Advertisement

‘ಜೀವಮಾನದಲ್ಲಿ ಇಂತಹ ಮಳೆಯನ್ನೇ ನೋಡಿಲ್ಲ`

10:56 AM May 31, 2018 | Team Udayavani |

ಮಹಾನಗರ: ಅಬ್ಬಬ್ಬ ಸಾಕಾಯಿ ಹೋಯಿತು, ನಮ್ಮ ಜೀವಮಾನದಲ್ಲಿ ಇಂತಹ ಮಳೆಯನ್ನೇ ನೋಡಿಲ್ಲ, ಮನೆಯಲ್ಲಿದ್ದ ವಸ್ತುಗಳೆಲ್ಲ ಕೊಚ್ಚಿಕೊಂಡು ಹೋಗಿವೆ, ಬಟ್ಟೆ ಬರೆಗಳು ಸಂಪೂರ್ಣ ಒದ್ದೆಯಾಗಿದೆ…ಇದು ನಗರದ ಕೊಟ್ಟಾರಚೌಕಿ, ಬಂಗ್ರಕೂಳೂರು, ಕೋಡಿಕಲ್‌ ಭಾಗದ ನಿವಾಸಿಗಳ ಹತಾಶೆಯ ನುಡಿಗಳು.

Advertisement

ನಗರದಲ್ಲಿ ಮಂಗಳವಾರ ಸುರಿದ ಮಳೆಯಿಂದ ಹಾನಿಗೀಡಾಗಿರುವ ಕೊಟ್ಟಾರ ಚೌಕಿ, ಬಂಗ್ರ ಕೂಳೂರು ಸುತ್ತಲಿನ ಪ್ರದೇಶಗಳು ಕೂಡ ಸೇರಿದ್ದು, ಸುದಿನವು ಬುಧವಾರ ಈ ಭಾಗಕ್ಕೂ ವಾಸ್ತವ ಅರಿಯುವ ಉದ್ದೇಶದಿಂದ ತೆರಳಿ ಜನರ ಸಮಸ್ಯೆ ಆಲಿಸಿದೆ. ಈ ಭಾಗದಲ್ಲಿ ಬಹುತೇಕ ಮನೆಗಳಿಗೆ ನೀರು ನುಗ್ಗಿದ್ದು, ಇಲ್ಲಿ ಜನಜೀವನ ಸಂಪೂರ್ಣ ಅಸ್ತವ್ಯಸ್ತ ಗೊಂಡಿದೆ. ಬುಧವಾರ ಬೆಳಗ್ಗಿನಿಂದಲೇ ಇಲ್ಲಿನ ನಿವಾಸಿಗಳು ಮನೆಯಲ್ಲಿ ತುಂಬಿದ್ದ ನೀರನ್ನು ತೆಗೆಯುವ ಕಾರ್ಯದಲ್ಲಿ ಮಗ್ನರಾಗಿದ್ದರು. ಸಂಬಂಧಪಟ್ಟ ಆಡಳಿತ ವ್ಯವಸ್ಥೆಗೆ ಹಿಡಿಶಾಪ ಹಾಕುತ್ತಾ ಮನೆ ಶುಚಿಗೊಳಿಸುವ ಕಾರ್ಯ ಮಾಡುತ್ತಿದ್ದರು.

ಮೊನ್ನೆ ಮೊನ್ನೆಯಷ್ಟೇ ಸಾವಿರಾರು ರೂಪಾಯಿ ಖರ್ಚು ಮಾಡಿ ಕಾಂಪೌಂಡ್‌ ನಿರ್ಮಿಸಿದ್ದೆ. ಎಲ್ಲವೂ ಪೂರ್ತಿ ಕೊಚ್ಚಿಕೊಂಡು ಹೋಗಿದೆ ಎಂದು ಕೂಳೂರು ಪೋರ್ತ್‌ಲೇನ್‌ ನಿವಾಸಿ ಸೆಂಥಿಲ್‌ ಹೇಳಿದರೆ, ನಮ್ಮಲ್ಲಿ ಬಾಗಿಲು ಹಾಕಿದ ಕಾರಣಕ್ಕೆ ಮನೆಯ ವಸ್ತುಗಳು ಉಳಿದಿದೆ. ಆದರೆ ಟಿವಿ, ಫ್ರಿಡ್ಜ್, ವಾಷಿಂಗ್‌ ಮೆಷಿನ್‌ ಎಲ್ಲವೂ ಕೆಟ್ಟುಹೋಗಿದೆ ಎಂದು ಮೀನಾಕ್ಷಿ ಅಭಿಪ್ರಾಯಿಸಿದ್ದಾರೆ.

ಮೊದಲ ಬಾರಿಗೆ ನೋಡಿದ್ದು
ನಾನು ಕೋಡಿಕಲ್‌ನಲ್ಲಿ 40 ವರ್ಷಗಳಿಂದ ಇದ್ದೇನೆ. ಆದರೆ ಇಂತಹ ಪ್ರವಾಹವನ್ನು ಇದೇ ಮೊದಲ ಬಾರಿಗೆ ನೋಡಿದ್ದೇವೆ ಎಂದು ದಾಮೋದರ ಸುವರ್ಣ ಹೇಳುತ್ತಾರೆ. ಬಂಗ್ರಕೂಳೂರು ಭಾಗದಲ್ಲಿ ಶ್ರೀಗುರು ಸಿಂಗ್‌ ಸಭಾ ಗುರುದ್ವಾರ ಮಂದಿರ ಮುಳುಗಡೆಯಾಗಿದ್ದು, ರಾತ್ರಿ ಮಂದಿರಕ್ಕೆ ಆಗಮಿಸುವ ವೇಳೆಗೆ ಪೂರ್ತಿ ನೀರು ತುಂಬಿತ್ತು ಎಂದು ಇಕ್ಬಾಲ್‌ ಸಿಂಗ್‌ ಹೇಳುತ್ತಾರೆ. ಕೊಟ್ಟಾರಚೌಕಿ ಭಾಗದಲ್ಲಿ ಹರಿಯುತ್ತಿರುವ ಬೃಹತ್‌ ತೋಡಿಗೆ ಮಣ್ಣು ತುಂಬಿಸಿ ಬಿಲ್ಡಿಂಗ್‌ಗಳನ್ನು ನಿರ್ಮಿಸಿರುವುದು ಹಾಗೂ ತೋಡಿನ ಹೂಳು ತೆಗೆಯದೇ ಇರುವುದೇ ಈ ಕೃತಕ ನೆರೆಗೆ ಪ್ರಮುಖ ಕಾರಣ ಎಂಬುದು ಸ್ಥಳೀಯರ ವಾದ.

ಸ್ಟಾರ್ಟ್‌ ಆಗುತ್ತಿಲ್ಲ
ಮುಳುಗಡೆಯಾದ ಮನೆಗಳ ಅಂಗಳದಲ್ಲಿ ನಿಲ್ಲಿಸಿದ್ದ ಯಾವುದೇ ವಾಹನಗಳು ಸ್ಟಾರ್ಟ್‌ ಆಗುತ್ತಿಲ್ಲ. ಕೊಟ್ಟಾರಚೌಕಿ
ಪ್ರದೇಶದಲ್ಲಿ ಸಂತ್ರಸ್ತರಿಗೆ ಸ್ಥಳೀಯ ಚೈತನ್ಯ ಕಾಲೇಜಿನಲ್ಲಿ ಊಟ, ವಾಸ್ತವ್ಯದ ವ್ಯವಸ್ಥೆ ಮಾಡಲಾಗಿತ್ತು. ಬೆಳಗ್ಗೆ 11ರ ಸುಮಾರಿಗೆ ಮುಳುಗಿದ ಮನೆಗಳ ನೀರು ತಡರಾತ್ರಿ 1ರ ಸುಮಾರಿಗೆ ಇಳಿಕೆಯಾಗಿತ್ತು.

Advertisement

ದೇವರೇ ಕಾಪಾಡಿದ್ದಾರೆ
ಮೇ 29ರ ಸಂಜೆ 3.30ರ ವೇಳೆ ಇಡೀ ಭೂಮಿ ನಡುಗಿದ ಅನುಭವವಾಯಿತು. ತಾನು ಸಂಪೂರ್ಣ ಹೆದರಿ ಹೊರಗೆ ಬಂದು ನೋಡಿದಾಗ ಬೃಹದಾಕಾರದ ಮರವೊಂದು ಬಿದ್ದಿತ್ತು. ಇದು ವೆಲೆನ್ಸಿಯಾದಲ್ಲಿ ಬಿದ್ದ ಮರದ ಬುಡದಲ್ಲೇ ಎಸ್‌ಟಿಡಿ ನಡೆಸುತ್ತಿದ್ದ ಅನಿತಾ ಅವರ ಅಭಿಪ್ರಾಯ.

ಒತ್ತುವರಿಗೆ ಆಕ್ರೋಶ
ಕೂಳೂರು ರಾಯಿಕಟ್ಟೆ ಭಾಗದಲ್ಲಿ ಬೃಹತ್‌ ತೋಡುಗಳನ್ನು ಒತ್ತುವರಿ ಮಾಡಿರುವ ಕುರಿತು ಸ್ಥಳೀಯ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೃತಕ ನೆರೆಯ ಬಳಿಕ ಎಚ್ಚೆತ್ತುಕೊಂಡ ಬಳಿಕ ಆಡಳಿತ ಜೆಸಿಬಿ ಮೂಲಕ ತೋಡು ಸ್ವಚ್ಛ ಮಾಡಿದೆ.  

ಕಿರಣ್‌ ಸರಪಾಡಿ

Advertisement

Udayavani is now on Telegram. Click here to join our channel and stay updated with the latest news.

Next