Advertisement

27ರಿಂದ ಕನ್ನಡ ಸಾಹಿತ್ಯ ಸಮ್ಮೇಳನ

04:55 PM Jan 23, 2020 | Naveen |

ಹಾವೇರಿ: ಕನ್ನಡ ಸಾಹಿತ್ಯ ಪರಿಷತ್‌ ಜಿಲ್ಲಾ ಹಾಗೂ ತಾಲೂಕು ಘಟಕಗಳ ಸಹಯೋಗದಲ್ಲಿ ಜಿಲ್ಲಾ ಮಟ್ಟದ 12ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಜ. 27 ಹಾಗೂ 28ರಂದು ನಗರದ ರಜನಿ ಸಭಾಭವನದಲ್ಲಿ ಸಂಘಟಿಸಲಾಗಿದೆ ಎಂದು ಕಸಾಪ ಜಿಲ್ಲಾಧ್ಯಕ್ಷ ಎಚ್‌. ಬಿ. ಲಿಂಗಯ್ಯ ತಿಳಿಸಿದರು.

Advertisement

ಮಂಗಳವಾರ ನಗರದಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಅವರು ಸಮ್ಮೇಳನ ಕುರಿತು
ಮಾಹಿತಿ ನೀಡಿದರು. ಸಮ್ಮೇಳನಾಧ್ಯಕ್ಷರನ್ನಾಗಿ ಮಕ್ಕಳ ಸಾಹಿತಿ ಗಂಗಾಧರ ನಂದಿಯವರನ್ನು ಆಯ್ಕೆ ಮಾಡಲಾಗಿದೆ ಎಂದರು.

ಜ. 27ರಂದು ಬೆಳಗ್ಗೆ 8ಗಂಟೆಗೆ ಜಿಲ್ಲಾಧಿ ಕಾರಿ ಕೃಷ್ಣ ಭಾಜಪೇಯಿ ರಾಷ್ಟ್ರ ಧ್ವಜಾರೋಹಣ, ತಾವು ಪರಿಷತ್‌ ಧ್ವಜಾರೋಹಣ ಹಾಗೂ ಕಸಾಪ ತಾಲೂಕಾಧ್ಯಕ್ಷ ವೈ.ಬಿ. ಆಲದಕಟ್ಟಿ ನಾಡ ಧ್ವಜಾರೋಹಣ ನೆರವೇರಿಸುವರು. ಬೆಳಗ್ಗೆ 8:30ಕ್ಕೆ ನಗರದ ಪುರಸಿದ್ಧೇಶ್ವರ ದೇವಸ್ಥಾನದಿಂದ ಸಮ್ಮೇಳನಾಧ್ಯಕ್ಷರ ಮೆರವಣಿಗೆ ನಡೆಯಲಿದ್ದು, ಜಿಪಂ ಸಿಇಒ ಮೆರವಣಿಗೆಗೆ ಚಾಲನೆ ನೀಡುವರು ಎಂದು ತಿಳಿಸಿದರು.

ಬೆಳಗ್ಗೆ 11ಗಂಟೆಗೆ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ಸಮ್ಮೇಳನ
ಉದ್ಘಾಟಿಸುವರು. ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ, ಬಣ್ಣದಮಠದ ಅಭಿನವರುದ್ರ
ಚನ್ನಮಲ್ಲಿಕಾರ್ಜುನ ಸ್ವಾಮೀಜಿ ಸಾನ್ನಿಧ್ಯವಹಿಸುವರು. ಶಾಸಕ ನೆಹರು ಓಲೇಕಾರ ಅಧ್ಯಕ್ಷತೆ ವಹಿಸುವರು. ಬಳಿಕ ವಿವಿಧ ಲೇಖಕರ ಎಂಟು ಗ್ರಂಥಗಳ ಬಿಡುಗಡೆ, ಗಣ್ಯರಿಂದ ವಿವಿಧ ಮಳಿಗೆ ಉದ್ಘಾಟನೆ ಕಾರ್ಯಕ್ರಮ ನಡೆಯಲಿದೆ ಎಂದರು.

ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕಲಾವಿದ ಕೊಟ್ರೇಶ ಬೆಳಗಲಿ, ಚಿತ್ರಕಲಾವಿದರಾದ ಕರಿಯಪ್ಪ ಹಂಚಿನಮನಿ ಹಾಗೂ ನಾಮದೇವ ಕಾಗದಗಾರ, ಪತ್ರಕರ್ತರಾದ ನಾಗರಾಜ ಕುರುವತ್ತೇರ ಮತ್ತು ಕುಮಾರಯ್ಯ ಚಿಕ್ಕಮಠ, ಗಾಯಕಿ ನಿಧಿ ಅಡಿಗ ಹಾಗೂ 11 ಸಮಾಜಸೇವಕರಿಗೆ ಇದೇ ವೇಳೆ ವಿಶೇಷ ಸನ್ಮಾನ ನಡೆಯಲಿದೆ ಎಂದರು. ಮಧ್ಯಾಹ್ನ 1ಗಂಟೆಗೆ “ಸಾಹಿತ್ಯಪಥ’ ಗೋಷ್ಠಿ, ಮಧ್ಯಾಹ್ನ 2:30ಕ್ಕೆ “ಕನ್ನಡಪಥ’ ಗೋಷ್ಠಿ, ಸಂಜೆ
4ಗಂಟೆಗೆ “ನಮ್ಮಜಿಲ್ಲೆ ನಮ್ಮ ಹೆಮ್ಮೆ’ ಗೋಷ್ಠಿ ನಡೆಯಲಿವೆ. ಸಂಜೆ 7ಗಂಟೆಗೆ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತ ಮಲ್ಲೇಶಪ್ಪ ಹೊರಪೇಟೆ ಚಾಲನೆ ನೀಡುವರು. ನಿವೃತ್ತ ಶಿಕ್ಷಕ ಸಿ.ಎಸ್‌. ಮರಳಿಹಳ್ಳಿ ಅಧ್ಯಕ್ಷತೆ ವಹಿಸುವರು. ಕಾರ್ಯಕ್ರಮದಲ್ಲಿ ಭರತನಾಟ್ಯ, ಸಂಗೀತ, ಕಿರುನಾಟಕ, ಹಾಗೂ ನೃತ್ಯ ಕಾರ್ಯಕ್ರಮಗಳು ಪ್ರದರ್ಶನಗೊಳ್ಳಲಿವೆ ಎಂದರು.

Advertisement

ಜ. 28ರಂದು ಬೆಳಗ್ಗೆ 9ಗಂಟೆಗೆ ಹಿರಿಯ ಸಾಹಿತಿ ಸತೀಶ ಕುಲಕರ್ಣಿ ಅಧ್ಯಕ್ಷತೆಯಲ್ಲಿ ಕವಿಗೋಷ್ಠಿ ನಡೆಯಲಿದೆ. ಬೆಳಗ್ಗೆ 11:30ಕ್ಕೆ “ವರ್ತಮಾನದ ವ್ಯವಸ್ಥೆಯಲ್ಲಿ ಸ್ತ್ರಿಪರ ಚಿಂತನೆಗಳು’ ಗೋಷ್ಠಿ ಸಾಹಿತಿ ಗಿರಿಜಾದೇವಿ ದುರ್ಗದಮಠ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಮಧ್ಯಾಹ್ನ 1:30ಕ್ಕೆ ಸಂಕೀರ್ಣಗೋಷ್ಠಿ ಪ್ರೊ| ಎನ್‌.ಕೆಂಚವೀರಪ್ಪ ಅಧ್ಯಕ್ಷತೆಯಲ್ಲಿ ನಡೆಯಲಿದೆ ಎಂದು ಲಿಂಗಯ್ಯ ತಿಳಿಸಿದರು.

ಮಧ್ಯಾಹ್ನ 3ಗಂಟೆಗೆ ರೈತಗೋಷ್ಠಿ ನಡೆಯಲಿದ್ದು, ರೈತ ಮುಖಂಡ ರಾಮಣ್ಣ ಕೆಂಚಳ್ಳೇರ ಅಧ್ಯಕ್ಷತೆ ವಹಿಸುವರು. ಎಚ್‌.ಬಿ. ಪಂಚಾಕ್ಷರಯ್ಯಅವರು “ಕೃಷಿ ಸಾಹಿತ್ಯ ಸಾರ್ವತ್ರಿಕ ಕಲ್ಯಾಣ’ ಕುರಿತು, ಚನ್ನಬಸಪ್ಪ ಕೊಂಬಳಿ “ನೆಲ-ಜಲ ಸಂರಕ್ಷಣೆ’ ಕುರಿತು ಹಾಗೂ ರಾಜೇಶ್ವರಿ ಪಾಟೀಲ “ಸಾವಯವ ಕೃಷಿ’ ಕುರಿತು ವಿಷಯ ಮಂಡಿಸುವರು. ಬಳಿಕ 50ಕ್ಕೂ ಹೆಚ್ಚು ಕನ್ನಡ ಪ್ರೇಮಿಗಳಿಗೆ ಸನ್ಮಾನ ನಡೆಯಲಿದೆ ಎಂದು ತಿಳಿಸಿದರು.

ಸಂಜೆ 5 ಗಂಟೆಗೆ ಬಹಿರಂಗ ಅಧಿವೇಶನ ನಡೆಯಲಿದ್ದು, ಕಸಾಪ ಜಿಲ್ಲಾ ಗೌರವ ಕಾರ್ಯದರ್ಶಿ
ಬಿ.ಪಿ. ಶಿಡೇನೂರು ನಿರ್ಣಯ ಮಂಡಿಸುವರು. ಸಂಜೆ 5:30ಕ್ಕೆ ಸಮಾರೋಪ ಸಮಾರಂಭ ನಡೆಯಲಿದ್ದು, ಶಾಸಕ ನೆಹರು ಓಲೇಕಾರ ಅಧ್ಯಕ್ಷತೆ ವಹಿಸುವರು. ಗೌರಿಮಠದ ಶಿವಯೋಗಿ ಶಿವಾಚಾರ್ಯರು, ಹೊಸಮಠದ ಬಸವಶಾಂತಲಿಂಗ ಸ್ವಾಮೀಜಿ ಸಾನ್ನಿಧ್ಯವಹಿಸುವರು. ಜಾನಪದ ವಿದ್ವಾಂಸ ಶಂಭು ಬಳಿಗಾರ ಸಮಾರೋಪ ನುಡಿಗಳನ್ನಾಡುವರು. ಬಳಿಕ 7ಗಂಟೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದು ಎಚ್‌.ಬಿ. ಲಿಂಗಯ್ಯ ತಿಳಿಸಿದರು. ಕಸಾಪ ತಾಲೂಕಾಧ್ಯಕ್ಷ ವೈ.ಬಿ. ಆಲದಕಟ್ಟಿ, ಸಮ್ಮೇಳನದ ವಿವಿಧ ಸಮಿತಿಗಳ ಪದಾಧಿಕಾರಿಗಳಾದ ಪ್ರಕಾಶ ಶೆಟ್ಟಿ, ಸಿ.ಎಸ್‌. ಮರಳಿಹಳ್ಳಿ ಇನ್ನಿತರರು ಸುದ್ದಿಗೋಷ್ಠಿಯಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next