ಮುಂಬಯಿ : ಪಾಕ್ ಐಎಸ್‌ಐ ಏಜಂಟ್ ಗೆ ಹಣ ಒದಗಿಸುತ್ತಿದ್ದ ಆರೋಪದ ಮೇಲೆ ಮುಂಬಯಿಯ 37ರ ಹರೆಯದ ಹವಾಲಾ ಆಪರೇಟರ್ ನನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಹವಾಲಾ ಆಪರೇಟರ್‌ನ ಹೆಸರು ಅಲ್‌ತಾಫ್ ಕುರೇಶಿ ಎಂದು ಗೊತ್ತಾಗಿದೆ. ಈತನನ್ನು ನಿನ್ನೆ ಬುಧವಾರ ರಾತ್ರಿ ದಕ್ಷಿಣ ಮುಂಬಯಿಯ ಮಸೀದಿ ಬಂದರು ಪ್ರದೇಶದಲ್ಲಿ ಬಂಧಿಸಲಾಯಿತು. ಮಹಾರಾಷ್ಟ್ರ ಮತ್ತು ಉತ್ತರ ಪ್ರದೇಶದ ಉಗ್ರ ನಿಗ್ರಹ ದಳದವರು ಈ ಬಂಧನ ನಡೆಸಿದರು.
ಫೈಜಾಬಾದ್‌ನಲ್ಲಿ ಬೇಹು ಚಟುವಟಿಕೆ ನಡೆಸಿಕೊಂಡಿದ್ದ ಪಾಕ್ ಐಎಸ್‌ಐ ಏಜಂಟ್ ಅಫ್ತಾಬ್ ಅಲಿಯನ್ನು ನಿನ್ನೆ ಲಕ್ನೋದಲ್ಲಿ ಬಂಧಿಸಲಾಗಿತ್ತು. ಅಫ್ತಾಬ್ ನ ಬ್ಯಾಂಕ್ ಖಾತೆಗೆ ಕುರೇಶಿ ಕಾಲಕಾಲಕ್ಕೆ ಹಣ ಜಮೆ ಮಾಡುತ್ತಿದ್ದ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.
ಹವಾಲಾ ಆಪರೇಟರ್ ಕುರೇಶಿ ಸ್ವತಃ ಒಬ್ಬ ಐಎಸ್‌ಐ ಏಜಂಟ್ ಎಂದು ಶಂಕಿಸಲಾಗಿದ್ದು ಅತನ ಮನೆಯಿಂದ ಒಂದು ಸೆಲ್ ಫೋನ್ ಮತ್ತು 71.57 ಲಕ್ಷ ರೂ. ನಗದನ್ನು ವಶಪಡಿಸಿಕೊಂಡಿದ್ದಾರೆ.
ನಿನ್ನೆ ಫೈಜಾಬಾದ್‌ನಲ್ಲಿ ಬಂಧಿತನಾಗಿದ್ದ ಐಎಸ್‌ಐ ಏಜಂಟ್ ಅಫ್ತಾಬ್ ತನಿಖಾಧಿಕಾರಿಗಳಲ್ಲಿ ಬಾಯಿ ಬಿಟ್ಟಿದ್ದಪ್ರಕಾರ ಹವಾಲಾ ಆಪರೇಟರ್ ಕುರೇಶಿಯನ್ನು ಸೆರೆ ಹಿಡಿಯಲಾಗಿತ್ತು. ಈತನು ಜಾವೇದ್ ನವೀವಾಲಾ ಎಂಬಾತನ ಪರವಾಗಿ ವಹಿವಾಟಿನಲ್ಲಿ ನಿರತವಾಗಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.