Advertisement

ಬಸ್‌ ನಿಲ್ಲಿಸದ ಚಾಲಕ: ವಿದ್ಯಾರ್ಥಿಗಳ ಆಕ್ರೋಶ

06:09 PM Oct 02, 2022 | Team Udayavani |

ಬಂಕಾಪುರ: ಮಣ್ಣೂರ ಗ್ರಾಮಕ್ಕೆ ಬಸ್‌ ನಿಲುಗಡೆಗೊಳಿಸದೇ ಪಲಾಯನಗೈದ ಬಸ್‌ನ್ನು ಬೆನ್ನತ್ತಿ ಹೋದ ವಿದ್ಯಾರ್ಥಿಗಳು ಹಾಗೂ ಪಾಲಕರು, ಬಂಕಾಪುರ ಬಸ್‌ ನಿಲ್ದಾಣದಲ್ಲಿ ಬಸ್‌ ತಡೆದು, ಚಾಲಕನನ್ನು ತೀವ್ರ ತರಾಟೆಗೆ ತೆಗೆದುಕೊಂಡ ಘಟನೆ ಶನಿವಾರ ಬೆಳಿಗ್ಗೆ ನಡೆದಿದೆ.

Advertisement

ಬಂಕಾಪುರ, ಹಾವೇರಿ, ಹಾನಗಲ್ಲ, ಶಿಗ್ಗಾವಿ, ಸವಣೂರ ಸೇರಿದಂತೆ ವಿವಿಧ ಶಾಲಾ, ಕಾಲೇಜುಗಳಿಗೆ ನೂರಾರು ವಿದ್ಯಾರ್ಥಿಗಳು ಪ್ರತಿನಿತ್ಯ ಸಂಚರಿಸುತ್ತೇವೆ. ಆದರೆ, ಬಸ್‌ ಚಾಲಕರು ವಿದ್ಯಾರ್ಥಿಗಳನ್ನು ಕಂಡರೆ ಬಸ್‌ ನಿಲ್ಲಿಸದೇ ಪಲಾಯನಗೈಯುತ್ತಾರೆ. ಇದರಿಂದ ನಮ್ಮ ವ್ಯಾಸಂಗಕ್ಕೆ ತುಂಬಾ ತೊಂದರೆಯಾಗುತ್ತಿದೆ. ಚಾಲಕರಿಗೆ ಬಸ್‌ ನಿಲುಗಡೆಗೊಳಿಸಲು ಮೇಲಧಿಕಾರಿಗಳಿಂದ ಅಧಿಕೃತ ಆದೇಶವಿದ್ದರೂ ಅದನ್ನು ಪಾಲಿಸದೇ ವಿದ್ಯಾರ್ಥಿಗಳನ್ನು ಕಂಡರೆ ಮಲತಾಯಿ ಧೋರಣೆ ಅನುರಿಸುತ್ತಿದ್ದಾರೆ ಎಂದು ದೂರಿದರು.

ನಾವು ಕೂಡಾ ಮುಂಗಡ ಹಣ ನೀಡಿ ಬಸ್‌ ಪಾಸ್‌ ಪಡೆದಿರುತ್ತೇವೆ. ಆದರೆ, ಚಾಲಕರು ಬಸ್‌ ಖಾಲಿಯಿದ್ದರೂ ವಿದ್ಯಾರ್ಥಿಗಳನ್ನು ಕಂಡರೆ ಬಸ್‌ ನಿಲ್ಲಿಸದೇ ತೆರಳುತ್ತಿದ್ದಾರೆ ಎಂದು ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದರು.

ಸರ್ಕಾರ ವಿದ್ಯಾರ್ಥಿಗಳ ವ್ಯಾಸಂಗಕ್ಕೆ ಅನುಕೂಲ ಕಲ್ಪಿಸುವ ದೃಷ್ಟಿಯಿಂದ ರಿಯಾಯಿತಿ ದರದಲ್ಲಿ ಬಸ್‌ಪಾಸ್‌ ವಿತರಿಸಿದೆ. ಆದರೆ, ದೇವರು ವರ ಕೊಟ್ಟರೂ ಪೂಜಾರಿ ವರ ನೀಡಲಿಲ್ಲ ಎನ್ನುವಂತೆ ಚಾಲಕರು ವಿದ್ಯಾರ್ಥಿಗಳಿಗೆ ಮಲತಾಯಿ ಧೋರಣೆ ತೋರುತ್ತಿದ್ದಾರೆ. ಹಾಗಾದರೆ, ಬಸ್‌ ಚಾಲಕ, ನಿರ್ವಾಹಕರು ವಿದ್ಯಾರ್ಥಿ ಜೀವನ ಮುಗಿಸದೇ ನೌಕರಿಗೆ ಬಂದರಾ? ಇವರಿಗೆ ವಿದ್ಯಾರ್ಥಿಗಳ ಸಮಸ್ಯೆ ಅರ್ಥವಾಗುವುದಿಲ್ಲವಾ? ಎಂದು ಬಸ್‌ ಚಾಲಕನನ್ನು ತರಾಟೆಗೆ ತೆಗೆದುಕೊಂಡರು.

ಗದಗ ಡಿಪೋ ಬಸ್‌ಗಳನ್ನು ಮಣ್ಣೂರ ಗ್ರಾಮಕ್ಕೆ ನಿಲುಗಡೆಗೊಳಿಸಿ ತೆರಳುವಂತೆ ಆದೇಶವಿದೆ. ಮಣ್ಣೂರಿನಿಂದ ಸವಣೂರ ಹಾಗೂ ಬಂಕಾಪುರಕ್ಕೆ ಒಂದು ಸ್ಟೇಜ್‌ ಹಣ (10ರೂ.) ಪಡೆಯುವಂತೆ ಆದೇಶವಿದ್ದರೂ ಎರಡು ಸ್ಟೇಜ್‌ ಹಣ ಪಡೆಯುತ್ತಿದ್ದಾರೆ. ಇದು ಸಾರ್ವಜನಿಕರ ವಿರೋಧಿ ನೀತಿಯಾಗಿದೆ. ಅಂತಹವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ವಿದ್ಯಾರ್ಥಿಗಳು ಆಗ್ರಹಿಸಿದರು.

Advertisement

ವಿಷಯ ತಿಳಿದು ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಪಿಎಸ್‌ಐ ಪರಶುರಾಮ ಕಟ್ಟಿಮನಿ ಅವರು, ವಿದ್ಯಾರ್ಥಿಗಳ ಅಹವಾಲು ಆಲಿಸಿ ಮಾತನಾಡಿ, ಬಸ್‌ ನಿಲ್ಲಿಸಿ ಪ್ರತಿಭಟನೆ ಮಾಡುವುದು ಸರಿಯಾದ ಕ್ರಮವಲ್ಲ. ಬಸ್‌ ಚಾಲಕ ತಪ್ಪು ಮಾಡಿದರೆ ಅವರ ಮೇಲೆ ಸಂಬಂಧಿಸಿದ ಮೇಲಧಿ ಕಾರಿಗಳಿಗೆ ದೂರು ಕೊಡಿ. ಚಾಲಕ ತಪ್ಪು ಮಾಡಿದರೆ ಅವರ ಮೇಲೆ ಮೇಲಧಿಕಾರಿಗಳು ಕ್ರಮ ಜರುಗಿಸುತ್ತಾರೆ ಎಂದು ವಿದ್ಯಾರ್ಥಿಗಳನ್ನು ಸಮಾಧಾನಪಡಿಸಿದರು. ನಂತರ ವಿದ್ಯಾರ್ಥಿಗಳು ಪ್ರತಿಭಟನೆ ಹಿಂಪಡೆದರು.

ಶ್ರೀಕಾಂತ ಪಾಟೀಲ, ಮಲ್ಲೇಶಪ್ಪ ವಟವಟಿ, ಪುಟ್ಟಯ್ಯ ಮಡ್ಲಿಮಠ, ಸಚಿನ್‌ಗೌಡ ಪಾಟೀಲ, ಸುರೇಶ ಉಳ್ಳಟ್ಟಿ, ವಿಶ್ವನಾಥ, ಚಂದ್ರಗೌಡ, ಯಲ್ಲಪ್ಪಗೌಡ, ನಂದಿಧೀಶ ಪಾಟೀಲ ಇತರರು ಭಾಗವಹಿಸಿದ್ದರು.

ವಿದ್ಯಾರ್ಥಿ ಜೀವನ ಮುಗಿಸದೇ ನೌಕರಿಗೆ ಪಡೆದರಾ? ಬಸ್‌ ಚಾಲಕ, ನಿರ್ವಾಹಕರು ವಿದ್ಯಾರ್ಥಿ ಜೀವನ ಮುಗಿಸದೇ ನೌಕರಿಗೆ ಪಡೆದರಾ? ಇವರಿಗೆ ವಿದ್ಯಾರ್ಥಿಗಳ ಸಮಸ್ಯೆ ಅರ್ಥವಾಗುವುದಿಲ್ಲವಾ? ಎಂದು ಪ್ರತಿಭಟನಾಕಾರರು ಬಸ್‌ ಚಾಲಕನನ್ನು ತರಾಟೆಗೆ ತೆಗೆದುಕೊಂಡರು. ನಂತರ ಪಿಎಸ್‌ಐ ಪರಶುರಾಮ ಕಟ್ಟಿಮನಿ ಅವರು ವಿದ್ಯಾರ್ಥಿಗಳನ್ನು ಸಮಾಧಾನಪಡಿಸಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next