Advertisement

ಮುಖ್ಯಮಂತ್ರಿ ತವರು ಬಿಜೆಪಿ ಪಾರಮ್ಯ: ಹಾವೇರಿ 6 ಕ್ಷೇತ್ರಗಳು

01:27 AM Feb 06, 2023 | Team Udayavani |

ಹಾಲಿ ಮುಖ್ಯಮಂತ್ರಿಗಳ ತವರು ಜಿಲ್ಲೆಯಾದ ಹಾವೇರಿ, ಭಾರೀ ಕುತೂಹಲ ಪಡೆದುಕೊಂಡಿದೆ. ಸ್ವಯಂ ಸಿಎಂ ಬಸವರಾಜ ಬೊಮ್ಮಾಯಿ ಅವರ ಶಿಗ್ಗಾವಿ ಕ್ಷೇತ್ರದಿಂದಲೇ ಇಬ್ಬರು ಸಿಎಂಗಳು ಆಯ್ಕೆಯಾಗಿದ್ದಾರೆ. 1967ರಲ್ಲೇ ಎಸ್‌.ನಿಜಲಿಂಗಪ್ಪ ಅವರು ಇದೇ ಕ್ಷೇತ್ರದಿಂದಲೇ ಅವಿರೋಧವಾಗಿ ಆಯ್ಕೆಯಾಗಿ ಬಳಿಕ ಸಿಎಂ ಆಗಿದ್ದರು. ಈಗಲೂ ಇಡೀ ಕ್ಷೇತ್ರ ಕಾಂಗ್ರೆಸ್‌-ಬಿಜೆಪಿ-ಜನತಾದಳ ನಡುವಿನ ಹೋರಾಟಕ್ಕೆ ಸಾಕ್ಷಿಯಾಗುತ್ತಾ ಬಂದಿದೆ.

Advertisement

ಹಾವೇರಿ: ಉತ್ತರ ಕರ್ನಾಟಕದ ಹೆಬ್ಟಾಗಿಲು ಹಾವೇರಿ ಜಿಲ್ಲೆ ಬಹುತೇಕ ಎಲ್ಲ ರಾಜಕೀಯ ಪಕ್ಷಗಳ ಅದೃಷ್ಟ ಪರೀಕ್ಷೆಗೆ ಪ್ರಮುಖ ಕೇಂದ್ರವಾಗಿ ಪರಿಗಣಿಸಿರುವುದರಿಂದ ರಾಜ್ಯ ರಾಜಕಾರಣದಲ್ಲಿ ಮಹತ್ವದ ಸ್ಥಾನ ಪಡೆದಿದೆ. ಹಾಲಿ ಮುಖ್ಯಮಂತ್ರಿಗಳ ತವರು ಜಿಲ್ಲೆಯೂ ಹೌದು. ಶಿಗ್ಗಾವಿ ಕ್ಷೇತ್ರ ನಾಡಿಗೆ ಇಬ್ಬರು ಮುಖ್ಯಮಂತ್ರಿ­ಗಳನ್ನು ನೀಡಿದ ಹಿರಿಮೆ ಹೊಂದಿದೆ. ಸಿಎಂ ಬಸವರಾಜ ಬೊಮ್ಮಾಯಿ ಪ್ರಸ್ತುತ ಇಲ್ಲಿನ ಶಾಸಕರು. ಇದರ ಜತೆಗೆ ದಿ| ಬಿ.ಜಿ.ಬಣಕಾರ, ದಿ| ಎಫ್‌.ಎಸ್‌.ತಾವರೆ, ದಿ| ಸಿ.ಎಂ.ಉದಾಸಿ, ಮಾಜಿ ಸಚಿವರಾದ ಕೆ.ಬಿ.ಕೋಳಿವಾಡ, ಮನೋಹರ ತಹಸೀಲ್ದಾರ, ಬಸವರಾಜ ಶಿವಣ್ಣವರ, ಸಚಿವ ಬಿ.ಸಿ.ಪಾಟೀಲ್‌ಸಹಿತ ಅನೇಕ ಘಟಾನುಘಟಿ ರಾಜಕಾರಣಿಗಳನ್ನು ರಾಜ್ಯ ರಾಜಕೀಯಕ್ಕೆ ಕೊಡುಗೆಯಾಗಿ ನೀಡಿದ ಜಿಲ್ಲೆಯಿದು. ಹಾವೇರಿ ಜಿಲ್ಲೆ 8 ತಾಲೂಕುಗಳನ್ನು ಒಳಗೊಂಡಿದ್ದು ಒಟ್ಟು 6 ವಿಧಾನಸಭೆ ಕ್ಷೇತ್ರಗಳಿವೆ. ಇದರಲ್ಲಿ ಹಾವೇರಿ(ಎಸ್‌ಸಿ)ಮೀಸಲು ಕ್ಷೇತ್ರ. ಉಳಿದಂತೆ ಶಿಗ್ಗಾವಿ, ಹಾನಗಲ್ಲ, ಬ್ಯಾಡಗಿ, ರಾಣೆಬೆನ್ನೂರ, ಹಿರೇಕೆರೂರು ಸಾಮಾನ್ಯ ಕ್ಷೇತ್ರಗಳಾಗಿವೆ. ಈಗ ಜಿಲ್ಲೆಯಲ್ಲಿ ಐವರು ಬಿಜೆಪಿ ಹಾಗೂ ಒಬ್ಬರು ಕಾಂಗ್ರೆಸ್‌ ಶಾಸಕರಿದ್ದಾರೆ.

ಶಿಗ್ಗಾವಿ
ನಾಡಿಗೆ ಇಬ್ಬರು ಮುಖ್ಯಮಂತ್ರಿಗಳನ್ನು ನೀಡಿದ ಹೆಗ್ಗಳಿಕೆ ಹೊಂದಿದೆ. 1967ರ ಚುನಾವಣೆಯಲ್ಲಿ ಈ ಕ್ಷೇತ್ರದಿಂದ ಏಕೀಕೃತ ಕರ್ನಾಟಕದ ಮೊದಲ ಸಿಎಂ ಎಸ್‌. ನಿಜಲಿಂಗಪ್ಪ ಅವಿರೋಧ ಆಯ್ಕೆಯಾಗಿ ಮತ್ತೂಂದು ಅವಧಿಗೆ ಮುಖ್ಯಮಂತ್ರಿಯಾಗಿದ್ದರು. ಹಾಲಿ ಶಾಸಕ ಬಸವರಾಜ ಬೊಮ್ಮಾಯಿ ಕೂಡ ಈಗ ಸಿಎಂ ಆಗಿದ್ದಾರೆ. ಅತೀ ಹೆಚ್ಚು ಅಲ್ಪಸಂಖ್ಯಾಕ ಜನಸಂಖ್ಯೆ ಹೊಂದಿದ್ದು, ಕಾಂಗ್ರೆಸ್‌ ಹೆಚ್ಚಿನ ಅವಧಿಗೆ ಆ ಸಮುದಾಯದವರಿಗೇ ಅವಕಾಶ ಕೊಟ್ಟಿದೆ. ಇಲ್ಲಿನ ಮತದಾರರು ಎಂಟು ಬಾರಿ ಕಾಂಗ್ರೆಸ್‌, ಎರಡು ಬಾರಿ ಪಕ್ಷೇತರರು, ಒಂದು ಬಾರಿ ಜೆಡಿಎಸ್‌ ಹಾಗೂ ಮೂರು ಬಾರಿ ಬಿಜೆಪಿಗೆ ಒಲಿದಿದ್ದಾರೆ. ನದಾಫ ಮಹಮ್ಮದಕಾಶೀಂಸಾಬ ಮರ್ಧಾನಸಾಬ ಅವರು 1972, 1978, 1983ರಲ್ಲಿ ಸತತವಾಗಿ ಮೂರು ಸಾರಿ ಆಯ್ಕೆಯಾಗಿ ಹ್ಯಾಟ್ರಿಕ್‌ ಸಾಧಿಸಿದ್ದಾರೆ. 1985ರ ಚುನಾವಣೆಯಲ್ಲಿ ಕಾಶೀಂಸಾಬ ಅವರನ್ನು ಪಕ್ಷೇತರ ಅಭ್ಯರ್ಥಿ ಎನ್‌.ವಿ. ಪಾಟೀಲ್‌ ಸೋಲಿಸಿದ್ದು ದಾಖಲೆಯಾಗಿದೆ. ಕಾಶೀಂಸಾಬ ಅವರ ಅನಂತರ ಎಂ.ಸಿ.ಕುನ್ನೂರ ಎರಡು ಬಾರಿ ಹಾಗೂ ಹಾಲಿ ಶಾಸಕ ಬಸವರಾಜ ಬೊಮ್ಮಾಯಿಯವರು 2008, 2013, 2018ರಲ್ಲಿ ಸತತವಾಗಿ ಮೂರು ಬಾರಿ ಆಯ್ಕೆಗೊಂಡು ಹ್ಯಾಟ್ರಿಕ್‌ ಸಾಧಿಸಿದ್ದಾರೆ. ಸಿಎಂ ಬೊಮ್ಮಾಯಿ ಅವರ ಅಜ್ಜ (ತಾಯಿಯ ತಂದೆ)ದುಂಡಸಿ ಗ್ರಾಮದ ಎಂ.ಬಿ. ಹುರುಳಿಕುಪ್ಪಿ ಅವರು 1952ರಲ್ಲಿ ಮುಂಬಯಿ ಕರ್ನಾಟಕದಲ್ಲಿ ಮೊದಲ ಶಾಸಕರಾಗಿ ಆಯ್ಕೆಯಾಗಿದ್ದರು.

ರಾಣಿಬೆನ್ನೂರು
ಈ ಕ್ಷೇತ್ರ ವ್ಯಕ್ತಿಗಿಂತ ಪಕ್ಷಕ್ಕೆ ಒಲಿದಿದ್ದೇ ಹೆಚ್ಚು. ಇಲ್ಲಿ ಪಕ್ಷೇತರ ಅಭ್ಯರ್ಥಿಗಳು ಗೆದ್ದಿರುವ ಉದಾಹರಣೆ ಇಲ್ಲ. 1957ರ ಪ್ರಥಮ ಚುನಾವಣೆಯಲ್ಲಿ ದ್ವಿ-ಸದಸ್ಯ ಕ್ಷೇತ್ರವಾಗಿತ್ತು. ಬ್ಯಾಡಗಿ ಕ್ಷೇತ್ರವೂ ಸೇರಿತ್ತು. ಈ ಪೈಕಿ ಒಂದು ಸಾಮಾನ್ಯವಾಗಿದ್ದರೆ; ಇನ್ನೊಂದು ಎಸ್‌ಸಿಗೆ ಮೀಸಲಾ­ಗಿತ್ತು. 1962ರಲ್ಲಿ ಏಕಸದಸ್ಯ ಕ್ಷೇತ್ರವಾಗಿ ಎಸ್‌ಸಿಗೆ ಮೀಸಲಾಗಿತ್ತು. 1967ರಿಂದ ಸಾಮಾನ್ಯ ಕ್ಷೇತ್ರವಾಗಿದೆ. ಈವರೆಗೂ ಒಟ್ಟು 15 ಚುನಾವಣೆಗಳು ನಡೆದಿವೆ. ಒಂಬತ್ತು ಬಾರಿ ಕಾಂಗ್ರೆಸ್‌ ಗೆದ್ದಿದೆ. ಎರಡು ಬಾರಿ ಬಿಜೆಪಿ ಮತ್ತು ತಲಾ ಒಂದು ಬಾರಿ ಜನತಾದಳ, ಪಿಎಸ್‌ಪಿ, ಜನತಾ ಪರಿವಾರ, ಕೆಪಿಜೆಪಿ ಜಯಗಳಿಸಿದೆ. ವಿಧಾನಸಭಾಧ್ಯಕ್ಷರಾಗಿದ್ದ ಕೆ.ಬಿ. ಕೋಳಿವಾಡರು 10 ಬಾರಿ ಸ್ಪರ್ಧಿಸಿರುವುದು ದಾಖಲೆ. ಕಾಂಗ್ರೆಸ್‌ನಿಂದಲೇ ಒಂಬತ್ತು ಬಾರಿ ಸ್ಪರ್ಧಿಸಿ ಐದು ಬಾರಿ ಶಾಸಕರಾಗಿದ್ದಾರೆ.

ಹಾನಗಲ್ಲ
ರಾಜ್ಯದ ಗಮನ ಸೆಳೆದ ಕ್ಷೇತ್ರ. ಕಳೆದ 40 ವರ್ಷಗಳ ಕಾಲ ಮಾಜಿ ಸಚಿವರಾದ ಸಿ.ಎಂ. ಉದಾಸಿ ಹಾಗೂ ಮನೋಹರ ತಹಶೀಲ್ದಾರ್‌ ಅವರ ಭದ್ರಕೋಟೆ. 2021ರಲ್ಲಿ ಸಿ.ಎಂ.ಉದಾಸಿ ಅವರ ನಿಧನದ ಹಿನ್ನೆಲೆಯಲ್ಲಿ ಈ ಇಬ್ಬರು ನಾಯಕರ ಜಿದ್ದಾಜಿದ್ದಿನ ಪೈಪೋಟಿಗೆ ತೆರೆಬಿತ್ತು. ತಹಶೀಲ್ದಾರ್‌ ಹಾಗೂ ದಿ|ಉದಾಸಿ ಹತ್ತು ಬಾರಿ ಮುಖಾಮುಖೀಯಾಗಿದ್ದು, ಜಿಲ್ಲೆಯ ರಾಜಕೀಯ ಇತಿಹಾಸದಲ್ಲಿ ದಾಖಲೆ. ಎರಡು ಉಪಚುನಾವಣೆಗಳೂ ನಡೆದಿವೆ. 1967ರಲ್ಲಿ ಪಕ್ಷೇತರರಾಗಿ ಗೆದ್ದಿದ್ದ ಬಿ.ಆರ್‌.ಪಾಟೀಲರ ನಿಧನರಾದ ಹಿನ್ನೆಲೆಯಲ್ಲಿ 1968ರಲ್ಲಿ ಉಪಚುನಾವಣೆ ನಡೆದಿತ್ತು. ಕಾಂಗ್ರೆಸ್‌ ಅಭ್ಯರ್ಥಿ ಜಿ.ಎನ್‌. ದೇಸಾಯಿ ಆಯ್ಕೆಯಾಗಿದ್ದರು. 2018ರಲ್ಲಿ ಬಿಜೆಪಿಯಿಂದ ಗೆದ್ದಿದ್ದ  ಸಿ.ಎಂ.ಉದಾಸಿ ನಿಧನಹೊಂದಿದ ಕಾರಣ 2021ರಲ್ಲಿ ಉಪಚುನಾವಣೆ ನಡೆದು ಕಾಂಗ್ರೆಸ್‌ ಅಭ್ಯರ್ಥಿ ಶ್ರೀನಿವಾಸ ಮಾನೆ ಶಾಸಕರಾಗಿ ಆಯ್ಕೆಗೊಂಡರು.

Advertisement

ಹಾವೇರಿ
ಹನ್ನೆರಡು ಚುನಾವಣೆ ಸಾಮಾನ್ಯ ಹಾಗೂ 2008ರ ಬಳಿಕ ಎಸ್‌ಸಿ ಮೀಸಲು ಕ್ಷೇತ್ರವಾಗಿ ಮೂರು ಸೇರಿ ಒಟ್ಟು  ಹದಿನೈದು ಚುನಾವಣೆಗಳನ್ನು ಕಂಡ ಕ್ಷೇತ್ರವಿದು. 1951ರಲ್ಲಿ ಜರಗಿದ ಮೊದಲ ಚುನಾವಣೆ ಸೇರಿ ಒಟ್ಟು ಎಂಟು ಬಾರಿ ಕಾಂಗ್ರೆಸ್‌, ನಾಲ್ಕು ಬಾರಿ ಜನತಾ ಪರಿವಾರದ ಅಭ್ಯರ್ಥಿಗಳು ಆಯ್ಕೆಯಾಗಿ­ದ್ದಾರೆ. ಮೂರು ಬಾರಿ ಬಿಜೆಪಿ ಗೆಲುವಿನ ನಗೆ ಬೀರಿದೆ. ನಾಲ್ಕು ಬಾರಿ ಮಹಿಳೆಯರು ಇಲ್ಲಿ ಕಣಕ್ಕಿಳಿದಿದ್ದರೂ ಸ್ವಾತಂತ್ರÂ ಹೋರಾಟಗಾರ ಮೈಲಾರ ಮಹದೇವರ ಪತ್ನಿ ಸಿದ್ದಮ್ಮ ಮಾತ್ರ ಆಯ್ಕೆಯಾಗಿದ್ದರು.  ಸ್ವಾತಂತ್ರÂ ಹೋರಾಟಗಾರ ಗುದೆÉಪ್ಪ ಹಳ್ಳಿಕೇರಿ ಅವರಂತಹ ಘಟಾನುಘಟಿಗಳು ಇಲ್ಲಿ ಆಯ್ಕೆಯಾಗಿ ಅಂದಿನ ಮುಂಬಯಿ-ಕರ್ನಾಟಕ ವಿಧಾನಸಭೆ ಪ್ರವೇಶಿಸಿದ್ದರು. ಬಿ.ವಿ.ಮಾಗಾವಿ, ಎಸ್‌.ಎಫ್‌. ತಾವರೆ, ಡಾ|ಚಿತ್ತರಂಜನ ಕಲಕೋಟಿ, ಬಸವರಾಜ ಶಿವಣ್ಣನವರ ಅವರು ಸತತವಾಗಿ ಎರಡು ಬಾರಿ ಆಯ್ಕೆಯಾಗಿದ್ದಾರೆ. ಈ ಕ್ಷೇತ್ರ ಪಕ್ಷಕ್ಕಿಂತ ವ್ಯಕ್ತಿಗಳಿಗೆ ಮಣೆ ಹಾಕಿರುವುದೇ ಹೆಚ್ಚು. ಆದರೆ ಪಕ್ಷೇತರ ಅಭ್ಯರ್ಥಿಗಳಿಗೆ ಮತದಾರರು ಒಲಿದಿಲ್ಲ.

ಬ್ಯಾಡಗಿ
1962ರಲ್ಲಿ ರಚನೆಯಾದ ಕ್ಷೇತ್ರ. 1962 ಹಾಗೂ 1967ರಲ್ಲಿ ಸಾಮಾನ್ಯ ಕ್ಷೇತ್ರವಾಗಿದ್ದು, ಸ್ಥಳೀಯ ಅಭ್ಯರ್ಥಿಗಳೇ ಆಯ್ಕೆಯಾಗಿದ್ದರು. 1978ರಿಂದ 2008ರ ವರೆಗೆ 30 ವರ್ಷಗಳ ಕಾಲ ಪರಿಶಿಷ್ಟ ಜಾತಿಗೆ ಮೀಸಲಾಗಿತ್ತು. ಈವರೆಗೆ 13ಚುನಾವಣೆ ನಡೆದಿದೆ. ಏಳು ಬಾರಿ ಕಾಂಗ್ರೆಸ್‌ ಹಾಗೂ ಇನ್ನುಳಿದ ಅವಧಿಯಲ್ಲಿ ಕಾಂಗ್ರೆಸೇತರರು ಗೆದ್ದಿದ್ದಾರೆ. ಸ್ವಾತಂತ್ರ್ಯ ಹೋರಾಟಗಾರ ಮೈಲಾರ ಮಹಾದೇವ ಅವರ ಪತ್ನಿ ಸಿದ್ದಮ್ಮ ಮೈಲಾರ ಈ ಕ್ಷೇತ್ರದ ಪ್ರಥಮ ಮಹಿಳಾ ಶಾಸಕಿ. 1967ರಲ್ಲಿ ಮಹಾದೇವ ಬಣಕಾರ ಈ ಕ್ಷೇತ್ರದಿಂದ ಆಯ್ಕೆಯಾಗಿದ್ದು ವಿಶೇಷ. ಮೀಸಲು ಕ್ಷೇತ್ರವಾಗಿದ್ದಾಗ ಏಳು ಬಾರಿ ವಲಸಿಗರೇ ಇಲ್ಲಿ ಶಾಸಕರಾಗಿದ್ದಾರೆ. ಅವರಲ್ಲೂ ಕಾಂಗ್ರೆಸ್‌ ಅಭ್ಯರ್ಥಿಗಳೇ ಹೆಚ್ಚು.

ಹಿರೇಕೆರೂರು
ಈ ಕ್ಷೇತ್ರ ಪಕ್ಷಕ್ಕಿಂತ ವ್ಯಕ್ತಿಯ ವರ್ಚಸ್ಸು, ಜಾತಿ ಬಲ, ಜನರೊಂದಿಗೆ ಒಡನಾಟ, ಉತ್ತಮ ಜನಸಂಪರ್ಕಕ್ಕೆ ಹೆಚ್ಚು ಮಾನ್ಯತೆ ನೀಡುವುದು ವಿಶೇಷ. ಜಾತಿ ರಾಜಕಾರಣದಿಂದಲೇ ಹೆಚ್ಚು ಗಮನ ಸೆಳೆದಿದೆ. ಸಾದರ ಸಮುದಾಯ­ದವರನ್ನು ಬಿಟ್ಟು ಬೇರೆಯವರು ಈತನಕ ಆಯ್ಕೆಯಾಗಿಲ್ಲ. ಕ್ಷೇತ್ರದ ಜನತೆ ಒಂದೇ ಪಕ್ಷಕ್ಕೆ ಜೈ ಎನ್ನದೇ ಕಾಂಗ್ರೆಸ್‌, ಪಕ್ಷೇತರ, ಜನತಾ ಪರಿವಾರ, ಬಿಜೆಪಿ, ಜೆಡಿಎಸ್‌, ಕೆಜೆಪಿಯನ್ನೂ ಬೆಂಬಲಿಸಿದ್ದಾರೆ. ಈವರೆಗೂ 15 ಚುನಾವಣೆಗಳು ನಡೆದಿದ್ದು, ಐವರು ಮಾತ್ರ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಇದರಲ್ಲಿ ಶಂಕರರಾವ್‌ ಗುಬ್ಬಿ ಅತೀ ಹೆಚ್ಚು ನಾಲ್ಕು ಬಾರಿ, ಬಿ.ಜಿ. ಬಣಕಾರ ಮೂರು ಬಾರಿ, ಬಿ.ಸಿ.ಪಾಟೀಲ್‌ ಮೂರು ಬಾರಿ, ಬಿ.ಎಚ್‌. ಬನ್ನಿಕೋಡ, ಯು.ಬಿ. ಬಣಕಾರ ತಲಾ ಎರಡು ಬಾರಿ ಆಯ್ಕೆಯಾಗಿದ್ದಾರೆ. ಆರಂಭದಲ್ಲಿ ನಾಲ್ಕು ಬಾರಿ ಕಾಂಗ್ರೆಸ್‌ಗೆ ಒಲಿದಿದ್ದರೆ ಅನಂತರ ಪಕ್ಷೇತರ ಹಾಗೂ ಜನತಾ ಪರಿವಾರದ ಅಭ್ಯರ್ಥಿಗಳು ಮೇಲುಗೈ ಸಾಧಿಸಿದ್ದಾರೆ. ರಾಜ್ಯದಲ್ಲಿ ಯಾವ ಸರಕಾರ ಅಧಿಕಾರಕ್ಕೆ ಬರುತ್ತದೆಯೋ ಅದರ ವಿರುದ್ಧವಾದ ಅಭ್ಯರ್ಥಿ ಆಯ್ಕೆಯಾಗುವುದು ಇಲ್ಲಿನ ವಿಶೇಷ. ಆದರೆ ಎರಡು ದಶಕಗಳ ಈ ಅಪಖ್ಯಾತಿಯನ್ನು 2019ರ ಉಪಚುನಾವಣೆಯಲ್ಲಿ ಗೆದ್ದ ಬಿ.ಸಿ.ಪಾಟೀಲ್‌ ಅಳಿಸಿದ್ದಾರೆ.

-ವೀರೇಶ  ಮಡ್ಲೂರ

Advertisement

Udayavani is now on Telegram. Click here to join our channel and stay updated with the latest news.

Next