ಬೆಂಗಳೂರು: ಪ್ರಪಂಚದಲ್ಲಿ ಎಲ್ಲಾದರೂ ಹೊತ್ತಿ ಉರಿಯುವ ಕೆರೆ ನೋಡಿದ್ದೀರಾ? ಕೆರೆಯನ್ನು ಸಂಪೂರ್ಣ ಶುದ್ಧಿಗೊಳಿಸುತ್ತೇವೆ ಎಂದು ಈ ಹಿಂದೆ ಸರ್ಕಾರ ತಿಳಿಸಿತ್ತು. ಆದರೆ ಈ ಸಂಬಂಧ ಸರ್ಕಾರ ಏನು ಸಾಧನೆ ಮಾಡಿದೆ. ಎಲ್ಲ ವಿಚಾರಗಳಲ್ಲೂ ಸರ್ಕಾರ ವಿಫಲವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿರುವ ಹೈಕೋರ್ಟ್, ಕೆರೆ ಸಂರಕ್ಷಣೆ ಅಧಿಕಾರಿ ಶುಕ್ರವಾರ ಖುದ್ದು ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದೆ.
ಕೆರೆ ಸಂಕ್ಷರಣೆ ಬಗ್ಗೆ ಇದುವರೆಗೂ ಗಂಭೀರ ಪ್ರಯತ್ನ ನಡೆಸದ ಸರ್ಕಾರದ ಕ್ರಮದ ಬಗ್ಗೆ ಹೈಕೋರ್ಟ್ ತೀವ್ರ ತರಾಟೆಗೆ ತೆಗೆದುಕೊಂಡು, ಪ್ರಪಂಚದಲ್ಲಿ ಎಲ್ಲಾದರೂ ಹೊತ್ತಿ ಉರಿಯುವ ಕೆರೆ ನೋಡಿದ್ದೀರಾ? ಸರ್ಕಾರ ಯಾವ ಸಾಧನೆ ಮಾಡಿದೆ? ಎಲ್ಲ ವಿಚಾರಗಳಲ್ಲೂ ಸರ್ಕಾರ ವಿಫಲವಾಗಿದೆ.
ಕೆರೆಯನ್ನು ಸಂಪೂರ್ಣ ಶುದ್ಧಿಗೊಳಿಸುತ್ತೇವೆ ಎಂದು 2017ರಲ್ಲೇ ಸರ್ಕಾರ ಹೈಕೋರ್ಟ್‌ಗೆ ತಿಳಿಸಿತ್ತು. ತಂತ್ರಜ್ಞಾನದ ರಾಜಧಾನಿ ಎಂದು ಕರೆಸಿಕೊಳ್ಳುವ ಬೆಂಗಳೂರಿನಲ್ಲಿರುವ ಕೆರೆ ಸ್ವತ್ಛಗೊಳಿಸಲು ಸರ್ಕಾರದ ಬಳಿ ತಜ್ಞರೇ ಇಲ್ಲವೇ? ಸರ್ಕಾರಕ್ಕೆ ಬೆಳ್ಳಂದೂರು ಕೆರೆ ಸಂರಕ್ಷಿಸುವ ಬದ್ಧತೆಯೇ ಇಲ್ಲವೆ ಎಂದು ಪ್ರಶ್ನಿಸಿತ್ತು.
ಬೆಳ್ಳಂದೂರು ಕೆರೆ ಪುನರುಜ್ಜೀವನಕ್ಕೆ ಕ್ರಮ ಕೈಗೊಳ್ಳಲು ರಾಜ್ಯ ಸರ್ಕಾರಕ್ಕೆ ನಿರ್ದೇಶಿಸುವಂತೆ ಕೋರಿ ರಾಜ್ಯಸಭಾ ಸದಸ್ಯ ಡಿ.ಕುಪೇಂದ್ರ ರೆಡ್ಡಿ ಹಾಗೂ ಎಚ್‌ಎಸ್‌ಆರ್ ಬಡಾವಣೆಯ ನಿವಾಸಿಗಳು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನ್ಯಾಯಮೂರ್ತಿ ಎಚ್.ಜಿ.ರಮೇಶ್ ಹಾಗೂ ನ್ಯಾಯಮೂರ್ತಿ ಮೊಹಮ್ಮದ್ ನವಾಜ್ ಅವರಿದ್ದ ಪೀಠದಲ್ಲಿ ಗುರುವಾರ ನಡೆಯಿತು.
ವಿಚಾರಣೆ ಸಂದರ್ಭದಲ್ಲಿ ನ್ಯಾಯಮೂರ್ತಿಗಳು, ಒಂದೇಡೆ ಟ್ರಾಫಿಕ್ ಸಮಸ್ಯೆ. ಮತ್ತೂಂದೆಡೆ ಸಮಪರ್ಕವಾಗಿ ಕಸ ವಿಲೇವಾರಿ ಮಾಡಲಾಗುತ್ತಿಲ್ಲ. ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಮಾಲಿನ್ಯದ ಪ್ರಮಾಣ ಹೆಚ್ಚಾಳವಾಗುತ್ತಿದೆ. ಬೆಳ್ಳಂದೂರು ಕೆರೆ ಸಂರಕ್ಷಣೆಗೆ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿ ಮೂರು ವರ್ಷ ಕಳೆದರೂ ಇದುವರೆಗೂ ಸರ್ಕಾರ ಕೆರೆ ಸ್ವತ್ಛಗೊಳಿಸಲು ಯಾವುದೇ ಕ್ರಮಗಳನ್ನು ಯಾಕೆ ಕೈಗೊಂಡಿಲ್ಲ ಯಾಕೆ ಎಂದು ಕೇಳಿತು.
ಯಾವ ಇಲಾಖೆ ಕೆರೆ ಸ್ವತ್ಛತೆಯ ಹೊಣೆಕಾರಿಕೆ ಹೊತ್ತುಕೊಂಡಿದೆ? ಸ್ವತ್ಛತೆಯ ಬಗ್ಗೆ ಯಾವ ಅಧಿಕಾರಿಗೆ ಜವಾಬ್ದಾರಿ ನೀಡಲಾಗಿದೆ ಎಂಬ ಪ್ರಶ್ನೆಗೆ ಸರ್ಕಾರಿ ವಕೀಲರು, ಬೆಳ್ಳಂದೂರು ಕೆರೆ ಪುರುಜ್ಜೀವನ ಕಾರ್ಯಕ್ಕೆ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣದ ನಿರ್ದೇಶನದಂತೆ ತಜ್ಞರ ಸಮಿತಿ ರಚಿಸಲಾಗಿದ್ದು, ಸಮಿತಿಯ ಶಿಫಾರಸಿನಂತೆ ಕೆರೆ ಶುದ್ಧೀಕರಣಕ್ಕೆ ಮಾಡಲಾಗುತ್ತಿದೆ. ಕಳೆ ಹಾಗೂ ಹೂಳು ತೆಗೆಯುವ ಕಾರ್ಯ ನಡೆಯುತ್ತಿದೆ ಎಂದು ಮಾಹಿತಿ ನೀಡಿದರು.
ನಂತರ ನ್ಯಾಯಪೀಠ ತಜ್ಞರು ಸಮಿತಿಯಲ್ಲಿ ಯಾರಿದ್ದಾರೆ? ಕೆರೆ ಸಂರಕ್ಷಣೆ ಜವಾಬ್ದಾರಿ ತೆಗೆದುಕೊಂಡಿರುವ ಅಧಿಕಾರಿ ಯಾರು? ಅವರು ಶುಕ್ರವಾರದ ವಿಚಾರಣೆ ವೇಳೆ ಖುದ್ದು ಹಾಜರಾಗಬೇಕು ಎಂದು ತಿಳಿಸಿ ಅರ್ಜಿ ವಿಚಾರಣೆ ಮುಂದೂಡಿತು.