Advertisement

ಬಂಗಾರ ಬೆಳೆಯುವ ಮರ ಕಂಡಿದ್ದೀರಾ?

03:42 PM Apr 27, 2017 | Harsha Rao |

“ದುಡ್ಡಿನ ಮರವನ್ನು ನೆಟ್ಟಿದ್ದೇನೆಯೇ?’ ಎಂತಲೋ, “ಗಿಡದಿಂದ ದುಡ್ಡು ಉದುರುವುದಿಲ್ಲ’, ಎಂತಲೋ ಹೇಳುವುದು ವಾಡಿಕೆ. ಇದು ಸಾಧ್ಯವಿಲ್ಲದ ಮಾತು ಎನ್ನುವುದು ನಾವೆಲ್ಲರೂ ತಿಳಿದುಕೊಂಡಿರುವ ವಿಚಾರ! ಆದರೆ, ಮರ- ಗಿಡಗಳಿಂದ ಬಂಗಾರವನ್ನು ಬೆಳೆಸುವುದು ಖಂಡಿತಾ ಸಾಧ್ಯವಿಲ್ಲ ಎನ್ನುವ ಮಾತನ್ನು ಪರಾಮರ್ಶಿಸಬೇಕಾದ ಸಂದರ್ಭ ಬಂದಿದೆ. ಏಕೆಂದು ತಿಳಿದುಕೊಳ್ಳಬೇಕೆಂದರೆ ಮುಂದೆ ಓದಿ…

Advertisement

ಬಂಗಾರ ಒಂದು ಲೋಹ. ಇತರ ಲೋಹಗಳಂತೆ ಅದನ್ನೂ ಗಣಿಗಾರಿಕೆಯಿಂದ ಪಡೆಯಲಾಗುತ್ತದೆ. ಆದರೆ ಇದೀಗ ಸಸ್ಯಗಳನ್ನು ಬಳಸಿ ಬಂಗಾರವನ್ನು ಪಡೆಯಬಲ್ಲ “ಸಸ್ಯ ಗಣಿಗಾರಿಕೆ’ ಎನ್ನುವ ವಿಧಾನ ಜಾಗತಿಕ ಮಟ್ಟದಲ್ಲಿ ಗಮನ ಸೆಳೆದಿದೆ.

ಗಿಡಗಳು ಮಣ್ಣಿನಿಂದ ಪೋಷಕಾಂಶಗಳನ್ನು ಹೀರಿಕೊಂಡು ಬೆಳೆಯುತ್ತವೆ ಎನ್ನುವ ವಿಚಾರ ನಮಗೆಲ್ಲರಿಗೂ ಗೊತ್ತು. ಆದರೆ ಪೋಷಕಾಂಶಗಳ ಜೊತೆ ಗಿಡಗಳು ಮಣ್ಣಿನಲ್ಲಿರುವ ಲವಣ ಮತ್ತು ಖನಿಜ ಪದಾರ್ಥಗಳನ್ನೂ ಹೀರಿಕೊಳ್ಳುತ್ತವೆ. ಈ ಪೋಷಕಾಂಶಗಳು ಗಿಡದ ಕಾಂಡ, ಟೊಂಗೆ, ಎಲೆ ಮುಂತಾದ ಭಾಗಗಳಿಗೆ ಪ್ರವಹಿಸಿ, ಅಲ್ಲೆಲ್ಲಾ ಸಂಗ್ರಹವಾಗುತ್ತಾ ಹೋಗುತ್ತದೆ. 

ಕೆಲ ಸಮಯದ ನಂತರ ಈ ಗಿಡಗಳನ್ನು ಕತ್ತರಿಸಿ, ಸಂಸ್ಕರಿಸಿ, ಪುಡಿ ಮಾಡಿ ವೈಜ್ಞಾನಿಕ ವಿಧಾನಗಳ ಮೂಲಕ ಅವುಗಳಲ್ಲಿದ್ದ ಖನಿಜ ಪದಾರ್ಥಗಳಿಂದ ಲೋಹದಂಶವನ್ನು ಪ್ರತ್ಯೇಕಿಸಿ ಸಂಗ್ರಹಿಸಲಾಗುತ್ತದೆ. ಹೀಗೆ ಭೂಮಿಯ ಖನಿಜ ವಸ್ತುಗಳಿಂದ ಲೋಹವನ್ನು ಪಡೆಯುವುದಕ್ಕೆ “ಹಸಿರು ಗಣಿಗಾರಿಕೆ’ ಎಂದು ಹೆಸರು. ಇದರಿಂದ ಮಾಲಿನ್ಯ ಉಂಟಾಗುವುದಿಲ್ಲ. ಅಲ್ಲದೆ ಸಾಂಪ್ರದಾಯಿಕ ಗಣಿಗಾರಿಕೆಯಿಂದಾಗುವ ಮಣ್ಣಿನ ಸವಕಳಿ ಹಸಿರು ಗಣಿಗಾರಿಕೆಯಲ್ಲಿ ಕಂಡು ಬರುವುದಿಲ್ಲ.

ಹಸಿರು ಗಣಿಗಾರಿಕೆ ಎಂಬುದು ಹೊಸ ಸಂಶೋಧನೆ ಅಲ್ಲದಿದ್ದರೂ ಇತ್ತೀಚೆಗೆ ಇದರಲ್ಲಿ ಅನೇಕ ಸಂಶೋಧನಾ ಕಾರ್ಯಗಳು ಪ್ರಗತಿಯಲ್ಲಿವೆ. ಬಂಗಾರವನ್ನು ಪಡೆಯುವ ಬಗ್ಗೆ ವಿಜ್ಞಾನಿಗಳು ಸಂಶೋಧನೆಯಲ್ಲಿ ತೊಡಗಿದ್ದಾರೆ. ಸಾಸಿವೆಯಂಥ ಗಿಡಗಳು ಈ ಕಾರ್ಯದಲ್ಲಿ ಹೆಚ್ಚು ಉಪಯುಕ್ತ ಎನ್ನುವುದು ಸದ್ಯ ಧೃಡಪಟ್ಟಿದೆ. ಕ್ಯಾರೆಟ್‌, ಬೀಟ್‌ರೂಟ್‌, ಈರುಳ್ಳಿ, ಮೂಲಂಗಿ ಸಸ್ಯಗಳನ್ನೂ ಈ ಉದ್ದೇಶಕ್ಕೆ ಬಳಸಬಹುದಾಗಿದೆ ಎಂದು ಕೆಲವು ಪ್ರಯೋಗಗಳು ತೋರಿಸಿಕೊಟ್ಟಿವೆ.

Advertisement

ಈಗಿರುವ ತಂತ್ರಜ್ಞಾನದಲ್ಲಿ ಈ ವಿಧಾನ ಬಹಳ ದುಬಾರಿಯದು ಮತ್ತು ನಿಧಾನವೂ ಹೌದು. ಹೀಗಾಗಿ ಸಾಂಪ್ರದಾಯಿಕ ಗಣಿಗಾರಿಕೆಯಷ್ಟು, ಸಸ್ಯಗಣಿಗಾರಿಕೆ ವ್ಯಾಪಕವಾಗಿಲ್ಲ. ಆದರೆ ಈ ಹಸಿರು ಗಣಿಗಾರಿಕೆ ಕ್ಷೇತ್ರದಲ್ಲಿ ವಿಶ್ವದಾದ್ಯಂತ ಸಂಶೋಧನೆಗಳು ಮುಂದುವರೆದಿವೆ. ಇವು ಯಶಸ್ವಿಯಾದಲ್ಲಿ ಬಂಗಾರ ಬೆಳೆಯುವ ಮರಗಳನ್ನು ನಾವೆಲ್ಲರೂ ಕಾಣುವ ದಿನಗಳು ದೂರವಿಲ್ಲ.

-ಡಿ. ವಿ.ಹೆಗಡೆ

Advertisement

Udayavani is now on Telegram. Click here to join our channel and stay updated with the latest news.

Next