ರಾಣಿಬೆನ್ನೂರ: ಪತಿ-ಪತ್ನಿಯರ ನಡುವೆ ನಡೆಯುತ್ತಿದ್ದ ಜಗಳ ಹಾಗೂ ಸಂಶಯ ಎರಡು ಕಂದಮ್ಮಗಳನ್ನು ಬಲಿ ತೆಗೆದುಕೊಂಡ ಘಟನೆ ಹಾವೇರಿ ಜಿಲ್ಲೆ ರಾಣಿಬೆನ್ನೂರ ತಾಲೂಕಿನ ಸಣ್ಣಸಂಗಾಪುರ ಗ್ರಾಮದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಸುಮಾರು ಹತ್ತು ವರ್ಷಗಳ ಹಿಂದೆ ಮಂಜಯ್ಯ ಪಾಟೀಲ ಹಾಗೂ ಸುನೀತಾ ಪಾಟೀಲ ಎಂಬುವರ ಮದುವೆಯಾಗಿತ್ತು. ದಂಪತಿಗೆ ಎರಡು ಗಂಡು ಮಕ್ಕಳಿದ್ದವು. ಇತ್ತೀಚೆಗೆ ಪತಿ ಮಂಜಯ್ಯ ಪಾಟೀಲಗೆ ಪತ್ನಿಯ ಮೇಲೆ ಸಂಶಯ ಉಂಟಾಗಿದ್ದು, ನಿತ್ಯವೂ ಇಬ್ಬರ ನಡುವೆ ಜಗಳ ನಡೆಯುತ್ತಿತ್ತು ಎನ್ನಲಾಗಿದೆ.
ಇದರಿಂದ ಬೇಸತ್ತ ಸುನೀತಾ ಎರಡೂ ಮಕ್ಕಳನ್ನು ಕೊಠಡಿಯಲ್ಲಿ ನೇಣು ಹಾಕಿ, ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿದ್ದಳು. ಈ ಸಮಯದಲ್ಲಿ ಸಾಯುವ ಸಂಕಟದಲ್ಲಿದ್ದ ಸುನೀತಾ ಚೀರಿದ್ದಾಳೆ. ತಕ್ಷಣ ಧಾವಿಸಿದ ಅತ್ತೆ-ಮಾವ ಆಕೆಯ ಜೀವ ಉಳಿಸಿದ್ದಾರೆ. ಆದರೆ, ಎರಡು ಕಂದಮ್ಮಗಳು ಮೃತಪಟ್ಟಿವೆ.
ಈ ನಡುವೆ ಪೋಲಿಸರಿಗೆ ಮಾಹಿತಿ ನೀಡದೆ ಕುಟುಂಬಸ್ಥರ ಸಮ್ಮುಖದಲ್ಲಿ ಮೃತ ಕಂದಮ್ಮಗಳ ಅಂತ್ಯಸಂಸ್ಕಾರ ಮಾಡಲಾಗಿದೆ ಎಂದು ತಿಳಿದುಬಂದಿದೆ. ಪ್ರಕರಣ ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಹಲಗೇರಿ ಪೊಲೀಸರು ವಿಚಾರಣೆ ನಡೆಸಿದ್ದಾರೆ.
Related Articles
ಈ ಕುರಿತು ಸುನಿತಾ ಮಂಜಯ್ಯ ಪಾಟೀಲ, ಮಂಜಯ್ಯ ಪಾಟೀಲ, ವೀರಯ್ಯ ಪಾಟೀಲ, ಮಮತಾ ಪಾಟೀಲ, ರಾಜಪ್ಪ ಪಾಟೀಲ, ಹರಿಹರ ತಾಲೂಕಿನ ಮೂಗಿನಗೊಂದಿ ಗ್ರಾಮದ ಶೇಖರಪ್ಪ ಹಾಲಿವಾಣ, ಶಾಂತಮ್ಮ ಹಾಲಿವಾಣ ವಿರುದ್ಧ ಪ್ರಕರಣ ದಾಖಲಾಗಿದೆ. ಮೂವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದು, ತನಿಖೆ ಮುಂದುವರಿದಿದೆ.