ಹಾವೇರಿ: ಜಿಲ್ಲಾ ಪಂಚಾಯಿತಿ ನೂತನ ಅಧ್ಯಕ್ಷರಾಗಿ ಶಿಗ್ಗಾವಿ ತಾಲೂಕು ದುಂಢಸಿ ಜಿಪಂ ಕ್ಷೇತ್ರದ ಬಸನಗೌಡ ದೇಸಾಯಿ ಆಯ್ಕೆಯಾದರು. ಜಿಲ್ಲಾ ಪಂಚಾಯಿತಿ ಸಭಾಭವನದಲ್ಲಿ ಶನಿವಾರ ನಡೆದ ಚುನಾವಣೆ ವೇಳೆ ಬಸನಗೌಡ ದೇಸಾಯಿ ಒಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಅಧ್ಯಕ್ಷರಾಯ್ಕೆ ಅವಿರೋಧವಾಗಿ ನಡೆಯಿತು.
ಬೆಳಗಾವಿ ಪ್ರಾದೇಶಿಕ ಆಯುಕ್ತ ಆಮ್ಲಾನ್ ಆದಿತ್ಯ ಬಿಸ್ವಾಸ್ ಚುನಾವಣಾ ಧಿಕಾರಿಯಾಗಿ ಕಾರ್ಯನಿರ್ವಹಿಸಿದರು. ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಸ್ಥಾನಕ್ಕಾಗಿ ಕಾಂಗ್ರೆಸ್‌ನಲ್ಲಿ ತೀವ್ರ ಪೈಪೋಟಿ ಏರ್ಪಟ್ಟು ಸದಸ್ಯರಲ್ಲಿ ಭಿನ್ನಮತ ಸೃಷ್ಟಿಯಾಗಿತ್ತು. ಶಿಗ್ಗಾವಿ ದುಂಢಸಿ ಕ್ಷೇತ್ರದ ಬಸನಗೌಡ ದೇಸಾಯಿ ಸೇರಿದಂತೆ ಮಾಜಿ ಸಚಿವ ಮನೋಹರ ತಹಸೀಲ್ದಾರ್ ಪುತ್ರ ರಾಘವೇಂದ್ರ ತಹಶೀಲ್ದಾರ್, ರಾಣಿಬೆನ್ನೂರಿನ ಏಕನಾಥ ಭಾನುವಳ್ಳಿ, ಹಾನಗಲ್ಲನ ಟಾಕನಗೌಡ ಪಾಟೀಲ, ಹಿರೇಕೆರೂರಿನ ಮಾಜಿ ಶಾಸಕ ಬಿ.ಎಚ್. ಬನ್ನಿಕೋಡ ಅವರ ಪುತ್ರ ಪ್ರಕಾಶ ಬನ್ನಿಕೋಡ ಅಧ್ಯಕ್ಷ ಸ್ಥಾನದ ಪ್ರಮುಖ ಆಕಾಂಕ್ಷಿಗಳಾಗಿದ್ದರು.
ಪಕ್ಷದ ಮುಖಂಡರು, ಜಿಪಂ ಸದಸ್ಯರೆಲ್ಲ ಶುಕ್ರವಾರ ಸಂಜೆ ನಗರದಲ್ಲಿ ಸಭೆ ಸೇರಿ ಸಾಕಷ್ಟು ಚರ್ಚಿಸಿ, ಜಿಪಂನ ಉಳಿದ 14 ತಿಂಗಳ ಅವಧಿಯನ್ನು ಇಬ್ಬರಿಗೆ ಹಂಚಿಕೊಡಲು ತೀರ್ಮಾನಿಸಿದರು. ಮೊದಲ ಏಳು ತಿಂಗಳ ಅವಧಿಗೆ ಶಿಗ್ಗಾವಿ ತಾಲೂಕು ದುಂಢಸಿ ಕ್ಷೇತ್ರದ ಬಸನಗೌಡ ದೇಸಾಯಿ, ಉಳಿದ ಏಳು ತಿಂಗಳ ಅವಧಿಯನ್ನು ರಾಘವೇಂದ್ರ ತಹಸೀಲ್ದಾರ್ ಅವರಿಗೆ ಬಿಟ್ಟುಕೊಡಲು ಸಭೆಯಲ್ಲಿ ತೀರ್ಮಾನಿಸಲಾಯಿತು. ಸಭೆಯಲ್ಲಾದ ಈ ಆಂತರಿಕ ಒಪ್ಪಂದದಂತೆ ಶನಿವಾರ ಒಬ್ಬರೇ ರಾಜೀನಾಮೆ ನೀಡಿ ಕಾಂಗ್ರೆಸ್ ಒಗ್ಗಟ್ಟು ಪ್ರದರ್ಶಿಸಿತು. ಜಿಪಂ ಅಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಿದ್ದು, 2016ರ ಮೇ 13ರಂದು ಜಿಪಂ ಅಧ್ಯಕ್ಷರಾಗಿ ಕೊಟ್ರೇಶಪ್ಪ ಬಸೇಗಣ್ಣಿ ಆಯ್ಕೆಯಾಗಿದ್ದರು. ಪಕ್ಷದ ಆಂತರಿಕ ಒಪ್ಪಂದಂತೆ ರಾಜೀನಾಮೆ ನೀಡಿದ ಬಳಿಕ 2018ರ ಸೆ. 21ರಂದು ಜಿಪಂ ಅಧ್ಯಕ್ಷರಾಗಿ ಎಸ್.ಕೆ. ಕರಿಯಣ್ಣನವರ ಆಯ್ಕೆಯಾಗಿದ್ದರು. ಇತ್ತೀಚೆಗೆ ಅವರು ಸಹ ಪಕ್ಷದ ಆಂತರಿಕ ಒಪ್ಪಂದದಂತೆ
ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು ತೆರವಾದ ಸ್ಥಾನಕ್ಕೆ ಬಸನಗೌಡ ದೇಸಾಯಿ ಅವರನ್ನು ಆಯ್ಕೆ ಮಾಡಲಾಗಿದೆ.
ಜಿಲ್ಲಾ ಪಂಚಾಯಿತಿಯ ಒಟ್ಟು 34ಸ್ಥಾನಗಳಲ್ಲಿ ಕಾಂಗ್ರೆಸ್ 22 ಸ್ಥಾನ, ಬಿಜೆಪಿ 12ಸ್ಥಾನಗಳನ್ನು
ಹೊಂದಿದೆ. ಕಾಂಗ್ರೆಸ್ ಸ್ಪಷ್ಟ ಬಹುಮತ ಹೊಂದಿರುವುದರಿಂದ ಜಿಪಂನಲ್ಲಿ ಕಾಂಗ್ರೆಸ್ ಆಡಳಿತ ಮುಂದುವರಿದಿದೆ.