Advertisement

ಆಂಬ್ಯುಲೆನ್ಸ್‌ಗೆ ಅನಾರೋಗ್ಯ!

11:48 AM Feb 20, 2019 | Team Udayavani |

ಹಾವೇರಿ: 24 ಗಂಟೆಯೂ ಸಜ್ಜಾಗಿದ್ದು ಜನರಿಗೆ ತುರ್ತು ಸಂದರ್ಭದಲ್ಲಿ ಆರೋಗ್ಯ ಸೇವೆ ನೀಡಬೇಕಾದ ಆಂಬ್ಯುಲೆನ್ಸ್‌ ವಾಹನಗಳೇ ನಿತ್ಯ ಚಿಕಿತ್ಸೆಗಾಗಿ ಗ್ಯಾರೇಜ್‌ ಗಳಿಗೆ ದಾಖಲಾಗುತ್ತಿದ್ದು, ಸಮರ್ಪಕ ಆಂಬ್ಯುಲೆನ್ಸ್‌ ಸೇವೆ ಮರೀಚಿಕೆಯಾಗಿದೆ.

Advertisement

ಜಿಲ್ಲೆಯ ಎಂಟು ತಾಲೂಕು ಆಸ್ಪತ್ರೆಗಳು ಸೇರಿ ಹಲವು ಸಮುದಾಯ ಆರೋಗ್ಯ ಕೇಂದ್ರ, ಪ್ರಾಥಮಿಕ ಆರೋಗ್ಯ ಕೇಂದ್ರಗಳಿವೆ. ಹಾವೇರಿಯ ಜಿಲ್ಲಾಸ್ಪತ್ರೆ ಸೇರಿದಂತೆ ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲಿ ರೋಗಿಗಳನ್ನು ತುರ್ತಾಗಿ ಆಸ್ಪತ್ರೆಗಳಿಗೆ ಕರೆದುಕೊಂಡು ಹೋಗಲು, ಕರೆ ತರಲು ಆಂಬ್ಯುಲೆನ್ಸ್‌, ‘ನಗು-ಮಗು’ ಸೇರಿದಂತೆ ಹಲವು ಆಂಬ್ಯುಲೆನ್ಸ್‌ಗಳು ಇವೆ. ಆದರೆ, ಅವುಗಳಲ್ಲಿ ಬಹುತೇಕ ವಾಹನಗಳು ಗ್ಯಾರೇಜ್‌ಗಳಲ್ಲಿಯೇ ಇರುವುದು ವಿಷಾದನೀಯ ಸಂಗತಿ.

ಇಲಾಖೆ ದಾಖಲೆಯಂತೆ ಜಿಲ್ಲೆಯಲ್ಲಿ 21 ಆಂಬ್ಯುಲೆನ್ಸ್‌ಗಳಿವೆ. ಆದರೆ ಕಾರ್ಯಾಚರಣೆಯಲ್ಲಿರುವ ವಾಹನಗಳು 15 ಮಾತ್ರ. ಇನ್ನುಳಿದ ವಾಹನಗಳು ಅಪಘಾತಕ್ಕೀಡಾಗಿ, ದುರಸ್ತಿಗಾಗಿ ಮೂಲೆ ಸೇರಿವೆ. ಇದ್ದ ವಾಹನಗಳು ಸಹ ಆಗಾಗ ಗ್ಯಾರೇಜ್‌ಗಳಿಗೆ ಹೋಗಿ ಮೂರ್‍ನಾಲ್ಕು ದಿನ ನಿಂತು ದುರಸ್ತಿ ಮಾಡಿಕೊಂಡು ಬರುವ ಸ್ಥಿತಿ ಇದೆ.

ವಾಹನಗಳ ನಿರ್ವಹಣೆ ಗುತ್ತಿಗೆ ಪಡೆದ ಸಂಸ್ಥೆ ವಾಹನಗಳ ದುರಸ್ತಿಗೆ ನಿರ್ಲಕ್ಷ್ಯ  ತೋರುತ್ತಿರುವುದರಿಂದ ಸಮಸ್ಯೆ ಎದುರಿಸುವಂತಾಗಿದೆ. ಆಂಬ್ಯುಲೆನ್ಸ್‌ ವಾಹನಗಳನ್ನು ಕಾಲ ಕಾಲಕ್ಕೆ ದುರಸ್ತಿ ಪಡಿಸದೆ ಇರುವುದರಿಂದ ವಾಹನಗಳು ತುರ್ತು ಸಂದರ್ಭದಲ್ಲಿಯೇ ಕೈಕೊಡುವ ಸ್ಥಿತಿ ತಲುಪಿವೆ.

ಸಿಬ್ಬಂದಿ ಕೊರತೆ: ವಾಹನಗಳ ದುರಸ್ತಿ ಸಮಸ್ಯೆ ಒಂದು ಕಡೆಯಾದರೆ ಆ್ಯಂಬುಲೆನ್ಸ್ ಗಳು ಅಗತ್ಯ ಸಿಬ್ಬಂದಿ ಕೊರೆತೆಯನ್ನು ಎದುರಿಸುತ್ತಿವೆ. ನಿತ್ಯ ಜಿಲ್ಲೆಯಲ್ಲಿ ಸುಮಾರು 5ರಿಂದ 6 ವಾಹನಗಳು ಚಾಲಕರು ಹಾಗೂ ಅಗತ್ಯ ಸಿಬ್ಬಂದಿ ಇಲ್ಲದೇ ನಿಂತಲ್ಲಿಯೇ ನಿಲ್ಲುವಂಥ ಪರಿಸ್ಥಿತಿಯೂ ಇದೆ.
ಜಿಲ್ಲೆಯಲ್ಲಿ 82 ಸಿಬ್ಬಂದಿ ಮಾತ್ರ ಕಾರ್ಯ ನಿರ್ವಹಿಸುತ್ತಿದ್ದು, ಇನ್ನು 18 ಸಿಬ್ಬಂದಿ ಅವಶ್ಯತೆ ಇದೆ. ಸದ್ಯ ಕಾರ್ಯ ನಿರ್ವಹಿಸುತ್ತಿರುವ ಸಿಬ್ಬಂದಿ ರಜೆ ಮೇಲೆ ತೆರಳಿದ ಸಂದರ್ಭದಲ್ಲಿ ಮತ್ತಷ್ಟು ಸಿಬ್ಬಂದಿ ಸಮಸ್ಯೆ ಎದುರಿಸಬೇಕಾಗುತ್ತದೆ. ಒಟ್ಟಾರೆ ಜಿಲ್ಲೆಯಲ್ಲಿ ಸಮರ್ಪಕ ಆಂಬ್ಯುಲೆನ್ಸ್‌ ಸೇವೆ ನೀಡಲು 100 ಸಿಬ್ಬಂದಿ ಅಗತ್ಯವಿದೆ ಎಂದು ಇಲಾಖೆಯ ಸಿಬ್ಬಂದಿಯೇ ತಿಳಿಸುತ್ತಾರೆ.

Advertisement

ಜಿಲ್ಲೆಯಲ್ಲಿ ಆಂಬ್ಯುಲೆನ್ಸ್‌ ಸೇವೆ ಸಮರ್ಪಕವಾಗಿ ಇಲ್ಲದೇ ಇರುವುದರಿಂದ ಜನರು ಅನಿವಾರ್ಯವಾಗಿ ಖಾಸಗಿ ಆ್ಯಂಬುಲೆನ್ಸ್‌ಗಳ ಮೊರೆ ಹೋಗುವಂತಾಗಿದೆ. ಜನರ ಜೀವರಕ್ಷಣೆಯಲ್ಲಿ ಬಹುದೊಡ್ಡ ಪಾತ್ರ ವಹಿಸುವ ಆ್ಯಂಬುಲೆನ್ಸ್‌ಗಳನ್ನು ದುರಸ್ತಿ ಮಾಡಿಸಿ, ಸಮರ್ಪಕವಾಗಿ ಬಳಸಿಕೊಳ್ಳುವ ಕಾರ್ಯ ಶೀಘ್ರ ಆಗಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.

ಸಮಸ್ಯೆ ಕಾಣುತ್ತಿಲ್ಲವೆ?
ಇತ್ತಿಚೇಗೆ ಬ್ಯಾಡಗಿಯಲ್ಲಿ ಪುರಸಭೆ ಮಾಜಿ ಅಧ್ಯಕ್ಷೆ ಮನೆಯಲ್ಲಿ ಸಿಲಿಂಡರ್‌ ಸ್ಪೋಟಗೊಂಡ ಪರಿಣಾಮ 8 ಜನರಿಗೆ ಸುಟ್ಟ ಗಾಯಗಳಾಗಿದ್ದವು. ಅದರಲ್ಲಿ ಮೂವರ ಸ್ಥಿತಿ ಗಂಭೀರವಾಗಿತ್ತು. ಅವರನ್ನು ದಾವಣಗೆರೆ ಆಸ್ಪತ್ರೆಗೆ ದಾಖಲಿಸಲು ಮುಂದಾದಾಗ ಸ್ಥಳೀಯ ಆರೋಗ್ಯ ಕೇಂದ್ರದಲ್ಲಿದ್ದ ಆಂಬ್ಯುಲೆನ್ಸ್‌ ಚಾಲಕ ಕುಂಟುನೆಪ ಹೇಳಿ ಪರಾರಿಯಾಗಿದ್ದ. ಪರಿಣಾಮ ಒಂದೇ ವಾಹನದಲ್ಲಿ ಮೂವರನ್ನೂ ಕರೆದೊಯ್ಯಲಾಗಿತ್ತು. ಆಂಬ್ಯುಲೆನ್ಸ್‌ ಚಾಲಕನ ವರ್ತನೆಗೆ ಜಿಲ್ಲಾದ್ಯಂತ ಆಕ್ರೋಶ ವ್ಯಕ್ತವಾಗಿತ್ತು. ಇದಲ್ಲದೆ ತುರ್ತು ಸಂದರ್ಭದಲ್ಲಿ ಆಂಬ್ಯುಲೆನ್ಸ್‌ ಸ್ಥಳಕ್ಕಾಗದ ಪರಿಣಾಮ ಹಲವು ಸಮಸ್ಯೆಗಳಾಗಿವೆ. ಇಷ್ಟಾದರೂ ಜಿಲ್ಲಾ ಆರೋಗ್ಯಾಧಿಕಾರಿ ಡಾ| ರಾಘವೇಂದ್ರಸ್ವಾಮಿ ಅವರ ಪ್ರಕಾರ ಈ ವರೆಗೆ ಯಾವುದೇ ಸಮಸ್ಯೆ ಆಗಿಲ್ಲ ಎಂದು ತಿಳಿಸಿದ್ದಾರೆ.

ತುರ್ತು ಸೇವೆಯ ‘ಆರೋಗ್ಯ ಕವಚ 108’ ವಾಹನಗಳಲ್ಲಿ ಕೆಲವು ಕೆಲ ಸಣ್ಣಪುಟ್ಟ ದುರಸ್ತಿ
ಇರುವುದರಿಂದ ನಿಲ್ಲುತ್ತವೆ. ಆದರೆ, ಸಾರ್ವಜನಿಕರಿಗೆ ಸಮಸ್ಯೆಯಾದ ಬಗ್ಗೆ ಈ ವರೆಗೆ ಯಾವುದೇ ದೂರು ಬಂದಿಲ್ಲ. ವಾಹನಗಳನ್ನು ಸುಸ್ಥಿತಿಯಲ್ಲಿಟ್ಟುಕೊಳ್ಳಲು ಗುತ್ತಿಗೆದಾರಿಗೆ ಸೂಚಿಸಲಾಗುವುದು.
ಡಾ| ರಾಘವೇಂದ್ರಸ್ವಾಮಿ, ಡಿಎಚ್‌ಒ

ಜಿಲ್ಲೆಯಲ್ಲಿ ಸಮರ್ಪಕ ಸೇವೆ ನೀಡಲು ಅಗತ್ಯ ಸಿಬ್ಬಂದಿ ಅವಶ್ಯಕತೆಯಿದ್ದು, ಸದ್ಯ 82 ಸಿಬ್ಬಂದಿ
ಕಾರ್ಯ ನಿರ್ವಹಿಸುತ್ತಿದ್ದಾರೆ. ಇನ್ನು 18 ಸಿಬ್ಬಂದಿ ಕೊರತೆ ಇದೆ. ಸಿಬ್ಬಂದಿ ಕೊರೆತೆಯಿಂದಾಗಿ ಹಲವಾರು ಆ್ಯಂಬುಲೆನ್ಸ್‌ಗಳು ನಿಂತಲ್ಲಿಯೇ ನಿಲ್ಲುವ ಪರಿಸ್ಥಿತಿ ನಿರ್ಮಾಣವಾಗಿದೆ.
ಹೆಸರು ಹೇಳಲಿಚ್ಛಿಸದ ‘108’ ಅಂಬ್ಯುಲ್‌ನ್ಸ್‌ ಸಿಬ್ಬಂದಿ

Advertisement

Udayavani is now on Telegram. Click here to join our channel and stay updated with the latest news.

Next