ಹಾವೇರಿ: ಜಿಲ್ಲೆಯ ವರದಾ ನದಿ ಪಾತ್ರದ ಸವಣೂರು ಹಾಗೂ ಹಾನಗಲ್ಲ ತಾಲೂಕಿನ ಗ್ರಾಮಗಳಿಗೆ ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಜಿಲ್ಲೆಯಲ್ಲಿ ಪ್ರವಾಹದಿಂದ ತುತ್ತಾಗುವ ನದಿ ಪಾತ್ರದ ತಗ್ಗು ಪ್ರದೇಶದ ಮನ್ನಂಗಿ, ಮೆಳ್ಳಾಗಟ್ಟಿ, ಕುಣಿಮೆಳ್ಳಿಹಳ್ಳಿ, ಹುನುಗಂದ ಗ್ರಾಮಗಳಿಗೆ ಮಂಗಳವಾರ ಭೇಟಿ ನೀಡಿ, ಮನೆ ಹಾನಿ ಹಾಗೂ ನದಿ ತೀರದ ಪ್ರದೇಶವನ್ನು ವೀಕ್ಷಿಸಿದರು. ಸ್ಥಳೀಯ ಅಧಿಕಾರಿಗಳಿಗೆ ಗ್ರಾಮಗಳ ಕಾಲುವೆ ಸ್ವತ್ಛತೆ ಸೇರಿದಂತೆ ಮುನ್ನೆಚ್ಚರಿಕೆ ಕ್ರಮಗಳ ಕುರಿತಂತೆ ಸಲಹೆ ನೀಡಿದರು.
ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ, ಪಂಚಾಯತ್ ಎಂಜಿನಿಯರ್‌ಗೆ ತಕ್ಷಣ ಸಮೀಕ್ಷೆ ವರದಿ ಸಲ್ಲಿಸಬೇಕು. ಸರ್ಕಾರದ ನಿಯಮಾನುಸಾರ ಪರಿಹಾರ ವಿತರಣೆಗೆ ಕ್ರಮ ವಹಿಸುವಂತೆ ಸೂಚನೆ ನೀಡಿದರು. ಜಿಲ್ಲೆಯ ತಹಶೀಲ್ದಾರ್‌ಗಳೊಂದಿಗೆ ಸೋಮವಾರ ಸಂಜೆ ವಿಡಿಯೋ ಸಂವಾದ ನಡೆಸಿದ ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ, ಜಿಲ್ಲೆಯಲ್ಲಿ ಪ್ರವಾಹ ಹಾಗೂ ಅತಿವೃಷ್ಟಿಯಿಂದ ಹಾನಿಗೊಳಗಾದ ಮನೆಗಳನ್ನು 24 ಗಂಟೆಯೊಳಗೆ ಪರಿಶೀಲಿಸಿ ತುರ್ತಾಗಿ ಪರಿಹಾರ ಪಾವತಿಸಬೇಕು. ಇಲ್ಲವಾದಲ್ಲಿ ಸಂಬಂಧಪಟ್ಟವರಿಗೆ ಶೋಕಾಸ್ ನೋಟಿಸ್ ಜಾರಿ ಮಾಡಲಾಗುವುದು ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ನೆರೆ ಪರಿಹಾರ ವಿತರಣೆಯಲ್ಲಿ ಯಾವುದೇ ಅವ್ಯವಹಾರ ಹಾಗೂ ಲೋಪವಾಗದಂತೆ ಅರ್ಹ ಫಲಾನುಭವಿಗಳನ್ನು ಗುರುತಿಸಿ ಪರಿಹಾರ ವಿತರಿಸಬೇಕು. ಅವ್ಯವಹಾರ ಎಸಗಿದವರ ಮೇಲೆ ಕಠಿಣ ಕ್ರಮದ ಎಚ್ಚರಿಕೆ ನೀಡಿದರು. ಮಳೆ ಹಾಗೂ ಪ್ರವಾಹದಿಂದ ಹಾನಿಗೊಳಗಾದ ಗ್ರಾಮಗಳಿಗೆ ಗ್ರಾಪಂ ಅಭಿವೃದ್ಧಿ ಅ ಧಿಕಾರಿಗಳು ಬೆಳಗ್ಗೆ 8 ಗಂಟೆಯೊಳಗಾಗಿ ಭೇಟಿ ನೀಡಿ ಹಾನಿಯ ವರದಿ ಸಂಗ್ರಹಿಸಿ ತಹಶೀಲ್ದಾರ್ ಗಳಿಗೆ ಸಲ್ಲಿಸಬೇಕು. ಬೆಳಗ್ಗೆ 10 ಗಂಟೆಯೊಳಗೆ ತಹಶೀಲ್ದಾರ್‌ರು ತಾಲೂಕಿನ ಎಲ್ಲ ಹಾನಿಯ ವರದಿಯನ್ನು ಕ್ರೋಢೀಕರಿಸಿ ಜಿಲ್ಲಾ ಧಿಕಾರಿ ಹಾಗೂ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಕಚೇರಿಗೆ ಸಲ್ಲಿಸುವಂತೆ ಸೂಚನೆ ನೀಡಿದರು.
ಮುಂಗಾರು ಸಂದರ್ಭದಲ್ಲಿ ಸಂಭವನೀಯ ಪ್ರಾಕೃತಿಕ ಅವಘಡಗಳನ್ನು ತಡೆಯುವ ನಿಟ್ಟಿನಲ್ಲಿ ಗ್ರಾಮವಾರು ಸಿದ್ಧತೆಗಳನ್ನು ಕೈಗೊಳ್ಳಬೇಕು. ಸದಾ ನಿಗಾದಲ್ಲಿರಬೇಕು. ಪ್ರವಾಹ ಪೀಡಿತ ನದಿ ಪಾತ್ರದ ಹಳ್ಳಿಗಳಲ್ಲಿ ಕೂಡಲೇ ಒಳಚರಂಡಿ ಸ್ವತ್ಛತೆ, ಕೆರೆ ಹೂಳೆತ್ತುವುದು ಸೇರಿದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕೆಂದು ಅಧಿಕಾರಿಗಳಿಗೆ ತಿಳಿಸಿದರು.
ಅಪರ ಜಿಲ್ಲಾಧಿಕಾರಿ ಎಸ್.ಯೋಗೇಶ್ವರ ಮಾತನಾಡಿ, ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ, ಎಂಜಿನಿಯರ್, ಗ್ರಾಮ ಪಂಚಾಯತಿ ಅಭಿವೈದ್ಧಿ ಅ ಧಿಕಾರಿಗಳ ತಂಡದೊಂದಿಗೆ ಅತಿವೃಷ್ಟಿ ಹಾನಿಗೊಳಗಾದ ಮನೆಗಳಿಗೆ ಭೇಟಿ ನೀಡಿ, ವಸ್ತುಸ್ಥಿತಿಯ ಸಮೀಕ್ಷೆ ನಡೆಸಿ, ´ೋಟೋ ಸಹಿತ ಅಂದಾಜು ಹಾನಿ ವರದಿಯನ್ನು ತಹಶೀಲ್ದಾರ್‌ಗಳಿಗೆ ನೀಡಬೇಕು ಎಂದು ಸೂಚನೆ ನೀಡಿದರು. ಸಭೆಯಲ್ಲಿ ಉಪ ವಿಭಾಗಾ ಧಿಕಾರಿ ಶಿವಾನಂದ ಉಳ್ಳಾಗಡಿ, ಹಾವೇರಿ ತಹಶೀಲ್ದಾರ್ ಗಿರೀಶ ಸ್ವಾದಿ, ಎಲ್ಲ ತಾಲೂಕು ತಹಶೀಲ್ದಾರ್‌ಗಳು ಹಾಗೂ ವಿವಿಧ ಗ್ರಾಮ ಪಂಚಾಯತಿಗಳ ಪಿಡಿಒಗಳು ಇದ್ದರು.