Advertisement

ಹಾವೇರಿ: ಮಹಿಳೆ-ಮಕ್ಕಳ ಅಕ್ರಮ ಸಾಗಾಟ ತಡೆಯಿರಿ-ಪುಟ್ಟರಾಜು

06:14 PM Mar 11, 2024 | Team Udayavani |

ಉದಯವಾಣಿ ಸಮಾಚಾರ
ಹಾವೇರಿ: ಮಹಿಳಾ ಮತ್ತು ಮಕ್ಕಳ ಅಕ್ರಮ ಸಾಗಾಟ ದೇಶಾದ್ಯಂತ ಸದ್ದಿಲ್ಲದಂತೆ ನಡೆಯುತ್ತಿದೆ. ಯಾರಿಗೂ ಕಾಣದಂತೆ ಒಂದು ದೊಡ್ಡ ಜಾಲ ವ್ಯವಸ್ಥಿತವಾಗಿ ಕಾರ್ಯನಿರ್ವಹಿಸುತ್ತಿದೆ. ಮಹಿಳೆ ಮತ್ತು ಮಕ್ಕಳ ಅನೈತಿಕ ಸಾಗಾಣಿಕೆ ತಡೆ ಎಲ್ಲರ ಜವಾಬ್ದಾರಿ ಎಂದು ಹಿರಿಯ ದಿವಾಣಿ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ
ಪುಟ್ಟರಾಜು ಹೇಳಿದರು.

Advertisement

ನಗರದ ತಾಪಂ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಪಂ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಚೈತನ್ಯ ರೂರಲ್‌ ಡೆವಲಪ್‌ಮೆಂಟ್‌  ಸೊಸೈಟಿ ಸಹಯೋಗದಲ್ಲಿ ಮಹಿಳೆಯರು ಮತ್ತು ಮಕ್ಕಳ ಅನೈತಿಕ ಸಾಗಾಣಿಕೆ ತಡೆಗಟ್ಟುವಿಕೆ ಕುರಿತು ನಡೆದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿ ಇಂತಹ ಪ್ರಕರಣಗಳು ಕಂಡುಬಂದಿಲ್ಲ. ಆದರೂ ಮುಂಜಾಗ್ರತೆ ವಹಿಸುವುದು ಹಾಗೂ ಸಾರ್ವಜನಿಕರಿಗೆ ಅರಿವು
ಮೂಡಿಸುವುದು ಅಗತ್ಯವಾಗಿದೆ. ಇಂತಹ ಪ್ರಕರಣಗಳು ಜಿಲ್ಲೆಯಲ್ಲಿ ನಡೆಯದಂತೆ ಎಲ್ಲರೂ ಎಚ್ಚುತ್ತುಕೊಳ್ಳಬೇಕು ಎಂದು ಹೇಳಿದರು.

ಮಹಿಳೆ ಮತ್ತು ಮಕ್ಕಳ ಸಾಗಾಣಿಕೆ ವ್ಯವಸ್ಥಿತವಾಗಿ ನಡೆಯುತ್ತಿದೆ. ಈ ಅನೈತಿಕ ಸಾಗಾಣಿಕೆ ಉದ್ಯೋಗ ಹಾಗೂ ಇತರೆ
ಆಮಿಷಗಳನ್ನು ತೋರಿಸಿ ಆರಂಭವಾಗಿ ಕೊನೆಗೆ ಎಲ್ಲಿಗೆ ಹೋಗುತ್ತದೆ ಎಂದು ಅವರ ಅರಿವಿಗೆ ಬರುವುದಿಲ್ಲ. ಮಹಿಳಾ ಮತ್ತು ಮಕ್ಕಳ ಅನೈತಿಕ ಸಾಗಾಣಿಕೆ ತಡೆ ಕುರಿತು ವಿವಿಧ ಇಲಾಖೆಗಳನ್ನೊಂಡ ಸಮಿತಿ ರಚಿಸಲಾಗಿದೆ.

ಈ ಸಮಿತಿ ಇಂತಹ ಪ್ರಕರಣಗಳ ಕುರಿತು ನಿಗಾವಹಿಸುವುದು, ವಿಚಾರಣೆ ನಡೆಸುವುದು ಹಾಗೂ ಅರಿವು ಮೂಡಿಸುವುದು ಈ ಸಮಿತಿ ಉದ್ದೇಶವಾಗಿದೆ. ಇಂತಹ ಪ್ರಕರಣಗಳು ಕಂಡುಬಂದರೆ ಸಂಬಂಧಿಸಿದ ಇಲಾಖೆಗೆ ತಿಳಿಸುವ ಮೂಲಕ ಮಹಿಳಾ ಮತ್ತು ಮಕ್ಕಳ ಅನೈತಿಕ ಸಾಗಾಣಿಕೆ ತಡೆಗೆ ಇಲಾಖೆಗಳೊಂದಿಗೆ ಎಲ್ಲರೂ ಕೈಜೋಡಿಸಬೇಕು ಎಂದು ಹೇಳಿದರು.

Advertisement

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಜಿಲ್ಲಾ ಕಾರ್ಮಿಕ ಅಧಿಕಾರಿ ಮಹೇಶ ಕುಳಲಿ ಮಾತನಾಡಿ, ಬಡತನ, ಅನಕ್ಷರತೆ, ತಂದೆ-ತಾಯಿ ಇಲ್ಲದ ಮಕ್ಕಳು, ಕೆಲಸದ ಸಂದರ್ಭದಲ್ಲಿ ಅನೈತಿಕ ಸಾಗಾಣಿಕೆ ಪ್ರಕರಣಗಳು ನಡೆಯುತ್ತದೆ. ಹಾಗಾಗಿ ಇಂತಹ ಪ್ರಕರಣಗಳು ಜಿಲ್ಲೆಯಲ್ಲಿ ನಡೆಯದಂತೆ ಎಲ್ಲರೂ ನೋಡಿಕೊಳ್ಳಬೇಕು ಎಂದರು.

ಸಂಪನ್ಮೂಲ ವ್ಯಕ್ತಿಗಳಾಗಿ ಪೆನಲ್‌ ವಕೀಲರಾದ ರೆಹನಾ ಚನ್ನಪಟ್ಟಣ ಹಾಗೂ ಕಾನೂನು ಸಲಹೆಗಾರರಾದ ಸುನಿತಾ ತಳವಾರ
ಭಾಗವಹಿಸಿದ್ದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಶ್ರೀನಿವಾಸ ಆಲದರ್ತಿ, ಜಿಲ್ಲಾ ಮಕ್ಕಳ ರಕ್ಷಣಾಧಿ ಕಾರಿ ಅನ್ನಪೂರ್ಣ ಸಂಗಳದ, ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ಎಸ್‌. ಎಚ್‌. ಮಜೀದ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next