Advertisement

ಹಾವೇರಿ: ಪ್ರತಿಭಾ ಪ್ರದರ್ಶನಕ್ಕೆ ಸಾಂಸ್ಕೃತಿಕ ವೇದಿಕೆ ಸಹಕಾರಿ

05:09 PM Jan 08, 2024 | Team Udayavani |

ಉದಯವಾಣಿ ಸಮಾಚಾರ
ಹಾವೇರಿ: ವಿದ್ಯಾರ್ಥಿಗಳಲ್ಲಿ ಅಡಗಿರುವ ಪ್ರತಿಭೆ ಅಭಿವ್ಯಕ್ತಗೊಳಿಸಲು ಕ್ರೀಡೆ ಮತ್ತು ಸಾಂಸ್ಕೃತಿಕ ವೇದಿಕೆಗಳು ಸಹಕಾರಿಯಾಗಿವೆ. ಎಲ್ಲರೂ ಇದರ ಸದುಪಯೋಗ ಮಾಡಿಕೊಂಡರೆ ಭವಿಷ್ಯದಲ್ಲಿ ಉತ್ತಮ ಪ್ರಜೆಗಳಾಗಲು ಸಾಧ್ಯವಾಗುತ್ತದೆ ಎಂದು ಹುಕ್ಕೇರಿ ಮಠದ ಸದಾಶಿವ ಸ್ವಾಮೀಜಿ ಹೇಳಿದರು.

Advertisement

ನಗರದ ಶ್ರೀ ಶಿವಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡಿದ್ದ ಹುಕ್ಕೇರಿ ಮಠ ಶಿವಬಸವೇಶ್ವರ ಪ್ರೌಢಶಾಲೆಯ 50ನೇ
ವಾರ್ಷಿಕ ಸ್ನೇಹ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.

ಆಧುನಿಕತೆ ಬಂದಂತೆ ಗುರು-ಶಿಷ್ಯರ ಸಂಬಂಧ ಬದಲಾಗುತ್ತಿದೆ. ವಿದ್ಯಾರ್ಥಿಯ ಬದುಕಿನ ಸಾರ್ಥಕತೆಯ ಹಿಂದೆ ಗುರುವಿನ
ಅಪಾರ ಶ್ರಮವಿರುತ್ತದೆ. ಶಾಲೆಯಲ್ಲಿ ಉತ್ತಮ ಕಲಿಕೆಯ ನಂತರ ಉತ್ತಮ ಬದುಕು ಕಟ್ಟಿಕೊಂಡು ಸ್ವಂತಕ್ಕೂ ಹಾಗೂ ಸಮಾಜಕ್ಕೂ ಸದುಪಯೋಗ ಮಾಡಿಕೊಂಡರೆ ಅದೇ ನೀವು ಶಾಲೆಗೆ ಹಾಗೂ ಸಮಾಜಕ್ಕೆ ನೀಡುವ ಉಡುಗೊರೆಯಾಗುತ್ತದೆ.
ಸ್ವಾರ್ಥಕ್ಕಿಂತ ನಿಸ್ವಾರ್ಥಕ್ಕೆ ಹೆಚ್ಚು ಬೆಲೆಯಿದೆ ಎಂದು ಹೇಳಿದರು.

ಮುಖ್ಯ ಅತಿಥಿಯಾಗಿದ್ದ ತಾಲೂಕು ದೈಹಿಕ ಶಿಕ್ಷಣಾ ಧಿಕಾರಿ ಆರ್‌.ಜಿ. ಮೇಟಿ ಮಾತನಾಡಿ, ವಿದ್ಯಾರ್ಜನೆ ಕಾಲದ ಜೀವನಾನುಭವವನ್ನು ಭವಿಷ್ಯದ ಬದುಕಿಗೆ ದಾರಿಬುತ್ತಿ ಮಾಡಿಕೊಳ್ಳಬೇಕು. ದೊಡ್ಡ ಕನಸುಗಳನ್ನು ಈಗಲೇ ಸಾಕಾರಗೊಳಿಸಿ ಕೊಳ್ಳಲು ಸಣ್ಣ ಸಣ್ಣ ಪ್ರಯತ್ನಗಳನ್ನು ಮಾಡಿ ಯಶಸ್ಸು ಕಾಣಬೇಕು. ಯಶಸ್ಸು ಯಾವಾಗಲೂ ಕಠಿಣ ಪರಿಶ್ರಮ ಬೇಡುತ್ತದೆ. ಎಲ್ಲರೂ ಜೀವನದಲ್ಲಿ ಪರಿಶ್ರಮ ಅಳವಡಿಸಿಕೊಳ್ಳಬೇಕೆಂದು ಹೇಳಿದರು.

ಇದೇ ಸಂದರ್ಭದಲ್ಲಿ ಕ್ರೀಡೆ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳ ಬಹುಮಾನಗಳನ್ನು ವಿತರಿಸಲಾಯಿತು. ಹಾಗೂ ಕಾಶ್ಯಪ್‌ನ ಪ್ರಶ್ನೋತ್ತರ ಮಾಲಿಕೆ ಪುಸ್ತಕ ಬಿಡುಗಡೆಗೊಳಿಸಲಾಯಿತು. ಶ್ರೀ ಶಿವಲಿಂಗೇಶ್ವರ ವಿದ್ಯಾಪೀಠದ ಚೇರ್ಮನ್‌ ಎಸ್‌.ಎಸ್‌.ಮುಷ್ಠಿ ಅಧ್ಯಕ್ಷತೆ ವಹಿಸಿದ್ದರು.

Advertisement

ಜಗದೀಶ ತುಪ್ಪದ, ವೀರಣ್ಣ ಅಂಗಡಿ, ಮಹಾಂತೇಶ ಮಳೀಮಠ, ಮಹೇಶ ಚಿನ್ನಿಕಟ್ಟಿ, ಡಾ| ಮೋಹನ ನಾಲ್ವಾಡ್‌, ಆರ್‌.ಎಸ್‌. ಮಾಗನೂರ, ಮುಖ್ಯೋಪಾಧ್ಯಾಯಿನಿ ಚನ್ನಮ್ಮ ಅಂತರವಳ್ಳಿ, ಟಿ.ಎಂ. ಲತಾಮಣಿ, ಶೋಭಾ ನಾಶೀಪುರ, ರೂಪಾ ಟಿ.ಆರ್‌. ಲೀಲಾವತಿ ಅಂದಾನಿಮಠ, ಎಂ.ಎಸ್‌. ಹಿರೇಮಠ, ವಿ.ಬಿ.ಬನ್ನಿಹಳ್ಳಿ, ಎಸ್‌.ಸಿ. ಮರಳಿಹಳ್ಳಿ ಇತರರು ಇದ್ದರು.

ಈರಮ್ಮ ಹೊಂಬಳದ ಪ್ರಾರ್ಥಿಸಿದರು. ಎಸ್‌.ಎನ್‌. ಮಳೆಪ್ಪನವರ ಸ್ವಾಗತಿಸಿ, ಸಿ.ವೈ. ಅಂತರವಳ್ಳಿ ವಾರ್ಷಿಕ ವರದಿ ವಾಚಿಸಿದರು. ಎಸ್‌. ಕೆ. ಆಡಿನ ನಿರೂಪಿಸಿ, ಆನಂದ ಎಂ. ವಂದಿಸಿದರು. ಕಾರ್ಯಕ್ರಮದ ನಂತರ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

Advertisement

Udayavani is now on Telegram. Click here to join our channel and stay updated with the latest news.

Next