ಹಾವೇರಿ: ಕೋವಿಡ್-19 ನಿಯಂತ್ರಣಕ್ಕೆ ಜಿಲ್ಲಾಡಳಿತ ಎಲ್ಲ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದೆ. ಆದಾಗ್ಯೂ ದಾನಿಗಳು, ಸ್ವಯಂಸೇವಾ ಸಂಘಟನೆಗಳು ಜಿಲ್ಲಾಡಳಿತ ಕಾರ್ಯದಲ್ಲಿ ಕೈಜೋಡಿಸಿ ಸಹಕರಿಸಬೇಕು ಎಂದು ಜಿಲ್ಲಾಧಿಕಾರಿ ಕೃಷ್ಣ ಭಾಜಪೇಯಿ ವಿವಿಧ ಸಂಘ-ಸಂಸ್ಥೆ ಮುಖ್ಯಸ್ಥರಿಗೆ ತಿಳಿಸಿದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲೆಯ ವಿವಿಧ ಸ್ವಯಂಸೇವಾ ಸಂಘಟನೆಗಳ ಮುಖ್ಯಸ್ಥರ ಸಭೆ ನಡೆಸಿದ ಅವರು, ಕೋವಿಡ್‌ವಾರಿಯರ್ ಆಗಿ ಸ್ವಯಂ ಪ್ರೇರಣೆಯಿಂದ ಕೆಲಸ ಮಾಡಲು ಮುಂದೆ ಬರಬೇಕು. ಅಸಹಾಯಕರಿಗೆ, ವಲಸೆ ಕಾರ್ಮಿಕರಿಗೆ, ಆಶ್ರಯ, ಊಟ, ವಸತಿ ಸೇರಿದಂತೆ ವಿವಿಧ ಸೌಲಭ್ಯ ಕಲ್ಪಿಸಲು ಮುಂದಾಗುವಂತೆ ತಿಳಿಸಿದರು.
ಈಗಾಗಲೇ ಜಿಲ್ಲಾಡಳಿತದಿಂದ ವಲಸೆ ಕಾರ್ಮಿಕರಿಗೆ, ಬಡವರಿಗೆ ಪಡಿತರ, ಊಟದ ವ್ಯವಸ್ಥೆ ಮಾಡಲಾಗಿದೆ. ಈ ಕೆಲಸದಲ್ಲಿ ತಾವು ಕೈಜೋಡಿಸಬೇಕು. ತಮ್ಮ ತಮ್ಮ ಸಂಘ-ಸಂಸ್ಥೆ ಹಾಗೂ ಸಮಾಜದ ದಾನಿಗಳಿಂದ ನೆರವು ನೀಡುವುದರ ಮೂಲಕ ಜಿಲ್ಲಾಡಳಿತಕ್ಕೆ ಕೈಜೋಡಿಸುವಂತೆ ಕೋರಿದರು.
ಅಪರ ಜಿಲ್ಲಾಧಿಕಾರಿ ಯೋಗೇಶ್ವರ ಮಾತನಾಡಿ, ಈಗಾಗಲೇ ವಲಸೆ ಕಾರ್ಮಿಕರಿಗೆ ಹಸಿವಿನಿಂದ ಬಳಲುವ ವಸತಿ ಹೀನರಿಗೆ ಜಿಲ್ಲಾಡಳಿತ ವತಿಯಿಂದ ಸಹಾಯವಾಣಿ ಸ್ಥಾಪಿಸಿ ಅಗತ್ಯವಿದ್ದವರಿಗೆ ಉಚಿತವಾಗಿ ಆಹಾರ ಪೂರೈಸಲಾಗುತ್ತಿದೆ. ಜಿಲ್ಲೆಯಾದ್ಯಂತ ಪಡಿತರ ವಿತರಣೆ ನಡೆಯುತ್ತಿದೆ. ಈ ಸಂದರ್ಭದಲ್ಲಿ ಸಾರ್ವಜನಿಕರಿಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಜಾಗೃತಿ ಮೂಡಿಸುವುದು, ಬ್ಯಾಂಕ್ ವ್ಯವಹಾರಕ್ಕೆ ಬರುವ ಸಂದರ್ಭದಲ್ಲಿ ಅನಗತ್ಯವಾಗಿ ಗುಂಪು ಕೂಡದಂತೆ ಜಾಗೃತಿ ಮೂಡಿಸುವುದು ಸೇರಿದಂತೆ ತಮ್ಮ ತಮ್ಮ ವ್ಯಾಪ್ತಿಯಲ್ಲಿ ಕೋವಿಡ್ ನಿಯಂತ್ರಣ ಕಾರ್ಯಕ್ಕೆ ಮುಂದಾಗಬೇಕು ಎಂದರು.
ಜಿಪಂ ಸಿಇಒ ರಮೇಶ ದೇಸಾಯಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣಾಧಿಕಾರಿ ಪಿ.ವೈ. ಶೆಟ್ಟೆಪ್ಪನವರ, ಜಿಲ್ಲಾ ವಾರ್ತಾಧಿಕಾರಿ ಬಿ.ಆರ್. ರಂಗನಾಥ್, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಕಲ್ಯಾಣಾಧಿಕಾರಿ ಮಲ್ಲಿಕಾರ್ಜುನ ಮಠದ, ರೆಡ್ ಕ್ರಾಸ್ ಸಂಸ್ಥೆಯ ಅಧ್ಯಕ್ಷ ಸಂಜೀವ ನೀರಲಗಿ, ಇಡಾರಿ ಸಂಸ್ಥೆಯ ಮುಖ್ಯಸ್ಥೆ ಪರಿಮಳಾ ಜೈನ್, ಜಿಲ್ಲಾ ಮಕ್ಕಳ ಸಹಾಯವಾಣಿ ಕೇಂದ್ರದ ಮಜೀದ್, ಆಶಾಕಿರಣ ಸಂಸ್ಥೆಯ ಮುತ್ತುರಾಜ
ಮಾದರ, ಬ್ಯಾಡಗಿ ಕಲ್ಲೇಶ್ವರ ಗ್ರಾಮೀಣ ವಿದ್ಯಾ ಸಂಸ್ಥೆಯ ದಾನಪ್ಪ ಚೂರಿ, ಹಾವೇರಿ ದಿವ್ಯಜ್ಯೋತಿ ಶಿಕ್ಷಣ ಸಂಸ್ಥೆಯ ಎನ್.ಎಚ್. ದಯಾನಂದ, ಶ್ರೀ ಅರುಣೋದಯ ವಿದ್ಯಾವರ್ಧಕ ಸಂಸ್ಥೆಯ ಅಧ್ಯಕ್ಷ ಐ.ಬಿ. ಪಾಟೀಲ, ರಾಣಿಬೆನ್ನೂರು ಸರಸ್ವತಿ ಮಹಿಳಾ ಸಂಸ್ಥೆ ಅಧ್ಯಕ್ಷೆ ಪಾರ್ವತಿ ವಿ. ಹೊಸಮನಿ ಇತರರು ಇದ್ದರು.