ್ವಾಲಿ ಗಾನ ಸುಧೆ ಹರಿಯಲಿದೆ. 12ರಂದು ಬೆಳಗ್ಗೆ 11:15ಕ್ಕೆ ಗಲೀಫ ಏರಿಸುವುದು, ನಂತರ ಸಾರ್ವಜನಿಕರಿಗೆ ಅನ್ನ ಸಂತರ್ಪಣೆ ಜರುಗಲಿದೆ.