Advertisement
ಮಂಗಳೂರು: ಮಂಗಳೂರಿನಲ್ಲಿ ಹಜ್‌ಭವನ ನಿರ್ಮಾಣಕ್ಕೆ ಈಗಾಲೇ ರಾಜ್ಯಸರಕಾರ ಅನುದಾನ ಮಂಜೂರು ಮಾಡಿದ್ದು ಒಂದು ವರ್ಷದೊಳಗೆ ಹಜ್‌ಭವನ ನಿರ್ಮಾಣವಾಗುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ರಾಜ್ಯ ಹಜ್ ಸಚಿವ ಹಾಗೂ ಹಜ್ ಸಮಿತಿ ಅಧ್ಯಕ್ಷ ಆರ್. ರೋಶನ್ ಬೇಗ್ ಅವರು ಹೇಳಿದರು. ಕರ್ನಾಟಕ ರಾಜ್ಯ ಹಜ್ ಸಮಿತಿ ವತಿಯಿಂದ ಸೋಮವಾರ ಬಜಪೆ ಅನ್ಸಾರ್ ಶಾಲೆಯಲ್ಲಿ ಜರಗಿದ ಮಂಗಳೂರಿನಿಂದ ಹಜ್ ಯಾತ್ರೆಯ ವಿಮಾನ ಯಾನ ಉದ್ಘಾಟನೆ ಹಾಗೂ ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಈಗಾಗಲೇ ಸರಕಾರ 10 ಕೋ.ರೂ. ಮಂಜೂರು ಮಾಡಿದ್ದು ಮೊದಲ ಕಂತಾಗಿ 2.5 ಕೋ.ರೂ. ಬಿಡುಗಡೆ ಮಾಡಲಾಗಿದೆ. ಹಜ್ ಭವನ ನಿರ್ಮಾಣ ಶೀಘ್ರ ನಿರ್ಮಾಣ ಕುರಿತಂತೆ ಎಲ್ಲರೂ ಶ್ರಮಿಸಬೇಕು ಎಂದರು. ಪವಿತ್ರ ಹಜ್‌ಯಾತ್ರೆ ಪುಣ್ಯದ ಕಾರ್ಯ. ಇಲ್ಲಿಂದ ತೆರಳುವ ಪ್ರತಿಯೋರ್ವ ಹಜ್‌ಯಾತ್ರಿ ನಮ್ಮ ದೇಶದ, ರಾಜ್ಯ, ಜಿಲ್ಲೆಯ ಶಾಂತಿ, ಸಮೃದ್ಧಿಗಾಗಿ ಪ್ರಾರ್ಥಿಸಿರಿ ಎಂದವರು ಕರೆ ನೀಡಿದರು. ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಅವರು ಹಜ್ ಯಾತ್ರಿಗಳಿಗೆ ಶುಭ ಹಾರೈಸಿ ಪ್ರೀತಿ, ಸಾಮರಸ್ಯ, ಸೌಹಾರ್ದಕ್ಕಾಗಿ ದುವಾ ಮಾಡುವಂತೆ ಕೋರಿದರು. ದ.ಕ. ಖಾಝಿಗಳಾದ ತ್ವಾಖಾ ಅಹ್ಮದ್ ಮುಸ್ಲಿಯಾರ್ ಅವರು ಪ್ರಾರ್ಥಿಸಿದರು. ಉಡುಪಿ, ಹಾಸನ ಹಾಗೂ ಚಿಕ್ಕಮಗಳೂರು ಜಿಲ್ಲಾ ಸಂಯುಕ್ತ ಖಾಝಿಗಳಾದ ಪಿ.ಎಂ. ಇಬ್ರಾಹಿಂ ಮುಸ್ಲಿಯಾರ್ ಬೇಕಲ್ ಅವರು ಆಶೀರ್ವಚನ ನೀಡಿದರು. ಸಚಿವ ಯು.ಟಿ. ಖಾದರ್, ಶಾಸಕರಾದ ಕೆ.ಅಭಯಚಂದ್ರ ಜೈನ್, ಜೆ.ಆರ್. ಲೋಬೋ, ಬಿ.ಎ. ಮೊದೀನ್ ಬಾವಾ, ವಿಧಾನ ಪರಿಷತ್ ಮುಖ್ಯ ಸಚೇತಕ ಐವನ್ ಡಿ’ಸೋಜಾ ಅವರು ಶುಭಕೋರಿದರು.
Related Articles
Advertisement
ಮಂಗಳೂರಿನಿಂದ 790 ಹಜ್ ಯಾತ್ರಿಗಳು ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಕೊಡಗು ಹಾಗೂ ಹಾಸನ ಜಿಲ್ಲೆಗಳಿಗೆ ಸೇರಿದ 790 ಹಜ್ ಯಾತ್ರಿಗಳು ಮಂಗಳೂರು ಮೂಲಕ ಹಜ್ ಯಾತ್ರೆಗೆ ತೆರಳಲಿದ್ದಾರೆ. ಕರ್ನಾಟಕದಿಂದ ಹಜ್ ಯಾತ್ರೆಯ ಪ್ರಥಮ ವಿಮಾನ ಮಂಗಳೂರಿನಿಂದ ಹೋಗುತ್ತಿದ್ದು 3 ದಿನಗಳ ಕಾಲ ಒಟ್ಟು 5 ವಿಮಾನಗಳ ಮೂಲಕ ಯಾತ್ರಿಕರು ನೇರವಾಗಿ ಮದೀನಾಕ್ಕೆ ಪಯಣಿಸಲಿದ್ದಾರೆ. ಜು. 24ರಂದು ಸಂಜೆ 4.25ಕ್ಕೆ 158 ಹಜ್ ಯಾತ್ರಿಗಳನ್ನು ಒಳಗೊಂಡ ಪ್ರಥಮ ಏರ್‌ಇಂಡಿಯಾ ಎಕ್ಸ್‌ಪ್ರೆಸ್ ವಿಮಾನ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ನಿರ್ಗಮಿಸಿತು. ಜು. 25 ಹಾಗೂ 26ರಂದು ಮಧ್ಯಾಹ್ನ 12.55ಕ್ಕೆ ಹಾಗೂ ಸಂಜೆ 4.15ಕ್ಕೆ ದಿನಂಪ್ರತಿ ಎರಡು ವಿಮಾನಗಳು ತಲಾ 158 ಯಾತ್ರಿಗಳನ್ನು ಒಳಗೊಂಡು ನಿರ್ಗಮಿಸಲಿವೆ. 37ರಿಂದ 40 ದಿನಗಳವರೆಗೆ ಮಕ್ಕಾ ಹಾಗೂ ಮದೀನಾದಲ್ಲಿ ತಂಗಲಿದ್ದು ಸೆಪ್ಟಂಬರ್ ಮೊದಲ ವಾರದಲ್ಲಿ ಮರಳಿ ಬರಲಿದ್ದಾರೆ. ಕರ್ನಾಟಕದಿಂದ ಈ ಬಾರಿ ಹಜ್ ಸಮಿತಿ ಮೂಲಕ ಒಟ್ಟು 6,000 ಮಂದಿ ಹಜ್‌ಗೆ ತೆರಳುತ್ತಾರೆ. ಈ ಬಾರಿ ರಾಜ್ಯದಲ್ಲಿ 23,514 ಯಾತ್ರಾಕಾಂಕ್ಷಿಗಳು ಅರ್ಜಿ ಸಲ್ಲಿಸಿದ್ದರು.