Advertisement

ಹಾವೇರಿ: ಮಾರುಕಟ್ಟೆಗೆ ಲಗ್ಗೆಇಟ್ಟ ಆಕರ್ಷಕ ಮಾದರಿ ಆಕಾಶ ಬುಟ್ಟಿ

03:41 PM Oct 31, 2024 | Team Udayavani |

■ ಉದಯವಾಣಿ ಸಮಾಚಾರ
ಹಾವೇರಿ: ಬೆಳಕಿನ ಹಬ್ಬ ದೀಪಾವಳಿ ಸಂದರ್ಭದಲ್ಲಿ ಮನೆ, ಮನೆಗೂ ಬೆಳಕಿನ ಮೆರಗು ನೀಡಲು ಬಗೆಬಗೆಯ ಆಕಾಶ
ಬುಟ್ಟಿಗಳು ವಿಶಿಷ್ಟ ಚಿತ್ತಾರಗಳೊಂದಿಗೆ ಮಾರುಕಟ್ಟೆಗೆ ಲಗ್ಗೆ ಇಟ್ಟಿದ್ದು, ಗ್ರಾಹಕರನ್ನು ಆಕರ್ಷಿಸುತ್ತಿವೆ.

Advertisement

ದೀಪಾವಳಿ ಹಬ್ಬದ ಪ್ರಮುಖ ಆಕರ್ಷಣೆಯಾದ ಆಕಾಶಬುಟ್ಟಿಗಳು ವರ್ಷದಿಂದ ವರ್ಷಕ್ಕೆ ಸಾಕಷ್ಟು ಬದಲಾವಣೆ ಕಾಣುತ್ತಿದ್ದು, ಮಾರುಕಟ್ಟೆಯಲ್ಲಿ ಬಣ್ಣ, ಬಣ್ಣದ  ವಿಶಿಷ್ಟ ಆಕಾರದ ಆಕಾಶಬುಟ್ಟಿಗಳ ಸಾಲುಗಳು ಪ್ರಮುಖ ಆಕರ್ಷಣೆಯಾಗಿವೆ. ವೈವಿದ್ಯಮಯ ಆಕಾಶಬುಟ್ಟಿಗಳನ್ನು ಕೊಳ್ಳಲು ಜನತೆ ಮಂದಾಗುತ್ತಿದ್ದಾರೆ.

ಮೊದಲು ಆಕಾಶ ಬುಟ್ಟಿ ಕೇವಲ ರಂಗು-ರಂಗಿನ ಹಾಳೆಗಳಿಗೆ ಅಷ್ಟೇ ಸೀಮಿತವಾಗಿದ್ದವು. ಈಗ ಹಾಳೆಯ ಜತೆಗೆ ರಟ್ಟು, ಫೈಬರ್‌, ಪ್ಲಾಸ್ಟಿಕ್‌ಗಳಲ್ಲದೇ ಬಟ್ಟೆಗಳಲ್ಲಿ ತಯಾರಿಸಲಾಗುತ್ತಿದೆ. ಜತೆಗೆ ಗೋಲಾಕಾರ, ಯು ಆಕಾರ, ಚೌಕಾಕಾರ, ನಕ್ಷತ್ರದ ಆಕಾರದಲ್ಲಿ
ತಯಾರಿಸಲಾಗುತ್ತಿದೆ. ಇವುಗಳ ದರದಲ್ಲೂ ಏರಿಕೆಯಾಗಿದೆ. ನಾಡಿನ ದೊಡ್ಡ ಹಬ್ಬವಾದ ದೀಪಾವಳಿಯನ್ನು ಸಂಭ್ರಮದಿಂದ ಆಚರಿಸಲು ಜಿಲ್ಲಾದ್ಯಂತ ಸಿದ್ಧತೆ ನಡೆದಿದೆ.

ಹಬ್ಬದ ಪೂರ್ವ ತಯಾರಿಯಾಗಿ ಜನತೆ ಬಗೆ-ಬಗೆಯ ಹೂವು, ಹಣ್ಣು ಸೇರಿದಂತೆ ಇತರ ದಿನಸಿ ಖರೀದಿಗೆ ಮಾರುಕಟ್ಟೆಗೆ ಆಗಮಿಸುತ್ತಿದ್ದಾರೆ. ದೀಪಾವಳಿ ನಿಮಿತ್ತ ಲಕ್ಷ್ಮೀ ಹಾಗೂ ಸರಸ್ವತಿ ದೇವಿಯನ್ನು ಮನೆ, ಅಂಗಡಿಗಳಲ್ಲಿ ಪ್ರತಿಷ್ಠಾಪಿಸಿ ಪೂಜಾ ಕಾರ್ಯಕ್ರಮಕ್ಕೆ ಎಲ್ಲರನ್ನೂ ಆಹ್ವಾನಿಸುವ ಸಂಪ್ರದಾಯವಿದೆ. ಆದರೆ, ಅಗತ್ಯ ವಸ್ತುಗಳ ಬೆಲೆ ಏರಿಕೆ ಹಬ್ಬದ ಉತ್ಸಾಹ ಕಳೆಗುಂದುವಂತೆ ಮಾಡಿದೆ. ಮೇಣಬತ್ತಿ ದೀಪ, ಆಕಾಶ ಬುಟ್ಟಿ, ಸೇವಂತಿಗೆ ಹೂವು, ಸಿಹಿ ತಿನಿಸುಗಳಲ್ಲಿ ಬೆಲೆಯಲ್ಲಿ ಏರಿಕೆಯಾಗಿದ್ದು, ಗ್ರಾಹಕರ ಜೇಬುಗಳಿಗೆ ಕಹಿ ಅನುಭವ ನೀಡುತ್ತಿದೆ.

ಅಲಂಕಾರಿಕ ವಸ್ತುಗಳ ಬೆಲೆಯೂ ಹೆಚ್ಚಾಗಿದೆ. ಹಾಗಾಗಿ ಗ್ರಾಹಕರು ಯೋಚಿಸಿ ವ್ಯಾಪಾರ ವಹಿವಾಟು ಮಾಡುತ್ತಿದ್ದಾರೆ. ಮಾರುಕಟ್ಟೆಯಲ್ಲಿ ಹೆಚ್ಚು ಜನಸಂದಣಿ ಕಂಡು ಬರುತ್ತಿದೆ.

Advertisement

ಅಲಂಕಾರಿಕ ಸಾಮಗ್ರಿ ಖರೀದಿ
ದೀಪಾವಳಿ ಹಬ್ಬದಲ್ಲಿ ರೈತನ ಮಿತ್ರ ಎತ್ತುಗಳು ಸೇರಿದಂತೆ ಜಾನುವಾರುಗಳಿಗೆ ವಿಶೇಷವಾಗಿ ಅಲಂಕಾರ ಮಾಡಲಾಗುತ್ತಿದೆ. ಹಬ್ಬದ ಖಷಿಗಾಗಿ ಮನೆಯ ಎಲ್ಲ ಸದಸ್ಯರಿಗೆ ಹೊಸ ಬಟ್ಟೆ ಖರೀದಿ ಮಾಡುವಂತೆ ಜಾನುವಾರುಗಳಿಗೆ ಅಲಂಕಾರದ ಸಾಮಗ್ರಿಗಳನ್ನು ಖರೀದಿ ಮಾಡಲಾಗುತ್ತಿದೆ. ಪ್ರಮುಖವಾಗಿ ಮುಗುದಾರ, ಝೂಲ, ಕೊಂಬೆಣಸು, ಹಗ್ಗ, ಹಣೆಕಟ್ಟು,
ಗೆಜ್ಜೆಸರ, ಕೊಬ್ಬಿಗೆ ಹಚ್ಚಲು ಬಗೆಬಗೆಯ ಬಣ್ಣ ಸೇರಿದಂತೆ ಅಗತ್ಯ ವಸ್ತುಗಳ ಖರೀದಿ ತೊಗಡಿದ್ದರು. ಜೊತೆಗೆ ವಾಹನಗಳ ಅಲಂಕಾರಿಕ ವಸ್ತುಗಳ ವ್ಯಾಪಾರವೂ ಜೋರಾಗಿತು.

ರೈತರಿಗಿಲ್ಲ ಹಬ್ಬದ ಸಂಭ್ರಮ 
ಜಿಲ್ಲೆಯಲ್ಲಿ ಇತ್ತೀಚೆಗೆ ಸುರಿದ ಧಾರಾಕಾರ ಮಳೆಯಿಂದಾಗಿ ಬೆಳೆಗಳಿಗೆ ಹಾನಿಯಾಗಿದ್ದರಿಂದ ಕಂಗೆಟ್ಟಿರುವ ಜಿಲ್ಲೆಯ ಅನ್ನದಾತರಲ್ಲಿ ಈ ವರ್ಷ ದೀಪಾವಳಿ ಹಬ್ಬದ ಸಂಭ್ರಮ ಅಷ್ಟಾಗಿ ಕಂಡುಬರುತ್ತಿಲ್ಲ. ನಿರಂತರ ಸುರಿದ ಮಳೆಯಿಂದಾಗಿ ಫಸಲಿಗೆ ಬಂದಿದ್ದ ಬೆಳೆಗಳಿಗೆ ಸಾಕಷ್ಟು ಪ್ರಮಾಣದಲ್ಲಿ ಹಾನಿಯಾಗಿ ನಷ್ಟ ಅನುಭವಿಸುವಂತಾಗಿದೆ. ಇನ್ನೊಂದೆಡೆ ಕಟಾವು ಮಾಡಿ ರಾಶಿ ಹಾಕಿದ್ದ ಬೆಳೆಗಳು ಹಾನಿಯಾಗಿದ್ದರಿಂದ ರೈತರು ಸಂಕಷ್ಟಕ್ಕೆ ಸಿಲುಕುವಂತಾಗಿದೆ. ಜಿಲ್ಲೆಯಲ್ಲಿ ಸುರಿದ ಮಳೆಯಿಂದಾಗಿ ರೈತರ ಬದುಕು ತಲ್ಲಣಗೊಂಡಿದ್ದು, ಸಂಕಷ್ಟದಲ್ಲಿದ್ದರೂ ಸಂಪ್ರದಾಯಬದ್ಧವಾಗಿ ಹಬ್ಬ ಆಚರಿಸಲು ರೈತರು ಸಿದ್ಧತೆ ನಡೆಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next