ಮಳವಳ್ಳಿ: ಗ್ರಾಮೀಣ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ದೊರೆತು ಶೈಕ್ಷಣಿಕ ಅಭಿವೃದ್ಧಿ ಸಾ ಧಿಸಿದರೆ ಮಾತ್ರ ದೇಶ ಆರ್ಥಿಕವಾಗಿ ಪ್ರಗತಿ ಸಾಧಿಸಲು ಸಾಧ್ಯ ಎಂದು ಡಾ.ರಾಮಮನೋಹರ ಲೋಹಿಯಾ ವಿಚಾರ ವೇದಿಕೆ ಅಧ್ಯಕ್ಷ ಬಿ.ಎಸ್.ಶಿವಣ್ಣ ತಿಳಿಸಿದರು.
ಪಟ್ಟಣದ ಕುಮಾರ ಸಮುದಾಯ ಭವನದಲ್ಲಿ ಡಾ.ರಾಮಮನೋಹರ ಲೋಹಿಯಾ ವಿಚಾರ ವೇದಿಕೆ ವತಿಯಿಂದ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಈ ಬಾರಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತಿಹೆಚ್ಚು ಅಂಕ ಪಡೆದ 180 ವಿದ್ಯಾರ್ಥಿಗಳಿಗೆ ತಲಾ 1 ಸಾವಿರ ನಗದು ಪುರಸ್ಕಾರ ನೀಡಿ ಅಭಿನಂದಿಸಿ ಮಾತನಾಡಿದರು.
ಭವಿಷ್ಯ ಅರಿಯಿರಿ: ವಿದ್ಯಾರ್ಥಿಗಳು ಚೆನ್ನಾಗಿ ಓದಿ ಶೈಕ್ಷಣಿಕ ಪ್ರಗತಿ ಸಾಧಿಸುವ ಮೂಲಕ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಮುಂದಾಗಬೇಕು. ಶಿಕ್ಷಣವೇ ನಿಮ್ಮ ಭವಿಷ್ಯದ ದಾರಿ ದೀಪ ಎಂಬುದನ್ನು ಅರಿತು ನಡೆದಾಗ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ ಎಂದರು.
ಬಾಂಡ್ ವಿತರಣೆ: ಕೋವಿಡ್ ವೇಳೆ ತಾಲೂಕಿನ 16700 ವಿದ್ಯಾರ್ಥಿಗಳಿಗೆ ಆರೋಗ್ಯ ಕಿಟ್ ನೀಡಿ ಮಕ್ಕಳಲ್ಲಿ ಆರೋಗ್ಯದ ಬಗ್ಗೆ ಅರಿವು ಮೂಡಿಸಲಾಗಿತ್ತು. ತಾಲೂಕಿನ ಸದ್ಯದಲ್ಲಿಯೇ ತಾಲೂಕಿನಲ್ಲಿ ಸಿಬಿಎಸ್‌ಇ ಶಾಲೆ ತೆರೆಯಲು ನಿರ್ಧರಿಸಿದ್ದು, ಅಲ್ಲದೇ ಉಚಿತ ಬಸ್ ಪಾಸ್, ಜತೆಗೆ ಪೌರಕಾರ್ಮಿಕ ಮಕ್ಕಳಿಗೆ ಎಲ್‌ಐಸಿ ಬಾಂಡ್ ನೀಡುವ ಚಿಂತನೆ ಹೊಂದಲಾಗಿದೆ ಎಂದರು.
ಸರ್ಕಾರ ಬಸ್ ಪಾಸ್, ಮನೆಗೆ ಸೋಲಾರ್ ದೀಪ ನೀಡ ಬೇಕು. ಗ್ರಾಮೀಣ ಮಹಿಳೆಯರಿಗೆ ಸಹಾಯ ವಾಗಲು ಉಚಿತವಾಗಿ ಸಿಲಿಂಡರ್ ವಿತರಿಸಬೇಕು ಎಂದರು. ಸ್ಫೂರ್ತಿದಾಯಕ: ಕ್ಷೇತ್ರ ಶಿಕ್ಷಣಾಧಿ ಕಾರಿ ಚಿಕ್ಕಸ್ವಾಮಿ ಮಾತನಾಡಿ, ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಸಾಧನೆ ಮಾಡಬೇಕಾದರೇ ಶಿಕ್ಷಕರ ಜತೆ ಪೋಷಕರ ಪಾತ್ರ ಬಹಳ ಮುಖ್ಯ. ಶಿವಣ್ಣ ಅವರು ತಮ್ಮ ವೇದಿಕೆ ಮೂಲಕ 180 ವಿದ್ಯಾರ್ಥಿಗಳಿಗೆ ತಲಾ ಒಂದು ಸಾವಿರ ನಗದು ನೀಡಿ ಪುರಸ್ಕಾರ ನೀಡುತ್ತಿರುವುದು ಮಕ್ಕಳ ಶೈಕ್ಷಣಿಕ ಸಾಧನೆಗೆ ಸ್ಫೂರ್ತಿದಾಯಕ ಎಂದರು.
ನಿವೃತ್ತ ಪ್ರಾಂಶುಪಾಲ ಪುಟ್ಟಸ್ವಾಮಿಗೌಡ ಮಾತನಾಡಿ, ಮಕ್ಕಳು ಬಾಲ್ಯದಿಂದಲೇ ಸಂಸ್ಕಾರ ಪಡೆಯಬೇಕು, ಇಲ್ಲದಿದ್ದರೆ ಎಷ್ಟೇ ಉನ್ನತ ಶಿಕ್ಷಣ ಪಡೆದು ಉನ್ನತ ಹುದ್ದೆ ಪಡೆದರೂ ವ್ಯರ್ಥ್ಯ ಎಂದರು. ಕರ್ನಾಟಕ ಪ್ರದೇಶ ಕುರುಬರ ಸಂಘದ ರಾಜ್ಯ ಘಟಕದ ಉಪಾಧ್ಯಕ್ಷ ಪುಟ್ಟಬಸವಯ್ಯ, ಟಿ.ಎಂ.ಪ್ರಕಾಶ್, ಕ್ಷೇತ್ರ ಸಮನ್ವಯಾಧಿಕಾರಿ ಯೋಗೇಶ್, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಜಯಪ್ರಕಾಶ್, ಉಪನ್ಯಾಸಕಿ ಪವಿತ್ರಾ, ಮುಖ್ಯ ಶಿಕ್ಷಕರಾದ ನಟರಾಜು,
ಕಾಳರಾಜೇಗೌಡ, ಬಾಬು ಇದ್ದರು.