ಹಾವೇರಿ: ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿಯಡಿ ರೈತರ ಖಾತೆಗೆ ನೇರವಾಗಿ ಹಣ ಸಂದಾಯ ಮಾಡುವ ಪರಿಷ್ಕೃತ ಯೋಜನೆಯಿಂದ ಫಲಾನುಭವಿ ರೈತರ ಸಂಖ್ಯೆ 1.58 ಲಕ್ಷದಿಂದ ಎರಡು ಲಕ್ಷಕ್ಕೆ ಏರಿದ್ದು ರೈತರಿಂದ ಮಾಹಿತಿ, ದಾಖಲೆ ಸಂಗ್ರಹ ಪ್ರಗತಿ ಶೇ. 80ರಷ್ಟಾಗಿದೆ.
Advertisement
ಈ ಯೋಜನೆಯಿಂದ ಲಾಭ ಪಡೆಯಬಹುದಾದ ರೈತರ ಸಂಖ್ಯೆ ಎರಡು ಲಕ್ಷದಷ್ಟಿದ್ದು, ಇದರಲ್ಲಿ ಈಗಾಗಲೇ 33,000 ರೈತರು ಮೊದಲ ಕಂತಾಗಿ ತಲಾ ಎರಡು ಸಾವಿರ ರೂ. ಪಡೆದುಕೊಂಡಿದ್ದಾರೆ.
Related Articles
Advertisement
ಶೇ. 80ರಷ್ಟು ಪ್ರಗತಿ: ಜಿಲ್ಲೆಯ ಕೃಷಿ ಇಲಾಖೆ ಅಧಿಕಾರಿಗಳು ರೈತರ ಮಾಹಿತಿ ಸಂಗ್ರಹಿಸಿ, ಆನ್‌ಲೈನ್‌ನಲ್ಲಿ ಅಪ್‌ಲೋಡ್ ಮಾಡುವ ಪ್ರಕ್ರಿಯೆಯಲ್ಲಿ ನಿರತರಾಗಿದ್ದಾರೆ. ಈವರೆಗೆ 1.82ಲಕ್ಷ ರೈತರ ಮಾಹಿತಿ, ದಾಖಲೆ ಅಪ್‌ಲೊಡ್ ಆಗಿದ್ದು ಇನ್ನೂ ಸರಾಸರಿ 20 ಸಾವಿರ ರೈತರ ಮಾಹಿತಿ, ದಾಖಲೆ ಅಪ್‌ಲೋಡ್ ಆಗಬೇಕಾಗಿದೆ. ರೈತರ ಮಾಹಿತಿ ಹಾಗೂ ದಾಖಲೆ ಅಪ್‌ಲೋಡ್ ಮಾಡುವಲ್ಲಿ ಶೇ. 80ರಷ್ಟು ಪ್ರಗತಿಯಾಗಿದ್ದು ಈ ತಿಂಗಳೊಳಗೆ ಎಲ್ಲ ರೈತರ ಮಾಹಿತಿ ಅಪ್‌ಲೋಡ್ ಮಾಡಿ ಮೊದಲ ಕಂತನ್ನು ರೈತರ ಖಾತೆಗೆ ತಲುಪುವಂತೆ ಮಾಡಲು ಕ್ರಮ ವಹಿಸಲಾಗಿದೆ.
20ಸಾವಿರ ರೈತರು ಅನರ್ಹರು: ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆ ಫಲ ಪಡೆಯಲು ಕೇಂದ್ರವು ರೂಪಿಸಿರುವ ನಿಯಮಾವಳಿ ಪ್ರಕಾರ ಜಿಲ್ಲೆಯ ಅಂದಾಜು 28ಸಾವಿರ ರೈತರು ಈ ಯೋಜನೆಯ ಲಾಭ ಸಿಗುವುದಿಲ್ಲ. ರೈತರಾಗಿದ್ದರೂ ಹಾಲಿ, ಮಾಜಿ ಸಂವಿಧಾನಿಕ ಹುದ್ದೆ ಹೊಂದಿದ್ದರೆ, ಸರಕಾರಿ ನೌಕರಿಯಲ್ಲಿದ್ದರೆ, ನಿವೃತ್ತರಾಗಿ ಪಿಂಚಣಿ ಪಡೆಯುತ್ತಿದ್ದರೆ, ಆದಾಯ ತೆರಿಗೆ ಪಾವತಿದಾರರಿಗೆ ಯೋಜನೆಯ ಸವಲತ್ತು ಸಿಗುವುದಿಲ್ಲ. ಜಿಲ್ಲೆಯಲ್ಲಿ ಒಟ್ಟು 2.28 ಲಕ್ಷ ರೈತರಿದ್ದು ಇದರಲ್ಲಿ 28ಸಾವಿರ ರೈತರು ಈ ನಿಯಮಾವಳಿಯಡಿ ಬರುವುದರಿಂದ ಜಿಲ್ಲೆಯಲ್ಲಿ ಅಂದಾಜು ಎರಡು ಲಕ್ಷ ರೈತರು ಕಿಸಾನ್ ಸಮ್ಮಾನ್ ಯೋಜನೆಯ ಲಾಭಕ್ಕೆ ಅರ್ಹರಾಗಿದ್ದಾರೆ.
ಅರ್ಜಿ ಸಲ್ಲಿಕೆ ಕಡ್ಡಾಯ: ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆ ಪ್ರಯೋಜನ ಪಡೆಯಲು ರೈತರು ಅರ್ಜಿ ಸಲ್ಲಿಸಲೇಬೇಕು. ಅರ್ಜಿಯೊಂದಿಗೆ ಆಧಾರ್ ಕಾರ್ಡ್ ಪ್ರತಿ ನೀಡಬೇಕಾಗಿದೆ. ಹೊಸ ಆಧಾರ್, ಆಧಾರ್ ತಿದ್ದುಪಡಿ ಸೇರಿದಂತೆ ಆಧಾರ್‌ಗೆ ಸಂಬಂಧಿಸಿದ ಪ್ರಕ್ರಿಯೆಗಾಗಿ ಜನರು ಆಧಾರ್ ಕೇಂದ್ರಗಳತ್ತ ಧಾವಿಸುತ್ತಿದ್ದು, ಆಧಾರ್ ಕೇಂದ್ರಗಳತ್ತ ಜನದಟ್ಟಣೆ ಹೆಚ್ಚಾಗಿದ್ದು, ಎರಡ್ಮೂರು ದಿನ ಓಡಾಡಿ ಆಧಾರ್ ಮಾಡಿಸಿಕೊಳ್ಳುವ ಸ್ಥಿತಿ ಇರುವುದರಿಂದ ಕಿಸಾನ್ ಸಮ್ಮಾನ್ ಯೋಜನೆಯೇ ವೇಗದ ಪ್ರಗತಿಗೆ ಅಡ್ಡಿಯಾಗಿದೆ.
ಒಟ್ಟಾರೆ ಕಿಸಾನ್ ಸಮ್ಮಾನ್ ಯೋಜನೆ ಸಮರ್ಪಕವಾಗಿ ಅನುಷ್ಠಾನಗೊಳಿಸಿ ರೈತರಿಗೆ ಲಾಭ ದೊರಕಿಸುವ ಕಾರ್ಯ ಕೃಷಿ ಇಲಾಖೆಯಿಂದ ಮುಂದುವರಿದಿದೆ.
ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯನ್ನು ಎಲ್ಲ ರೈತರಿಗೂ ವಿಸ್ತರಿಸಲಾಗಿರುವುದರಿಂದ ಜಿಲ್ಲೆಯಲ್ಲಿ 48000 ರೈತರಿಗೆ ಹೆಚ್ಚುವರಿಯಾಗಿ ಲಾಭ ದೊರಕಲಿದೆ. ರೈತರಿಂದ ಮಾಹಿತಿ ಸಂಗ್ರಹ ಕಾರ್ಯ ಶೇ. 80ರಷ್ಟು ಆಗಿದ್ದು, ಈ ತಿಂಗಳಲ್ಲಿ ಶೇ. 100ರಷ್ಟು ಪ್ರಗತಿ ಸಾಧಿಸುವ ಗುರಿ ಹೊಂದಲಾಗಿದೆ.•ಬಿ. ಮಂಜುನಾಥ
ಜಂಟಿ ನಿರ್ದೇಶಕರು, ಕೃಷಿ ಇಲಾಖೆ